ಬೆಂಗಳೂರು,ಜುಲೈ,,7,2023(www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್ ಅನ್ನು ಇಂದು ಸಿಎಂ ಸಿದ‍್ಧರಾಮಯ್ಯ ಮಂಡನೆ ಮಾಡಿದ್ದು ಹಲವು ಜನರಪರ ಕಾರ್ಯಕ್ರಮಗಳನ್ನ ಘೋಷಣೆ ಮಾಡಿದ್ದಾರೆ.
ಇಂದು ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರು ತಮ್ಮ 14ನೇ ಬಜೆಟ್ ಅನ್ನು ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ತತ್ವದಡಿ ಇಂದು ಮಂಡಿಸಿದ್ದು, ಬಜೆಟ್ ನ ಸಂಪೂರ್ಣ ವಿವರ ಈ ಕೆಳಕಂಡಂತಿದೆ.
- ನಾನು 2023-24ನೇ ಸಾಲಿನ ಆಯವ್ಯಯವನ್ನು ಈ ಸದನದ ಮುಂದೆ ಮಂಡಿಸುತ್ತಿದ್ದೇನೆ.
- ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯವನ್ನು ಒಟ್ಟೊಟ್ಟಿಗೆ ಕೊಂಡೊಯ್ಯುವಲ್ಲಿ ಈ ದೇಶದಲ್ಲಿ ಶತಶತಮಾನಗಳಿಂದ ಯಾವುದಾದರೊಂದು ನಾಡು ಶ್ರಮಿಸಿದ್ದರೆ ಅದು ಕರ್ನಾಟಕ ಎಂದು ಹೇಳಲು ನನಗೆ ಹೆಮ್ಮೆಯಿದೆ. ಬಸವಣ್ಣನವರಿಂದ ಹಿಡಿದು ನಾಲ್ವಡಿ ಕೃಷ್ಣರಾಜ ಒಡೆಯರ್‌ರವರೆಗೆ ಈ ನಮ್ಮ ನಾಡಿನಲ್ಲಿ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯದ ತೇರನ್ನು ಜೊತೆಜೊತೆಗೇ ಎಳೆಯಲಾಗಿದೆ. ಈ ಘನ ಪರಂಪರೆಯನ್ನು ನಾನು ಎಂದಿನಂತೆ ಈ ಬಾರಿಯೂ ಮುಂದುವರೆಸಲು ಶ್ರಮಿಸಿದ್ದೇನೆ.
3.ಇದು ನಾನು ಮಂಡಿಸುತ್ತಿರುವ ಹದಿನಾಲ್ಕನೆಯ ಆಯವ್ಯಯ ಪತ್ರ. ಮುಖ್ಯಮಂತ್ರಿಯಾಗಿ, ವಿತ್ತೀಯ ಹೊಣೆಯನ್ನು ಹೊತ್ತು ಮಂಡಿಸುತ್ತಿರುವ ಏಳನೆಯ ಬಜೆಟ್. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆರು ಆಯವ್ಯಯ ಪತ್ರಗಳನ್ನು ಮಂಡಿಸಿದ್ದೆ. ನನ್ನ ಇಷ್ಟೂ ಆಯವ್ಯಯ ಪತ್ರಗಳ ಹಿಂದೆ ಯಾವ ಕಲ್ಯಾಣ ರಾಜ್ಯದ ಕನಸನ್ನು ಸಾಕಾರಗೊಳಿಸಲು ಈ ನಾಡಿನ ಶ್ರೇಷ್ಠ ಮನಸ್ಸುಗಳು ಬಯಸಿದ್ದವೋ ಅದನ್ನು ಈಡೇರಿಸಲೇಬೇಕೆನ್ನುವ ಉದ್ದೇಶ, ಬದ್ಧತೆಗಳು ಸ್ಪಷ್ಟವಾಗಿವೆ. ನಮ್ಮ ಪಕ್ಷದ ಧ್ಯೇಯೋದ್ದೇಶವೂ ಸಹ ಇದುವೇ ಆಗಿದೆ.
- ನನ್ನ ಹಿಂದಿನ ಎಲ್ಲ ಆಯವ್ಯಯಗಳಲ್ಲಿ ʻಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳುʼ ಎಂಬ ಮೂಲಮಂತ್ರದ, ಕರ್ನಾಟಕ ಮಾದರಿಯ ಆಡಳಿತವನ್ನು ನೀಡುವ ಪ್ರಯತ್ನ ಮಾಡುತ್ತಾ ಬಂದಿದ್ದೆ. ಪ್ರಸ್ತುತ ಮಂಡಿಸುತ್ತಿರುವ ಆಯವ್ಯಯ ಪತ್ರದಲ್ಲಿ ಈ ಮಾದರಿಯನ್ನು ಇನ್ನಷ್ಟು ಆಳವಾಗಿಸುವ, ವಿಸ್ತಾರವಾಗಿಸುವ ಪ್ರಯತ್ನವಿದೆ.
- ಈ ಬಾರಿ ಕರ್ನಾಟಕದ ಜನತೆ ತಮ್ಮ ಮನದಿಂಗಿತವನ್ನು ಗಟ್ಟಿಯಾಗಿ, ಸಂತೋಷದಿಂದ, ಪ್ರಾಮಾಣಿಕವಾಗಿ ಹೇಳಿದ್ದಾರೆ. ಈ ನಾಡಿನ ಜನತೆ ಗಟ್ಟಿ ದನಿಯಲ್ಲಿ ಮಹತ್ವಪೂರ್ಣ ಸಂದೇಶವನ್ನು ಇಡೀ ದೇಶಕ್ಕೆ ಸ್ಪಷ್ಟವಾಗಿ ನೀಡಿದ್ದಾರೆ. ದುಡಿಮೆಯ ಗೌರವ ಎತ್ತಿ ಹಿಡಿಯುವ ತುಡಿತ, ಎಲ್ಲರ ಒಳಿತಿಗೆ ದುಡಿಯುವ ಕನಸು, ಮುಕ್ತ ವಾತಾವರಣದಲ್ಲಿ ಬದುಕುವ ಭರವಸೆ, ಸಾಮಾಜಿಕ ನ್ಯಾಯ ಹಾಗೂ ಸಮತೆ, ಸಮಾನತೆಯ ಮೇಲಿನ ಹಕ್ಕಿನ ಪ್ರತಿಪಾದನೆಯು ಕನ್ನಡಿಗರ ಅಪೇಕ್ಷೆಗಳ ಅಭಿವ್ಯಕ್ತಿಯಾಗಿದೆ. ಕುಟುಂಬ ಪೋಷಣೆ, ಸಾಮಾಜಿಕ ಸಾಮರಸ್ಯ ಹಾಗೂ ಆರ್ಥಿಕ ಸಮೃದ್ಧಿಯ ಆಶಯದೊಂದಿಗೆ ಸಮಾಜ ನಿರ್ಮಾಣ ಸಾಮಾನ್ಯ ಕನ್ನಡಿಗರ ಬದುಕಿನ ಹಾದಿಯಾಗಿದೆ.
- ಕರ್ನಾಟಕದ ಜನತೆಯ ಮುಂದೆ 2023-24ನೇ ಸಾಲಿನ ಆಯವ್ಯಯವನ್ನು ಮಂಡಿಸುವ ಈ ಸಂದರ್ಭದಲ್ಲಿ ಸರ್ಕಾರದ ಮೂಲ ಧ್ಯೇಯೋದ್ದೇಶಗಳನ್ನು ಜನರ ಮುಂದೆ ಪ್ರಸ್ತಾಪಿಸಲು ಬಯಸುತ್ತೇನೆ. ರಾಜ್ಯದ ಮಾನವ ಹಾಗೂ ಆರ್ಥಿಕ ಸಂಪನ್ಮೂಲಗಳ ಅತ್ಯುತ್ತಮ ನಿರ್ವಹಣೆ ಮತ್ತು ಆ ಮೂಲಕ ದಕ್ಷ ಆಡಳಿತ ಹಾಗೂ ಹಣಕಾಸಿನ ಸ್ಥಿರತೆಯನ್ನು ಸಾಧಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ. ಇದರಲ್ಲಿ ಪ್ರಮುಖವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ಸಾಮಾಜಿಕ ಸೇವೆ, ಮೂಲಸೌಕರ್ಯ ಒದಗಿಸುವುದು, ಸಮಾಜದ ದುರ್ಬಲ ವರ್ಗಗಳ ಕಲ್ಯಾಣ, ಪರಿಸರ ಸಂರಕ್ಷಣೆ, ಆರ್ಥಿಕ ಅಭಿವೃದ್ಧಿಗೆ ಉತ್ತೇಜನ, ರೈತರ ಏಳಿಗೆ, ಸಂಪನ್ಮೂಲಗಳ ನ್ಯಾಯಯುತ ಹಂಚಿಕೆ ಮತ್ತು ಸಮಾನ ಅವಕಾಶಗಳ ಸೃಜನೆ ಮಾಡುವುದು ನಮ್ಮ ಆದ್ಯತೆಯಾಗಿರುತ್ತದೆ.
- ಈ ಸಂದರ್ಭದಲ್ಲಿ ಗಿರೀಶ್ ಕಾರ್ನಾಡರ ಯಯಾತಿ ನಾಟಕದ ಈ ಸಾಲುಗಳು ನನಗೆ ನೆನಪಾಗುತ್ತವೆ: ʻಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು ಪುರು, ಆದರೆ ಕನಸುಗಳಿಲ್ಲದ ಹಾದಿಯಲ್ಲಿ ನಡೆಯಲಿ ಹೇಗೆ?ʼ ಉತ್ತಮ ಆಡಳಿತ ಇಲ್ಲವಾದರೆ ನ್ಯಾಯವಿರದು; ದೂರದೃಷ್ಟಿಯಿರದು; ಗುರಿಯಿರದು; ಕರ್ನಾಟಕದ ಜನತೆಗಾಗಿ ಕನಸುಗಳೇ ಇರಲಾರವು.
- ಹೌದು, ರಾಜ್ಯವು ಅಂಧಕಾರ, ಅನ್ಯಾಯದಿಂದ ತತ್ತರಿಸಿತ್ತು. ಒಂದೆಡೆ ಪಟ್ಟಭದ್ರ ಹಿತಾಸಕ್ತಿಯಿಂದ ಕೂಡಿದ ಬಂಡವಾಳಶಾಹಿಗಳು ಮೆರೆದರೆ, ಇನ್ನೊಂದೆಡೆ ಜನಸಾಮಾನ್ಯರು ಮೂಕವೇದನೆ ಅನುಭವಿಸುತ್ತಿದ್ದರು. ಮಾರಕ ಸಾಂಕ್ರಾಮಿಕ ನಮ್ಮನ್ನು ಕಾಡಿದಾಗ, ದುರಾಡಳಿತ ಹಾಗೂ ಭ್ರಷ್ಟಾಚಾರ ಸಾರ್ವಜನಿಕರಿಗೆ ಎರವಾಯಿತು.
- ಈ ಕತ್ತಲು ಇದೀಗ ಅಂತ್ಯ ಕಂಡಿದೆ. ರಾಜ್ಯದ ಮಹಾಜನತೆ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ, ಅವರ ದೃಢಸಂಕಲ್ಪ ಮತ್ತು ಪ್ರಜ್ಞಾವಂತಿಕೆ ಪ್ರದರ್ಶಿಸಿದ್ದಾರೆ. ರಾಜ್ಯದ ಏಳು ಕೋಟಿ ಕನ್ನಡಿಗರ ಈ ಅಪಾರ ನಂಬಿಕೆಯನ್ನು ಎತ್ತಿಹಿಡಿಯಲು, ಉಜ್ವಲ ಭವಿಷ್ಯವನ್ನು ನಿರ್ಮಿಸಲು, ಅಂಧಕಾರದಲ್ಲಿರುವ ಇಂದಿನ ಭಾರತದಲ್ಲಿ ಲಕ್ಷಾಂತರ ಭಾರತೀಯರ ಕನಸುಗಳಿಗೆ ರೆಕ್ಕೆ ಮೂಡಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಶ್ರಮಿಸಲಿದೆ.
- ನಾನು ಸಾಮಾಜಿಕ ನ್ಯಾಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಲ್ಲಿ ದೃಢ ವಿಶ್ವಾಸ ಹೊಂದಿದ್ದೇನೆ. ನಮ್ಮ ಸರ್ಕಾರವು ಸಂವಿಧಾನದ ಆಶಯಗಳಂತೆ ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಮೌಲ್ಯಗಳ ಹಾದಿಯಲ್ಲಿ ಕೆಲಸ ಮಾಡಲಿದೆ. ಈ ಸಂದರ್ಭದಲ್ಲಿ ಡಾ.ಬಾಬಾಸಾಹೇಬ್ ಅಂಬೇಡ್ಕರ್‌ರವರು ಪ್ರತಿಪಾದಿಸಿರುವ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದಲ್ಲಿ ನಂಬಿಕೆಯನ್ನು ಮರುಸ್ಥಾಪಿಸಲು ನಾವು ಬದ್ಧರಾಗಿದ್ದೇವೆ ಎಂದು ಪುನರುಚ್ಛರಿಸಲು ಇಚ್ಛಿಸುತ್ತೇನೆ.
