ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ದ್ವೇಷ ಹೆಚ್ಚಳ: ಅವರು ಒಂದೇ ಒಂದು ಪ್ರಕರಣ ಸಿಬಿಐಗೆ ವಹಿಸಿದ್ರಾ…? ಸಿದ‍್ಧರಾಮಯ್ಯ ವಾಗ್ದಾಳಿ

ಶಿವಮೊಗ್ಗ,ಅಕ್ಟೋಬರ್,29,2022(www.justkannada.in): ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ದ್ವೇಷ ಹೆಚ್ಚಾಗಿದೆ. ಆರ್.ಎಸ್.ಎಸ್ ಕಾರ್ಯಕರ್ತರು ಕಾನೂನು ಕೈಗೆತ್ತಿಕೊಂಡಿದ್ದಾರೆ.  ಆರ್ ಎಸ್ಎಸ್ ಬಿಜೆಪಿ ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ಶಿವಮೊಗ್ಗದಲ್ಲಿ  ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ ಹೇಳಿದ್ದಿಷ್ಟು:

ಪರೇಶ್‌ ಮೇಸ್ತಾ ಸಾವು ಸಂಭವಿಸಿದಾಗ ಬಿಜೆಪಿಯವರು ಸದನದಲ್ಲಿ ಗಲಾಟೆ ಮಾಡಿದ್ರು, ಉತ್ತರ ಕನ್ನಡದಲ್ಲೂ ಗಲಭೆ ಮಾಡಿಸಿದ್ರು. ಈ ಪ್ರಕರಣವನ್ನು ನಾನು ಸಿಬಿಐ ಗೆ ವಹಿಸಿದ್ದೆ. ಆಗ ಪ್ರಧಾನಿಯಾಗಿದ್ದವರು ನರೇಂದ್ರ ಮೋದಿ ಅವರು. ಗೃಹ ಸಚಿವರಾಗಿದ್ದವರು ಅಮಿತ್‌ ಶಾ ಅವರು. ಈಗ ಸಿಬಿಐ ವರದಿಯಲ್ಲಿ ಇದು ಆಕಸ್ಮಿಕ ಸಾವು ಎಂದು ಬಂದಿದೆ. ಅದಕ್ಕೆ ಬಿಜೆಪಿಯವರು ಸಿದ್ದರಾಮಯ್ಯನವರು ಸಾಕ್ಷ್ಯ ನಾಶ ಮಾಡಿದ್ರು ಎನ್ನುತ್ತಿದ್ದಾರೆ, ಇವರ ಯೋಗ್ಯತೆಗೆ 2008 ರಿಂದ 2013ರ ವರಗೆ ಅಥವಾ ಈಗ ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ಪ್ರಕರಣವನ್ನು ಸಿಬಿಐ ಗೆ ವಹಿಸಿದ್ದಾರ? ಇದೇ ಬಿಜೆಪಿಯವರು ಹಿಂದೆ ಸಿಬಿಐ ಎಂದರೆ ಕಾಂಗ್ರೆಸ್‌ ಬ್ಯೂರೋ ಆಫ್‌ ಇನ್ವೆಸ್ಟಿಗೇಶನ್‌ ಎನ್ನುತ್ತಿದ್ದರು, ಜೆಡಿಎಸ್‌ ನವರು ಚೋರ್‌ ಬಚಾವೋ ಇನ್ಸ್‌ಟಿಟ್ಯೂಟ್‌ ಎನ್ನುತ್ತಿದ್ದರು. ಈಗ ಸಿಬಿಐ ಗೆ ಏನಂತ ಕರೀಬೇಕು ನೀವೇ ಹೇಳಿ ನೋಡೋಣ? ಬಿಜೆಪಿ ಅವರ ಕೆಲಸ ಅಪಪ್ರಚಾರ ಮತ್ತು ಸುಳ್ಳು ಹೇಳುವುದು ಎಂದು ಕಿಡಿಕಾರಿದರು.

