BREAKING NOW: ಯಡಿಯೂರಪ್ಪ ಸಿಎಂ ಆಗಿ ಬಹುಮತ ಸಾಬೀತು ಪಡಿಸಿದ ಕೂಡಲೇ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ : ಸಾಹಿತಿ ಅರವಿಂದ ಮಾಲಗತ್ತಿ.

 

ಮೈಸೂರು, ಜು.26, 2019 : (www.justkannada.in news) : ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಸದನದಲ್ಲಿ ಬಹುಮತ ಸಾಬೀತು ಪಡಿಸಿದ ಮರು ಕ್ಷಣವೇ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವೆ ಎಂದು ಹಿರಿಯ ಸಾಹಿತಿ ಅರವಿಂದ ಮಾಲಗತ್ತಿ ಹೇಳಿಕೆ ನೀಡಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ‘ಅರವಿಂದ ಮಾಲಗತ್ತಿ’ ಅವರೊಂದಿಗೆ ಅಂತರ್ಜಾಲ ಪತ್ರಿಕೆ ‘ಅವಧಿ’ ಶುಕ್ರವಾರ ಬೆಳಗ್ಗೆ ಸಂವಾದ ಏರ್ಪಡಿಸಿತ್ತು. ಫೇಸ್ ಬುಕ್ ಪುಟದಲ್ಲಿ ಈ ಕಾರ್ಯಕ್ರಮದ ನೇರಪ್ರಸಾರ ಬಿತ್ತರಿಸಿತ್ತು. ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಅವರು ಈ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು.

ಈ ವೇಳೆ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ಸ್ವೀಕರಿಸುತ್ತಿರುವ ಬೆಳವಣಿಗೆ ಬಗ್ಗೆ ಮಾತು ಹೊರಳಿತು. ಬಿಎಸ್ ವೈ ಇಂದು ಸಂಜೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ನೀವು ರಾಜೀನಾಮೆ ಕೊಡುತ್ತೀರಾ ಎಂದು ಜಿ.ಎನ್.ಮೋಹನ್ ನೇರವಾಗಿ ಪ್ರಶ್ನಿಸಿದರು, ಆಗ ತಕ್ಷಣ ಪ್ರತಿಕ್ರಿಯಿಸಿದ ಸಾಹಿತಿ ಅರವಿಂದ ಮಾಲಗತ್ತಿ , ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಸದನದಲ್ಲಿ ಬಹುಮತ ಸಾಬೀತು ಪಡಿಸಿದ ಕೂಡಲೇ ನಾನು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಸ್ಪಷ್ಟಪಡಿಸಿದರು.

ಆಗಸ್ಟ್ ಮೊಲದ ವಾರದಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಮೂರು ದಿನಗಳ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಕಾಡೆಮಿ ಅಧ್ಯಕ್ಷರಾದ ಅರವಿಂದ ಮಾಲಗತ್ತಿ ಅವರ ಜತೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.

key words : karnataka Sahitya Akademi president, Kannada writer and researcher Dr. Aravind Malagatti said that, he will resign to the post once BSY proves majority in the house