- ನಮ್ಮ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ರಾಜ್ಯವನ್ನು ಪ್ರಜ್ಞಾಪೂರ್ವಕವಾಗಿಯೇ ʻಸರ್ವಜನಾಂಗದ ಶಾಂತಿಯ ತೋಟʼ ಎಂದು ಉಲ್ಲೇಖಿಸಿದ್ದೇವೆ. ಏಕೆಂದರೆ ನಮಗೆ ವೈವಿಧ್ಯತೆ, ಎಲ್ಲರ ಒಳಗೊಳ್ಳುವಿಕೆಯಲ್ಲಿ ವಿಶ್ವಾಸವಿದೆಯೇ ಹೊರತು ಸರ್ವಾಧಿಕಾರಿ ಮನೋಭಾವದಲ್ಲಲ್ಲ. ನಾವು ವಿಭಿನ್ನ ಚಿಂತನೆಗಳ ಒಗ್ಗೂಡಿಸುವಿಕೆ, ಭಯಮುಕ್ತ ವಾತಾವರಣದಲ್ಲಿ ಬದುಕುವುದು ಮತ್ತು ಪರಸ್ಪರ ಅವಲಂಬನೆಯೊಂದಿಗೆ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಮೇಲೆ ಪರಿಣಾಮ ಬೀರುವ ತೀರ್ಮಾನಗಳನ್ನು ನ್ಯಾಯಯುತವಾಗಿ ಕೈಗೊಳ್ಳಲು ಬದ್ಧರಾಗಿದ್ದೇವೆ. ಭೇದ-ಭಾವ ತೋರುವುದು ಅಥವಾ ಧ್ರುವೀಕರಣ ಅಥವಾ ಸಮಾಜವನ್ನು ಒಡೆಯುವುದು ನ್ಯಾಯವಲ್ಲ. ನ್ಯಾಯವೆಂದರೆ ನಿಷ್ಪಕ್ಷಪಾತ, ನ್ಯಾಯವೆಂದರೆ ಸಹಾನುಭೂತಿ, ನ್ಯಾಯವೆಂದರೆ ಅವಕಾಶ ವಂಚಿತರಿಗೆ ಹೆಚ್ಚಿನ ಅನುಕೂಲ ಒದಗಿಸುವ ಮೂಲಕ ಆರ್ಥಿಕ ಅಸಮಾನತೆಯನ್ನು ನಿವಾರಿಸುವುದು.
- ನಮ್ಮ ಸರ್ಕಾರವು ಬಡವರು, ದುರ್ಬಲ ವರ್ಗದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ಭೂ ರಹಿತ ಕೃಷಿ ಕಾರ್ಮಿಕರು ಮತ್ತು ಮಹಿಳೆಯರು ಸೇರಿದಂತೆ ಎಲ್ಲರಿಗೂ ಸಮಾನ ಅವಕಾಶ ಒದಗಿಸುವ ಮೂಲಕ ಎಲ್ಲರ ಕ್ಷೇಮಾಭಿವೃದ್ಧಿಯನ್ನು ಖಾತರಿಪಡಿಸಲು ಬದ್ಧವಾಗಿದೆ. ನಾವು ಒಪ್ಪಂದ ಹಾಗೂ ಅನುಕೂಲಸಿಂಧು ರಾಜಕಾರಣವನ್ನು ಧಿಕ್ಕರಿಸಿ, ಸಂಪೂರ್ಣ ಬಹುಮತವನ್ನು ನೀಡಿರುವ ಶ್ರೀಸಾಮಾನ್ಯರ ತೀರ್ಮಾನವನ್ನು ತಲೆಬಾಗಿಸಿ ಸ್ವೀಕರಿಸುತ್ತೇವೆ. ಹಿಂದಿನ ಸರ್ಕಾರ ಗಣನೀಯವಾಗಿ ನೀಡಿರುವ ಕೊಡುಗೆಯಾದ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿಗ್ರಹಿಸಲು ನಮ್ಮ ಸರ್ಕಾರ ಶ್ರಮಿಸಲಿದೆ.
- ಆಯವ್ಯಯವೆನ್ನುವುದು ಹಣಕಾಸಿನ ನಿರ್ವಹಣೆಯ ಕಸರತ್ತು ಮಾತ್ರವೇ ಅಲ್ಲ. ನಮ್ಮ ಆದ್ಯತೆಗಳನ್ನು, ಗುರಿಗಳನ್ನು ನಿಚ್ಚಳವಾಗಿಸಿಕೊಳ್ಳುವ, ಸಾಕಾರಗೊಳಿಸಿಕೊಳ್ಳುವ ಸಾಧನ.
2023-24 ರ ಆಯವ್ಯಯವನ್ನು ರೂಪಿಸುವಾಗ ರಾಜ್ಯ ಸರ್ಕಾರವು ಬೇಡಿಕೆಗಳನ್ನು ವಾಸ್ತವಗಳೊಂದಿಗೆ ಹಾಗೂ ಸುಸ್ಥಿರ ಅಭಿವೃದ್ಧಿಯೊಂದಿಗೆ ಸಮನ್ವಯಗೊಳಿಸುವ ಮೂಲಕ ವಸ್ತುಸ್ಥಿತಿ ಆಧಾರಿತ, ಫಲಿತಾಂಶ ಕೇಂದ್ರಿತ, ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಪ್ರಜ್ಞಾಪೂರ್ವಕವಾಗಿ ತೀರ್ಮಾನಿಸಿದೆ.
- ಕಳೆದ ಕೆಲ ವರ್ಷಗಳಲ್ಲಿ ನೋಟು ರದ್ದತಿ, ಕೋವಿಡ್ ಸಾಂಕ್ರಾಮಿಕತೆ, ರಾಜಕೀಯ ಅಸ್ಥಿರತೆ, ಅನಿಯಂತ್ರಿತ ಬೆಲೆ ಏರಿಕೆ, ಅಭಿವೃದ್ಧಿಯ ಮುನ್ನೋಟದ ಕೊರತೆಯಿಂದಾಗಿ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಹಾಗಾಗಿ, ಈ ಬಾರಿ ನಾವು ರಾಜ್ಯದ ಜನತೆಯನ್ನು ಈ ಸಂಕಷ್ಟಗಳ ಸುಳಿಯಿಂದ ಹೊರಗೆ ತರಲು, ಅವರ ಮೇಲಿನ ಹೊರೆಗಳನ್ನು ಇಳಿಸಲು ಮೊದಲಿಗೇ ಗ್ಯಾರಂಟಿ ಯೋಜನೆಗಳನ್ನು ರೂಪಿಸಿ ನಮ್ಮ ಆದ್ಯತೆಗಳನ್ನು ಸ್ಪಷ್ಟಪಡಿಸಿದ್ದೇವೆ.
- ಮಾನ್ಯರೇ, ನಾನು ನನ್ನ ಆಯವ್ಯಯ ಪ್ರಸ್ತಾವನೆ ಪ್ರಾರಂಭಿಸುವ ಮೊದಲು ನಮ್ಮ ಐದು ಗ್ಯಾರಂಟಿಗಳ ಬಗ್ಗೆ ಟೀಕೆ ಟಿಪ್ಪಣಿ ಮಾಡುವುದು, ಇಲ್ಲ ಸಲ್ಲದ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು, ಜನರಲ್ಲಿ ಗೊಂದಲ ಮೂಡಿಸುವುದು, ಇಂತಹ ಕೆಲಸ ಮಾಡುತ್ತಿರುವ ವಿರೋಧ ಪಕ್ಷದವರಿಗೆ ಒಂದೇ ಒಂದು ಮಾತು ಹೇಳಲು ಬಯಸುತ್ತೇನೆ. ಗ್ಯಾರಂಟಿ ಯೋಜನೆಗಳನ್ನು ಕೇವಲ ಬಿಟ್ಟಿ ಕೊಡುಗೆಗಳೆಂದು ಆಡಿಕೊಳ್ಳುವವರು ಒಮ್ಮೆ ನಮ್ಮ ಬಡವರ, ಶ್ರಮಿಕರ ಬದುಕನ್ನು ಗಮನಿಸಬೇಕಾಗಿದೆ. ತಾವು ವಿರೋಧ ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸಿ; ಆದರೆ ಶ್ರೀಸಾಮಾನ್ಯರ ವಿವೇಚನೆಗೆ ಅಪಮಾನ ಮಾಡಬೇಡಿ ಎಂದು ವಿನಂತಿ ಮಾಡಿಕೊಳ್ಳುತ್ತೇನೆ. ಜನರು ಬುದ್ಧಿವಂತರು; ಜನರು ಪ್ರಜ್ಞಾವಂತರು. ಇಂತಹ ತರ್ಕರಹಿತ ಆಲೋಚನೆಗಳನ್ನು ನಂಬುವುದಿಲ್ಲ. ವಾಸ್ತವವೆಂದರೆ, ಜನ ನಿಮ್ಮಿಂದ ಬೇಸತ್ತು ಇಷ್ಟೊಂದು ಭಾರಿ ಬಹುಮತದಿಂದ ನಮ್ಮನ್ನು ಆರಿಸಿ ವಿಧಾನ ಸೌಧಕ್ಕೆ ಕಳುಹಿಸಿದ್ದಾರೆ.
- ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಕರ್ನಾಟಕದ ಜನತೆಗೆ 5 ಗ್ಯಾರಂಟಿಗಳ ಭರವಸೆ ನೀಡಿದೆ. ಅಧಿಕಾರಕ್ಕೆ ಬಂದ ಕೂಡಲೇ ನಮ್ಮ ಸರ್ಕಾರ ಈ ಗ್ಯಾರಂಟಿ ಯೋಜನೆಗಳ ಜಾರಿಗೆ ತಾತ್ವಿಕ ಅನುಮೋದನೆ ನೀಡಿತು. ಈಗಾಗಲೇ ನಾವು ಮಹಿಳೆಯರಿಗೆ ಉಚಿತ ಸಾರಿಗೆ ಸೌಲಭ್ಯ ನೀಡುವ ಮೂಲಕ ಅವರ ಕನಸುಗಳಿಗೆ ರೆಕ್ಕೆ ಮೂಡಿಸುವ ಶಕ್ತಿ ಯೋಜನೆಯನ್ನು ಜಾರಿಗೊಳಿಸಿದ್ದೇವೆ. ಈಗಾಗಲೇ ಗೃಹಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆಯನ್ನು ಶೀಘ್ರವೇ ಪ್ರಾರಂಭಿಸಲಾಗುವುದು. ಗೃಹಜ್ಯೋತಿ ಯೋಜನೆಯನ್ನು ಜುಲೈ ತಿಂಗಳಿನಿಂದ ಹಾಗೂ ಗೃಹಲಕ್ಷ್ಮಿ ಯೋಜನೆಯನ್ನು ಆಗಸ್ಟ್ ತಿಂಗಳಿನಲ್ಲಿ ಜಾರಿಗೆ ತರುತ್ತೇವೆ. ಯುವನಿಧಿ ಯೋಜನೆಯು 2023ರಲ್ಲಿ ಪದವಿ ಪಡೆದ ಯುವಜನರಿಗಾಗಿ ಜಾರಿಗೆ ಬರಲಿದೆ. ಅನ್ನಭಾಗ್ಯದಡಿ ಪ್ರತಿ ಫಲಾನುಭವಿಗೆ ಕೇಂದ್ರ ಸರ್ಕಾರದಿಂದ ಒದಗಿಸುತ್ತಿರುವ ಐದು ಕೆ.ಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರದಿಂದ ಒದಗಿಸುವ ಹೆಚ್ಚುವರಿ ಐದು ಕೆ.ಜಿ. ಸೇರಿದಂತೆ ಒಟ್ಟಾರೆ ೧೦ ಕೆ.ಜಿ ಆಹಾರ ಧಾನ್ಯವನ್ನು ಪ್ರತಿ ತಿಂಗಳು ವಿತರಿಸಲು ನಾವು ಬದ್ಧರಾಗಿದ್ದೇವೆ.
17.ನಾವು ಗ್ಯಾರಂಟಿ ಯೋಜನೆಗಳನ್ನು ಯಾಕೆ ಘೋಷಿಸಿದ್ದೇವೆ? ಹಾಗೂ ಯಾಕೆ ಜಾರಿಗೊಳಿಸುತ್ತಿದ್ದೇವೆ? ಅವು ಬಿಟ್ಟಿ ಕೊಡುಗೆಗಳಲ್ಲ. ಈ ಸಂದರ್ಭದಲ್ಲಿ ಬಾಬಾಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿಂತನೆಯನ್ನು ಸ್ಮರಿಸುತ್ತೇನೆ.
ʻಭದ್ರತೆಯ ಖಾತರಿ ಕೊಡದ ಆರ್ಥಿಕ ಯೋಜನೆಯಿಂದ ಯಾವ ಉಪಯೋಗವೂ ಇಲ್ಲ. ಯೋಜನೆ ಒಪ್ಪಿತವಾಗಬೇಕಾದರೆ, ಅದು ಮಿತವ್ಯಯದ್ದು ಮತ್ತು ಸುಭದ್ರವು ಆಗಿರಬೇಕು. ಅದು ಮಿತವ್ಯಯದ್ದು ಆಗಿರದಿದ್ದರೆ, ಬಹುಶ: ನಡೆದೀತು. ಆದರೆ, ಸುಭದ್ರವಾಗಿಲ್ಲದಿದ್ದರೆ, ಖಂಡಿತ ನಡೆಯುವುದಿಲ್ಲʼ.
