ಜ. 10ರಿಂದ 60 ವರ್ಷದ ಮೇಲ್ಪಟ್ಟವರಿಗೆ ಬೂಸ್ಟರ್​​ ಡೋಸ್​- ಸಚಿವ ಕೆ.ಸುಧಾಕರ್

ಬೆಂಗಳೂರು,ಜನವರಿ,7,2022(www.justkannada.in):  ಜನವರಿ 10ರಿಂದ 60 ವರ್ಷದ ಮೇಲ್ಪಟ್ಟವರಿಗೆ ಬೂಸ್ಟರ್​​ ಡೋಸ್​ ನೀಡಲಾಗುವುದು. ಕೊವಿಡ್​ ವಾರಿಯರ್ಸ್, ಹೆಲ್ತ್ ವರ್ಕರ್ಸ್​ಗೆ ಬೂಸ್ಟರ್​ ಡೋಸ್​ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಸುಧಾಕರ್,  ಭಾರತದಲ್ಲಿ 150 ಡೋಸ್​ ಕೊವಿಡ್ ಲಸಿಕೆಯನ್ನು ವಿತರಿಸುವ ಮೂಲಕ ಮೈಲುಗಲ್ಲನ್ನು ತಲುಪಿದೆ. ಶೇ. 90ರಷ್ಟು ಕೊರೊನಾ ಪ್ರಕರಣಗಳು ಬೆಂಗಳೂರು ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಹೆಚ್ಚು ಎಚ್ಚರ ವಹಿಸಲಾಗಿದೆ. ಕೊವಿಡ್​ ನಿಯಂತ್ರಣಕ್ಕೆ ರಾಜ್ಯಮಟ್ಟದಲ್ಲಿ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ. ರಾಜ್ಯಮಟ್ಟದಲ್ಲಿ ಸಮನ್ವಯ ಸಾಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದ ಗಡಿಗಳ ಚೆಕ್​ಪೋಸ್ಟ್​ನಲ್ಲಿ ಹೆಚ್ಚಿನ ಎಚ್ಚರ ವಹಿಸಲಾಗುತ್ತಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣಿಸುವವರಿಗೆ ಕೊರೊನಾ ನೆಗೆಟಿವ್ ರಿಪೋರ್ಟ್​ ಕಡ್ಡಾಯಗೊಳಿಸಲು ಕೇಂದ್ರ ರೈಲ್ವೆ ಸಚಿವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಪತ್ರ ಬರೆದು ಮನವಿ ಮಾಡಿದ್ದಾರೆ. 72 ಗಂಟೆ ಮೊದಲಿನ ಆರ್​ಟಿಪಿಸಿಆರ್​ ರಿಪೋರ್ಟ್​ ಕಡ್ಡಾಯಗೊಳಿಸಲು ಮನವಿ ಮಾಡಲಾಗಿದೆ ಎಂದು  ಹೇಳಿದರು.

ಕೊರೋನಾ ತಡೆಗೆ ಬಿಗಿಕ್ರಮ ಕೈಗೊಳ್ಳಲಾಗುತ್ತದೆ.  ಗಡಿಭಾಗಗಳಲ್ಲಿ ವಿಶೇಷ ಕಾರ್ಯಪಡೆ ನೇಮಕ ಮಾಡಲಾಗುತ್ತಿದೆ. ವಿಶೇಷ ಕಾರ್ಯಪಡೆ ಮೂಲಕ ನಿಗಾ ಇಡುವ ಕೆಲಸ ಮಾಡುತ್ತೇವೆ. ಕೊರೋನಾ ತಡೆಗೆ ನೋಡೆಲ್ ಅಧಿಕಾರಿಗಳ ನೇಮಕ ಮಾಡುತ್ತಿದ್ದೇವೆ. ಎರಡು ದಿನದಲ್ಲಿ ಹೊಸ ಆ್ಯಪ್ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

ಒಮಿಕ್ರಾನ್ ಅತ್ಯಂತ ವೇಗವಾಗಿ ಹರಡುವ ಸೋಂಕಾಗಿದೆ. ಹೀಗಾಗಿ ಎಚ್ಚರ ವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಪ್ರತಿಯೊಬ್ಬರು 2 ಡೋಸ್ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.

Key words: Booster dose -jan 10 – minister -sudhakar