ಮೈಸೂರು,ಏಪ್ರಿಲ್,18,2023(www.justkannada.in): ಇಡೀ ಬಿಜೆಪಿ ಬಿ ಎಲ್ ಸಂತೋಷ್ ಕಪಿಮುಷ್ಠಿಯಲ್ಲಿದೆ. ಯಾವುದೇ ಗುರುತರ ಆರೋಪಗಳಿಲ್ಲದಿದ್ಧರೂ ಕೂಡ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ರಾಮದಾಸ್ ಸೇರಿದಂತೆ ಹಲವು ಬಿಜೆಪಿ ನಾಯಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಬಿ ಎಲ್ ಸಂತೋಷ್ ರಿಂದ ಇವರೆಲ್ಲರಿಗೂ ಟಿಕೆಟ್ ತಪ್ಪಿದೆ. ಈಗಾಗಲೇ ಹಲವಾರು ಮಂದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ಧಾರೆ. ವರುಣಾದಲ್ಲಿ ವಿ.ಸೋಮಣ್ಣರನ್ನ ಹರಕೆಯ ಕುರಿ ಮಾಡಲಾಗಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಟೀಕಿಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಶಾಸಕ ರಾಮದಾಸ್ ಸೇರಿದಂತೆ ಬೇರೆ ಯಾರೇ ಆದರೂ ನಮ್ಮ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಬರುವುದಾದರೆ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಸೋಮಣ್ಣನನ್ನು ಹರಕೆಯ ಕುರಿ ಮಾಡಲಾಗುತ್ತಿದೆ. ಸೋಮಣ್ಣ ಸ್ಪರ್ಧೆಗೆ ಬಿ.ಎಲ್.ಸಂತೋಷ ಒತ್ತಡವೇ ಕಾರಣ. ದುಡ್ಡಿರುವ ಒಬ್ಬನು ಬೇಕು ಎಂದು ಇಲ್ಲಿಗೆ ತಂದು ಹಾಕಲಾಗಿದೆ. ಸೋಮಣ್ಣ ಹೊರ ಜಿಲ್ಲೆಯವರು. ಸೋಮಣ್ಣನಿಗೆ ವರುಣ ಕ್ಷೇತ್ರದ ಬಗ್ಗೆ ಏನು ಗೊತ್ತಿದೆ. ರಾಮನಗರದಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ರಾಜಕೀಯ ಮಾಡಿದವರು ಸೋಮಣ್ಣ. ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ವರುಣಗೆ ಒಂದೇ ಒಂದು ಮನೆ ಕೊಟ್ಟಿದ್ದರಾ? ಈಗ ಬಂದು ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ. ನನ್ನ ವರುಣ ಸಂಬಂಧವನ್ನ ಕಿತ್ತು ಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂದರು
ನನ್ನ ಬಗ್ಗೆ ವರುಣ ಜನಕ್ಕೆ ಅಪಾರ ಪ್ರೀತಿ ವಿಶ್ವಾಸ ಇದೆ. ಯಾರೇ ಬರಲಿ, ಯಾರೇ ಅಭ್ಯರ್ಥಿಗಳನ್ನ ಬದಲಾಯಿಸಲಿ ಏನೇ ಆದರೂ ನನ್ನ ಗೆಲ್ಲುವು ನಿಶ್ಚಿತ. ವರುಣದಲ್ಲಿ ಬಿಜೆಪಿ ಜೆಡಿಎಸ್ ಒಳ ಒಪ್ಪಂದಗಳ ಬಗ್ಗೆ ಎರೆಡು ಮೂರು ದಿನದಲ್ಲಿ ಹೇಳುತ್ತೇನೆ. ನಾನು ಇನ್ನೂ ಅವರಿವರ ಮುಖ ನೋಡಿಲ್ಲ ಮುಖಗಳನ್ನ ನೋಡಿದರೆ ಆಗ ಅರ್ಥ ಆಗುತ್ತದೆ. ಆಗ ಎಲ್ಲವನ್ನ ಹೇಳುತ್ತೇನೆ ಎಂದು ಸಿದ್ಧರಾಮಯ್ಯ ಹೇಳಿದರು.
