ಗ್ಯಾರಂಟಿ ಯೋಜನೆ ಚರ್ಚೆಗೆ ಆಗ್ರಹಿಸಿ ಬಿಜೆಪಿ ಸದಸ್ಯರಿಂದ ಸದನದಲ್ಲಿ ಪ್ರತಿಭಟನೆ: ಸ್ಪೀಕರ್ ಗರಂ.

ಬೆಂಗಳೂರು,ಜುಲೈ,4,2023(www.justkannada.in):  ಗ್ಯಾರಂಟಿ ಯೋಜನೆ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಸದನದಲ್ಲಿ ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ವಿಧಾನಸಭೆ ಕಲಾಪ ಶುರುವಾಗುತ್ತಿದ್ದಂತೆ ಗ್ಯಾರಂಟಿ ಯೋಜನೆ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿ ಮಾಜಿ ಸಿಎಂ ಬೊಮ್ಮಾಯಿ ಸೇರಿ ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಈ ವೇಳೆ  ಪ್ರಶ್ನೋತ್ತರ ಮುಗಿದ ಮೇಲೆ ಅವಕಾಶ ನೀಡುತ್ತೇನೆ ಎಂದು ಸ್ಫೀಕರ್  ಯುಟಿ ಖಾದರ್ ತಿಳಿಸಿದರು. ಆದರೆ ಸ್ಪೀಕರ್ ಮಾತಿಗೆ ಸುಮ್ಮನಾಗದ ಬಿಜೆಪಿ ಸದಸ್ಯರು ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿದರು.

ರಾಜ್ಯದ ಸಮಸ್ಯೆಗಳ ಬಗ್ಗೆ ಪ್ರಸ್ತಾಪ ಮಾಡಲು ಅವಕಾಶ ಕೊಡಲ್ಲ ಅಂದ್ರೆ  ಹೇಗೆ  ಎಂದು ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಡಿಸಿಎಂ  ಡಿಕೆ ಶಿವಕುಮಾರ್  ಬಿಜೆಪಿಯವರಿಗೆ ನಮ್ಮ ಗ್ಯಾರಂಟಿ ತಡೆಯಲು ಆಗುತ್ತಿಲ್ಲ.  ಕಳೆದ 45 ದಿನಗಳಿಂದ ಇಟ್ಟುಕೊಂಡಿದ್ದ ನುಡಿಮುತ್ತು ಹೇಳಲಿ ಅದಕ್ಕೆ ನಾವು ಉತ್ತರ ನೀಡುತ್ತೇವೆ  ಎಂದು ಟಾಂಗ್ ನೀಡಿದರು. ಈ ಸಮಯದಲ್ಲಿ ನಿಮ್ಮ ನುಡಿಮುತ್ತು ಹೇಳಿ ಎಂದು ಬೊಮ್ಮಾಯಿ ತಿರುಗೇಟು ನೀಡಿದರು.

 

15 ಲಕ್ಷ ಕೊಡ್ತೀವಿ ಅಂದಿದ್ರೆಲ್ಲ ಆ ಬಗ್ಗೆ ಚರ್ಚೆ ಮಾಡಿ ಎಂದು ಡಿಕೆ ಶಿವಕುಮಾರ್ ಚಾಟಿ ಬೀಸಿದರು. ಇದಕ್ಕೆ ಗರಂ ಆದ ಬಿಜೆಪಿ ಸದಸ್ಯರು ದಾಖಲೆ ತೋರಿಸಿ ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಸಿಎಂ ಸಿದ್ಧರಾಮಯ್ಯ ಪ್ರಶ್ನೋತ್ತರ ಕಲಾಪ ಸಸ್ಪೆಂಡ್ ಎಂದು ಮಾಡಿಲ್ಲ.  ಪ್ರಶ್ನೋತ್ತರ ಕಲಾಪ ಯಾವಾಗ ಸಸ್ಪೆಂಡ್ ಮಾಡಿದ್ದಾರೆ.  ಬಿಜೆಪಿಯವರು ಮೊದಲು ಮೊಂಡಾಟ ಬಿಡಲಿ ಎಂದು ಕಿಡಿಕಾರಿದರು.  ಮೊಂಡಾಟ ಅಸಂವಿಧಾನಿಕ ಪದ. ಹಿಂಪಡೆಯುವಂತೆ ಬಿಜೆಪಿ ಸದಸ್ಯರು ಆಗ್ರಹಿಸಿದರು. ನಂತರ ಬಾವಿಗಿಳಿದು ಪ್ರತಿಭಟನೆ ನಡೆಸಿ ಗ್ಯಾರಂಟಿ ಯೋಜನೆ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿದರು.

ಶಾಸಕರ ಹಕ್ಕನ್ನ ಮೊಟಕುಗೊಳಿಸಿದ್ದೀರಿ ಅನುಚಿತ ವರ್ತನೆ ಸರಿಯಲ್ಲ ಎಂದು ಸ್ಪೀಕರ್ ಯುಟಿ ಖಾದರ್ ಕೆಲಕಾಲ ಕಲಾಪ ಮುಂದೂಡಿಕೆ ಮಾಡಿದರು.

Key words: BJP -members- protest – demanding- debate -guarantee scheme-session