ಬೆಂಗಳೂರು,ಸೆಪ್ಟಂಬರ್,26,2022(www.justkannada.in): ಬಹುಕೋಟಿ ರೂಪಾಯಿಗಳ ಬಿಎಂಎಸ್ ಸಾರ್ವಜನಿಕ ಶಿಕ್ಷಣ ದತ್ತಿ ಟ್ರಸ್ಟ್ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದು ಖಚಿತ. ಹಗರಣದ ಕುರಿತ ಎಲ್ಲ ದಾಖಲೆಗಳನ್ನು ಪ್ರಧಾನಿ ಅವರ ಕಚೇರಿಗೆ ತಲುಪಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.
ಜೆಡಿಎಸ್ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಪ್ರಧಾನಿ ಆವರು ಸಮಯ ಬಂದಾಗಲೆಲ್ಲ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಲೇ ಇದ್ದಾರೆ. 20% ಕಮೀಷನ್ ಬಗ್ಗೆ ಮೊದಲು ಮಾತನಾಡಿದ್ದೆ ಅವರು. ಈಗ ಅವರದೇ ಪಕ್ಷ ಅಧಿಕಾರದಲ್ಲಿ ಇರುವ ಕರ್ನಾಟಕದಲ್ಲಿ 100% ತಾಂಡವವಾಡುತ್ತಿದೆ. ಈಗ ಅವರು ಏನು ಹೇಳುತ್ತಾರೆ ಎನ್ನುವುದನ್ನು ನಾನು ಕಾದು ನೋಡುತ್ತೇನೆ ಎಂದರು ಕುಮಾರಸ್ವಾಮಿ.
ನನ್ನ ಬಳಿ ಬಿಎಂಎಸ್ ಟ್ರಸ್ಟ್ ಅಕ್ರಮದ ಕುರಿತ ಎಲ್ಲ ದಾಖಲೆಗಳನ್ನು ಪ್ರಧಾನಿ ಅವರಿಗೆ ತಲುಪಿಸುತ್ತೇನೆ. ದಾಖಲೆಗಳ ಸಮೇತ ವಿಧಾನಸಭೆಯಲ್ಲಿ ದಾಖಲೆಗಳನ್ನ ಇಟ್ಟು ಮಾತನಾಡಿದರೂ ಬಿಜೆಪಿ ಸರಕಾರಕ್ಕೆ ತನಿಖೆ ಮಾಡಿಸುವ ಧೈರ್ಯ ಇಲ್ಲ. ತಾಕತ್ತು, ದಮ್ಮು ಎಂದೆಲ್ಲ ಮಾತನಾಡುವ ಮುಖ್ಯಮಂತ್ರಿಗಳಿಗೆ ತನಿಖೆಗೆ ಆದೇಶ ನೀಡುವ ಧೈರ್ಯ ಇಲ್ಲ ಎಂದು ಕುಮಾರಸ್ವಾಮಿ ಚಾಟಿ ಬೀಸಿದರು.
ಬಿಜೆಪಿ ಭಂಡತನ ಪ್ರದರ್ಶನ ಮಾಡುತ್ತಿದೆ. ದಾಖಲೆಗಳನ್ನು ಇಟ್ಟು ಹಗರಣದ ಬಗ್ಗೆ ಹೇಳಿದರೂ ಸರಕಾರ ವಿತಂಡ ವಾದ ಮಾಡುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಪಕ್ಷಗಳ ಕೆಸರೆರೆಚಾಟ:
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಜನರ ಸಮಸ್ಯೆಗಳ ಕಡೆ ಗಮನ ಕೊಡದೆ ಕೇವಲ ಪರಸ್ಪರ ಕೆಸರು ಎರಚಾಟದಲ್ಲಿ ತೊಡಗಿವೆ. ಪೇ ಸಿಎಂ ಎನ್ನುವ ಪ್ರಚಾರವನ್ನು ಒಂದು ಪಕ್ಷ ಶುರು ಮಾಡಿದೆ. ಅದಕ್ಕೆ ಪ್ರತಿಯಾಗಿ ಇನ್ನೊಂದು ಪಕ್ಷ ಮತ್ತೊಂದು ಪ್ರಚಾರ ಆರಂಭ ಮಾಡಿದೆ. ಈ ಮೂಲಕ ಜನರಲ್ಲಿ ಜಾಗೃತಿ ಮೂಡಿಸ್ತೀವಿ ಅಂತ ಹೊರಟಿದ್ದಾರೆ. ಕಾಂಗ್ರೆಸ್, ಬಿಜೆಪಿ ಸರಕಾರದಲ್ಲಿ ಹಗರಣಗಳು ನಡೆಯುತ್ತಿವೆ. ಮತ್ತೆ ಅಧಿಕಾರ ಕೊಟ್ಟರೆ ಎಲ್ಲವನ್ನೂ ಸರಿ ಮಾಡುತ್ತೇವೆ ಎನ್ನುತ್ತಿದ್ದಾರೆ. ಸರಿ ಮಾಡುತ್ತೇವೆ ಎಂದರೆ ಹಗರಣಗಳ ದಾಖಲೆ ಕೊಟ್ಟರೂ ಕಳಂಕಿತ ಸಚಿವರನ್ನು ರಕ್ಷಣೆ ಮಾಡುವುದಾ? ಎಂದು ಅವರು ಪ್ರಶ್ನೆ ಮಾಡಿದರು.hdk
ಇದೇ ವೇಳೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು, 20% ಆರೋಪ ಮಾಡಿದವರೇ ಈಗ 40% ಆರೋಪಕ್ಕೆ ಗುರಿಯಾಗಿದ್ದಾರೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಚಾಟಿ ಬೀಸಿದರು. ವಿಧಾನ ಪರಿಷತ್ ಸದಸ್ಯ ಭೋಜೆಗೌಡರು ಉಪಸ್ಥಿತರಿದ್ದರು.
Key words: BMS- Trust- scam-Letter-pm modi- soon- Former CM- HD Kumaraswamy.