ಭಾರತ ಐಕ್ಯತಾ ಯಾತ್ರೆಯ ಉದ್ದೇಶ ದ್ವೇಷ ರಾಜಕಾರಣದಿಂದ ಒಡೆದುಹೋಗಿರುವ ಮನಸುಗಳನ್ನು ಒಂದುಗೂಡಿಸುವುದು, ಬೆಲೆಯೇರಿಕೆ, ನಿರುದ್ಯೋಗ, ರೈತರ ಸಮಸ್ಯೆಗಳು ಹಾಗೂ ಭ್ರಷ್ಟಾಚಾರ ಇವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಾಗಿದೆ. ಆದರೆ ಬಿಜೆಪಿಯವರು ರಾಹುಲ್‌ ಗಾಂಧಿ ಅವರ ಬಗ್ಗೆ ಅಪಪ್ರಚಾರ ಮಾಡಿ ನಮ್ಮ ಯಾತ್ರೆಯ ಬಗ್ಗೆ ತಪ್ಪು ಮಾಹಿತಿ ನೀಡಲು ಕುತಂತ್ರ ಮಾಡುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಹರಿಹಾಯ್ದರು.

ಶಿವಮೊಗ್ಗದಲ್ಲಿ ಗಲಾಟೆ ಮಾಡಿಸುವುದು ಕೆ.ಎಸ್ ಈಶ್ವರಪ್ಪ ಅವರೇ. ಜನರನ್ನು ಎತ್ತಿಕಟ್ಟಿ ಜಗಳ ಮಾಡುವಂತೆ ಮಾಡುವುದು ಅವರೆ. ಹರ್ಷ ಕೊಲೆಯಾದಾಗ ಆತನ ಹೆಣ ಇಟ್ಟುಕೊಂಡು ಮೆರವಣಿಗೆ ಮಾಡಿದ್ರು, ಆಗ 144 ಸೆಕ್ಷನ್‌ ಇತ್ತು. ಸರ್ಕಾರವೂ ಇವರದೇ ಇದೆ ಆದರೂ ಒಬ್ಬ ಮಂತ್ರಿ ಆಗಿ ಈ ರೀತಿ ಮೆರವಣಿಗೆ ಮಾಡಿದ್ರು. ಇತಿಹಾಸದಲ್ಲಿ ಎಲ್ಲೂ ಹೀಗೆ ನಡೆದಿಲ್ಲ. ಈಶ್ವರಪ್ಪ ಅವರಂತವರಿಂದಲೇ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಆಗುವುದಿಲ್ಲ ಎಂದರು.

ಶ್ರೀರಾಮುಲು ಅವರು ನಾವು ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅವರ ವರದಿ ಜಾರಿ ಮಾಡುತ್ತೇವೆ, ಇದನ್ನು ರಕ್ತದಲ್ಲಿ ಬರೆದುಕೊಡ್ತೀನಿ ಎಂದು ಹೇಳಿದ್ದರು. ಅಧಿಕಾರಕ್ಕೆ ಬಂದು 24 ಗಂಟೆಯೊಳಗೆ ವರದಿ ಜಾರಿ ಮಾಡಿದ್ರಾ? ಶ್ರೀರಾಮುಲು ಸಚಿವರಾಗಿರಲಿಲ್ವಾ? ನಾನು ರಾಮುಲು ಅವರನ್ನು ಪೆದ್ದ ಎನ್ನಲು ಕಾರಣ ಅವರೇ ಒಮ್ಮೆ ತಮ್ಮನ್ನು ತಾವು ಪೆದ್ದ ಎಂದು ಕರೆದುಕೊಂಡಿದ್ದರು. ಕೆಲವು ದಿನಗಳ ಹಿಂದೆ ಅವರು ಮಾತನಾಡುವಾಗ “ನಾನು ಉದ್ದವಿದ್ದೇನೆ ಆದರೂ ಪೆದ್ದ, ಆದರೆ ಬಸವರಾಜ ಬೊಮ್ಮಾಯಿ ಕುಳ್ಳ ಇದ್ದರೂ ಬುದ್ದಿವಂತ” ಎಂದು ಹೇಳಿದ್ದರು. ಅವರ ಮಾತನ್ನೇ ನಾನು ನೆನಪು ಮಾಡಿದ್ದು ಅಷ್ಟೆ. ಸಮ್ಮಿಶ್ರ ಸರ್ಕಾರ ಇದ್ದಾಗ, ನಮ್ಮ ಪಕ್ಷದ ಪ್ರಿಯಾಂಕ್‌ ಖರ್ಗೆ ಅವರು ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದರು ಆಗ ನಾಗಮೋಹನ್‌ ದಾಸ್‌ ಅವರ ಸಮಿತಿ ರಚನೆ ಆಗಿದ್ದು.ಈ ಸಮಿತಿ ವರದಿ ನೀಡಿದ್ದು 2-7-2020ರಲ್ಲಿ. ಅದನ್ನು ಜಾರಿ ಮಾಡಿದ್ದು ಮೊನ್ನೆ ಮೊನ್ನೆ ಸರ್ವಪಕ್ಷಗಳ ಸಭೆ ಕರೆದು ಚರ್ಚೆ ಮಾಡಿದ ಮೇಲೆ. ವಾಲ್ಮೀಕಿ ಸಮಾಜದ ಸ್ವಾಮೀಜಿಗಳು 257 ದಿನಗಳ ಧರಣಿ ಮಾಡಿದ್ದಕ್ಕೆ ಒತ್ತಡ ಬಂದು ಜಾರಿ ಮಾಡಿದ್ರು. ಈ ವಿಚಾರವನ್ನು ನಾನು ಈ ಹಿಂದೆ ಹಲವು ಬಾರಿ ಸದನದಲ್ಲಿ ಪ್ರಸ್ತಾಪ ಮಾಡಿದ್ದೆ, ನಮ್ಮ ಪಕ್ಷದ ಎಸ್‌,ಸಿ/ಎಸ್‌,ಟಿ ಶಾಸಕರು ನಾಗಮೋಹನ್‌ ದಾಸ್‌ ಅವರ ವರದಿ ಜಾರಿ ಮಾಡಿ ಎಂದು ಸದನದಲ್ಲಿ ಧರಣಿ ಮಾಡಿದ್ರು, ಆಗ ಒಬ್ಬ ಬಿಜೆಪಿ ಶಾಸಕ ನಮ್ಮ ಜೊತೆ ಭಾಗಿಯಾಗಿದ್ರಾ? ಹೀಗಿರುವಾಗ ಅವರಿಗೆ ಈ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ?  ಎಂದು ಚಾಟಿ ಬೀಸಿದರು.

