ಬೆಂಗಳೂರು, ಜ.20, 2020 : (www.justkannada.in news) : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಐದು ದಿನಗಳ ವಿದೇಶ ಪ್ರವಾಸಕ್ಕೆ ಭಾನುವಾರ ಬೆಳಗ್ಗೆ ತೆರಳಿದ ಬೆನ್ನಲ್ಲೇ , ಯಡಿಯೂರಪ್ಪ ಅವರ ರಾಜಕೀಯ ನಿವೃತ್ತಿಯ ಬಗ್ಗೆ ಆರ್.ಎಸ್.ಎಸ್. ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟ ಅವರು ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ರಾಡಿ ಎಬ್ಬಿಸಿದೆ.
ಸಿಎಮ್ ಬಿಎಸ್ ಯಡಿಯೂರಪ್ಪ ಅವರ ಸಾಮರ್ಥ್ಯ ವಚ್ಚಸ್ಸಿನ ಸಲುವಾಗಿಯೇ ರಾಜ್ಯದಲ್ಲಿ ಕಮಲ ಅರಳಲು ಸಾಧ್ಯವಾದದ್ದು. ಇದು ಪಕ್ಷದ ವರಿಷ್ಠರಿಗೆ ಈಗಾಗಲೇ ಅರಿವಾಗಿದೆ. ಆದರೂ, ಯಡಿಯೂರಪ್ಪ ಅವರ ಯಶಸ್ಸಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ಹಲವಾರು ವಿಫಲ ಯತ್ನಗಳನ್ನು ನಡೆಸುತ್ತಿರುವುದು ಗುಟ್ಟಾಗೇನು ಉಳಿದಿಲ್ಲ.
ಈಗ ಇದರ ಮುಂದುವರಿದ ಭಾಗವಾಗಿ, ಸಿಎಮ್ ಯಡಿಯೂರಪ್ಪ ವಿದೇಶ ಪ್ರವಾಸಕ್ಕೆಂದು ರಾಜಧಾನಿಯಿಂದ ತೆರಳಿದ ವೇಳೆಯಲ್ಲೇ ಅವರ ಅನುಪಸ್ಥಿತಿಯಲ್ಲಿ ಪ್ರಭಾಕರ ಭಟ್ಟರ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಪ್ರಭಾಕರ ಭಟ್ಟ್ ಹೇಳಿಕೆ ಹೀಗಿದೆ….
ಯಡಿಯೂರಪ್ಪ ಅವರು ಮುಂಬರುವ ದಿನಗಳಲ್ಲಿ ಚುನಾವಣೆ ರಾಜಕೀಯದಿಂದ ನಿವೃತ್ತಿ ಹೊಂದುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪಕ್ಷ ತಮಗೆ ಈ ವರೆಗೆ ಎಲ್ಲಾ ಅಧಿಕಾರವನ್ನು ನೀಡಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ. ಯಾವುದೇ ಚುನಾವಣೆಗೂ ಸ್ಪರ್ಧಿಸುವುದಿಲ್ಲ ಎಂದು ಯಡಿಯೂರಪ್ಪ ಅವರೇ ನನ್ನ ಬಳಿ ಹೇಳಿಕೊಂಡಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಅವರ ಅನುಪಸ್ಥಿತಿಯಲ್ಲೇ ಪ್ರಭಾಕರ ಭಟ್ಟ್ ಈ ಹೇಳಿಕೆ ನೀಡಿದ್ದು ಯಾಕೆ.? ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಈ ನಡುವೆ ಬಿಎಸ್ವೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಚಿವ ಮಾಧುಸ್ವಾಮಿ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದು, ಯಡಿಯೂರಪ್ಪ ಅವರ ರಾಜಕೀಯ ನಿವೃತ್ತಿಯ ಬಗ್ಗೆ ನಮಗಂತು ಯಾವುದೇ ಮಾಹಿತಿ ಇಲ್ಲ. ಪ್ರಭಾಕರ ಭಟ್ ಯಾಕೆ ಈ ರೀತಿ ಹೇಳಿದ್ರೊ ಗೊತ್ತಿಲ್ಲ ಎಂದು ಟಾಂಗ್ ನೀಡಿದ್ದಾರೆ.
key words : bsy-yadiyurappa-karnataka-prbhakara-bhatta-politics