ಮೈಸೂರು,ಮಾರ್ಚ್,29,2024 (www.justkannada.in): ಬಿಜೆಪಿ ತಮ್ಮ ವಿರೋಧಿಗಳನ್ನ ವ್ಯವಸ್ಥಿತವಾಗಿ ಮುಗಿಸಲು ಸಂಚು ರೂಪಿಸಿದೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ರಂತಹವರನ್ನ ಜೈಲಿಗೆ ಕಳುಹಿಸಿದ್ರು. ಹೀಗಾಗಿ ಮತ ನೀಡುವಾಗ ಯೋಚನೆ ಮಾಡಿ ಮತ ನೀಡಬೇಕು. ಸಿಎಂ ಸಿದ್ದರಾಮಯ್ಯರನ್ನು ಜೈಲಿಗೆ ಕಳುಹಿಸಲು ಕಾಯುತ್ತಿದ್ದಾರೆ ಎಂದು ಮೈಸೂರು-ಕೊಡಗು ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಗಂಭೀರ ಆರೋಪ ಮಾಡಿದರು.
ಮೈಸೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್, ಪ್ರತಾಪ್ ಸಿಂಹ ನನ್ನನ್ನೂ ಜೈಲಿಗೆ ಕಳುಹಿಸುತ್ತೇನೆ ಅಂತ ಹೇಳ್ತಾರೆ. ಯಾವ ಕಾರಣಕ್ಕೆ ಅಂತ ಹೇಳಿ ಅಂದ್ರೆ ಹೇಳಲ್ಲ. ನಾನು ಯಾವತ್ತೂ ಜಾತಿ ಆಧಾರದ ಮೇಲೆ ರಾಜಕೀಯ ಮಾಡಿಲ್ಲ. ಜನ ಸಾಮಾನ್ಯರಿಗೆ ಕೈಗೆ ಸಿಗುವ ವ್ಯಕ್ತಿಯಾಗಿದ್ದೇನೆ. ಸಿಎಂ ಸಿದ್ದರಾಮಯ್ಯನವರು ತಮ್ಮ ಕ್ಷೇತ್ರದಲ್ಲಿ ಎಂ. ಪಿ ಗೆಲ್ಲಿಸಲಿಕ್ಕೆ ಆಗಲಿಲ್ಲ ಎಂದು ಮಾತನಾಡುತ್ತಾರೆ. ಮೈಸೂರು-ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ನಮ್ಮನ್ನ ಸೋಲಿಸಿ ಮತ್ತೆ ಸಿದ್ದರಾಮಯ್ಯರಿಗೆ ಅವಮಾನ ಮಾಡಬೇಡಿ. ನನ್ನನ್ನ ಗೆಲ್ಲಿಸುವ ಮೂಲಕ ಸಿದ್ದರಾಮಯ್ಯರಿಗೆ ಗೌರವ ಸಲ್ಲಿಸಿ. ಈ ಚುನಾವಣೆಯನ್ನ ಗಂಭೀರವಾಗಿ ಪರಿಗಣಿಸಿ ಎಂದು ಹೇಳಿದರು.
ಮೈಸೂರು -ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್ ಇಷ್ಟ ಪಡುವ ಮತದಾರರೇ ಹೆಚ್ಚಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ಇದು ಪ್ರತಿಷ್ಠೆಯ ಕ್ಷೇತ್ರವಾಗಿದ್ದು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಮೈಸೂರು ಜಿಲ್ಲೆ ಮತ್ತು ನಗರ ಕಾಂಗ್ರೆಸ್ ಅನ್ನು ಇತರೆ ಜಿಲ್ಲೆಗೆ ಹೋಲಿಕೆ ಮಾಡುವಾಗಿಲ್ಲ. 11 ಕ್ಷೇತ್ರಗಳ ಪೈಕಿ 9ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಉಳಿದ ಮೂರು ಕ್ಷೇತ್ರಗಳಲ್ಲೂ ಕಡಿಮೆ ಅಂತರದಿಂದ ಸೋತಿದ್ದೇವೆ. ಜನರನ್ನ ದಿಕ್ಕು ತಪ್ಪಿಸಿ ಭಾವನಾತ್ಮಕ ವಿಚಾರ ಮುಂದಿಟ್ಟು ಬಿಜೆಪಿ ಕೆಲಸ ಮಾಡುತ್ತದೆ. ಈ ಹಿಂದೆ ಇದ್ದ ಪ್ರತಾಪ್ ಸಿಂಹ ಕೇವಲ ಗಲಭೆ ಎಬ್ಬಿಸುವ ಕೆಲಸ ಮಾಡಿದ್ದು ಬಿಟ್ಟರೆ ಅಭಿವೃದ್ಧಿ ಏನು ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ತಂದ ಅನುದಾನವನ್ನ ನಾನು ಮಾಡಿದೆ ಎಂದು ಓಡಾಡಿಕೊಂಡು ಬಂದರು. ಒಂದಷ್ಟು ಸುಳ್ಳನ್ನ ಸೃಷ್ಟಿ ಮಾಡಿ ಕೆಆರ್ ಎಸ್ ಕಟ್ಟಿದ್ದು ನಮ್ಮ ತಾತ ಅಂತಾನೇ ಸೃಷ್ಟಿ ಮಾಡ್ತಾರೆ ಎಂದು ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಈ ವೇಳೆ ಮಾಜಿ ಸಚಿವ ಕೋಟೆ ಶಿವಣ್ಣ, ಮೈಸೂರು ಗ್ರಾಮಾಂತರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ. ಜೆ ವಿಜಯ್ ಕುಮಾರ್, ನಗರಾಧ್ಯಕ್ಷ ಮೂರ್ತಿ, ಅಲ್ಪ ಸಂಖ್ಯಾತರ ಜಿಲ್ಲಾಧ್ಯಕ್ಷ ಮೋಸಿನ್ ಖಾನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Key words: BJP, Siddaramaiah, jail, M.Laxman