ಇಸ್ಕಾನ್ ದೇವಸ್ಥಾನಕ್ಕೆ ಬಾಂಬ್ ಬೆದರಿಕೆ

ತಿರುಪತಿ, ಅಕ್ಟೋಬರ್ 28,2024 (www.justkannada.in):  ಆಂಧ್ರಪ್ರದೇಶದ ತಿರುಪತಿಯ ಹೋಟೆಲ್​​ಗಳಿಗೆ ಬಾಂಬ್ ಬೆದರಿಕೆ ಸಂದೇಶಗಳು ಬಂದ ಬೆನ್ನಲ್ಲೇ ಇದೀಗ  ತಿರುಪತಿಯಲ್ಲಿನ ಇಸ್ಕಾನ್ ದೇವಾಲಯಕ್ಕೂ  ಬಾಂಬ್ ಬೆದರಿಕೆ ಸಂದೇಶ ಬಂದಿದೆ.

ಹೌದು, ಪೊಲೀಸರ ಪ್ರಕಾರ, ಇಸ್ಕಾನ್ ದೇವಾಲಯದ ಸಿಬ್ಬಂದಿಗೆ ಅಕ್ಟೋಬರ್ 27 ರಂದು ಬೆದರಿಕೆ ಸಂದೇಶ ಬಂದಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ದೇಗುಲದ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಪಾಕಿಸ್ತಾನದ ಐಎಸ್‌ಐ ಜತೆ ನಂಟು ಹೊಂದಿರುವ ಭಯೋತ್ಪಾದಕರು ದೇವಾಲಯವನ್ನು ಸ್ಫೋಟಿಸಲಿದ್ದಾರೆ ಎಂದು ದೇಗುಲದ ಸಿಬ್ಬಂದಿಗೆ ಇ-ಮೇಲ್ ಸಂದೇಶ ಬಂದಿದೆ. ಬೆದರಿಕೆ ಇ-ಮೇಲ್ ಬಂದ ಬೆನ್ನಲ್ಲೇ, ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದ ತಂಡಗಳು ಸ್ಥಳಕ್ಕೆ  ತೆರಳಿ ದೇವಾಲಯದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು. ಆದರೆ, ದೇವಸ್ಥಾನದ ಆವರಣದಲ್ಲಿ ಯಾವುದೇ ಸ್ಫೋಟಕ ಅಥವಾ ಇತರ ಯಾವುದೇ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿಲ್ಲ.

ಅಕ್ಟೋಬರ್ 26 ರಂದು, ತಿರುಪತಿಯ ಹೋಟೆಲ್‌ಗಳಿಗೆ ಬಾಂಬ್ ಬೆದರಿಕೆ ಸಂದೇಶ  ಕಳುಹಿಸಲಾಗಿತ್ತು. ಹೋಟೆಲ್ ಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಇ-ಮೇಲ್ ಕಳುಹಿಸಿದ್ದರು. ಈ ಬೆನ್ನಲ್ಲೆ ಪೊಲೀಸರು ನಗರದ ಪ್ರತಿ ಹೋಟೆಲ್‌ಗಳಲ್ಲಿ ತಪಾಸಣೆ ನಡೆಸಿದ್ದರು.  ತಿರುಪತಿ ವಿಮಾನ ನಿಲ್ದಾಣಕ್ಕೆ ಕೂಡ ಭಾನುವಾರ ಬಾಂಬ್ ಬೆದರಿಕೆ ಇಮೇಲ್ ಸಂದೇಶ ಬಂದಿತ್ತು. ಬೆದರಿಕೆ ಇ-ಮೇಲ್ ಕುರಿತು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು.

 

Key words: Bomb threat , ISKCON temple, Tirupati