ಕರ್ನಾಟಕ ಕನ್ನಡ ಪ್ರಕಾಶಕರ ಹಾಗೂ ಬರಹಗಾರರ ಸಂಘದ ಗೌರವ ಅಭಿನಂದನೆ
ಬೆಂಗಳೂರು, ಅಕ್ಟೋಬರ್ 17, 2023 (www.justkannada.in): ಪುಸ್ತಕ ಎನ್ನುವುದು ಸಂಸ್ಕೃತಿಯ ಭಾಗವೇ ಹೊರತು ಮಾರಾಟದ ಸರಕಲ್ಲ ಎಂದು ಹಿರಿಯ ಸಾಹಿತಿ, ರಾಜ್ಯ ಗ್ರಂಥಾಲಯ ಪುಸ್ತಕ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರಾದ ಡಾ.ಕರೀಗೌಡ ಬೀಚನಹಳ್ಳಿ ಅಭಿಪ್ರಾಯಪಟ್ಟರು.
ಕರ್ನಾಟಕ ಕನ್ನಡ ಬರಹಗಾರರ ಹಾಗೂ ಪ್ರಕಾಶಕರ ಸಂಘವು ಸಪ್ನ ಬುಕ್ ಹೌಸ್ ನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗೌರವ ಅಭಿನಂದನೆ ಕಾರ್ಯಕ್ರಮದಲ್ಲಿ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಪುಸ್ತಕವನ್ನು ಕೇವಲ ಉದ್ಯಮವನ್ನಾಗಿ ಮಾತ್ರ ನೋಡದೆ ಅದನ್ನು ಸಂಸ್ಕೃತಿಯ ಭಾಗವಾಗಿ ನೋಡುವಂತೆ ಮಾಡಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ. ಅದಕ್ಕಾಗಿ ಪುಸ್ತಕದ ಗುಣಮಟ್ಟ, ಉತ್ಪಾದನೆಯ ಮೌಲ್ಯ ಹೆಚ್ಚುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಕನ್ನಡ ಪ್ರಕಾಶಕರ ಹಾಗೂ ಬರಹಗಾರರ ಸಂಘದ ಬೇಡಿಕೆಗಳನ್ನು ಜಾರಿ ಮಾಡುವಲ್ಲಿ ಎಲ್ಲಾ ರೀತಿಯ ಪ್ರಯತ್ನವನ್ನೂ ಮಾಡಲಾಗುವುದು ಎಂದರು.
ಸಂಘದ ಅಧ್ಯಕ್ಷರಾದ ನಿಡಸಾಲೆ ಪುಟ್ಟಸ್ವಾಮಯ್ಯ ಮಾತನಾಡಿ, ಗ್ರಂಥಾಲಯಗಳಲ್ಲಿ ಹೊಸ ಪುಸ್ತಕಗಳನ್ನು ಸೇರ್ಪಡೆ ಮಾಡುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ ಪುಸ್ತಕ ಖರೀದಿಯಲ್ಲಿ ಆಗುತ್ತಿರುವ ವಿಳಂಬ. ಇದರೊಂದಿಗೆ ಪುಸ್ತಕ ಪ್ರಕಾಶನ ರಂಗ ಎದುರಿಸುತ್ತಿರುವ ಹಲವು ಸಮಸ್ಯೆಗಳತ್ತ ಸರಕಾರ ಗಮನ ಹರಿಸಬೇಕಾಗಿದೆ. ಪುಟಕ್ಕೆ 40 ಪೈಸೆ ನಿಗದಿಮಾಡಬೇಕೆನ್ನುವ ಮನವಿ ನೆನೆಗುದಿಗೆ ಬಿದ್ದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಂಘದ ಕಾರ್ಯದರ್ಶಿಗಳಾದ ಆರ್ ದೊಡ್ಡೆಗೌಡ ಮಾತನಾಡಿ, ಎರಡು ಮಹತ್ವದ ವಿಶ್ವವಿದ್ಯಾಲಯಗಳಲ್ಲಿ ಪ್ರಸಾರಾಂಗದ ನಿರ್ದೇಶಕ ಜವಾಬ್ದಾರಿಯನ್ನು ನಿರ್ವಹಿಸಿರುವ ಕರೀಗೌಡ ಬೀಚನಹಳ್ಳಿ ಅವರಿಗೆ ಪುಸ್ತಕೋದ್ಯಮದ ಪ್ರತೀ ಸಮಸ್ಯೆಯ ಅರಿವಿದೆ. ಕನ್ನಡ ಪುಸ್ತಕ ಉದ್ಯಮಕ್ಕೆ ಅವರು ಒಳ್ಳೆಯ ಭರವಸೆ ಎನ್ನುವ ಆಶಯವನ್ನು ವ್ಯಕ್ತಪಡಿಸಿದರು.
ವಿದ್ವಾಂಸರಾದ ಡಾ ಮಲ್ಲೇಪುರಂ ಜಿ ವೆಂಕಟೇಶ್, ಕಲಬುರ್ಗಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ ಎಚ್ ಟಿ ಪೋತೆ, ಕನ್ನಡ ಚಿಂತಕರಾದ ರಾ ನಂ ಚಂದ್ರಶೇಖರ್, ಡಾ ಚಂದ್ರಪ್ಪ, ಶ್ರೀಶೈಲ ನಾಗರಾಳ, ಪತ್ರಕರ್ತ ಜಿ ಎನ್ ಮೋಹನ್ ಹಾಗೂ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.