ಮೈಸೂರು, ಸೆ.04, 2020 : ( www.justkannada.in news ) ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರ ಸ್ಥಾಪನೆಗೆ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿ ಕ್ಯಾಂಪಸ್ಸಿನಲ್ಲಿ 4.2 ಎಕರೆ ಜಾಗ ನೀಡಲು ಸಿಂಡಿಕೇಟ್ ಸಭೆ ಅನುಮೋದನೆ.
ಮಾನಸ ಗಂಗೋತ್ರಿಯ ಸ್ನಾತಕೋತ್ತರ ವಿದ್ಯಾರ್ಥಿನಿಲಯದ ಹಿಂಭಾಗದ ವಿಶಾಲವಾದ ಹಸಿರಿನಿಂದ ಕಂಗೊಳಿಸುವ ಪ್ರದೇಶವನ್ನು ಇದಕ್ಕಾಗಿ ಗುರುತಿಸಲಾಗಿದೆ. ಈ ಪೈಕಿ 4.2 ಎಕರೆ ಜಾಗವನ್ನು ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರ ಸ್ಥಾಪನೆಗೆ ನೀಡಲಾಗುತ್ತಿದೆ.
ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಅನುಮೋದನೆ ನೀಡಲಾಯಿತು. ಪ್ರಸ್ತುತ ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರವು ಸಿಐಐಎಲ್‍ನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕನ್ನಡ ಭಾಷೆಗೆ ಕೇಂದ್ರ ಸರ್ಕಾರ ಶಾಸ್ತ್ರೀಯ ಸ್ಥಾನಮಾನ ನೀಡಿ ಹಲವು ವರ್ಷಗಳು ಕಳೆದರೂ ಶಾಶ್ವತ ಕನ್ನಡ ಅಧ್ಯಯನ ಕೇಂದ್ರವನ್ನು ಆರಂಭ ಮಾಡಿರಲಿಲ್ಲ. ಈ ಸಂಬಂಧದ ಪ್ರಯತ್ನಗಳು ಕಡೆಗಳಿಗೆಯಲ್ಲಿ ರದ್ದಾಗುತ್ತಿದ್ದವು.
ಇದೀಗ, ಮೈಸೂರು ವಿವಿಯ ಮಾನಸ ಗಂಗೋತ್ರಿ ಕ್ಯಾಂಪಸ್ ಅಂಗಳದಲ್ಲೇ 4.2 ಎಕರೆ ಜಾಗವನ್ನು ನೀಡಲು ನಿರ್ಧರಿಸಿರುವುದು ಖುಷಿಯ ಸಂಗತಿ.
ಈ ಸಂಬಂಧ ‘ ಜಸ್ಟ್ ಕನ್ನಡ ‘ ಜತೆ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ , ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರ ಸ್ಥಾಪನೆಗೆ ಹಾಗೂ ಬೆಳವಣಿಗೆಗೆ ಪೂರಕವಾಗಿ ಮೈಸೂರು ವಿಶ್ವವಿದ್ಯಾನಿಲಯ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಹಿನ್ನೆಲೆ :
ಕನ್ನಡ ಭಾಷೆ, ಸಂಸ್ಕೃತಿ, ಇತಿಹಾಸದ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಸದುದ್ದೇಶದಿಂದ ಪ್ರಾರಂಭಿಸಲು ಉದ್ದೇಶಿಸಿರುವ ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರವನ್ನು ಮೈಸೂರು ವಿಶ್ವವಿದ್ಯಾನಿಲಯದ ಚಾಮುಂಡಿ ಬೆಟ್ಟ ತಪ್ಪಲಿನ ಕೆಳ ಭಾಗದ 10ಎಕರೆ ಜಾಗದಲ್ಲಿ ಸುಸಜ್ಜಿ ತವಾಗಿ ಪ್ರಾರಂಭಿಸಲು ತೀರ್ಮಾನಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ನೇತೃತ್ವದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು.
ಕೆಲ ದಿನಗಳ ಹಿಂದೆ ವಿಧಾನಸೌಧದಲ್ಲಿ ಸಚಿವ ಸಿ.ಟಿ.ರವಿ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಸೇರಿದಂತೆ ಅಧಿಕಾರಿಗಳ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿತ್ತು.
ಕನ್ನಡ ಭಾಷೆಗೆ ಕೇಂದ್ರ ಸರ್ಕಾರ ಶಾಸ್ತ್ರೀಯ ಸ್ಥಾನಮಾನ ನೀಡಿ ಹಲವು ವರ್ಷಗಳು ಕಳೆದರೂ ಶಾಶ್ವತ ಕನ್ನಡ ಅಧ್ಯಯನ ಕೇಂದ್ರವನ್ನು ಆರಂಭ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೈಸೂರು ವಿವಿಗೆ ಸೇರಿದ ಚಾಮುಂಡಿ ಬೆಟ್ಟದ ತಪ್ಪಲಿನ 10 ಎಕರೆ ಜಾಗದಲ್ಲಿ ನೂತನ ಹಾಗೂ ಸುಸಜ್ಜಿತವಾದ ಕನ್ನಡ ಅಧ್ಯಯನ ಪ್ರಾರಂಭಿಸಲು ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಂಡು, ಮುಂದಿನ ಒಂದು ತಿಂಗೊಳಗೆ ಕನ್ನಡ ಅಧ್ಯಯನ ಕೇಂದ್ರ ಪ್ರಾರಂಭಿಸಲು ಅಗತ್ಯ ಸಿದ್ಧತೆಗಳನ್ನು ಪ್ರಾರಂಭಿಸಿ, ಇಲ್ಲ ಸಲ್ಲದ ಕಾರಣಗಳನ್ನು ಮುಂದಿಟ್ಟು ವಿಳಂಬ ನೀತಿ ಅನುಸರಿಸಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಹಿಂದು ಮುಂದು ನೋಡುವುದಿಲ್ಲ ಎಂದು ಸಚಿವ ಸಿ.ಟಿ.ರವಿ ಎಚ್ಚರಿಕೆಯನ್ನು ಸಹ ನೀಡಿದ್ದರು ಎಂಬುದನ್ನು ಸ್ಮರಿಸಬಹುದು.
key words : mysore-university-kannada-shastriya-adyayana-kendra-manasa-gangothri-vc-hemanthkumar