ಮುಕ್ತ ಮಾರುಕಟ್ಟೆಯ ಈ ಯುಗದಲ್ಲಿ ಬಂಡವಾಳ ಹೂಡಿಕೆಯನ್ನು ವ್ಯಾಪಕವಾಗಿ ಆಕರ್ಷಿಸುವುದು, ಉದ್ಯೋಗಸಹಿತ ಬೆಳವಣಿಗೆಯನ್ನು ಸಾಕಾರಗೊಳಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ಸಂಪತ್ತಿನ ವ್ಯಾಪಕ ಅಸಮಾನ ಹಂಚಿಕೆಯು ಸೃಷ್ಟಿಸುವ ಬೃಹತ್ ಕಂದರವು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳುವುದಾಗಿದೆ. ಅಭಿವೃದ್ಧಿಯ ಫಲವನ್ನು ಬಡವರು, ಶೋಷಿತರು ಹಾಗೂ ದುರ್ಬಲ ವರ್ಗದವರಿಗೆ ಹಂಚುವ ನಮ್ಮ ಪ್ರಯತ್ನವಾಗಿದೆ. ಅಭಿವೃದ್ಧಿಯ ಸಾಹಿತ್ಯದಲ್ಲಿ ಆರ್ಥಿಕ ಪ್ರಗತಿಯ ಫಲಗಳು ಬಡವರಿಗೆ ಸಹಜವಾಗಿ ಹರಿದುಬರುತ್ತದೆ (trickle down theory) ಎಂಬ ನಂಬಿಕೆ ಹುಸಿಯಾದ ಸಂದರ್ಭದಲ್ಲಿ ಬಡವರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಬೇಷರತ್ತಾಗಿ ನಗದು ವರ್ಗಾವಣೆ ಮಾಡುವುದು ಮಹಿಳಾ ಸಬಲೀಕರಣ ಹಾಗೂ ಅವರ ಖರೀದಿಸುವ ಸಾಮರ್ಥ್ಯ ಹೆಚ್ಚಿಸುವ ಪರಿಣಾಮಕಾರಿ ಮಾರ್ಗವೆಂಬುದು ಸಾಬೀತಾಗಿದೆ.
- ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳು ಕೇಂದ್ರ ಸರ್ಕಾರದ ವೈಫಲ್ಯದಿಂದ ಅನಿಯಂತ್ರಿತ ಬೆಲೆ ಏರಿಕೆಯಿಂದ ತತ್ತರಿಸುವ ಕುಟುಂಬಗಳಿಗೆ ತುಸು ನಿರಾಳತೆ ತಂದುಕೊಡುತ್ತವೆ. ಮಹಿಳೆಯರ ಓಡಾಟಕ್ಕೆ ಬೆಂಬಲ ನೀಡುವ ಶಕ್ತಿ ಯೋಜನೆಯು ಅವರಿಗೆ ಹಣ ಉಳಿತಾಯ ಮಾಡುವುದರೊಂದಿಗೆ ಮನೆಯಿಂದ ದೂರದ ಸ್ಥಳಗಳಲ್ಲಿಯೂ ಉದ್ಯೋಗ ಕಂಡುಕೊಳ್ಳಲು ನೆರವಾಗುತ್ತದೆ. ಅನ್ನಭಾಗ್ಯವು ಯಾರೂ ಹಸಿದುಕೊಂಡಿರಬಾರದೆಂಬುದನ್ನು ಖಾತರಿ ಪಡಿಸಿದರೆ, ಯುವನಿಧಿ, ಉದ್ಯೋಗಾಕಾಂಕ್ಷಿ ಯುವ ಜನರಿಗೆ ಮಾನಸಿಕ ಸ್ಥೈರ್ಯ ನೀಡುತ್ತದೆ.
- ನಮ್ಮ ಐದು ಗ್ಯಾರಂಟಿ ಯೋಜನೆಗಳಿಂದಾಗಿ ಒಂದು ವರ್ಷದಲ್ಲಿ ಸುಮಾರು 52,000 ಕೋಟಿ ರೂ.ಗಳನ್ನು ಅಂದಾಜು 1.30 ಕೋಟಿ ಕುಟುಂಬಗಳಿಗೆ ತಲುಪಿಸುವುದರಿಂದ ಪ್ರತೀ ಕುಟುಂಬಕ್ಕೆ ಮಾಸಿಕ 4,000 ರಿಂದ 5,000 ರೂ.ಗಳಷ್ಟು, ಅಂದರೆ, ವಾರ್ಷಿಕವಾಗಿ ಸರಾಸರಿ 48,000 ದಿಂದ 60,000 ರೂ.ಗಳಷ್ಟು ಹೆಚ್ಚುವರಿ ಆರ್ಥಿಕ ನೆರವು ನೀಡಿದಂತಾಗುತ್ತದೆ. ಇದು ಸಾರ್ವತ್ರಿಕ ಮೂಲ ಆದಾಯ (Universal basic income) ಎಂಬ ಪರಿಕಲ್ಪನೆಯನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ಅನುಷ್ಠಾನಗೊಳಿಸಿ ಅಭಿವೃದ್ಧಿಯ ಹೊಸ ಮಾದರಿಯನ್ನು ರೂಪಿಸುವ ಉದ್ದೇಶ ಹೊಂದಿದೆ.
- ಬಡವರ ಕೈಗೆ ಹೆಚ್ಚಿನ ಹಣ ನೀಡುವುದರ ಹಿಂದಿರುವ ಪ್ರಬಲ ಆರ್ಥಿಕ ತರ್ಕವನ್ನು ಸದನದ ಗೌರವಾನ್ವಿತ ಸದಸ್ಯರು ಗಮನಿಸಬಹುದಾಗಿದೆ. ಜಿ.ಎಸ್.ಟಿ. ಯ ಬಹುಪಾಲು ಮೊತ್ತವು ಸಮಾಜದ ತಳಹಂತದ ಶೇ.60 ರಷ್ಟು ಜನರಿಂದ ಸಂಗ್ರಹವಾಗುತ್ತಿದ್ದರೂ ಆರ್ಥಿಕ ವ್ಯವಸ್ಥೆಯ ಹೆಚ್ಚಿನ ಲಾಭವು ಸಮಾಜದ ಮೇಲ್ಮಟ್ಟದ ಶೇ.10 ರಷ್ಟು ಜನರಿಗೆ ತಲುಪುತ್ತಿದೆ. ಆದ್ದರಿಂದ ಬಡವರಿಗೆ ಸಂಪತ್ತನ್ನು ಮರುಹಂಚಿಕೆ ಮಾಡುವ ನೀತಿಗಳನ್ನು ಜನಪರ ಸರ್ಕಾರಗಳು ಅನುಸರಿಸಬೇಕು. ನಮ್ಮ ಗ್ಯಾರಂಟಿ ಯೋಜನೆಗಳು ಈ ಕೆಲಸವನ್ನು ಮಾಡುತ್ತವೆ.
- ʻನಡೆಯ ಚೆನ್ನ ನುಡಿದು ತೋರಿ, ನುಡಿಯ ಚೆನ್ನ ನಡೆದು ತೋರಿʼ ಎಂಬ ಬಸವಣ್ಣನವರ ವಚನದಂತೆ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಚಾಲನೆ ನೀಡುವ ಮೂಲಕ ನುಡಿದಂತೆ ನಡೆಯುವ ನಮ್ಮ ಸರ್ಕಾರದ ಬದ್ಧತೆಯನ್ನು ಮತ್ತೊಮ್ಮೆ ಪ್ರದರ್ಶಿಸಿದ್ದೇವೆ.
- ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ರಾಜ್ಯದ ಜನತೆ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದೆ. ಕೋವಿಡ್ 19 ರಿಂದಾಗಿ ಹಾಗೂ ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಹಿಂದಿನ ಸರ್ಕಾರದ ಸಂವೇದನಾರಹಿತ ಕಾರ್ಯನಿರ್ವಹಣೆಯ ಪರಿಣಾಮ, ಒಪ್ಪತ್ತಿನ ಊಟಕ್ಕೂ ಸಂಚಕಾರ ಒದಗಿದ್ದು ಸುಳ್ಳಲ್ಲ. ದುಡಿಯುವ ಕೈಗಳಿಗೆ ಕೆಲಸ ತಪ್ಪಿದ್ದೂ ನೋಡಿದ್ದೇವೆ. ಉದ್ಯಮಗಳು ಮುಚ್ಚಿದ್ದರಿಂದ ಸಾವಿರಾರು ಕಾರ್ಮಿಕರು ನೌಕರಿ ಕಳೆದುಕೊಂಡು ಬೀದಿ ಪಾಲಾಗಬೇಕಾಯಿತು. ತಮ್ಮ ಅರ್ಹತೆಗಿಂತ ಕಡಿಮೆ ಮಟ್ಟದ ನೌಕರಿ ನೆಚ್ಚಿಕೊಂಡವರು ಅದೆಷ್ಟೋ? ಒಂದೆಡೆ ಸಾಂಕ್ರಾಮಿಕದ ಭೀತಿ; ಮತ್ತೊಂದೆಡೆ ಹೊಟ್ಟೆಪಾಡಿನ ಚಿಂತೆ. ಸಂಕಷ್ಟಗಳ ಸರಮಾಲೆಗೆ ಬೆಲೆ ಏರಿಕೆಯ ಸೇರ್ಪಡೆಯಿಂದ, ಬಡಜನರ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಸಾಮಾನ್ಯ ವರ್ಗದ ಜನರ ಬದುಕು ಮೂರಾಬಟ್ಟೆಯಾಗಿ ಸಂಕಟ ಅನುಭವಿಸಿದ್ದು ನಾವೆಲ್ಲರೂ ಕಂಡಿದ್ದೇವೆ.
- ನಮ್ಮ ಗ್ಯಾರಂಟಿ ಯೋಜನೆಗಳಿಗೆ ಅಗತ್ಯವಿರುವ ಸಂಪನ್ಮೂಲವನ್ನು ನಮ್ಮ ಸರ್ಕಾರವು ಜನರಿಗೆ ಹೆಚ್ಚಿನ ಹೊರೆಯಾಗದಂತೆ ಹೊಂದಿಸಲಿದೆ.
ಈ ನಿಟ್ಟಿನಲ್ಲಿ ತೆರಿಗೆ ಸಂಗ್ರಹ ವ್ಯವಸ್ಥೆಯಲ್ಲಿ ಸುಧಾರಣೆ ಹಾಗೂ ತೆರಿಗೆ ಸೋರಿಕೆಯನ್ನು ತಡೆಗಟ್ಟುವುದರ ಜೊತೆಗೆ ಸರ್ಕಾರದ ಅನಗತ್ಯ ದುಂದುವೆಚ್ಚಗಳಿಗೆ ಕಡಿವಾಣ ಹಾಕಲು ಕ್ರಮ ವಹಿಸಲಾಗುವುದು. ವಿತ್ತೀಯ ಸಂಪನ್ಮೂಲಗಳು ಹಾಗೂ ಆಡಳಿತದ ದಕ್ಷ ನಿರ್ವಹಣೆ ಒಂದು ಕಲೆ ಮತ್ತು ವಿಜ್ಞಾನ; ಕೇವಲ ಸಾಮಾಜಿಕ ಜಾಲತಾಣಗಳ ಸಂದೇಶವಲ್ಲ ಎಂಬುದನ್ನು ಅರಿತರೆ ಒಳ್ಳೆಯದು. ಈ ಯೋಜನೆಗಳು ಅರ್ಹರಿಗೆ ನೇರವಾಗಿ ತಲುಪುವುದರಿಂದ ಹಾಗೂ ಬವಣೆಗಳ ಭಾರದಿಂದ ಏದುಸಿರು ಬಿಡುತ್ತಿರುವ ಬಡವರ ಬದುಕಿನಲ್ಲಿ ಪ್ರಾಣವಾಯುವಿನಂತೆ ಕೆಲಸ ಮಾಡುವುದೆಂಬ ಆಶಯದೊಂದಿಗೆ ಇವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ.
ರಾಜ್ಯದ ಅರ್ಥವ್ಯವಸ್ಥೆ
- ರಾಜ್ಯದ ಅರ್ಥವ್ಯವಸ್ಥೆಯು ಹಿಂದಿನ ಸರ್ಕಾರದ ಅವಧಿಯಲ್ಲಿ ಹದಗೆಟ್ಟಿರುತ್ತದೆ. ಕೇಂದ್ರ ಸಾಂಖ್ಯಿಕ ಕಛೇರಿಯು ಬಿಡುಗಡೆ ಮಾಡಿರುವ ಮುಂಗಡ ಅಂದಾಜುಗಳ ಪ್ರಕಾರ ರಾಜ್ಯದ ಜಿ.ಎಸ್.ಡಿ.ಪಿ ಯು 2022-23ರಲ್ಲಿ ಶೇ. 7.9 ರಷ್ಟು ಬೆಳವಣಿಗೆ ದಾಖಲಿಸಿದೆ. 2021-22 ರಲ್ಲಿ ರಾಜ್ಯದ ಜಿ.ಎಸ್.ಡಿ.ಪಿ ಬೆಳವಣಿಗೆಯು ಶೇ.11 ರಷ್ಟು ದಾಖಲಾಗಿತ್ತು. 2022-23ರ ವಲಯವಾರು ಬೆಳವಣಿಗೆಯನ್ನು ಗಮನಿಸಿದರೆ, ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿನ ಬೆಳವಣಿಗೆಯು ಶೇ. 5.5, 5.1 ಮತ್ತು 9.2 ರಷ್ಟು ಬೆಳವಣಿಗೆಯನ್ನು ದಾಖಲಿಸಿರುತ್ತದೆ.
- ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಅಂದರೆ, 2013-14 ರಿಂದ 2017-18ರವರೆಗೆ ಕೈಗಾರಿಕಾ ವಲಯದಲ್ಲಿ ಶೇ. 8.70 ರಷ್ಟು ಬೆಳವಣಿಗೆ (CAGR) ಹಾಗೂ ಸೇವಾ ವಲಯದಲ್ಲಿ ಶೇ. 9.69 ರಷ್ಟು ಬೆಳವಣಿಗೆ (CAGR) ದಾಖಲಾಗಿರುತ್ತದೆ. ಆದರೆ, 2019-20 ರಿಂದ
2022-23ರ ವರೆಗೆ ಕೈಗಾರಿಕಾ ವಲಯದಲ್ಲಿ ಶೇ. 3.86 ರಷ್ಟು ಬೆಳವಣಿಗೆ (CAGR) ಹಾಗೂ ಸೇವಾ ವಲಯದಲ್ಲಿ ಶೇ. 4.25 ರಷ್ಟು ಬೆಳವಣಿಗೆ (CAGR) ದಾಖಲಾಗಿದ್ದು, ಇದು ಕೋವಿಡ್‌ನಿಂದ ತತ್ತರಿಸಿದ ರಾಜ್ಯದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಈ ಹಿಂದಿದ್ದ ಸರ್ಕಾರವು ವಿಫಲವಾಗಿರುವುದನ್ನು ಎತ್ತಿ ತೋರಿಸುತ್ತದೆ.
