ಮುಡಾ ಹಗರಣದಲ್ಲಿ ಬಿಜೆಪಿ ಜೆಡಿಎಸ್ ಪಾತ್ರವೇ ಹೆಚ್ಚು: ನಾಳೆ ದಾಖಲೆ ಬಿಡುಗಡೆ- ಎಂ.ಲಕ್ಷ್ಮಣ್

ಮೈಸೂರು,ಜುಲೈ,22,2024 (www.justkannada.in): ಮುಡಾ ಬಹುಕೋಟಿ ಹಗರಣದಲ್ಲಿ ಬಿಜೆಪಿ, ಜೆಡಿಎಸ್ ಪಾತ್ರವೇ ಹೆಚ್ಚಿದೆ. ಈ ಬಗ್ಗೆ ನಾಳೆ ದಾಖಲೆ ಸಮೇತ ಸಾಬೀತುಪಡಿಸುತ್ತೇನೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ತಿಳಿಸಿದರು.

ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್,  ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ತಪ್ಪಿತಸ್ಥರು ಎಂದು ಬಿಂಬಿಸುವ ಪ್ರಯತ್ನ ಆಗುತ್ತಿದೆ. ಮೊನ್ನೆ ಬಿಜೆಪಿ ನಾಯಕರು ಮಲ್ಲಿಕಾರ್ಜುನಸ್ವಾಮಿಯವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ದೂರು ಕೊಡಿಸಿದ್ದಾರೆ. ಮುಡಾ ಹಗರಣದಲ್ಲಿ ಬಿಜೆಪಿ ಜೆಡಿಎಸ್ ನಾಯಕರ ಪಾತ್ರವೇ ಹೆಚ್ಚಿದೆ. ಹೆಚ್ ಡಿ ಕುಮಾರಸ್ವಾಮಿ ಮುಡಾದಲ್ಲಿ ಬದಲಿ ನಿವೇಶನ ಪಡೆದುಕೊಂಡಿದ್ದಾರೆ. ಯಾವ ರೀತಿ ಪಡೆದಿದ್ದಾರೆ ಎಂಬುದನ್ನ ನಾಳೆ ಬಹಿರಂಗಪಡಿಸುತ್ತೇನೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ದಾಖಲೆ ಸಮೇತ ಸಾಬೀತು ಪಡಿಸುತ್ತೇನೆ. ಮುಡಾ ಹಗರಣಡಲ್ಲಿ ಬಿ ವೈ ವಿಜಯೇಂದ್ರ ಪಾಲು ಕೂಡ ಇದೆ. ಯಡಿಯೂರಪ್ಪನವರ ಅಕ್ಕನ ಮಗನ ಮುಖಾಂತರ ವಿಜಯೇಂದ್ರ ಅಕ್ರಮ ಎಸಗಿದ್ದಾರೆ. ಆದರೆ ಸಿದ್ದರಾಮಯ್ಯ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಅವರ ತಪ್ಪು ಮುಚ್ಚಿಕೊಳ್ಳಲು ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಅಭಿವೃದ್ಧಿಯತ್ತ ಗಮನ ಕೊಡಿ- ಸಂಸದ ಯದುವೀರ್ ಕಾಲೆಳೆದ ಎಂ ಲಕ್ಷ್ಮಣ್

ಹಾಗೆಯೇ ಇದೇ ಸಂಸದ ಯದುವೀರ್ ವಿರುದ್ದ ಆರೋಪ ಮುಂದುವರೆಸಿದ ಎಂ. ಲಕ್ಷ್ಮಣ್, ಮೈಸೂರು ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಕೊಡಗು ಸೇರಿದಂತೆ ಅನೇಕ ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದಿದೆ. ನಾನು ಸೋತಿದ್ದರೂ ಕೂಡ 40ಕ್ಕೂ ಹೆಚ್ಚು ಕಡೆ ಭೇಟಿ ಕೊಟ್ಟಿದ್ದೇನೆ. ಸಂಸದರು ಯಾಕೆ ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಪ್ರಶ್ನಿಸಿದರು.

ದಿಶಾ ಸಭೆ ನಡೆಸಿ ಸನ್ಮಾನ ಸ್ವೀಕರಿಸಿ ಬಂದಿದ್ದು ಆಯ್ತು. ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಫೋಟೋ ಸೆಷನ್ ಮಾಡಿಸಿದ್ರಿ. ಬಿಜೆಪಿ ನಾಯಕರ ಜೊತೆ ಸೇರಿ ಕಸ ಹಾಯ್ದು ಫೋಟೋ ಪೋಸ್ ಕೊಟ್ಟಾಯ್ತು. ಎನ್ ಆರ್ ಕ್ಷೇತ್ರದಲ್ಲೂ ನಿಮಗೆ 65 ಸಾವಿರ ಮತ ನೀಡಿದ್ದಾರೆ. ಈ ಕಡೆ ಕೂಡ ಸ್ವಲ್ಪ ಗಮನಹರಿಸಿ. ಇದರ ಜೊತೆ ಅಭಿವೃದ್ಧಿ ಕಡೆ ಕೂಡ ಗಮನ ಕೊಡಿ. ನಮ್ಮ ಸರ್ಕಾರ ಇದ್ದಾಗ ನರ್ಮ್ ಯೋಜನೆಯಡಿ 2ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದೆವು. ನೀವು ಅಭಿವೃದ್ಧಿಯತ್ತ ಗಮನ ಕೊಡಿ ಎಂದು ಯದುವೀರ್ ಕಾಲೆಳೆದರು.

Key words: BJP, JDS, Muda scam,  M. Laxman