ಬೆಂಗಳೂರು,ಮೇ,16,2023(www.justkannada.in): ಲಿಂಗಾಯತರನ್ನು ಅವಮಾನಿಸಿದ್ದಕ್ಕೆ ಬಿಜೆಪಿ ಈಗ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಲೇವಡಿ ಮಾಡಿದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ನಿವಾಸಕ್ಕೆ ಇಂದು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ , ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಭೇಟಿ ನೀಡಿ ಧನ್ಯವಾದ ಅರ್ಪಿಸಿದರು. ಈ ವೇಳೆ ಮಾತನಾಡಿದ ಜಗದೀಶ್ ಶೆಟ್ಟರ್, ನನ್ನನ್ನ ಸೌಹಾರ್ದಯುತವಾಗಿ ನಾಯಕರು ಭೇಟಿ ಮಾಡಿದ್ದರು. ಕಾಂಗ್ರೆಸ್ ಸೇರಿದ ಮೇಲೆ 15 ಕ್ಷೇತ್ರಗಳಲ್ಲಿ ನಾನು ಪ್ರಚಾರ ಮಾಡಿದ್ದೆ. ಲಿಂಗಾಯತರನ್ನು ಅವಮಾನಿಸಿದ್ದಕ್ಕೆ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಸಿಎಂ ಸ್ಥಾನದಿಂದ ಬಿಎಸ್ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದೇಕೆ ಎಂದು ಹೇಳಬೇಕಲ್ವಾ? ಬಿಎಸ್ ಯಡಿಯೂರಪ್ಪ ಕಣ್ಣೀರು ಹಾಕಿದ್ರು. ನನಗೆ ಟಿಕೆಟ್ ಕೊಡದೆ ಅವಮಾನಿಸಿದ್ದರು. ಇದೆಲ್ಲವೂ ಬಿಜೆಪಿ ಹೀನಾಯವಾಗಿ ಸೋಲಲು ಕಾರಣವಾಗಿದೆ ಎಂದರು.
ಸಿಎಂ ಹುದ್ದೆಗೆ ಪೈಪೋಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್, ಈ ಬಗ್ಗೆ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ರಾಜಕೀಯದಲ್ಲಿ ಅಧಿಕಾರಕ್ಕಾಗಿ ಸಹಜವಾಗಿ ಗಲಾಟೆ ನಡೆಯುತ್ತದೆ. ಪೂರ್ಣ ಬಹುಮತ ಬಂದಿದೆ, ಉತ್ತಮ ಆಡಳಿತ ಕೊಡಬೇಕು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇಬ್ಬರೂ ಒಳ್ಳೆಯ ನಾಯಕರು. ಯಾವುದೇ ಗೊಂದಲವಿಲ್ಲದೆ ನಾಯಕರು ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
Key words: BJP -lost power –insulting- Lingayats-Former CM- Jagdish Shettar.