- 2022-23ರಲ್ಲಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮತ್ತು ತೈಲ ಬೆಲೆಯ ಏರಿಕೆಯನ್ನು ತಡೆಯುವಲ್ಲಿ ಕೇಂದ್ರ ಸರ್ಕಾರವು ವಿಫಲವಾಗಿದೆ. ತೀವ್ರ ಹಣದುಬ್ಬರದಿಂದ ಜನ ಸಾಮಾನ್ಯರು ಕಂಗಾಲಾಗಿದ್ದು, ಅವರನ್ನು ಇಂತಹ ಪ್ರತಿಕೂಲ ವಾತಾವರಣದಿಂದ ರಕ್ಷಿಸುವುದೇ ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ಪ್ರೇರಣೆಯಾಗಿದೆ.
- 2021-22 ರಲ್ಲಿ ರಾಜ್ಯಕ್ಕೆ 22 ಬಿಲಿಯನ್ ಡಾಲರ್ ವಿದೇಶಿ ಬಂಡವಾಳ ಹೂಡಿಕೆ ಹರಿದು ಬಂದಿದ್ದು, 2022-23ರಲ್ಲಿ ಇದು 10 ಬಿಲಿಯನ್ ಡಾಲರ್‌ಗೆ ಇಳಿದಿದೆ. ರಾಜ್ಯಕ್ಕೆ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆಯನ್ನು ಸೆಳೆಯಲು ಬೇಕಾದ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಮ್ಮ ಸರ್ಕಾರವು ಬದ್ಧವಾಗಿದೆ.
ರಾಜ್ಯದ ಹಣಕಾಸು ಪರಿಸ್ಥಿತಿ
- ಹಿಂದಿನ ಸರ್ಕಾರವು ವಿತ್ತೀಯ ಶಿಸ್ತಿನ ನೀತಿಗಳನ್ನು ಗಾಳಿಗೆ ತೂರಿ ಪ್ರಮುಖ ಇಲಾಖೆಗಳಲ್ಲಿ ಬಾರಿ ಸಂಖ್ಯೆಯ ಕಾಮಗಾರಿಗಳಿಗೆ ಮಂಜೂರಾತಿ ನೀಡಿರುತ್ತದೆ. ಹಿಂದಿನ ಸರ್ಕಾರವು ತನ್ನ ಅಧಿಕಾರಾವಧಿಯಲ್ಲಿ ಒಟ್ಟಾರೆ 94,933 ಕೋಟಿ ರೂ.ಗಳ ಮೊತ್ತದ ಕಾಮಗಾರಿಗಳನ್ನು ಜಲಸಂಪನ್ಮೂಲ, ನಗರಾಭಿವೃದ್ಧಿ, ಲೋಕೋಪಯೋಗಿ ಮತ್ತು ಇತರೆ ಇಲಾಖೆಗಳಲ್ಲಿ ಅನುಮೋದಿಸಿರುತ್ತದೆ. ಈ ಮೇಲ್ಕಂಡ ಇಲಾಖೆಗಳಿಗೆ 2022-23ರ ಆಯವ್ಯಯದಲ್ಲಿ ಕೇವಲ 33,616 ಕೋಟಿ ರೂ.ಗಳ ಅನುದಾನವನ್ನು ನೀಡಿದ್ದರೂ ಹಾಗೂ 2021-22ರ ಅಂತ್ಯಕ್ಕೆ 2,05,986 ಕೋಟಿ ರೂ.ಗಳಷ್ಟು ಮೊತ್ತದ ಬಾಕಿ ಕಾಮಗಾರಿಗಳಿದ್ದರೂ ಸಹ ಹಿಂದಿನ ಸರ್ಕಾರವು ಇದನ್ನು ಲೆಕ್ಕಿಸದೇ 49,116 ಕೋಟಿ ರೂ.ಗಳ ಮೊತ್ತದ ಕಾಮಗಾರಿಗಳನ್ನು ವಿವೇಚನಾರಹಿತವಾಗಿ ಅನುಮೋದಿಸಿರುತ್ತದೆ. 2022-23ರ ಅಂತ್ಯಕ್ಕೆ ಬಾಕಿ ಉಳಿಸಿರುವ ಕಾಮಗಾರಿಗಳ ಒಟ್ಟು ಮೊತ್ತವು 2,55,102 ಕೋಟಿ ರೂ.ಗಳಾಗಿದ್ದು, ಇದನ್ನು ಪೂರ್ಣಗೊಳಿಸಲು ಕನಿಷ್ಟ ಆರು ವರ್ಷಗಳು ಬೇಕಾಗಿದ್ದು, ನಮ್ಮ ಸರ್ಕಾರಕ್ಕೆ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ.
- ಕರ್ನಾಟಕ ರಾಜ್ಯವು ಆರ್ಥಿಕ ಶಿಸ್ತನ್ನು ಪಾಲಿಸುವ ರಾಜ್ಯವೆಂದೇ ಹೆಸರಾಗಿದೆ. ಆದರೆ ಹಿಂದಿನ ಸರ್ಕಾರವು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸೋತಿದೆ. ರಾಜ್ಯದ ಒಟ್ಟು ಹೊಣೆಗಾರಿಕೆಗಳು 2017-18ರ ಅಂತ್ಯಕ್ಕೆ 2,45,737 ಕೋಟಿ ರೂ.ಗಳಷ್ಟಿದ್ದು, 2022-23ರ ಅಂತ್ಯಕ್ಕೆ 5,16,788 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ ಹಾಗೂ ರಾಜ್ಯ ಸರ್ಕಾರದ ಸಾಲದ ಮೇಲಿನ ಬಡ್ಡಿ ಪಾವತಿಯು 2017-18ರಲ್ಲಿ ರಾಜಸ್ವ ಸ್ವೀಕೃತಿಗಳ ಶೇ.9.5 ರಷ್ಟಿದ್ದರೆ, 2023-24ರಲ್ಲಿ ರಾಜಸ್ವ ಸ್ವೀಕೃತಿಯ ಶೇ.15.06 ಕ್ಕೆ ಹೆಚ್ಚಳವಾಗಿರುತ್ತದೆ.
- ತೆರಿಗೆ ಸಂಗ್ರಹಣೆಯಲ್ಲಿ ಕರ್ನಾಟಕವು ಪ್ರಮುಖ ರಾಜ್ಯವಾಗಿದ್ದರೂ ಸಹ ಕೇಂದ್ರ ಸರ್ಕಾರ ಹಂಚಿಕೆ ಮಾಡುವ ಒಟ್ಟು ತೆರಿಗೆಯಲ್ಲಿ ಶೇ. 3.65 ರಷ್ಟು ಮಾತ್ರ ರಾಜ್ಯಕ್ಕೆ ನೀಡಲಾಗುತ್ತಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ 15ನೇ ಹಣಕಾಸು ಆಯೋಗದ ಶಿಫಾರಸ್ಸಿನಿಂದಾಗಿ ನಮ್ಮ ರಾಜ್ಯಕ್ಕೆ ಅತೀ ಹೆಚ್ಚು ನಷ್ಟವಾಗಿದ್ದು, ಇದು ಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಕ್ಕೆ ದ್ರೋಹ ಬಗೆದಂತಾಗಿದೆ. ಇದರಿಂದಾಗಿ 2023-24ರ ಆರ್ಥಿಕ ವರ್ಷದಲ್ಲಿ 10,858 ಕೋಟಿ ರೂ.ಗಳಷ್ಟು ತೆರಿಗೆ ಪಾಲು ಕಡಿಮೆಯಾಗಿರುತ್ತದೆ ಹಾಗೂ ಕಳೆದ ಮೂರು ವರ್ಷಗಳಲ್ಲಿ ರಾಜ್ಯಕ್ಕೆ ಒಟ್ಟಾರೆ 26,140 ಕೋಟಿ ರೂ.ಗಳ ನಷ್ಟವಾಗಿರುತ್ತದೆ. ೧೫ನೇ ಹಣಕಾಸು ಆಯೋಗವು ತನ್ನ ವರದಿಯನ್ನು ಸಲ್ಲಿಸುವಾಗ ಕೇಂದ್ರದಲ್ಲಿ ತಮ್ಮ ಪಕ್ಷವೇ ಅಧಿಕಾರದಲ್ಲಿದ್ದರೂ ಸಹ ಹಿಂದಿನ ಸರ್ಕಾರವು ರಾಜ್ಯ ವಿರೋಧಿಯಾಗಿರುವ ಆಯೋಗದ ವರದಿಯನ್ನು ಒಪ್ಪಿಕೊಳ್ಳದಿರುವಂತೆ, ಒತ್ತಡವನ್ನು ತರದೆ ಮೂಕ ಪ್ರೇಕ್ಷಕರಾಗಿದ್ದು, ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ವಿಫಲವಾಗಿದೆ.
- 2019-20ಕ್ಕೆ ಹೋಲಿಸಿದರೆ 2020-21ರಲ್ಲಿ ನಮ್ಮ ರಾಜ್ಯದ ತೆರಿಗೆ ಪಾಲು ಕಡಿಮೆಯಾದ್ದರಿಂದ 15ನೇ ಹಣಕಾಸು ಆಯೋಗವು 2020-21ಕ್ಕೆ ಅನ್ವಯವಾಗುವಂತೆ ನಮ್ಮ ರಾಜ್ಯಕ್ಕೆ 5,495 ಕೋಟಿ ರೂ.ಗಳ ವಿಶೇಷ ಅನುದಾನವನ್ನು ನೀಡುವಂತೆ ಮಧ್ಯಂತರ ವರದಿಯಲ್ಲಿ ಶಿಫಾರಸ್ಸು ಮಾಡಿರುತ್ತದೆ. ಆದರೆ, ಕೇಂದ್ರ ಸರ್ಕಾರವು, ಹಣಕಾಸು ಆಯೋಗವು ಶಿಫಾರಸ್ಸು ಮಾಡಿದ ಈ ವಿಶೇಷ ಅನುದಾನವನ್ನು ನಮ್ಮ ರಾಜ್ಯಕ್ಕೆ ನೀಡಿರುವುದಿಲ್ಲ. ಅಲ್ಲದೆ,
15ನೇ ಹಣಕಾಸು ಆಯೋಗವು ತನ್ನ ಅಂತಿಮ ವರದಿಯಲ್ಲಿ ರಾಜ್ಯ ಕೇಂದ್ರಿತ ಕಾಮಗಾರಿಗಳ/ ಯೋಜನೆಗಳಿಗೆ ಅನುದಾನವನ್ನು ಶಿಫಾರಸ್ಸು ಮಾಡಿರುತ್ತದೆ. ನಮ್ಮ ರಾಜ್ಯಕ್ಕೆ 3,000 ಕೋಟಿ ರೂ.ಗಳ ಅನುದಾನವನ್ನು ಕೆರೆಗಳ ಸಮಗ್ರ ಅಭಿವೃದ್ಧಿಗಾಗಿ ಮತ್ತು 3,000 ಕೋಟಿ ರೂ.ಗಳನ್ನು ಬೆಂಗಳೂರು ನಗರದ ಪೆರಿಫೆರಲ್ ರಿಂಗ್ ರಸ್ತೆಗಾಗಿ ಎಂದು ರಾಜ್ಯ-ಕೇಂದ್ರಿತ ಅನುದಾನವನ್ನು ಶಿಫಾರಸ್ಸು ಮಾಡಿರುತ್ತದೆ. ಆದರೆ, ಕೇಂದ್ರ ಸರ್ಕಾರವು ಈ ಅನುದಾನವನ್ನು ನಮ್ಮ ರಾಜ್ಯಕ್ಕೆ ನೀಡಿರುವುದಿಲ್ಲ. ಕೇಂದ್ರದ ವಿತ್ತ ಮಂತ್ರಿಯವರು ನಮ್ಮ ರಾಜ್ಯದಿಂದಲೇ ಆಯ್ಕೆಯಾಗಿದ್ದರೂ, ನಮ್ಮದು ಡಬಲ್ ಇಂಜಿನ್ ಎಂದು ಹೇಳಿಕೊಳ್ಳುವ ಸರ್ಕಾರವಿದ್ದರೂ ಸಹ, ಕೇಂದ್ರದಿಂದ ಈ ಅನುದಾನವನ್ನು ಪಡೆಯುವಲ್ಲಿ ಹಿಂದಿನ ಸರ್ಕಾರವು ಅಸಮರ್ಥವಾಗಿರುತ್ತದೆ.