ನಾಗಮೋಹನ್‌ ದಾಸ್‌ ಸಮಿತಿ ರಚನೆ ಮಾಡಿದ್ದು ನಾವು, ಅವರು ನೀಡಿರುವ ವರದಿಯನ್ನು ಜಾರಿ ಮಾಡಿದ್ದು ಮಾತ್ರ ಬಿಜೆಪಿ ಮಾಡಿದ್ದು. ಸಾಮಾಜಿಕ ನ್ಯಾಯದ ಬಗ್ಗೆ ಬಿಜೆಪಿಗೆ ಯಾವ ಬದ್ಧತೆ ಇದೆ? ಮಂಡಲ್‌ ಕಮಿಷನ್‌ ವರದಿ ವಿರೋಧಿಸಿದವರು ಯಾರು? ಉನ್ನತ ಶಿಕ್ಷಣದಲ್ಲಿ ಮೀಸಲಾತಿ ನೀಡಿದಾಗ ಅದನ್ನು ವಿರೋಧ ಮಾಡಿದ್ದು ಯಾರು? ಸಂವಿಧಾನಕ್ಕೆ 73 ಮತ್ತು 74ನೇ ತಿದ್ದುಪಡಿ ಮಾಡಿ ಹಿಂದುಳಿದವರು ಮತ್ತು ಮಹಿಳೆಯರಿಗೆ ಮೀಸಲಾತಿ ನೀಡಿದಾಗ ಅದನ್ನು ವಿರೋಧ ಮಾಡಿ ಸುಪ್ರೀಂ ಕೋರ್ಟ್‌ ನಲ್ಲಿ ಪ್ರಶ್ನೆ ಮಾಡಿದವರು ಯಾರು? ಬಿಜೆಪಿಯ ಉಪಾಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯರು ಆಗಿದ್ದ ರಾಮಾ ಜೋಯಿಸ್‌ ಅವರಲ್ವಾ? ಈ ರಾಮುಲ್‌ ಆಗ ಎಲ್ಲಿದ್ರು? ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ಮಾಡಿ ರಾಹುಲ್‌ ಗಾಂಧಿ ಅವರ ತಂದೆ ರಾಜೀವ್‌ ಗಾಂಧಿ ಅವರು. ಹಿಂದುಳಿದ ವರ್ಗ, ಮಹಿಳೆಯರಿಗೆ ಮೀಸಲಾತಿ ನೀಡಿದ್ದು ಬಿಜೆಪಿನಾ? ಮಂಡಲ್‌ ಕಮಿಷನ್‌ ವರದಿ ಜಾರಿ ಮಾಡಿದ್ದು ವಿ.ಪಿ ಸಿಂಗ್‌ ಮತ್ತು ನರಸಿಂಹರಾಯರು. ಇವರು ಬಿಜೆಪಿಯವರಾ? ಸುಮ್ಮನೆ ಮೀಸಲಾತಿ ಹೆಚ್ಚು ಮಾಡಿದ್ವಿ ಎಂದು ಹೇಳೋದಲ್ಲ, ಇವರು ಯಾವಾಗ ಮೀಸಲಾತಿ ಪರ ಇದ್ರು ಹೇಳಲಿ ಎಂದು ಸಿದ್ಧರಾಮಯ್ಯ ಟಾಂಗ್ ನೀಡಿದರು.

