ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ನಾಯಕರಿಂದ ಆಗ್ರಹ

ಬೆಂಗಳೂರು,ಸೆಪ್ಟಂಬರ್,24,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಆದೇಶ ರದ್ದುಗೊಳಿಸುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದ ಬೆನ್ನಲ್ಲೆ ಇದೀಗ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಆರ್.ಅಶೋಕ್,  ಘನತೆವೆತ್ತ ರಾಜ್ಯಪಾಲರು ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್ ಗೆ ನೀಡಿದ್ದ ಅನುಮತಿ ಕಾನೂನುಬದ್ಧವಾಗಿದೆ ಎಂದು ಮಾನ್ಯ ಹೈಕೋರ್ಟ್ ರಾಜ್ಯಪಾಲರ ನಿರ್ಧಾರವನ್ನ ಎತ್ತಿಹಿಡಿದಿದ್ದು, ಇದು ಸತ್ಯಕ್ಕೆ ಸಂದ ಜಯವಾಗಿದೆ.

ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದಾಗಿನಿಂದ ಮುಖ್ಯಮಂತ್ರಿ ಆದಿಯಾಗಿ, ಸಚಿವರು, ಶಾಸಕರು ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಕಳೆದ ಅನೇಕ ದಿನಗಳಿಂದ ರಾಜ್ಯಪಾಲರನ್ನ, ರಾಜಭವನವನ್ನ ನಿಂದಿಸುತ್ತಾ ಬಂದಿದ್ದು, ಮಾನ್ಯ ಹೈಕೋರ್ಟ್ ನ ತೀರ್ಪು ಇಡೀ ಕಾಂಗ್ರೆಸ್  ಪಕ್ಷಕ್ಕೆ ಛಡಿ ಏಟು ಕೊಟ್ಟಿದೆ.

ಇನ್ನಾದರೂ ಅನಗತ್ಯವಾಗಿ ರಾಜ್ಯಪಾಲರನ್ನ ನಿಂದಿಸುವುದು ಬಿಟ್ಟು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೈತಿಕೆ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಇವತ್ತೇ ರಾಜೀನಾಮೆ ಕೊಡುತ್ತಾರೆ ಎಂಬ ನಂಬಿಕೆ ಇದೆ-ಛಲವಾದಿ ನಾರಾಯಣಸ್ವಾಮಿ

ಈ ಕುರಿತು ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ,  ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಸಿಎಂ ಕುಟುಂಬವೇ ಅವ್ಯವಹಾರದಲ್ಲಿ ತೊಡಗಿತ್ತು. ತನ್ನ ಭೂಮಿಯೇ ಅಲ್ಲದಕ್ಕೆ ಪರಿಹಾರ ಪಡೆದು ಕೊಂಡಿದ್ದರು. ಬಿಜೆಪಿ ಹೋರಾಟಕ್ಕೆ ಸಿಎಂ ಗೌರವ ಕೊಟ್ಟಿರಲಿಲ್ಲ. ರಾಜ್ಯಪಾಲರ ಮಧ್ಯ ಪ್ರವೇಶ ಮಾಡಬೇಕಾಯಿತು. ಸಿಎಂ ತಕ್ಷಣ ರಾಜೀನಾಮೆ ಕೊಡಬೇಕು. ಕೊಡದಿದ್ದರೆ ಇನ್ನೊಬ್ಬ ಕೇಜ್ರಿವಾಲ್ ಆಗುತ್ತಾರೆ. ಮೌಲ್ಯ ಎತ್ತಿ ಹಿಡಿಯಲು ಸಿಎಂ ರಾಜೀನಾಮೆ ಕೊಡಬೇಕು. ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಹೈಕಮಾಂಡ್ ಸಿಎಂ  ಬೆಂಬಲಕ್ಕೆ ನಿಂತರೂ ಅಧಿಕಾರ ಮುಂದುವರಿಸಲು ಆಗಲ್ಲ. ಇವತ್ತೇ ರಾಜೀನಾಮೆ ಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದರು.

ಮೈಸೂರಿನಲ್ಲಿ ಬಿಜೆಪಿ ಶಾಸಕ ಶ್ರೀವತ್ಸ ಮಾತನಾಡಿ, ಸತ್ಯ ಮೇವ ಜಯತೇ. ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ. ಕೊಡದೆ ಇದ್ದರೂ ಹೈಕಮಾಂಡ್ ರಾಜೀನಾಮೆ ಪಡೆಯುತ್ತೆ. ನಮಗೆ ದಾಖಲೆ ನೋಡಿಯೇ ಪ್ರಾಸಿಕ್ಯೂಷನ್ ಗೆ ಅನುಮತಿ ಸಿಗುತ್ತೆ ಅಂತಾ ಗೊತ್ತಿತ್ತು. ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷ. ಸಿದ್ದರಾಮಯ್ಯ ಕೂಡ ರಾಜೀನಾಮೆ ನೀಡುತ್ತಾರೆ ಎಂಬ ನಂಬಿಕೆ ಇದೆ. ಕೊಡದಿದ್ದರೆ ಏನು ಮಾಡಬೇಕು ಎಂಬುದನ್ನ ಚರ್ಚಿಸುತ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರ ಜೊತೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.

Key words: BJP leaders, demand, CM Siddaramaiah, resignation