- ರಾಜ್ಯದಲ್ಲಿ ಜಿ.ಎಸ್.ಟಿ. ತೆರಿಗೆಯನ್ನು ಜಾರಿಗೆ ತರುವ ಸಮಯದಲ್ಲಿ ಕೇಂದ್ರ ಸರ್ಕಾರವು ರಾಜ್ಯದ ಜಿ.ಎಸ್.ಟಿ ತೆರಿಗೆಯು ವರ್ಷವಾರು ಶೇ.14 ರಷ್ಟು ಬೆಳವಣಿಗೆಯಾಗಲಿದೆ ಎಂದು ಭರವಸೆ ನೀಡಿತ್ತು. ಆದರೆ ಕಳೆದ ಐದು ವರ್ಷಗಳ ರಾಜ್ಯದ ಜಿ.ಎಸ್.ಟಿ ತೆರಿಗೆ ಸಂಗ್ರಹಣೆಯನ್ನು ಗಮನಿಸಿದರೆ ಕೇಂದ್ರ ಸರ್ಕಾರದ ಭರವಸೆ ಹುಸಿಯಾಗಿರುವುದು ಸಾಬೀತಾಗಿದೆ. ಅಲ್ಲದೇ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡುತ್ತಿದ್ದ ಜಿ.ಎಸ್.ಟಿ. ಪರಿಹಾರವನ್ನು 2022 ಜುಲೈನಿಂದ ಸ್ಥಗಿತಗೊಳಿಸಿರುತ್ತದೆ. ಇದರಿಂದಾಗಿ 2023-24ರ ಆರ್ಥಿಕ ವರ್ಷದಲ್ಲಿಯೇ ಸುಮಾರು 26,954 ಕೋಟಿ ರೂ.ಗಳಷ್ಟು ಜಿ.ಎಸ್.ಟಿ. ಕೊರತೆ ಉಂಟಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಇದು ಬಹುದೊಡ್ಡ ಆಘಾತ ಉಂಟು ಮಾಡಿದೆ.
- ಕೇಂದ್ರ ಸರ್ಕಾರ ವಿಧಿಸುವ ಸೆಸ್ (Cess) ಮತ್ತು ಸರ್‌ಚಾರ್ಜ್ (Surcharge) ರಾಜ್ಯಗಳಿಗೆ ಹಂಚಿಕೆ ಮಾಡದೆ ತನ್ನ ಬಳಿಯೇ ಉಳಿಸಿಕೊಳ್ಳುತ್ತದೆ. ತೆರಿಗೆಗಳ ಮೇಲೆ ವಿಧಿಸುವ ಸೆಸ್ ಮತ್ತು ಸರ್‌ಚಾರ್ಜ್ ಹೆಚ್ಚುತ್ತಿರುವುದರಿಂದ ರಾಜ್ಯಗಳಿಗೆ ಸಂದಾಯವಾಗುವ ತೆರಿಗೆ ಪಾಲು ಕಡಿಮೆಯಾಗಿರುತ್ತದೆ. 2022-23ರಲ್ಲಿ ಎಲ್ಲಾ ರಾಜ್ಯಗಳಿಂದ ಒಟ್ಟು 5,20,570 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರವು ಸೆಸ್ ಮತ್ತು ಸರ್‌ಚಾರ್ಜ್ ಮೂಲಕ ಸಂಗ್ರಹಿಸಿರುವುದರಿಂದ ನಮ್ಮ ರಾಜ್ಯಕ್ಕೆ ಸುಮಾರು 7,780 ಕೋಟಿ ರೂ.ಗಳಷ್ಟು ನಷ್ಟವಾಗಿರುತ್ತದೆ. ನಮ್ಮ ಸರ್ಕಾರವು ಕೇಂದ್ರದ ಈ ನಡೆಯನ್ನು ಬಲವಾಗಿ ವಿರೋಧಿಸುತ್ತದೆ.
- ಕೇಂದ್ರ ಸರ್ಕಾರವು, ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯಕ್ಕೆ ನೀಡುವ ಸಹಾಯಾನುದಾನವನ್ನು ಕಡಿಮೆ ಮಾಡುತ್ತಾ ಬಂದಿದೆ. ಕೇಂದ್ರದ ಪಾಲು ಕಡಿಮೆಯಾಗಿರುವುದರಿಂದ ರಾಜ್ಯದ ಜನರ ಹಿತದೃಷ್ಟಿಯಿಂದ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯದ ಪಾಲನ್ನು ಹೆಚ್ಚಿಸುವ ಅನಿವಾರ್ಯತೆ ಉಂಟಾಗಿದೆ ಹಾಗೂ ಇದರಿಂದಾಗಿ ರಾಜ್ಯದ ಹೊಸ ಯೋಜನೆಗಳಿಗೆ ಅನುದಾನದ ತೀವ್ರ ಕೊರತೆ ತಲೆದೋರಿದೆ.
- ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಲ್ಲಿ ಕೇಂದ್ರ ಸರ್ಕಾರವು ರಾಜ್ಯದ 14.13 ಲಕ್ಷ ಫಲಾನುಭವಿಗಳಿಗೆ ಮಾತ್ರ ಪಿಂಚಣಿಯನ್ನು ನೀಡುತ್ತಿದ್ದು, ರಾಜ್ಯ ಸರ್ಕಾರವು ತನ್ನ ಸ್ವಂತ ಸಂಪನ್ಮೂಲಗಳಿಂದ ಹೆಚ್ಚುವರಿ 64.21 ಲಕ್ಷ ಫಲಾನುಭವಿಗಳಿಗೆ ಪಿಂಚಣಿಯನ್ನು ನೀಡುತ್ತಿದೆ. 2022-23 ರಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಕೇವಲ 447 ಕೋಟಿ ರೂ. ನೀಡಿದರೆ, ರಾಜ್ಯ ಸರ್ಕಾರವು 8,636 ಕೋಟಿ ರೂ.ಗಳನ್ನು ನೀಡಿರುತ್ತದೆ. ಅಂದರೆ, ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಕೇಂದ್ರ ಸರ್ಕಾರವು ಕೇವಲ ಶೇ.4.9 ರಷ್ಟು ಅನುದಾನ ನೀಡಿದರೆ ಬಾಕಿ ಶೇ.95.1 ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ನೀಡುತ್ತಿದೆ.
- ಹಿಂದಿನ ಸರ್ಕಾರವು ಬದ್ಧ ವೆಚ್ಚಗಳಿಗೆ ಕಡಿವಾಣ ಹಾಕಿ ಜನಕಲ್ಯಾಣ ಕಾರ್ಯಕ್ರಮಗಳಿಗೆ ಸಂಪನ್ಮೂಲ ಕ್ರೋಢೀಕರಿಸಲು ವಿಫಲವಾಗಿರುತ್ತದೆ. ಆಯವ್ಯಯ ಗಾತ್ರವು 2018-19 ರಿಂದ 2023-24ರವರೆಗೆ ಶೇ.50ರಷ್ಟು ಹೆಚ್ಚಳವಾಗಿರುತ್ತದೆ. ಆದರೆ, ಬದ್ಧ ವೆಚ್ಚಗಳಾದ ವೇತನ, ಬಡ್ಡಿ ಪಾವತಿ ಮತ್ತು ಪಿಂಚಣಿ ವೆಚ್ಚಗಳು ಈ ಐದು ವರ್ಷಗಳಲ್ಲಿ ಶೇ.81ರಷ್ಟು ಹೆಚ್ಚಾಗಿರುತ್ತದೆ.
- ರಾಜ್ಯದ ಆರ್ಥಿಕತೆಯ ಬೆನ್ನೆಲುಬಾದ ವಿದ್ಯುಚ್ಛಕ್ತಿ ವಲಯವನ್ನು ಮುತುವರ್ಜಿಯಿಂದ ನಿರ್ವಹಿಸಿ ಸದೃಢಗೊಳಿಸುವ ಬದಲು ಹಿಂದಿನ ಸರ್ಕಾರವು ವಿದ್ಯುಚ್ಛಕ್ತಿ ವಲಯವನ್ನು ತೀವ್ರ ಸಂಕಷ್ಟಕ್ಕೆ ನೂಕಿದೆ. ದಿನಾಂಕ: 31.03.2018ರ ಅಂತ್ಯಕ್ಕೆ ವಿದ್ಯುತ್ ಉತ್ಪಾದಕ, ಪ್ರಸರಣ ಮತ್ತು ಸರಬರಾಜು ಕಂಪನಿಗಳ ಒಟ್ಟಾರೆ ಸಾಲದ ಬಾಕಿ ಮೊತ್ತವು 51,087 ಕೋಟಿ ರೂ.ಗಳಿದ್ದು, ಹಿಂದಿನ ಸರ್ಕಾರವು ದಿನಾಂಕ: 31.03.2023 ರ ಅಂತ್ಯಕ್ಕೆ ಒಟ್ಟು 91,911 ಕೋಟಿ ರೂ.ಗಳ ಸಾಲದ ಬಾಕಿ ಉಳಿಸಿರುತ್ತದೆ. ಜೊತೆಗೆ ವಿದ್ಯುತ್ ಸರಬರಾಜು ಕಂಪನಿಗಳ ಸಂಚಿತ ನಷ್ಟ (Cumulative loss) ದಿನಾಂಕ: 31.03.2018ರ ಅಂತ್ಯಕ್ಕೆ 4,725 ಕೋಟಿ ರೂ.ಗಳಿದ್ದು, ದಿನಾಂಕ: 31.03.2023ರ ಅಂತ್ಯಕ್ಕೆ 17,056 ಕೋಟಿ ರೂ.ಗಳಿಗೆ ಹೆಚ್ಚಾಗಿದ್ದು, ಹಿಂದಿನ ಸರ್ಕಾರದ ದುರಾಡಳಿತಕ್ಕೆ ಇದು ನಿದರ್ಶನವಾಗಿದೆ.
- ಹಿಂದಿನ ಸರ್ಕಾರದಿಂದ ರಾಜ್ಯದ ಆರ್ಥಿಕತೆಯು ಕತ್ತಲೆಯಲ್ಲಿ ಮುಳುಗಿದ್ದರೂ, ರಾಜ್ಯದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ದೃಢ ನಿಲುವನ್ನು ತೆಗೆದುಕೊಳ್ಳಲು ನಾನು ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ. ರಾಜ್ಯದ ಜನತೆಯು ನಮ್ಮ ಸರ್ಕಾರದ ಮೇಲೆ ನಂಬಿಕೆಯನ್ನಿರಿಸಿ ಸ್ಪಷ್ಟ ಬಹುಮತವನ್ನು ನೀಡಿರುತ್ತಾರೆ. ಜನರ ಆಶೋತ್ತರಗಳನ್ನು ಈಡೇರಿಸಲು ನಾನು ಕಂಕಣಬದ್ಧನಾಗಿರುತ್ತೇನೆ. ನಮ್ಮ ಸರ್ಕಾರವು ಎಲ್ಲಾ ಐದು ಗ್ಯಾರಂಟಿಗಳನ್ನು ಪೂರೈಸಲು, ಅಗತ್ಯವಿರುವ ಆದಾಯವನ್ನು ಸೃಜಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಪ್ರಸಕ್ತ ಸಾಲಿನಲ್ಲಿ ಬಂಡವಾಳ ಹೂಡಿಕೆ ಹಾಗೂ ನೇರ ನಗದು ವರ್ಗಾವಣೆಯಿಂದ ರಾಜ್ಯದ ಆರ್ಥಿಕತೆಯನ್ನು ಉತ್ತೇಜಿಸಿ, ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಗೆ ಸ್ಪಷ್ಟ ಯೋಜನೆಗಳನ್ನು ರೂಪಿಸಲಾಗುವುದು.
ಕೃಷಿ..
ಎತ್ತೆಮ್ಮೆ ಹೂಡುವುದು| ಉತ್ತೊಮ್ಮೆ ಹರಗುವುದು|
ಬಿತ್ತೊಮ್ಮೆ ಹರಗಿ, ಕಳೆತೆಗೆದರಾ ಬೆಳೆಯು|
ಎತ್ತುಗೈಯುದ್ದ ಸರ್ವಜ್ಞ||
- ನಮ್ಮ ಸರ್ಕಾರ ಹಿಂದೆ ಜಾರಿಗೊಳಿಸಿದ್ದ ಕೃಷಿ ಭಾಗ್ಯ ಯೋಜನೆಯು ಅತ್ಯಂತ ಜನಪ್ರಿಯ ಹಾಗೂ ಉಪಯುಕ್ತವಾಗಿತ್ತು. ಈ ಯೋಜನೆಯನ್ನು ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯೊಂದಿಗೆ ಸಂಯೋಜಿಸಿ 100 ಕೋಟಿ ರೂ. ವೆಚ್ಚದಲ್ಲಿ ಮರು ಜಾರಿಗೊಳಿಸಲಾಗುವುದು.
- ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಕೃಷಿ ಮಾರುಕಟ್ಟೆಗೆ ಸಂಬಂಧಿಸಿದ ವಲಯಗಳಲ್ಲಿ ನಾವೀನ್ಯತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿ ಉದ್ಯಮಗಳಿಗೆ ಉತ್ತೇಜನ ನೀಡಲು ʻನವೋದ್ಯಮʼ ಎಂಬ ಹೊಸ ಯೋಜನೆಯಡಿ 10 ಕೋಟಿ ರೂ. ಒದಗಿಸಲಾಗುವುದು.
- ರೈತರು ಬೆಳೆದ ಉತ್ಪನ್ನಗಳನ್ನು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುಕೂಲವಾಗುವಂತೆ ʻನಂದಿನಿʼ ಮಾದರಿಯಲ್ಲಿ ರೈತ ಉತ್ಪನ್ನಗಳಿಗೆ ಏಕೀಕೃತ ಬ್ರಾಂಡಿಂಗ್ ವ್ಯವಸ್ಥೆ ರೂಪಿಸಲು 10 ಕೋಟಿ ರೂ. ಒದಗಿಸಲಾಗುವುದು.
- ರೈತ ಉತ್ಪಾದಕ ಸಂಸ್ಥೆಗಳನ್ನು ಬಲಪಡಿಸಲು ಹಿಂದುಳಿದ ತಾಲ್ಲೂಕುಗಳ 100 ರೈತ ಉತ್ಪಾದಕ ಸಂಸ್ಥೆಗಳಿಗೆ ಸಹಕಾರಿ ಮತ್ತು ವಾಣಿಜ್ಯ ಬ್ಯಾಂಕುಗಳು ನೀಡುವ ತಲಾ 20 ಲಕ್ಷ ರೂ. ವರೆಗಿನ ಸಾಲಕ್ಕೆ ಶೇ.4 ರ ಬಡ್ಡಿ ಸಹಾಯಧನ ನೀಡಲಾಗುವುದು.
