ನವದೆಹಲಿ:ಆ-1:(www.justkannada.in) ಭಾರತದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಉಗ್ರರ ಅಟ್ಟಹಾಸವನ್ನು ಮಟ್ಟಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದ್ದು, ಭದ್ರತೆಗಾಗಿ ಶ್ವಾನಶಕ್ತಿಯನ್ನು ಬಳಸಿಕೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ಉಗ್ರ ಒಸಾಮ ಬಿನ್ ಲಾಡೆನ್ ಪತ್ತೆಗೆ ಸಹಕರಿಸಿದ್ದ ’ಬೆಲ್ಜಿಯನ್ ಮಾಲಿನೋಸ” ತಳಿಯ ವಿಶೇಷ ನಾಯಿಗಳು ಶೀಘ್ರದಲ್ಲೆ ದೆಹಲಿ ಮೆಟ್ರೋ ಹಾಗೂ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಭದ್ರತೆಗಾಗಿ ನಿಯೋಜಿಸಲು ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ನಿರ್ಧರಿಸಿದೆ.
ದೇಶದಲ್ಲಿ ಉಗ್ರರ ಉಪಟಳ ಹೆಚ್ಚುತ್ತಿದ್ದು, ಪ್ರಮುಖವಾಗಿ ರಾಷ್ಟ್ರ ರಾಜಧಾನಿಯ ಮೆಟ್ರೋ ನಿಲ್ದಾಣ, ಇಂಟರ್ ನ್ಯಾಷನಲ್ ಏರ್ ಪೋರ್ಟ್ ಗಳ ಮೇಲೆ ಸದಾ ಕಾಲ ಆತ್ಮಹತ್ಯಾ ಬಾಂಬ್ ದಾಳಿ, ಭಯೋತ್ಪಾದನಾ ದಾಳಿ ಬೆದರಿಕೆ ಕರೆಗಳು ಬರುತ್ತಲೇ ಇರುತ್ತವೆ. ಈ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸುವ ನಿಟ್ಟಿನಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ತಮ್ಮ ಸಿಬ್ಬಂದಿಗಳು ದೈನಂದಿನ ಕರ್ತವ್ಯಗಳನ್ನು ನಿರ್ವಹಿಸಲು ಸಹಾಯಕ್ಕಾಗಿ ಬೆಲ್ಜಿಯನ್ ಮಾಲಿನೋಸ ತಳಿಯ ಸ್ಪೆಷಲ್ ಡಾಗ್ ನ್ನು ನಿಯೋಜಿಸಲು ಮುಂದಾಗಿದೆ.
ಚುರುಕುಬುದ್ಧಿಯ, ಅತ್ಯಂತ ಎಚ್ಚರಿಕೆಯನ್ನು ಹೊಂದಿರುವ, ಉಗ್ರರ ಜಾಡು ಕಂಡು ಹಿಡಿಯಬಲ್ಲ ಬೆಲ್ಜಿಯನ್ ಮಾಲಿನೋಸ್ ಶ್ವಾನ ಅನುಮಾನಾಸ್ಪದ ವಸ್ತುಗಳನ್ನು ಸುಲಭವಾಗಿ ಪತ್ತೆ ಹಚ್ಚುತ್ತದೆ. 2001 ರ ಪಾಕ್ ನ ಅಬ್ಬಾತಬಾದ್ ನಲ್ಲಿ ಉಗ್ರ ಒಸಾಮ ಬಿನ್ ಲಾಡೆನ್ ನನ್ನು ಸುತ್ತುವರೆದು, ಆತನ ಹತ್ಯೆಗೆ ಈ ನಾಯಿಗಳು ಸಹಕರಿಸಿದ್ದವು. ಇದೇ ತಳಿಯ ನಾಯಿಯನ್ನು ಅಮೆರಿಕಾ ಅಧ್ಯಕ್ಷರ ನೆಲೆಯಾಗಿರುವ ಶ್ವೇತ ಭವನದಲ್ಲಿ ಕೂಡ ಭ್ರತೆಗಾಗಿ ನಿಯೋಜಿಸಲಾಗಿದೆ.
ಒಟ್ಟಿನಲ್ಲಿ ಸ್ಪೋಟಕಗಳ ಪತ್ತೆ, ಉಗ್ರರ ಪತ್ತೆಯಲ್ಲಿ ಅತ್ಯಂತ ಚಾಣಾಕ್ಷ್ಯವಾಗಿರುವ ಈ ಬೆಲ್ಜಿಯನ್ ಮಾಲಿನೋಸ್ ಭದ್ರತೆಗೆ ಹೆಚ್ಚಿನ ಸಾಮರ್ಥ್ಯ ತಂದುಕೊಡಲಿವೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಬೆಲ್ಜಿಯನ್ ಮಾಲಿನೋಸ್ ತಳಿಯ ಶ್ವಾನಗಳು ನಿಯೋಜನೆಗೊಳ್ಳಲಿದೆ.