ವರುಣವನ್ನು ತಾಲ್ಲೂಕು ಕೇಂದ್ರ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ನೀಡಿರುವ ತಿರುಗೇಟು ನೀಡಿದ ಸಿದ್ದರಾಮಯ್ಯ, ವರುಣ ತಾಲ್ಲೂಕು ಕೇಂದ್ರ ಆಗಿಲ್ಲ ಎಂಬುದು ಗೊತ್ತಿರಲಿಲ್ಲ ಎಂದು ಹೇಳಿರುವ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಲಿ. ರಾಜ್ಯದ ಸಂಪೂರ್ಣ ಮಾಹಿತಿ ಗೊತ್ತಿಲ್ಲದ ಮೇಲೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಇಷ್ಟು ವರ್ಷ ಸುಮ್ಮನಿದ್ಧು ಚುನಾವಣೆ ಸಮಯದಲ್ಲಿ ಜನರಿಗೆ ಆಶ್ವಾಸನೆ ನೀಡ್ತಿದಾರೆ ಅಷ್ಟೇ. ಚುನಾವಣೆಗೋಸ್ಕರ ಈ ರೀತಿ ಭರವಸೆ ನೀಡ್ತಿದಾರೆ ಎಂದರು.
ಮೊಮ್ಮಗನಿಗೆ ರಾಜಕೀಯ ಟ್ರೈನಿಂಗ್ ಆರಂಭಿಸಿದ ಸಿದ್ದರಾಮಯ್ಯ..
ಸಿದ್ಧರಾಮಯ್ಯ ಕುಟುಂಬದ ಮೂರನೇ ತಲೆಮಾರು ರಾಜಕೀಯ ಫೀಲ್ಡ್ ಗೆ ಎಂಟ್ರಿ ಕೊಡುತ್ತಿದೆ. ಸಿದ್ಧರಾಮಯ್ಯ ಮೊಮ್ಮಗನಿಗೆ ರಾಜಕೀಯ ಟ್ರೈನಿಂಗ್ ಆರಂಭಿಸಿದ್ದು, ದಿ.ರಾಕೇಶ್ ಸಿದ್ದರಾಮಯ್ಯ ಪುತ್ರನಿಗೆ ರಾಜಕೀಯ ತರಬೇತಿ ಶುರು ಮಾಡಿದ್ದಾರೆ. ಇಂದು ಬೆಂಗಳೂರಿನಿಂದ ಮೊಮ್ಮಗ ಧವನ್ ರಾಕೇಶ್ ಜೊತೆಯೇ ಬಂದ ಸಿದ್ದರಾಮಯ್ಯ ಈ ಕುರಿತು ಮಾತನಾಡಿ, ಅವನಿಗೆ ರಾಜಕೀಯದ ಬಗ್ಗೆ ಬಹಳ ಆಸಕ್ತಿ ಇದೆ. ನಾಮಪತ್ರ ಸಲ್ಲಿಕೆ, ಪ್ರಚಾರ ವೈಖರಿ ಎಲ್ಲವನ್ನೂ ತಿಳಿದುಕೊಳ್ಳಲು ಸ್ವ ಆಸಕ್ತಿಯಿಂದ ನನ್ನ ಜೊತೆ ಬಂದಿದ್ದಾನೆ. ಅವನಿಗೆ ಇನ್ನೂ 17 ವರ್ಷ ರಾಜಕೀಯಕ್ಕೆ ಬರಲು ಬಹಳ ಸಮಯವಿದೆ. ಈಗ ಆಸಕ್ತಿಯಿಂದ ಎಲ್ಲವನ್ನೂ ನೋಡಿಕೊಳ್ಳಲು ಬರುತ್ತಿದ್ದಾನೆ. ಮೊಮ್ಮಗನಿಗೆ ರಾಜಕೀಯ ಆಸಕ್ತಿ ಇರುವುದು ತಾತನಾಗಿ ನನಗೆ ಖುಷಿ ಇದೆ. ಪ್ರಚಾರಕ್ಕೆ ಅವನು ಇಷ್ಟ ಪಟ್ಟು ಬಂದರೆ ಬರಲಿ ಎಂದಿದ್ದಾರೆ.
Key words: BL Santhosh – entire -BJP -former CM -Siddaramaiah.