- ರೈತ ಉತ್ಪಾದಕ ಸಂಸ್ಥೆಗಳ ಉತ್ಪನ್ನಗಳನ್ನು ರಫ್ತು ಮಾಡಲು ಅನುಕೂಲವಾಗುವಂತೆ ಗೋದಾಮು, ಶೀತಲಗೃಹ ನಿರ್ಮಾಣ ಮತ್ತು ಇತರ ಮೂಲಸೌಕರ್ಯ ಸೃಜನೆಗೆ ಯೋಜನಾ ವೆಚ್ಚದ ಗರಿಷ್ಠ
ಶೇ. 20ರಷ್ಟು, ಒಂದು ಕೋಟಿ ರೂ. ಮೀರದಂತೆ Seed Capital ಒದಗಿಸಲಾಗುವುದು.
- ರಾಜ್ಯದಲ್ಲಿ ಬೆಳೆದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳ ರಫ್ತನ್ನು ಉತ್ತೇಜಿಸಲು ಕೆಪೆಕ್ ಸಂಸ್ಥೆಯ ಮೂಲಕ ರೈತ ಉತ್ಪಾದಕ ಸಂಸ್ಥೆಗಳು, ನವೋದ್ಯಮಿಗಳು (Startups) ಮತ್ತು ಕಿರು ಆಹಾರ ಸಂಸ್ಕರಣಾ ಉದ್ದಿಮೆದಾರರಿಗೆ ಬೆಂಬಲ ನೀಡಲು ಐದು ಕೋಟಿ ರೂ. ಒದಗಿಸಲಾಗುವುದು.
- ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ಒದಗಿಸುವ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಈ ಕೇಂದ್ರಗಳನ್ನು ಇನ್ನಷ್ಟು ಬಲಪಡಿಸಿ, ಇವುಗಳಲ್ಲಿ 300 ಹೈಟೆಕ್ ಹಾರ್ವೆಸ್ಟರ್ ಹಬ್‌ಗಳನ್ನು ಹಂತಹಂತವಾಗಿ ಸ್ಥಾಪಿಸಲು ಉದ್ದೇಶಿಸಲಾಗಿದ್ದು,
2023-24ನೇ ಸಾಲಿನಲ್ಲಿ 100 ಹಬ್‌ಗಳನ್ನು ಸ್ಥಾಪಿಸಲು 50 ಕೋಟಿ ರೂ. ಒದಗಿಸಲಾಗುವುದು.
ತೋಟಗಾರಿಕೆ
- ರೈತರ ಆದಾಯವನ್ನು ಹೆಚ್ಚಿಸುವುದರಲ್ಲಿ ತೋಟಗಾರಿಕಾ ಬೆಳೆಗಳು ಪ್ರಮುಖ ಪಾತ್ರ ವಹಿಸುತ್ತವೆ. ತೋಟಗಾರಿಕಾ ವಲಯದಲ್ಲಿನ ರಾಜ್ಯದ ಸಾಮರ್ಥ್ಯವನ್ನು ಹೆಚ್ಚಿಸಲು ತೆಂಗು, ಅಡಿಕೆ, ದ್ರಾಕ್ಷಿ, ದಾಳಿಂಬೆ, ಮಾವು ಮತ್ತಿತರ ಹಣ್ಣು, ತರಕಾರಿ, ಹೂವುಗಳು ಸೇರಿದಂತೆ ತೋಟಗಾರಿಕಾ ಬೆಳೆಗಳ ಉತ್ಪಾದನೆ, ಸಂಸ್ಕರಣೆ, ಬ್ರಾಂಡಿಂಗ್ ಮತ್ತು ರಫ್ತಿಗೆ ಹೆಚ್ಚಿನ ಒತ್ತು ನೀಡಲಾಗುವುದು. 2023-24ನೇ ಸಾಲಿನಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುವುದು. ತೋಟಗಾರಿಕಾ ಉತ್ಪನ್ನಗಳ ಸಂಸ್ಕರಣೆಗಾಗಿ ಎಂಟು ಶೀತಲ ಘಟಕಗಳನ್ನು ನಿರ್ಮಾಣ ಮಾಡಲಾಗುವುದು.
- ಅನನ್ಯವಾದ ರುಚಿ ಮತ್ತು ಕಂಪನ್ನು ಹೊಂದಿರುವ ಚಿಕ್ಕಮಗಳೂರು, ಕೊಡಗು ಮತ್ತು ಬಾಬಾ ಬುಡನಗಿರಿಯ ಅರೇಬಿಕಾ ಕಾಫಿ ವೈವಿಧ್ಯಗಳು GI Tag ಹೊಂದಿವೆ. ರಾಜ್ಯದ ಕಾಫಿಯನ್ನು ಇನ್ನಷ್ಟು ಪ್ರಚುರಪಡಿಸಿ ಜನಪ್ರಿಯಗೊಳಿಸಲು ಮತ್ತು ಕಾಫಿ ಎಕೋ ಟೂರಿಸಂ ಅನ್ನು ಉತ್ತೇಜಿಸಲು ಕರ್ನಾಟಕದ ಕಾಫಿಗೆ ಬ್ರಾಂಡಿಂಗ್ ಮಾಡಲು ಕ್ರಮ ವಹಿಸಲಾಗುವುದು.
- ವಿಶೇಷ ಕಂಪು, ರುಚಿ ಮತ್ತು ಸೊಗಡಿನಿಂದ ಜನಮನದಲ್ಲಿ ನೆಲೆಸಿರುವ ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ ಹಾಗೂ ಮೈಸೂರು ವೀಳ್ಯದೆಲೆಗಳು GI Tag ಗಳನ್ನು ಪಡೆದಿವೆ. ಇವುಗಳ ಉತ್ಪಾದನೆ, ಸಂಶೋಧನೆ, ಮಾರುಕಟ್ಟೆ ಮತ್ತು ಬ್ರಾಂಡಿಂಗ್ ಉತ್ತೇಜಿಸಲು ನೂತನ ಕಾರ್ಯಕ್ರಮವನ್ನು ರೂಪಿಸಲಾಗುವುದು.
- ವಾಣಿಜ್ಯ ಹೂವಿನ ರಫ್ತಿನಲ್ಲಿ ಕರ್ನಾಟಕ ಅಗ್ರಸ್ಥಾನ ಹೊಂದುವ ಸಾಮರ್ಥ್ಯ ಹೊಂದಿದ್ದು, ಇವುಗಳ ತಳಿಗಳ ಕೊರತೆ ನಿವಾರಿಸಲು ಅಂತಹ ತಳಿಗಳನ್ನು ಆಮದು ಮಾಡಿಕೊಂಡು ರೈತರಿಗೆ ಕೈಗೆಟಕುವ ದರದಲ್ಲಿ ಒದಗಿಸಲು ಕ್ರಮವಹಿಸಲಾಗುವುದು.
- ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತೋಟಗಾರಿಕಾ ಕ್ಷೇತ್ರದ ಪ್ರಾಯೋಗಿಕ ಅರಿವು ಮೂಡಿಸಲು ʻವಿದ್ಯಾರ್ಥಿಗಳಿಗಾಗಿ ತೋಟಗಾರಿಕೆʼ ಯೋಜನೆಯನ್ನು ಜಾರಿಗೊಳಿಸಲಾಗುವುದು.
ರೇಷ್ಮೆ
- ರಾಮನಗರ ಮತ್ತು ಶಿಡ್ಲಘಟ್ಟದ ರೇಷ್ಮೆಗೂಡಿನ ಮಾರುಕಟ್ಟೆಗಳಲ್ಲಿ ಏಶಿಯಾದಲ್ಲಿಯೇ ಅತಿ ಹೆಚ್ಚಿನ ವಹಿವಾಟು ನಡೆಯುತ್ತದೆ. ರಾಮನಗರ ಜಿಲ್ಲೆಯಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ಅತಿದೊಡ್ಡ ಹೈಟೆಕ್ ಮಾರುಕಟ್ಟೆಯನ್ನು ನಿರ್ಮಿಸಲಾಗುತ್ತಿದ್ದು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗುವಂತೆ ಶಿಡ್ಲಘಟ್ಟದಲ್ಲಿನ ಮಾರುಕಟ್ಟೆಯನ್ನು 75 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆಯಾಗಿ ಅಭಿವೃದ್ಧಿಪಡಿಸಲಾಗುವುದು.
- ಮೈಸೂರು ಬಿತ್ತನೆ ಪ್ರದೇಶದಲ್ಲಿ ಮೂಲಭೂತ ಸೌಕರ್ಯವನ್ನು ಬಲಪಡಿಸಲಾಗುವುದು. ಇದರಿಂದ ಉತ್ತಮ ಗುಣಮಟ್ಟದ ರೋಗರಹಿತವಾದ ಮೈಸೂರು ಬಿತ್ತನೆ ಗೂಡುಗಳನ್ನು ಉತ್ಪಾದಿಸಿ, ವಾಣಿಜ್ಯ ರೇಷ್ಮೆ ಬೆಳೆಗಾರರಿಗೆ ವಿತರಿಸಲು ಮತ್ತು ಉತ್ತಮ ಗುಣಮಟ್ಟದ ಮಿಶ್ರತಳಿ ಕಚ್ಚಾ ರೇಷ್ಮೆಯನ್ನು ಉತ್ಪಾದಿಸಲು ಅನುಕೂಲವಾಗಲಿದೆ.
- ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಸುಲಭವಾಗಿ ದುಡಿಯುವ ಬಂಡವಾಳವನ್ನು ಒದಗಿಸಲು ಮತ್ತು ರೇಷ್ಮೆಗೂಡಿನ ಖರೀದಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು ಐದು ಲಕ್ಷ ರೂ. ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು.
ಪಶುಸಂಗೋಪನೆ
- ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ರೈತರು ಅನುಭವಿಸುವ ಸಂಕಷ್ಟ ನಿವಾರಣೆಗೆ ʻಅನುಗ್ರಹʼ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಆದರೆ, ಹಿಂದಿನ ಸರ್ಕಾರ ಅದನ್ನು ನಿರ್ಲಕ್ಷಿಸಿರುವುದು ಅವರ ರೈತ ವಿರೋಧಿ ಧೋರಣೆಯನ್ನು ಬಿಂಬಿಸುತ್ತದೆ. ಈ ಯೋಜನೆಯನ್ನು ಪುನರ್‌ಸ್ಥಾಪಿಸಿ ಕುರಿ ಮತ್ತು ಮೇಕೆಗಳಿಗೆ 5,000 ರೂ. ಹಾಗೂ ಹಸು, ಎಮ್ಮೆ ಮತ್ತು ಎತ್ತುಗಳಿಗೆ 10,000 ರೂ. ಪರಿಹಾರ ಒದಗಿಸಲಾಗುವುದು.
- ʻಗೋವಿನಿಂದ ಗ್ರಾಹಕರವರೆಗೆ ಗುಣಮಟ್ಟದ ಶ್ರೇಷ್ಠತೆʼ ಎಂಬ ಧ್ಯೇಯವಾಕ್ಯ ಹೊಂದಿರುವ ʻನಂದಿನಿʼಯು ಕೋಟ್ಯಾಂತರ ಜನರ ಬದುಕಿಗೆ ಆಸರೆಯಾಗಿದೆ. ನಂದಿನಿ ಬ್ರಾಂಡ್ ಕನ್ನಡಿಗರೊಂದಿಗೆ ಭಾವನಾತ್ಮಕ ಬೆಸುಗೆಯನ್ನು ಹೊಂದಿದ್ದು, ಇದನ್ನು ಉಳಿಸಿ ಇನ್ನಷ್ಟು ಬೆಳೆಸಲು ನಮ್ಮ ಸರ್ಕಾರ ಬದ್ಧವಾಗಿದೆ.
- ರಾಜ್ಯದಲ್ಲಿ 2022-23 ನೇ ಸಾಲಿನಲ್ಲಿ ಚರ್ಮಗಂಟು ರೋಗದ ಹರಡುವಿಕೆ, ಪಶು ಆಹಾರದ ಕಚ್ಚಾ ಪದಾರ್ಥಗಳ ಬೆಲೆ ಏರಿಕೆ, ವಾಣಿಜ್ಯ ಬೆಳೆಗಳ ಪ್ರದೇಶಗಳ ಹೆಚ್ಚಳ ಹಾಗೂ ಮುಂಗಾರು ತಡವಾಗಿರುವ ಕಾರಣಗಳಿಂದ ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಹಾಲಿನ ಇಳುವರಿಯಲ್ಲಿ ಶೇ.5 ರಿಂದ ಶೇ.7 ರಷ್ಟು ಇಳಿಕೆಯಾಗಿರುತ್ತದೆ. ಉತ್ತಮ ಹಾಲು ನೀಡುವ ತಳಿಗಳನ್ನು ಅಭಿವೃದ್ಧಿಪಡಿಸುವ ಹಾಗೂ ರೋಗಗಳಿಂದ ಬಳಲುತ್ತಿರುವ ಜಾನುವಾರುಗಳಿಗೆ ಸೂಕ್ತ ಸಮಯದಲ್ಲಿ ಸಮರ್ಪಕ ಚಿಕಿತ್ಸೆ, ಔಷಧಿ ಮತ್ತು ಲಸಿಕೆಗಳನ್ನು ಒದಗಿಸುವ ಮೂಲಕ ಹಾಲಿನ ಇಳುವರಿಯನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು.
