ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಮೈಸೂರಿನಲ್ಲಿ ವಿವಿಧೆಡೆ ಬಿಜೆಪಿ ಪ್ರತಿಭಟನೆ, ಆಕ್ರೋಶ

ಮೈಸೂರು,ಮಾರ್ಚ್,25,2025 (www.justkannada.in): ಸಂವಿಧಾನ ಬದಲಾವಣೆ ಕುರಿತು ಹೇಳಿಕೆ ನೀಡಿದ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಮೈಸೂರಿನಲ್ಲಿ ಬಿಜೆಪಿಯ ಆಕ್ರೋಶ ಭುಗಿಲೆದ್ದಿದ್ದು ನಗರದ ವಿವಿಧೆಡೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಖಂಡಿಸಿ ಮೈಸೂರಿನ ಕೆ.ಆರ್ ಕ್ಷೇತ್ರ, ಚಾಮರಾಜ ,ಎನ್ ಆರ್ ಕ್ಷೇತ್ರಗಳಲ್ಲಿ ಬಿಜೆಪಿ  ಪ್ರತ್ಯೇಕ ಪ್ರತಿಭಟನೆ ನಡೆಸಿತು. ಆಶೋಕಪುರಂ ಪೊಲೀಸ್ ಠಾಣೆಯ  ಅಂಬೇಡ್ಕರ್ ಪ್ರತಿಮೆ ಮುಂಭಾಗ ಕೆ.ಆರ್ ಕ್ಷೇತ್ರದ ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.  ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಪ್ರತಿಭಟನಾಕಾರರು  ದಲಿತ ವಿರೋಧಿ ಕಾಂಗ್ರೆಸ್ ಗೆ ಧಿಕ್ಕಾರ, ಸಂವಿಧಾನ ವಿರೋಧಿ ಡಿಕೆ ಶಿವಕುಮಾರ್ ಗೆ ಧಿಕ್ಕಾರ ಜೈ ಭೀಮ್ ಘೋಷಣೆ ಕೂಗಿದರು.

ಡಿಸಿಎಂ ಸ್ಥಾನದಿಂದ ಡಿಕೆ ಶಿವಕುಮಾರ್  ವಜಾಮಾಡಿ- ಶಾಸಕ ಶ್ರೀವತ್ಸ ಆಗ್ರಹ

ಇದೇ ವೇಳೆ ಮಾತನಾಡಿದ ಶಾಸಕ ಶ್ರೀವತ್ಸ, ಡಿಕೆ ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿಯಿಂದ ವಜಾ ಮಾಡಿ. ಸಂವಿಧಾನ ವಿರೋಧಿ ಹೇಳಿಕೆಯನ್ನು ಡಿಕೆ ಶಿವಕುಮಾರ್ ಕೊಟ್ಟಿದ್ದಾರೆ. ಅವರ ಮೇಲೆ ಸುಮೋಟೋ ಕೇಸ್ ಹಾಕಿಕೊಂಡು ಅರೆಸ್ಟ್ ಮಾಡಬೇಕು. ಆದರೆ ಇನ್ನೂ ಪೊಲೀಸರು ಅವರ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಹನಿ ಟ್ರ್ಯಾಪ್ ವಿಚಾರದಲ್ಲೂ ಡಿಕೆ ಶಿವಕುಮಾರ್ ಹೆಸರು ಕೇಳಿ ಬಂದಿದೆ. ಇನ್ನು ಯಾವುದೇ ಕ್ರಮ ಆಗಿಲ್ಲ. ಈಗ ಸಂವಿಧಾನ ತಿದ್ದುಪಡಿ ಮಾಡ್ತೀವಿ ಅಂತ ಹೇಳಿದ್ದಾರೆ. ಇಂತಹ ಸಂವಿಧಾನ ವಿರೋಧಿ ಡಿಕೆ ಶಿವಕುಮಾರ್ ರನ್ನು ಶೀಘ್ರವೇ ಬಂಧಿಸಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದರು.

ಮೈಸೂರಿನ ಟೌನ್ ಹಾಲ್ ಬಳಿ  ಧರಣಿ

ಸಂವಿಧಾನ ಬದಲಾವಣೆ ಕುರಿತು ಡಿಕೆ ಶಿವಕುಮಾರ್ ಹೇಳಿಕೆ  ಖಂಡಿಸಿ ಮೈಸೂರಿನ ಟೌನ್ ಹಾಲ್ ಬಳಿ ಮಾಜಿ ಶಾಸಕ ಎಲ್ ನಾಗೇಂದ್ರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು  ಪ್ರತಿಭಟನೆ ನಡೆಸಿ ಡಿಕೆ ಶಿವಕುಮಾರ್ ಭಾವಚಿತ್ರ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಡಾ ಬಿ ಆರ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬಳಿಕ  ಡಿಕೆ ಶಿವಕುಮಾರ್  ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು  ರಾಜೀನಾಮೆ ನೀಡುವಂತೆ ಒತ್ತಾಯ ಮಾಡಿದರು.

ಪ್ರತಿಭಟನೆ ವೇಳೆ ಮಾತನಾಡಿದ ಮಾಜಿ ಶಾಸಕ ಎಲ್ ನಾಗೇಂದ್ರ, ಮುಸ್ಲಿಂರಿಗಾಗಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ. ಯಾವುದೇ ಕಾರಣಕ್ಕೂ ಸಂವಿಧಾನ ಬದಲಾಗಲು ನಾವು ಬಿಡೋದಿಲ್ಲ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರತಿಭಟಿಸುತ್ತೇವೆ. ಮೈಸೂರಿನಲ್ಲಿ ಮೂರು ದಿನಗಳ ಕಾಲ ನಿರಂತರ ಪ್ರತಿಭಟನೆ ಮಾಡುತ್ತೇವೆ. ಡಿಕೆ ಶಿವಕುಮಾರ್ ರಾಜೀನಾಮೆ ನೀಡುವವರೆಗೂ ಬಿಡುವುದಿಲ್ಲ ಎಂದು ತಿಳಿಸಿದರು.

Key words: BJP, protest, Mysore,  against, DCM, DK Shivakumar