ಮೈಸೂರು.ನವೆಂಬರ್,4,2021(www.justkannada.in): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಯನ್ನು ತಿರುಚಿ ಅವರ ವಿರುದ್ಧ ದಲಿತ ಸಮುದಾಯವನ್ನು ಎತ್ತಿಕಟ್ಟುವ ಕುತಂತ್ರ ರಾಜಕಾರಣಕ್ಕೆ ಬಿಜೆಪಿ ಮುಂದಾಗಿದೆ ಎಂದು ಕೆಪಿಸಿಸಿ ವಕ್ತಾರ ಎಚ್ ಎ ವೆಂಕಟೇಶ್ ಕಿಡಿಕಾರಿದರು.
ಈ ಕುರಿತು ಪ್ರತಿಕ್ರಿಯಿಸಿರುವ ಎಚ್.ಎ ವೆಂಕಟೇಶ್, ಒಡೆದು ಆಳುವ ನೀತಿಯನ್ನು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ಈಗ ದಲಿತರನ್ನು ಎತ್ತಿ ಕಟ್ಟುವ ಪ್ರಯತ್ನ ಮಾಡುತ್ತಿದೆ. ಇವೆಲ್ಲವೂ ರಾಜಕೀಯ ಪ್ರೇರಿತ ಎಂಬುದು ಸ್ಪಷ್ಟವಾಗಿದೆ. ಮುಖ್ಯಮಂತ್ರಿಗಳಾಗಿ ತಮ್ಮ ಅಧಿಕಾರವಧಿಯಲ್ಲಿ ದಲಿತರು, ಹಿಂದುಳಿದ ವರ್ಗಗಳಿಗೆ ಸಿದ್ದರಾಮಯ್ಯ ಸರ್ಕಾರ ಮಾಡಿದ ಹಲವಾರು ಯೋಜನೆಗಳು ಬಿಜೆಪಿ ಕಣ್ಣಿಗೆ ಬೀಳದಿರುವುದು ದುರಂತ ಎಂದರು.
ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಸ್ಟಾಲಿನ್ ಸರ್ಕಾರ ಕ್ರಾಂತಿಕಾರಿ ನಿಲುವುಗಳ ಮೂಲಕ ಸರ್ಕಾರಿ ದೇವಸ್ಥಾನಗಳಲ್ಲಿ 300ಕ್ಕೂ ಹೆಚ್ಚು ದಲಿತರನ್ನು ಸಂಸ್ಕೃತ ಮತ್ತು ಅದಕ್ಕೆ ಬೇಕಾದ ಪೂರಕವಾದ ಜ್ಞಾನವನ್ನು ಕೊಡಿಸಿ ಅರ್ಚಕರಾಗಿ ನೇಮಕ ಮಾಡಲಾಗಿದೆ. ಇಂಥ ಕಾರ್ಯಕ್ರಮಗಳು ಬಿಜೆಪಿ ಕಣ್ಣಿಗೆ ಬೀಳುವುದಿಲ್ಲ.ಬಿಜೆಪಿ ನಿಜವಾಗಿ ದಲಿತರ ಮೇಲೆ ಪ್ರೀತಿ ಇದ್ದರೆ ದಲಿತರನ್ನು ಚುನಾವಣೆ ಕಾರಣಕ್ಕಾಗಿ ಮಾತ್ರ ದಲಿತರನ್ನು ಅಪ್ಪಿಕೊಳ್ಳುವ ಸಂಸ್ಕೃತಿಯಿಂದ ಹೊರಬಂದು ಸಂವಿಧಾನಬದ್ಧವಾಗಿ ಸಿಗಬೇಕಾದ ಸವಲತ್ತುಗಳನ್ನು ಪೂರೈಸಲು ಮುಂದಾಗಬೇಕಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ದಲಿತರ ಪರವಾದ ಒಂದೇ ಒಂದು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿಲ್ಲ. ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಲ್ಲದ ಬಿಜೆಪಿಯವರು ದಲಿತರ ಮತ್ತು ಹಿಂದುಳಿದ ವರ್ಗದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ.
ದಲಿತರು, ಹಿಂದುಳಿದವರು ಸಿದ್ದರಾಮಯ್ಯನವರ ಬಗ್ಗೆ ಇಟ್ಟಿರುವ ಅಭಿಮಾನವನ್ನು ಸಹಿಸಿಕೊಳ್ಳಲಾಗದೆ ಅಪಪ್ರಚಾರದಲ್ಲಿ ತೊಡಗಿರುವುದು ಪ್ರಜಾತಂತ್ರ ವ್ಯವಸ್ಥೆಗೆ ಮಾಡಿದ ಅಪಚಾರ ಎಂದು ವಾಗ್ದಾಳಿ ನಡೆಸಿದರು.
ಭಾರತೀಯ ಜನತಾ ಪಕ್ಷದ ನಾಯಕರು ದಲಿತರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಮಾತನಾಡಿ ತಮ್ಮ ಅಜ್ಞಾನವನ್ನು ಪ್ರದರ್ಶಿಸುತ್ತಿದ್ದಾರೆ. ಇಂಥ ಅಪಪ್ರಚಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಆಗಲಿ, ಸಿದ್ದರಾಮಯ್ಯನವರ ವ್ಯಕ್ತಿತ್ವ ಆಗಲಿ ಯಾವುದೇ ಧಕ್ಕೆಯಾಗುವುದಿಲ್ಲ. ಕರ್ನಾಟಕದ ಜನ ಬಿಜೆಪಿಯವರ ನಡವಳಿಕೆಯನ್ನು ಅಪಹಾಸ್ಯ ಮಾಡುತ್ತಾರೆ ಹೊರತು, ರಾಜಕೀಯವಾಗಿ ಬಿಜೆಪಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೆಚ್.ಎ ವೆಂಕಟೇಶ್ ತಿಳಿಸಿದರು.
Key words: BJP – former CM -Siddaramaiah’s- statement-KPCC spokesperson- H A Venkatesh