ಈಗ ಬಿಜೆಪಿಗೆ ಸಂಪೂರ್ಣ ಬಹುಮತ ಇದೆ, ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 8 ವರ್ಷಗಳು ಆಗಿದೆ. ಮಹಿಳಾ ಮೀಸಲಾತಿ ಬಿಲ್‌ ಅನ್ನು ಪಾಸ್‌ ಮಾಡಬೇಕಿತ್ತಲ್ವಾ? ಇನ್ನು ಯಾಕೆ ಮಾಡಿಲ್ಲ? ರಾಮುಲು ಅವರಿಗೆ ಮೀಸಲಾತಿ, ಸಂವಿಧಾನದ ಬಗ್ಗೆ ಗೊತ್ತಿಲ್ಲ. ಯಾರೋ ಬರೆದು ಕೊಟ್ಟಿದ್ದನ್ನು ಓದೋಕೆ ಮಾತ್ರ ಗೊತ್ತು. ಮೀಸಲಾತಿ ಹೆಚ್ಚಳವಾದರೆ ಅದರಿಂದ ಲಾಭವಾಗೋದು ಕಾಂಗ್ರೆಸ್‌ ಪಕ್ಷಕ್ಕೆ, ಕಾರಣ ನಾವು ಯಾವಾಗಲೂ ಮೀಸಲಾತಿಯ ಪರ ಇರುವವರು.

ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ಜನ ಅರ್ಧಕ್ಕೆ ಎದ್ದು ಹೋಗುತ್ತಿದ್ದಾರೆ. ಜನರ ಸಂಕಲ್ಪವೇ ಬೇರೆ ಇದೆ. ಬಿಜೆಪಿಯನ್ನು ಅಧಿಕಾರದಿಂದ ತೊಲಗಿಸಬೇಕು ಎಂಬುದು ಜನರ ಸಂಕಲ್ಪ. ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಜನ ಸಂಕಲ್ಪ ಮಾಡಿದ್ದಾರೆ ಎಂದು ಹೇಳಿದರು.

ಯಾವ ಕ್ಷೇತ್ರದಲ್ಲಿ ಸ್ಪರ್ಧೆ ಎಂಬ ಬಗ್ಗೆ ನವೆಂಬರ್ ಕೊನೆಗೆ ತೀರ್ಮಾನ..

ಮುಂದಿನ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧೆ ಮಾಡಬೇಕು ಎಂಬುದನ್ನು ಇನ್ನೂ ತೀರ್ಮಾನ ಮಾಡಿಲ್ಲ. ನವೆಂಬರ್‌ ತಿಂಗಳ ಕೊನೆಯಲ್ಲಿ ತೀರ್ಮಾನ ಮಾಡುತ್ತೇನೆ. ಬಾದಾಮಿ ಜನ ಕಳೆದ ಬಾರಿ ನನ್ನನ್ನು ಗೆಲ್ಲಿಸಿದ್ದಾರೆ, ಅವರೂ ಇಲ್ಲಿಂದಲೇ ಸ್ಪರ್ಧೆ ಮಾಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಕೋಲಾರ, ಹುಣಸೂರು, ಕೊಪ್ಪಳ, ಚಾಮರಾಜನಗರ ಹೀಗೆ ಹಲವು ಕಡೆಯಿಂದ ಸ್ಪರ್ಧೆ ಮಾಡಿ ಎಂದು ಒತ್ತಾಯ ಮಾಡುತ್ತಿದ್ದಾರೆ. ವರುಣಾ ಕ್ಷೇತ್ರದಲ್ಲೂ ನಿಲ್ಲುವಂತೆ ಒತ್ತಡ ಇದೆ. ನನಗೆ ಕ್ಷೇತ್ರಕ್ಕೆ ಕೊರತೆ ಇಲ್ಲವೇ ಇಲ್ಲ, ಹೆಚ್ಚು ಕಡೆಯಿಂದ ಒತ್ತಡ ಇದೆ ಹೀಗಾಗಿ ಎಲ್ಲಿ ನಿಲ್ಲಬೇಕು ಎಂದು ನಿರ್ಧಾರ ಮಾಡುವುದು ಕಷ್ಟ ಆಗಿದೆ ಎಂದರು.

