ಮೈಸೂರು, ಜೂನ್.28,2022(www.justkannada.in): ವ್ಯಕ್ತಿಯೊಬ್ಬರಿಗೆ ಬ್ಲಾಕ್ ಮೇಲ್ ಮಾಡಿ, ಹಣ ನೀಡುವಂತೆ ಪೀಡಿಸುತ್ತಿದ್ದ ಯೂಟ್ಯೂಬ್ ನ್ಯೂಸ್ ಚಾನೆಲ್ ವೊಂದರ ಐವರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮೈಸೂರಿನ ಅಶೋಕ ರಸ್ತೆಯಲ್ಲಿ ನಡೆದಿದೆ.
ಕರ್ನಾಟಕ ಪಬ್ಲಿಕ್ ವಾಯ್ಸ್ ನ್ಯೂಸ್ ಚಾನಲ್ (ಕೆಪಿವಿ ನ್ಯೂಸ್ )ನ ಅಭಿಲಾಶ, ಮಣಿ, ಪ್ರದೀಪ್, ಬಸವರಾಜು, ನವೀನ್ ಕುಮಾರ್ ಬಂಧಿತರಾಗಿದ್ದು, ಇವರು ಜೂನ್ 25ರಂದು ಮಧ್ಯಾಹ್ನ ಅಶೋಕ ರಸ್ತೆಯಲ್ಲಿರುವ ಉಮರ್ ಷರೀಫ್ ಎಂಬುವರ ಮನೆಗೆ ಇಂಡಿಕಾ ಕಾರಿನಲ್ಲಿ ಆಗಮಿಸಿದ್ದಾರೆ. ಏಕಾಏಕಿ ಕ್ಯಾಮರಾದೊಂದಿಗೆ ಉಮರ್ ಷರೀಫ್ ಮನೆಗೆ ನುಗ್ಗಲು ಪ್ರಯತ್ನಿಸಿದಾಗ ಅದನ್ನು ಪರೀಫ್ ವಿರೋಧಿಸಿದ್ದಾರೆ. ಆ ವೇಳೆ ನಿಮ್ಮ ಮನೆಯಲ್ಲಿ ಗ್ಯಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದೀಯಾ, ನಾವು ಅದನ್ನು ಟಿವಿಯಲ್ಲಿ ಹಾಕುತ್ತೇವೆ’ ಎಂದು ಹೇಳಿದ್ದಾರೆ.
ಅದೇ ವೇಳೆ ಗುಂಪಿನಲ್ಲಿದ್ದ ಓರ್ವ ತಾನು ಬೆಂಗಳೂರಿನಿಂದ ಬಂದಿರುವ ಕ್ರೈಂ ಪೊಲೀಸ್ ಎಂದು ಹೇಳುತ್ತಾ ಷರೀಫ್ ಮೇಲೆ ಕೂಗಾಡಿದ್ದಾನೆ. ಈ ವೇಳೆ ಸ್ಥಳೀಯರು ಗುಂಪುಗೂಡಿದ್ದಾರೆ. ಮಾಜಿ ಕಾರ್ಪೊರೇಟರ್ ಸುಹೇಲ್ ಬೇಗ್ ಕೂಡ ಸ್ಥಳಕ್ಕೆ ಆಗಮಿಸಿದ್ದು, ಕ್ರೈಂ ಪೊಲೀಸ್ ಎಂದು ಹೇಳಿದ ವ್ಯಕ್ತಿಯೊಂದಿಗೆ “ಈ ಮನೆಯಲ್ಲಿ ಯಾವುದೇ ಗ್ಯಾಸ್ ರೀ-ಫಿಲ್ಲಿಂಗ್ ನಡೆಯುತ್ತಿಲ್ಲ. ಒಂದು ವೇಳ ನೀವು ರೈಡ್ ಮಾಡಲೇಬೇಕಾದರೆ ಮಂಡಿ ಠಾಣೆ ಪೊಲೀಸರನ್ನು ಕರೆಸಿಕೊಳ್ಳಿ, ಇದು ಸೆನ್ಸಿಟಿವ್ ಏರಿಯಾ ಆಗಿದ್ದು, ಸ್ಥಳೀಯ ಪೊಲೀಸರು ಇಲ್ಲದಿದ್ದರೆ ತೊಂದರೆಯಾಗಬಹುದು’ ಎಂದಾಗ ಅತ ಲೋಕಲ್ ಪೊಲೀಸ್ ಎಲ್ಲಾ ಯಾಕೆ..? ನಮಗೆ ಏನಾದರೂ ಕೊಡಿಸಿಬಿಡಿ ಎಂದು ಹೇಳುತ್ತಿದ್ದಂತೆಯೇ ಸುಹೇಲ್ ಬೇಗ್ ಅವರಿಗೆ ಈತ ನಕಲಿ ಪೊಲೀಸ್ ಎಂಬುದು ಮನವರಿಕೆಯಾಗಿದೆ.
ತಕ್ಷಣವೇ ಮಂಡಿ ಠಾಣೆಗೆ ಕರೆ ಮಾಡಿ ಐವರನ್ನೂ ಅವರ ವಶಕ್ಕೆ ಒಪ್ಪಿಸಿದ್ದಾರೆ. ಇವರೆಲ್ಲರನ್ನೂ ಬಂಧಿಸಿ ಕಾರರನ್ನು ವಶಪಡಿಸಿಕೊಂಡ ಮಂಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
Key words: block mail- public- caught – YouTube- news- channel-mysore