ಬೆಂಗಳೂರು,ಜುಲೈ,26,2021(www.justkannada.in): ನನಗೆ ದೆಹಲಿಯಿಂದ ಯಾವುದೇ ಒತ್ತಡ ಇರಲಿಲ್ಲ. ಸ್ವಯಂ ಪ್ರೇರಿತವಾಗಿಯೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹಂಗಾಮಿ ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯಪಾಲರನ್ನ ಭೇಟಿಯಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ಎರಡು ತಿಂಗಳ ಹಿಂದೆಯೇ ರಾಜೀನಾಮೆಗೆ ನಿರ್ಧರಿಸಿದ್ದೆ. ಆದರೆ ಸರ್ಕಾರಕ್ಕೆ 2 ವರ್ಷವಾದ ಬಳಿಕ ರಾಜೀನಾಮೆ ನೀಡಲು ತೀರ್ಮಾನಿಸಿದೆ. ನನ್ನ ರಾಜೀನಾಮೆಗೆ ಹೈಕಮಾಂಡ್ ಒತ್ತಡ ಹಾಕಿಲ್ಲ. ಸ್ವಯಂ ಪ್ರೇರಿತವಾಗಿಯೇ ರಾಜೀನಾಮೆ ನೀಡಿದ್ದೇನೆ ಎಂದರು.
ಮುಂದಿನ ಸಿಎಂ ಬಗ್ಗೆ ಪ್ರತಿಕ್ರಿಯಿಸಿದ ಬಿಎಸ್ ಯಡಿಯೂರಪ್ಪ, ಮುಂದಿನ ಸಿಎಂ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಯಾರೆ ಸಿಎಂ ಆದರೂ ನಾನು ಸಹಕಾರವನ್ನ ನೀಡುತ್ತೇನೆ. ಮುಂದಿನ ಸಿಎಂ ಹೆಸರನ್ನ ಸೂಚಿಸಲು ನಾನು ಹೋಗಲ್ಲ. ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಜನಸೇವೆಗೆ ನನಗೆ ಅವಕಾಶ ಮಾಡಿಕೊಟ್ಟ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ಬಿಜೆಪಿ ರಾಜ್ಯಾಧ್ಯಕ್ಷ ಜೆ.ಪಿ ನಡ್ಡಾ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಹಾಗೆಯೇ ನಾನು ರಾಜ್ಯ ರಾಜಕೀಯದಲ್ಲೇ ಇರುತ್ತೇನೆ. ಯಾವುದೇ ಕಾರಣಕ್ಕೂ ರಾಜಕೀಯ ನಿವೃತ್ತಿ ಪಡೆಯುವುದಿಲ್ಲ. ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುತ್ತೇನೆ. ರಾಜ್ಯಪಾಲರ ಹುದ್ದೆ ನನಗೆ ಅಗತ್ಯವಿಲ್ಲ. ಇದನ್ನು ಕೇಂದ್ರ ನಾಯಕರಿಗೂ ತಿಳಿಸಿದ್ದೇನೆ. ವಾಜಪೇಯಿಯವರು ನನಗೆ ಕೇಂದ್ರ ಸಚಿವ ಸ್ಥಾನ ನೀಡಲು ಮುಂದಾಗಿದ್ದರು ಅದನ್ನು ನಾನು ತಿರಸ್ಕರಿಸಿ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿದ್ದೆ. ಈಗಲೂ ನಾನು ಪಕ್ಷದ ಕೆಲಸ ಮಾಡುತ್ತೇನೆ. ಎಂದು ಹಂಗಾಮಿ ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.
Key words: BS yeddyurappa- next CM -political -retirement.