ನರೇಂದ್ರ ಮೋದಿ ಅವರು ವಾರಣಾಸಿಯಿಂದ ಸ್ಪರ್ಧೆ ಮಾಡಿಲ್ವಾ? ಮೋದಿ ಅವರಿಗೆ ಒಂದು ವ್ಯಾಖ್ಯಾನ, ಸಿದ್ದರಾಮಯ್ಯ ಅವರಿಗೆ ಒಂದು ವ್ಯಾಖ್ಯಾನವೇ? ಗುಜರಾತ್‌ ನ ನರೇಂದ್ರ ಮೋದಿ ಉತ್ತರ ಪ್ರದೇಶದಲ್ಲಿ ಚುನಾವಣೆಗೆ ನಿಂತರೆ ಒಂದು ವ್ಯಾಖ್ಯಾನ, ದೇಶದ ಪ್ರಖ್ಯಾತ ವ್ಯಕ್ತಿ ಎಂದು ಹೊಗಳಿಕೆ. ನಾನು ಬೇರೆ ಕಡೆ ನಿಂತರೆ ಇನ್ನೊಂದು ರೀತಿ ವ್ಯಾಖ್ಯಾನ ಯಾಕೆ?

ನಮ್ಮ ಸರ್ಕಾರದ ಅವಧಿಯಲ್ಲಿ ಒಂದು ಪೈಸೆ ತಗೊಂಡು ಕೂಡ ಪೊಲೀಸರ ವರ್ಗಾವಣೆ ಮಾಡುತ್ತಿರಲಿಲ್ಲ. ಈಗ ಒಳ್ಳೆ ಕಮಾಯಿ ಆಗುವ ಸ್ಟೇಷನ್‌ ಗೆ ವರ್ಗಾವಣೆ ಸಿಗಬೇಕು ಎಂದರೆ 60 – 70 ಲಕ್ಷ ಲಂಚ ಕೊಡಬೇಕು. ಇಷ್ಟು ಲಂಚ ಕೊಟ್ಟು ನ್ಯಾಯವಾಗಿ ಕೆಲಸ ಮಾಡಿ ಎಂದರೆ, ಅಪರಾಧಗಳು ನಡೆಯದಂತೆ ಕೆಲಸ ಮಾಡಿ ಎಂದರೆ ಆಗುತ್ತಾ? ಈ ಸರ್ಕಾರವನ್ನು 40% ಕಮಿಷನ್‌ ಸರ್ಕಾರ ಎಂದವರು ಗುತ್ತಿಗೆದಾರರ ಸಂಘದ ಕೆಂಪಣ್ಣನವರು. ಅವರು ಪ್ರಧಾನಿಗಳಿಗೆ 6-7-2021ರಲ್ಲಿ ಪತ್ರ ಬರೆದು ದೂರಿದ್ದರು. ನರೇಂದ್ರ ಮೋದಿ ಅವರು ಏನಾದರೂ ಕ್ರಮ ಕೈಗೊಂಡ್ರಾ? ನ ಖಾವೂಂಗಾ, ನಾ ಖಾನೆದೂಂಗ ಎನ್ನುವ ಮೋದಿ ಅವರು ಎಲ್ಲಿದ್ದಾರೆ? ಎಂದು ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ನಳಿನ್‌ ಕುಮಾರ್‌ ಕಟೀಲ್‌ ಒಬ್ಬ ಜೋಕರ್‌, ಅವರ ಮಾತಿಗೆಲ್ಲ ಉತ್ತರ ಕೊಡುತ್ತಾ ಸಮಯ ವ್ಯರ್ಥ ಮಾಡಲು ನಾನು ಸಿದ್ಧನಿಲ್ಲ ಎಂದು ಸಿದ್ಧರಾಮಯ್ಯ ಲೇವಡಿ ಮಾಡಿದರು.

Key words: BJP government -single -case – CBI-former CM-Siddhiramaiah