ಬೆಂಗಳೂರು:ಮೇ-21: ಕೋಟಿ ಕೋಟಿಗೆ ಬಿಕರಿಯಾಗುವ ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್ಗಳ ಸೀಟುಗಳ ಮಾರಾಟಕ್ಕೆ ಬ್ರೇಕ್ ಬೀಳಲಿದೆ. ಕಡಿಮೆ ಅಂಕ ತೆಗೆದುಕೊಂಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಹಣಕ್ಕೆ ಸೀಟುಗಳನ್ನು ಮಾರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ನಿಯಮ ರೂಪಿಸಿದ್ದು, ಆ ಪ್ರಕಾರ ಇನ್ನುಮುಂದೆ ಮ್ಯಾನೇಜ್ವೆುಂಟ್ ಸೀಟುಗಳನ್ನೂ ಆನ್ಲೈನ್ ಮೂಲಕವೇ ಭರ್ತಿ ಮಾಡಬೇಕಿದೆ.
ಈವರೆಗೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್ಜಿಯುಎಚ್ಎಸ್) ಪಿಜಿ ಕೋರ್ಸ್ಗಳಿಗೆ ಪ್ರವೇಶ ಕಲ್ಪಿಸುತ್ತಿತ್ತು. ಕಳೆದ ವರ್ಷದಿಂದ ಇದರ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ಕ್ಕೆ ವಹಿಸಲಾಗಿದೆ. ಕಳೆದ ತಿಂಗಳು ಕೌನ್ಸೆಲಿಂಗ್ ಮೂಲಕ 2019-20ನೇ ಸಾಲಿನ ಸೀಟು ಹಂಚಿಕೆ ಮಾಡಲಾಗಿದೆ. ಆನಂತರ 700ಕ್ಕೂ ಹೆಚ್ಚಿನ ಮ್ಯಾನೇಜ್ವೆುಂಟ್ ಸೀಟುಗಳು ಖಾಲಿ ಉಳಿದುಕೊಂಡಿವೆ. ಸರ್ಕಾರಿ ಕೋಟಾದಲ್ಲಿರುವ ಈ ಸೀಟುಗಳನ್ನು ಸರ್ಕಾರ ಮತ್ತು ಖಾಸಗಿ ಕಾಲೇಜು ಆಡಳಿತ ಮಂಡಳಿಗಳ ಒಪ್ಪಂದದ ಮೇರೆಗೆ ಮ್ಯಾನೇಜ್ವೆುಂಟ್ ಸೀಟುಗಳಾಗಿ ಪರಿವರ್ತಿಸಿಕೊಳ್ಳಲಾಗುತ್ತದೆ. ಆನಂತರ ಕಾಲೇಜುಗಳು ಈ ಸೀಟುಗಳನ್ನು ಹರಾಜಿನಲ್ಲಿ ಬಿಡ್ ಮಾಡುವಂತೆ ಹೆಚ್ಚಿನ ಬೆಲೆ ನಿಗದಿ ಮಾಡಿದವರಿಗೆ ನೀಡುತ್ತಿದ್ದವು. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಆರ್ಜಿಯುಎಚ್ಎಸ್ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಜತೆಗೂಡಿ ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್ಐಸಿ) ಮೂಲಕ ಹೊಸ ಪೋರ್ಟಲ್ ಆರಂಭಿಸಿದೆ.
ಆಯ್ಕೆ ಹೇಗೆ?: ಕೆಇಎಗೆ ಸೀಟ್ ಮ್ಯಾಟ್ರಿಕ್ಸ್ ನೀಡುವಾಗಲೇ ಕೆಇಎ ಕಾಲೇಜುಗಳಿಗೆ ಯೂಸರ್ ಐಡಿ, ಪಾಸ್ವರ್ಡ್ ನೀಡಿದೆ. ಇದನ್ನು ಬಳಸಿಕೊಂಡು ವಿದ್ಯಾರ್ಥಿಗಳ ಮಾಹಿತಿ ಅಪ್ಲೋಡ್ ಮಾಡಬೇಕಿದೆ. ಇದನ್ನು ಹೊರತುಪಡಿಸಿ ಮತ್ತೆ ಯಾವುದೇ ರೀತಿಯಲ್ಲಿ ಪ್ರವೇಶ ಪಡೆದುಕೊಳ್ಳು ವಂತಿಲ್ಲ ಎಂದು ಆರ್ಜಿಯುಎಚ್ಎಸ್ ಸ್ಪಷ್ಟವಾಗಿ ತಿಳಿಸಿದೆ.
ಉಳಿಕೆಯಾದ ಸೀಟು
ರಾಜ್ಯದಲ್ಲಿ 80ಕ್ಕೂ ಹೆಚ್ಚಿನ ಕಾಲೇಜುಗಳು ಪಿ.ಜಿ. ಮತ್ತು ದಂತ ವೈದ್ಯಕೀಯ ಕೋರ್ಸ್ ನಡೆಸುತ್ತಿವೆ. 2019-20ನೇ ಸಾಲಿನಲ್ಲಿ ಪಿ.ಜಿ. ವೈದ್ಯಕೀಯ 2,602 ಮತ್ತು ದಂತವೈದ್ಯಕೀಯ 910 ಸೀಟುಗಳಿದ್ದವು. ಈ ಪೈಕಿ ಕ್ರಮವಾಗಿ 540 ಮತ್ತು 230 ದಂತವೈದ್ಯಕೀಯ ಸೀಟುಗಳು ಉಳಿಕೆಯಾಗಿವೆ.
ಕೋಟಿಗೆ ಬಿಡ್
ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳನ್ನು ಬಿಡ್ ಮಾಡಲಿದ್ದು, ರೇಡಿಯೋಲಜಿ ಕೋರ್ಸ್ಗೆ ಹೆಚ್ಚಿನ ಬೇಡಿಕೆ ಇದೆ. ಮೂಲಗಳ ಪ್ರಕಾರ, 3 ಕೋಟಿ ರೂ.ಗೆ ಬಿಡ್ ಆಗಲಿದೆ. ಮ್ಯಾನೇಜ್ವೆುಂಟ್ ಕೋಟಾ ಆಗಿರುವುದರಿಂದ ಬಹುತೇಕ ನಿಯಮಗಳನ್ನು ಪಾಲಿಸುವುದಿಲ್ಲವೆಂಬುದು ಸ್ಪಷ್ಟ. ಈ ಬಾರಿಯೂ ರೇಡಿಯೋಲಜಿಯ ಒಂದೂ ಸೀಟು ಉಳಿಕೆಯಾಗಿಲ್ಲ. ಅಂಗರಚನಾಶಾಸ್ತ್ರ ಮತ್ತು ಶರೀರಶಾಸ್ತ್ರ, ಜೀವರಸಾಯನಶಾಸ್ತ್ರದಲ್ಲಿ ಮಾತ್ರವೇ ಸೀಟುಗಳು ಉಳಿದಿವೆ.
ಸರ್ಕಾರದ ಈ ನಿರ್ಧಾರ ಉತ್ತಮವಾಗಿದೆ. ಇದರಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
| ಚಂದ್ರಿಕಾ ಸೀಟು ವೈದ್ಯಕೀಯ ಸೀಟು ಆಕಾಂಕ್ಷಿ
ಕೃಪೆ:ವಿಜಯವಾಣಿ
break-for-sale-of-management-seats-remaining-medical-seat-is-filled-out-online