ನಿಮ್ಮ ನಡೆ ವಿರುದ್ಧವೇ ನಮ್ಮ ಜನಾಂದೋಲನ ಸಮಾವೇಶ- ಬಿಜೆಪಿ, ಜೆಡಿಎಸ್ ವಿರುದ್ದ ಸಚಿವ ಮಹದೇವಪ್ಪ ಕಿಡಿ

ಮೈಸೂರು,ಆಗಸ್ಟ್ ,8, 2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯರನ್ನ ಸಮರ್ಥನೆ ಮಾಡಿಕೊಂಡ ಸಚಿವ ಹೆಚ್ ಸಿ ಮಹದೇವಪ್ಪ, ಸಿದ್ದರಾಮಯ್ಯ ದಲಿತರ ಜಮೀನು ಕಬಳಿಸಿದ್ರು ಎಂದು ಆರೋಪ ಮಾಡುತ್ತಾರೆ. ನಿಜಕ್ಕೂ ಬಿಜೆಪಿ ಜೆಡಿಎಸ್ ಗೆ ಎಸ್ಸಿ, ಎಸ್ಟಿ ಸಮುದಾಯ ಬಗ್ಗೆ ಕಾಳಜಿ ಇದೆಯೇ? ಎಂದು ಕಿಡಿಕಾರಿದರು.

ನಾಳೆ  ಮೈಸೂರಿನ ಮಹರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶ ಹಿನ್ನೆಲೆ ಇಂದು ಸಚಿವರಾದ ಮಹದೇವಪ್ಪ, ಕೆ ವೆಂಕಟೇಶ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿಸಿ ಚಂದ್ರಶೇಖರ್, ಕೆಪಿಸಿಸಿ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಪುಷ್ಪಅಮರನಾಥ್ ಸೇರಿ ಹಲವರು ಭಾಗಿಯಾಗಿದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ,  ಎಸ್ಸಿ ಎಸ್ಟಿ ಸಮುದಾಯದ ಪರವಾಗಿ ಎಸ್ಸಿಪಿ ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಸಿದ್ದರಾಮಯ್ಯ. ಆದರೆ ಎಸ್ಸಿಪಿ ಟಿಎಸ್ಪಿ ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದು ಬಿಜೆಪಿ. ಬಿಜೆಪಿ ಜೆಡಿಎಸ್ ಗೆ ಜನ ಯಾವತ್ತೂ ಸಂಪೂರ್ಣ ಅಧಿಕಾರ ಕೊಟ್ಟಿಲ್ಲ. ಸಂಪೂರ್ಣ ಬಹುಮತವಿರುವ ಸರ್ಕಾರವನ್ನ ಬೀಳಿಸಿ ಅಧಿಕಾರ ಹಿಡಿಯಲಿಕ್ಕೆ ಮುಂದಾಗಿದ್ದಿರಲ್ಲ, ನಿಮಗೆ ಯಶಸ್ಸು ಸಿಗುತ್ತಾ. ನಿಮ್ಮ ಈ ನಡೆಯ ವಿರುದ್ಧವೇ ನಮ್ಮ ಜನಾಂದೋಲನ ಸಮಾವೇಶ ಹಮ್ಮಿಕೊಂಡಿರೋದು ಎಂದು ಕಿಡಿಕಾರಿದರು.

ಬಿಜೆಪಿ, ಜೆಡಿಎಸ್ ಪಾದಯಾತ್ರೆ ಸಂಪೂರ್ಣ ವಿಫಲ-ಕೆಪಿಸಿಸಿ ಕಾರ್ಯಾಧ್ಯಕ್ಷ ಜಿಸಿ ಚಂದ್ರಶೇಖರ್

ಕೆಪಿಸಿಸಿ ಕಾರ್ಯಾಧ್ಯಕ್ಷ ಜಿಸಿ ಚಂದ್ರಶೇಖರ್ ಮಾತನಾಡಿ,  ಕೇಂದ್ರದಿಂದ ಅನುದಾನ ತರುವಲ್ಲಿ ರಾಜ್ಯದ ಸಂಸದರು ವಿಫಲರಾಗಿದ್ದಾರೆ. ಕೇಂದ್ರ ಬಿಜೆಪಿ ವಿರುದ್ಧ ನಾವು ಪಾದಯಾತ್ರೆ ಮಾಡಬೇಕಿತ್ತು. ಆದರೆ ಹುರುಳಿಲ್ಲದ ಕೇಸ್ ಇಟ್ಟುಕೊಂಡು ಬಿಜೆಪಿ, ಜೆಡಿಎಸ್ ಪಾದಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿ, ಜೆಡಿಎಸ್ ಪಾದಯಾತ್ರೆ ಸಂಪೂರ್ಣ ವಿಫಲವಾಗಿದೆ. ಪಾದಯಾತ್ರೆಗೆ ಜನರೇ ಬರುತ್ತಿಲ್ಲ. ಪಾದಯಾತ್ರೆಯಲ್ಲಿ ಮೂರು ಗುಂಪುಗಳಾಗಿವೆ. ನಾಯಕರುಗಳ ಮಕ್ಕಳು ಒಂದು ಕಡೆ, ಹಿರಿಯ ನಾಯಕರಿಗೆ ಒಂದು ಕಡೆ, ಯತ್ನಾಳ್ ಬಣದವರು ಒಂದು ಕಡೆ ಇದ್ದಾರೆ. ರಾಜ್ಯಪಾಲರನ್ನ ಬಳಸಿಕೊಂಡು ಸಿಎಂ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ನಾವು ಕೂಡ ಬಿಡದಿಯಿಂದ ಮೈಸೂರಿನವರೆಗೂ ಸಮಾವೇಶ ಮಾಡಿಕೊಂಡು ಬಂದಿದ್ದೇವೆ. ನಾಳೆ ಜನಾಂದೋಲನ ಸಮಾವೇಶ ನಡೆಯಲಿದೆ. ಗವರ್ನರ್ ಬಳಸಿಕೊಂಡು ಸರ್ಕಾರ ಕೆಡವಲಿಕ್ಕೆ ಆಗಲ್ಲ ಎಂಬ ಸಂದೇಶ ರವಾನೆಯಾಗಲಿದೆ ಎಂದರು.

Key words:  BJP, JDS, padayatra, Minister, Mahadevappa, mysore