ಮೈಸೂರು,ಡಿಸೆಂಬರ್,16,2020(www.justkannada.in) : ಬಿಜೆಪಿಯ ಗ್ರಾಮ ಸ್ವರಾಜ್ಯ ಕಾರ್ಯಕ್ರಮವು ರಾಜ್ಯಾದ್ಯಂತ ಯಶಸ್ವಿಯಾಗಿದ್ದು, ಪ್ರಸಕ್ತ ಸಾಲಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸವ್ಯಕ್ತಪಡಿಸಿದರು.ನಮ್ಮದು ಕೇಡರ್ ಆಧಾರಿತ ಪಕ್ಷ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಬಿಜೆಪಿ ಸರ್ವ ವ್ಯಾಪಿ ಪಕ್ಷವಾಗಿದೆ. ದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿದ್ದಂತಹ ಹಿರಿಯ ನಾಯಕ ಎಸ್.ಟಿ.ಸೋಮಶೇಖರ್ ಅವರೂ ಸಹ ನಮ್ಮ ಪಕ್ಷವನ್ನು ಒಪ್ಪಿ ಬಂದಿದ್ದಾರೆಂದರೆ, ನಮ್ಮ ಪಕ್ಷವು ಎಲ್ಲರಿಗೂ ತಲುಪುತ್ತಿದೆ ಎಂಬುದಕ್ಕೆ ನಿದರ್ಶನವಾಗಿದೆ ಎಂದು ಕಟೀಲ್ ಹೇಳಿದರು.
ಎಲ್ಲರಲ್ಲೂ ನಾಯಕತ್ವ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಬಿಜೆಪಿ ಮೋರ್ಚಾಗಳನ್ನು ಮಾಡಿ ಪ್ರತಿ ಕಾರ್ಯಕರ್ತನಿಗೆ ಜವಾಬ್ದಾರಿ ನೀಡಿ, ಬೆಳೆಸಿದೆ. ಕಾಂಗ್ರೆಸ್ ನಲ್ಲಿ ಇಂದಿರಾಗಾಂಧಿ ಕಾಲದಲ್ಲಿ ಆ ಪಕ್ಷದಡಿ ಲೈಟ್ ಕಂಬವನ್ನು ನಿಲ್ಲಿಸಿದರೂ ಗೆಲ್ಲುತ್ತಿತ್ತು ಎಂಬ ಮಾತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಕೇಂದ್ರ ಸಹಿತ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಗೆಲ್ಲುತ್ತಿದೆ ಎಂದರು.
ಕಾಯ್ದೆ ತಿದ್ದುಪಡಿಯಿಂದ ರೈತನಿಗೆ ನ್ಯಾಯ ಸಿಕ್ಕಿದೆ
ನಮ್ಮದು ಕೃಷಿ ಪದ್ಧತಿಯ ದೇಶ. ಈ ಹಿಂದೆ ರೈತನ ಬೆಳೆಗೆ ಬೆಲೆ ಸಿಗುತ್ತಿರಲಿಲ್ಲ. ಆದರೆ, ಕಾಯ್ದೆ ತಿದ್ದುಪಡಿಯಿಂದ ರೈತನಿಗೆ ನ್ಯಾಯ ಸಿಕ್ಕಿದೆ. ಆತ ತನ್ನ ಉತ್ಪನ್ನಕ್ಕೆ ಈಗ ತಾನೇ ಬೆಲೆ ನಿರ್ಧರಿಸುವ ಕಾಲ ಬಂದಿದೆ. ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ ಮುಕ್ತವಾಗಿ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶವನ್ನು ಈಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದೆ ಎಂದು ಹೇಳಿದರು.
ಬಿಜೆಪಿಯಲ್ಲಿ ನಿಷ್ಠೆ ಯಿಂದ ದುಡಿದರೆ ಕಟ್ಟಕಡೆಯ ಕಾರ್ಯಕರ್ತ ಸಹ ಉನ್ನತ ಹುದ್ದೆಗೇರುತ್ತಾರೆ. ಇಲ್ಲಿ ಹಿಂದುಳಿದ ವರ್ಗದವರಿಗೂ ಉತ್ತಮ ಸ್ಥಾನ ಸಿಗುತ್ತದೆ ಎಂಬುದಕ್ಕೆ ಸಂಸದ ಸ್ಥಾನಕ್ಕೆ ಅಶೋಕ್ ಗಸ್ತಿ ಅವರನ್ನು ಆಯ್ಕೆ ಮಾಡಿದ್ದೇ ಸಾಕ್ಷಿ ಎಂದು ಕಟೀಲ್ ಎಂದು ತಿಳಿಸಿದರು.
ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಹರ್ಷವರ್ಧನ್, ವಿಧಾನಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್, ರಾಜ್ಯ ಒಬಿಸಿ ಘಟಕದ ಅಧ್ಯಕ್ಷರಾದ ನೆ.ಲ.ನರೇಂದ್ರ ಬಾಬು, ಬಿಜೆಪಿ ನಗರಾಧ್ಯಕ್ಷರಾದ ಶ್ರೀವತ್ಸ ಹಾಗೂ ಗ್ರಾಮಾಂತರ ಘಟಕದ ಅಧ್ಯಕ್ಷರಾದ ಮಂಗಳಾ ಸೋಮಶೇಖರ್ ಸೇರಿದಂತೆ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷರು ಉಪಸ್ಥಿತರಿದ್ದರು.
key words : BJP-Grapham-election-Supported-Candidates-BJP-win-most- seats-President-Nalin Kumar Kateel-confident