- ಕಳೆದ ಸಾಲಿನಲ್ಲಿ ರಾಜ್ಯದಲ್ಲಿ ಚರ್ಮಗಂಟು ರೋಗದಿಂದ ಒಟ್ಟು 32,045 ಜಾನುವಾರುಗಳು ಮರಣ ಹೊಂದಿರುತ್ತವೆ. ಈ ಪೈಕಿ ಒಟ್ಟು 25,859 ಮರಣ ಹೊಂದಿದ ಜಾನುವಾರುಗಳಿಗೆ 53 ಕೋಟಿ ರೂ. ಪರಿಹಾರಧನವನ್ನು ವಿತರಿಸಲಾಗಿದೆ. ಬಾಕಿ ಇರುವ 5,851 ಮರಣಹೊಂದಿದ ಜಾನುವಾರುಗಳ ಮಾಲೀಕರಿಗೆ ೧೨ ಕೋಟಿ ರೂ. ಪರಿಹಾರಧನವನ್ನು ವಿತರಿಸಲು ಕ್ರಮ ವಹಿಸಲಾಗುವುದು.
- ಗ್ರಾಹಕರಿಗೆ ಅಗ್ಗದ ದರದಲ್ಲಿ ಗುಣಮಟ್ಟದ ಪ್ರೋಟೀನ್‌ಯುಕ್ತ ಮಾಂಸ ಮತ್ತು ಮೊಟ್ಟೆ ಪೂರೈಕೆಗೆ ಅವಕಾಶ ಕಲ್ಪಿಸಲು ಖಾಸಗಿ ಸಹಭಾಗಿತ್ವದಲ್ಲಿ ಜಾನುವಾರು ಉತ್ಪನ್ನಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಘಟಕಗಳು ಹಾಗೂ ಉತ್ತಮವಾದ ಮಾರುಕಟ್ಟೆ ಅಭಿವೃದ್ಧಿ ಮಾಡಲಾಗುವುದು.
ಮೀನುಗಾರಿಕೆ
- ಮೀನುಗಾರ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ವಹಿವಾಟು ವಿಸ್ತರಣೆಗೆ ನೆರವಾಗಲು ಬ್ಯಾಂಕುಗಳಲ್ಲಿ ಬಡ್ಡಿರಹಿತವಾಗಿ ನೀಡುವ ಸಾಲದ ಮಿತಿಯನ್ನು 50,000 ರೂ. ಗಳಿಂದ ಮೂರು ಲಕ್ಷ ರೂ. ಗಳಿಗೆ ಹೆಚ್ಚಿಸಲಾಗುವುದು.
- ಮೀನುಗಾರರ ದೋಣಿಗಳಿಗೆ ರಿಯಾಯಿತಿ ದರದಲ್ಲಿ ನೀಡುತ್ತಿರುವ ಡೀಸೆಲ್ ಮಿತಿಯನ್ನು ಒಂದೂವರೆ ಲಕ್ಷ ಕಿಲೋ ಲೀಟರ್‌ನಿಂದ ಎರಡು ಲಕ್ಷ ಕಿಲೋ ಲೀಟರ್‌ಗಳವರೆಗೆ ಹೆಚ್ಚಿಸಲಾಗುವುದು. ಇದರಿಂದ ಮೀನುಗಾರರಿಗೆ ಸರ್ಕಾರದಿಂದ 250 ಕೋಟಿ ರೂ.ಗಳಷ್ಟು ನೆರವಾಗಲಿದೆ.
- ಮೀನುಗಾರಿಕಾ ದೋಣಿಗಳಲ್ಲಿನ ಸೀಮೆ ಎಣ್ಣೆ ಇಂಜಿನ್‌ಗಳನ್ನು ಪೆಟ್ರೋಲ್/ಡೀಸೆಲ್ ಇಂಜಿನ್‌ಗಳಾಗಿ ಬದಲಾಯಿಸಲು ತಲಾ 50,000 ರೂ. ಸಹಾಯಧನ ನೀಡಲಾಗುವುದು. ಪ್ರಸಕ್ತ ಸಾಲಿನಲ್ಲಿ 4,000 ಸೀಮೆ ಎಣ್ಣೆ ಇಂಜಿನ್‌ಗಳ ಬದಲಾವಣೆಗೆ 20 ಕೋಟಿ ರೂ. ಸಹಾಯಧನ ಒದಗಿಸಲಾಗುವುದು.
- ರಾಜ್ಯದ ಜಲಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹೆಚ್ಚಿನ ಮೀನು ಮರಿಗಳನ್ನು ಉತ್ಪಾದಿಸುವ ಮೂಲಕ ಒಳನಾಡು ಮೀನುಗಾರಿಕೆಗೆ ಇರುವ ವಿಪುಲ ಅವಕಾಶಗಳನ್ನು ಉಪಯೋಗಿಸಿಕೊಳ್ಳಲಾಗುವುದು. ಜೊತೆಗೆ, ಹೆಚ್ಚಿನ ಬೇಡಿಕೆಯಿರುವ ಕಾಟ್ಲಾ ಮತ್ತು ರೋಹು ಮೀನು ಮರಿಗಳನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸಿ ಒಳನಾಡು ಮೀನುಗಾರಿಕೆಯನ್ನು ಪ್ರೋತ್ಸಾಹಿಸಲಾಗುವುದು.
- ಸೀಗಡಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಉತ್ತಮ ಮಾರುಕಟ್ಟೆಯನ್ನು ಕಲ್ಪಿಸಲು ಕ್ರಮ ವಹಿಸಲಾಗುವುದು.
- ಮೀನುಗಾರಿಕೆಗೆ ಈಗ ಲಭ್ಯವಿರುವ ಶೈತ್ಯಾಗಾರಗಳನ್ನು ದುಪ್ಪಟ್ಟುಗೊಳಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಯನ್ನು ಜಾರಿಗೆ ತರಲಾಗುವುದು.
ಸಹಕಾರ
- ರಾಜ್ಯದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ನೀಡುತ್ತಿರುವ ಅಲ್ಪಾವಧಿ ಸಾಲದ ಮಿತಿಯನ್ನು ಮೂರು ಲಕ್ಷ ರೂ. ಗಳಿಂದ ಐದು ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು. ಅದೇ ರೀತಿ ಶೇ. 3 ರ ಬಡ್ಡಿದರದಲ್ಲಿ ನೀಡುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮಿತಿಯನ್ನು 10 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ 35 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25,000 ಕೋಟಿ ರೂ.ಗಳಷ್ಟು ಸಾಲ ವಿತರಣೆ ಮಾಡುವ ಗುರಿ ಹೊಂದಲಾಗಿದೆ.
- ರೈತರು ತಮ್ಮ ಹಾಗೂ ತಮ್ಮ ನೆರೆಹೊರೆಯ ರೈತರ ಉತ್ಪನ್ನಗಳನ್ನು ಸಂಗ್ರಹಿಸಲು ಅನುವಾಗುವಂತೆ ಗೋದಾಮು ನಿರ್ಮಿಸಲು ಬ್ಯಾಂಕುಗಳು ನೀಡುವ 20 ಲಕ್ಷ ರೂ. ವರೆಗಿನ ಸಾಲಕ್ಕೆ ರಾಜ್ಯ ಸರ್ಕಾರವು ಶೇ. 7 ರಷ್ಟು ಬಡ್ಡಿ ಸಹಾಯಧನ ನೀಡಲಿದೆ.
- ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಗುಡ್ಡಗಾಡು ಪ್ರದೇಶಗಳ ರೈತರ ಕೃಷಿ ಉತ್ಪನ್ನ ಮತ್ತು ಪರಿಕರಗಳ ಸಾಗಾಣಿಕೆಗಾಗಿ ನಾಲ್ಕು ಚಕ್ರದ ಪಿಕ್‌ಅಪ್ ವ್ಯಾನ್ (Pick-up Van) ಖರೀದಿಸಲು ಏಳು ಲಕ್ಷ ರೂ. ವರೆಗಿನ ಸಾಲವನ್ನು ಶೇ. ೪ರ ಬಡ್ಡಿ ದರದಲ್ಲಿ ವಿತರಿಸಲಾಗುವುದು.
- ಶೀಘ್ರ ಹಾಳಾಗುವ ಹಣ್ಣು, ಹೂವು, ತರಕಾರಿಗಳ ಬೆಲೆ ಕುಸಿತದಿಂದ ರೈತರು ಒತ್ತಡದ ಮಾರಾಟ ಮಾಡುವುದನ್ನು ತಪ್ಪಿಸಿ, ನ್ಯಾಯಯುತ ಬೆಲೆ ಒದಗಿಸುವುದಕ್ಕೆ ನೆರವಾಗಲು ರಾಜ್ಯದ ಆಯ್ದ 50 ತರಕಾರಿ ಮಾರುಕಟ್ಟೆಗಳಲ್ಲಿ KAPPEC ಸಹಯೋಗದೊಂದಿಗೆ ಮಿನಿ ಶೀತಲ ಗೃಹಗಳನ್ನು ಸ್ಥಾಪಿಸಲಾಗುವುದು.
- ಕೃಷಿ ಉತ್ಪನ್ನ ಮಾರುಕಟ್ಟೆಗಳು, ರೈತರ ಉತ್ಪನ್ನಗಳಿಗೆ ಯೋಗ್ಯ ಬೆಲೆ ಒದಗಿಸಿ, ಅವರ ಹಿತ ಕಾಯುವ ಸಂಸ್ಥೆಗಳಾಗಬೇಕು ಎಂಬ ಆಶಯ ನಮ್ಮ ಸರ್ಕಾರದ್ದಾಗಿದೆ. ಈ ಉದ್ದೇಶದಿಂದ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆಗಳನ್ನು ಬಲಪಡಿಸಿ, ಆನ್‌ಲೈನ್ ಮಾರುಕಟ್ಟೆ ವ್ಯವಸ್ಥೆಯನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೊಳಿಸಲಾಯಿತು.
- ಹಿಂದಿನ ಸರ್ಕಾರವು ಎ.ಪಿ.ಎಂ.ಸಿ. ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಸದೃಢ ಮಾರುಕಟ್ಟೆ ಜಾಲವನ್ನು ದುರ್ಬಲಗೊಳಿಸಿ ಎ.ಪಿ.ಎಂ.ಸಿ ಗಳ ಮೇಲೆ ಅವಲಂಬಿತವಾಗಿರುವ ಲಕ್ಷಾಂತರ ರೈತರ ಬದುಕಿನ ಅನಿಶ್ಚಿತತೆಗೆ ಕಾರಣವಾಗಿದೆ. ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿಯ ಮೊದಲು, 2018-19 ರಲ್ಲಿ ರಾಜ್ಯದ 167 ಕೃಷಿ ಉತ್ಪನ್ನ ಮಾರುಕಟ್ಟೆಗಳ ಒಟ್ಟು ಆದಾಯ 570 ರಿಂದ 600 ಕೋಟಿ ರೂ. ಗಳಷ್ಟಿದ್ದು, 2022-23 ರಲ್ಲಿ ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿಯ ನಂತರ ಕೇವಲ 193 ಕೋಟಿ ರೂ.ಗಳಿಗೆ ಕುಸಿದಿದೆ. ಅಲ್ಲದೆ, ಮುಕ್ತ ಮಾರುಕಟ್ಟೆಯಲ್ಲಿ ಖಾಸಗಿ ಸಂಸ್ಥೆಗಳು ರೈತರನ್ನು ವಂಚಿಸಿದ, ಶೋಷಣೆಗೆ ಒಳಪಡಿಸಿದ ಹಲವಾರು ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಈ ಅವ್ಯವಸ್ಥೆಯನ್ನು ಸರಿಪಡಿಸಿ ರೈತರ ಹಿತರಕ್ಷಣೆ ಮಾಡಲು ನಮ್ಮ ಸರ್ಕಾರವು ಸದರಿ ರೈತ ವಿರೋಧಿ ಕಾಯ್ದೆಯನ್ನು ಹಿಂಪಡೆಯಲು ನಿರ್ಧರಿಸಿದೆ.
- ʻಕಾಯಕ ನಿಧಿʼ ಯೋಜನೆಯಡಿ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಲರು ಮರಣ ಹೊಂದಿದಲ್ಲಿ ಅವರ ಶವಸಂಸ್ಕಾರಕ್ಕಾಗಿ ನೀಡುವ ಮೊತ್ತವನ್ನು 10,000 ರೂ. ಗಳಿಂದ 25,000 ರೂ. ಗಳಿಗೆ ಹೆಚ್ಚಿಸಲಾಗುವುದು.
ಜಲಸಂಪನ್ಮೂಲ
- ಜಲಸಂಪನ್ಮೂಲ ಇಲಾಖೆಯಡಿ ದಿನಾಂಕ:1-4-2023ರವರೆಗೆ ಅನುಮೋದಿಸಲಾಗಿರುವ ಯೋಜನೆಗಳಿಗೆ ಒಂದು ಲಕ್ಷ ಕೋಟಿ
ರೂ. ಗಳನ್ನು ಒದಗಿಸುವ ಅವಶ್ಯಕತೆಯಿದೆ. ಈ ಯೋಜನೆಗಳ ವೆಚ್ಚವು ಕಾಮಗಾರಿ ಹಾಗೂ ಭೂಸ್ವಾಧೀನ ವೆಚ್ಚ ಹೆಚ್ಚಳದ ಕಾರಣ 25,000 – 40,000 ಕೋಟಿ ರೂ. ಗಳಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಇದಲ್ಲದೇ ಕಳೆದ 6 ತಿಂಗಳ ಅವಧಿಯಲ್ಲಿ 25,548 ಕೋಟಿ ರೂ. ಅಂದಾಜು ವೆಚ್ಚದ 1,274 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಚಾಲನೆ ನೀಡಲಾಗಿದೆ. ಜಲಸಂಪನ್ಮೂಲ ಇಲಾಖೆಯ ಆಯವ್ಯಯ ಹಂಚಿಕೆ ವಾರ್ಷಿಕ ಸರಾಸರಿ 20,000 ಕೋಟಿ ರೂ. ಗಳಷ್ಟಿದ್ದು, ಅನುಮೋದಿಸಿರುವ ಯೋಜನೆಗಳ ಅಂದಾಜು ಮೊತ್ತ ಇದರ ಐದು ಪಟ್ಟು ಹೆಚ್ಚಾಗಿರುವುದು ವಿತ್ತೀಯ ಶಿಸ್ತಿನ ಉಲ್ಲಂಘನೆಗೆ ಸ್ಪಷ್ಟ ನಿದರ್ಶನವಾಗಿದೆ. ಅಲ್ಲದೆ ಕಳೆದ ಆರು ತಿಂಗಳ ಅವಧಿಯಲ್ಲಿಯೇ ಇಲಾಖೆಯ ವಾರ್ಷಿಕ ಆಯವ್ಯಯ ಹಂಚಿಕೆಗಿಂತ ಹೆಚ್ಚಿನ ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಚಾಲನೆ ನೀಡಿರುವುದು ವಿತ್ತೀಯ ಅಶಿಸ್ತಿನ ಪರಮಾವಧಿಯಲ್ಲದೆ ಇನ್ನೇನು? ಹಿಂದಿನ ಸರ್ಕಾರದ ಈ ವಿವೇಚನಾ ರಹಿತ ಕ್ರಮಗಳಿಂದಾಗಿ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲದಂತಾಗಿದೆ.
- ಜಲ ಸಂಪನ್ಮೂಲ ಇಲಾಖೆಯಡಿ ಮಂದಗತಿಯಲ್ಲಿ ಸಾಗುತ್ತಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ ವಹಿಸುವುದರೊಂದಿಗೆ ಪ್ರಸಕ್ತ ಸಾಲಿನಲ್ಲಿ 940 ಕೋಟಿ ರೂ. ಬಾಕಿ ಮೊತ್ತದ 10 ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ, ಸುಮಾರು 25,948 ಹೆಕ್ಟೇರ್ ನೀರಾವರಿ ಸಾಮರ್ಥ್ಯ ಕಲ್ಪಿಸಲಾಗುವುದು.
- ಪ್ರಸಕ್ತ ಸಾಲಿನಲ್ಲಿ ಕುಲಹಳ್ಳಿ-ಹನ್ನೂರು, ತಿಮ್ಮಾಪುರ, ಸಸಾಲಟ್ಟಿ-ಶಿವಲಿಂಗೇಶ್ವರ ಮತ್ತು ಮಂಟೂರು ಮಹಾಲಕ್ಷ್ಮಿ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಸುಮಾರು 39,134 ಹೆಕ್ಟೇರ್ ಅಚ್ಚುಕಟ್ಟು ಸ್ಥಿರೀಕರಣ ಮಾಡಲಾಗುವುದು.
- ರಾಜ್ಯದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 172 ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಇವುಗಳಲ್ಲಿ 19 ಕೆರೆ ತುಂಬಿಸುವ ಯೋಜನೆಗಳನ್ನು 770 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಿ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಹಾವೇರಿ, ಗದಗ, ಬೀದರ್, ಉತ್ತರ ಕನ್ನಡ, ವಿಜಯನಗರ, ಕೊಪ್ಪಳ, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ 899 ಕೆರೆಗಳಿಗೆ ನೀರು ತುಂಬಿಸಲಾಗುವುದು.
- ನಮ್ಮ ಸರ್ಕಾರದ ಅವಧಿಯಲ್ಲಿ ತೀವ್ರಗತಿಯಲ್ಲಿ ಪೂರ್ಣಗೊಳಿಸಲು ಚಾಲನೆಗೊಳಿಸಿದ್ದ 12,912 ಕೋಟಿ ರೂ. ಮೊತ್ತದ ಎತ್ತಿನ ಹೊಳೆ ಯೋಜನೆಯನ್ನು ಹಿಂದಿನ ಸರ್ಕಾರವು ಸಕಾಲದಲ್ಲಿ ಪೂರ್ಣಗೊಳಿಸದ ಕಾರಣ ದರ ಹೆಚ್ಚಳಗೊಂಡು ಈ ಯೋಜನೆಯು 23,252 ಕೋಟಿ ರೂ. ಮೊತ್ತಕ್ಕೆ ಪರಿಷ್ಕೃತಗೊಂಡಿದೆ. ಯೋಜನೆಯಡಿ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮವಹಿಸಿ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲು ಆದ್ಯತೆಯ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು.
- ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯ ವಿವರವಾದ ಯೋಜನಾ ವರದಿ ಹಾಗೂ ಪರಿಸರ ತೀರುವಳಿ ಪ್ರಸ್ತಾವನೆಯನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಶೀಘ್ರವಾಗಿ ತೀರುವಳಿ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. Compensatory afforestationಗೆ ಅಗತ್ಯವಿರುವ ಭೂಮಿಯನ್ನು ಗುರುತಿಸಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆಗಳನ್ನು ಜರುಗಿಸಲು ಆದ್ಯತೆ ಮೇರೆಗೆ ಕ್ರಮವಹಿಸಲಾಗುವುದು.
- ಮಧ್ಯ ಕರ್ನಾಟಕದ ಪ್ರಮುಖ ಯೋಜನೆಯಾದ ಭದ್ರಾ ಮೇಲ್ದಂಡೆ ಯೋಜನೆಯನ್ನು ಡಬಲ್ ಇಂಜಿನ್ ಎಂದು ಹೇಳಿಕೊಳ್ಳುವ ಸರ್ಕಾರವಿದ್ದಾಗ್ಯೂ, ರಾಷ್ಟ್ರೀಯ ಯೋಜನೆಯನ್ನಾಗಿ ಇಲ್ಲಿಯವರೆಗೂ ಅಧಿಕೃತವಾಗಿ ಅನುಮೋದಿಸಿರುವುದಿಲ್ಲ. ಕೇಂದ್ರ ಸರ್ಕಾರವು 2023-24ನೇ ಸಾಲಿನ ತನ್ನ ಆಯವ್ಯಯದಲ್ಲಿ 5,300 ಕೋಟಿ ರೂ.ಗಳ ಅನುದಾನವನ್ನು ಭದ್ರಾ ಯೋಜನೆಗೆ ಘೋಷಿಸಿದ್ದು ಸದರಿ ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಯೋಜನೆಯ ಅನುಷ್ಠಾನಕ್ಕೆ ಆದ್ಯತೆಯ ಮೇಲೆ ಕ್ರಮವಹಿಸಲಾಗುವುದು.
- ಮಹದಾಯಿ ನ್ಯಾಯಾಧಿಕರಣದಿಂದ ಕಳಸಾ ಮತ್ತು ಬಂಡೂರಾ ನಾಲಾ ತಿರುವು ಕುಡಿಯುವ ನೀರಿನ ಯೋಜನೆಗೆ ಹಂಚಿಕೆಯಾದ 3.90 ಟಿ.ಎಂ.ಸಿ. ನೀರಿನ ಬಳಕೆಗಾಗಿ ಈಗಾಗಲೇ ಕೇಂದ್ರ ಜಲ ಆಯೋಗದ ತೀರುವಳಿ ದೊರಕಿದ್ದು, ಅವಶ್ಯಕವಿರುವ ಅರಣ್ಯ ತೀರುವಳಿ ಪಡೆದು, ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಯತ್ನಿಸಲಾಗುವುದು.
- ಕೇಂದ್ರ ಸರ್ಕಾರದ PMKSY-AIBP ಯೋಜನೆಯಡಿ 2021-26ನೇ ಅವಧಿಗೆ ಪರಿಗಣಿಸಲಾದ ಪಟ್ಟಿಯಲ್ಲಿ ರಾಜ್ಯದ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 1 ಮತ್ತು 2ರ ವಿಸ್ತರಣೆ ಹಾಗೂ ಸನ್ನತಿ ಏತ ನೀರಾವರಿ ಯೋಜನೆಗಳನ್ನು ಗುರುತಿಸಲಾಗಿದೆ. ಸದರಿ ಯೋಜನೆಗಳಿಗೆ ಸಕ್ಷಮ ಪ್ರಾಧಿಕಾರಗಳ ತೀರುವಳಿ ಪಡೆದು, ಕೇಂದ್ರ ಸಹಾಯಧನ ಪಡೆಯಲು ಆದ್ಯತೆಯ ಕ್ರಮ ಜರುಗಿಸಲಾಗುವುದು.
- ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಸಂಗ್ರಹಣೆಯಿಂದ ಉಂಟಾಗಿರುವ ನೀರು ಸಂಗ್ರಹಣೆ ಸಾಮರ್ಥ್ಯದ ಕೊರತೆ ನಿವಾರಿಸಲು ಕೊಪ್ಪಳ ಜಿಲ್ಲೆಯ ನವಲೆ ಬಳಿ ಸಮತೋಲನಾ ಜಲಾಶಯ (Balancing reservoir) ನಿರ್ಮಾಣ ಯೋಜನೆಯನ್ನು ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಸಮಾಲೋಚಿಸಿ, ಸಹಮತಿಯೊಂದಿಗೆ ಯೋಜನೆ ಅನುಷ್ಠಾನಗೊಳಿಸಲು ಕ್ರಮಕೈಗೊಳ್ಳಲಾಗುವುದು.
- ಕೃಷ್ಣಾ ನ್ಯಾಯಾಧಿಕರಣ-2ರ ತೀರ್ಪಿನಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ಹಂಚಿಕೆಯಾಗಿರುವ 130 ಟಿ.ಎಂ.ಸಿ ನೀರಿನ ಬಳಕೆಗಾಗಿ ಯೋಜನಾ ಕಾಮಗಾರಿಗಳ ಜೊತೆಗೆ ಭೂಸ್ವಾಧೀನತೆ ಹಾಗೂ ಪುನರ್ ವಸತಿ ಮತ್ತು ಪುನರ್ ನಿರ್ಮಾಣಕ್ಕೆ ಆದ್ಯತೆ ನೀಡಿ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು.
ಸಣ್ಣ ನೀರಾವರಿ
- ನಮ್ಮ ಸರ್ಕಾರದ ಹಿಂದಿನ ಅವಧಿಯ ಅಂತ್ಯದಲ್ಲಿ ಸಣ್ಣ ನೀರಾವರಿ ಇಲಾಖೆಯಲ್ಲಿ 5,655 ಕೋಟಿ ರೂ. ಮೊತ್ತದ ಬಾಕಿ ಕಾಮಗಾರಿಗಳಿದ್ದು, ನಿಕಟ ಪೂರ್ವ ಸರ್ಕಾರವು ತಮ್ಮ ಅವಧಿಯ ಅಂತ್ಯಕ್ಕೆ ಇದನ್ನು 12,729 ಕೋಟಿ ರೂ. ಗಳಿಗೆ ಹೆಚ್ಚಿಸಿದೆ. ಹಾಗೆಯೇ 2017-18 ರಲ್ಲಿ 440 ಕೋಟಿ ರೂ.ಗಳ ಬಿಲ್ಲುಗಳು ಪಾವತಿಗೆ ಬಾಕಿಯಿದ್ದು, ಹಿಂದಿನ ಸರ್ಕಾರದ ಅವಧಿಯಲ್ಲಿ ಇದು ಸುಮಾರು 2,000 ಕೋಟಿ ರೂ. ಗಳಿಗೆ ಏರಿದೆ. ಹಿಂದಿನ ಸರ್ಕಾರದ ಆರ್ಥಿಕ ಅಶಿಸ್ತಿನಿಂದಾಗಿ ಬಾಕಿ ಉಳಿದಿರುವ ಬಾಧ್ಯತೆಗಳ ನೈಜತೆಯನ್ನು ಪರಿಶೀಲಿಸಿ ತೀರುವಳಿಗೊಳಿಸಲು ಕ್ರಮವಹಿಸಲಾಗುವುದು.
- ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಕೈಗೆತ್ತಿಕೊಂಡಿದ್ದ
ಕೆ.ಸಿ. ವ್ಯಾಲಿ ಮತ್ತು ಹೆಚ್.ಎನ್. ವ್ಯಾಲಿ ಯೋಜನೆಗಳಿಂದ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಏತ ನೀರಾವರಿ ಯೋಜನೆಯ ಮೂಲಕ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿ ಈ ಜಿಲ್ಲೆಗಳ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಗೊಂಡು ರೈತರು ಸಂತಸಗೊಂಡಿದ್ದಾರೆ. ಪ್ರಸ್ತುತ ಎರಡನೇ ಹಂತದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 296 ಕೆರೆಗಳನ್ನು ತುಂಬಿಸುವ ಯೋಜನೆಯನ್ನು 529 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.
- ಕೆರೆಗಳ ಸುತ್ತ ಜೀವಪರಿಸರವನ್ನು ಉಳಿಸಿಕೊಂಡು, ಅವುಗಳ ಪುನರುಜ್ಜೀವನಗೊಳಿಸುವುದಕ್ಕಾಗಿ ಕೆರೆಗಳ ಬಳಕೆದಾರರ ಸಂಘಗಳನ್ನು ಬಲಿಷ್ಠಗೊಳಿಸಿ ಕೆರೆ ಅಭಿವೃದ್ಧಿಗೆ ಪಾಲುದಾರರನ್ನಾಗಿ ಮಾಡಿ ಜಲಬಳಕೆ ಮಾಡಲು ಅರ್ಥಪೂರ್ಣ ಕ್ರಿಯಾಯೋಜನೆ ಸಿದ್ಧಪಡಿಸಲಾಗುವುದು.
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ
ʻಶಿಕ್ಷಣವು ವಿಮೋಚನಾ ಶಕ್ತಿಯಾಗಿದೆ ಮತ್ತು ನಮ್ಮ ಕಾಲದಲ್ಲಿ ಜನತಂತ್ರವನ್ನು ಸ್ಥಾಪಿಸುವ ಶಕ್ತಿಯೂ ಆಗಿದೆ; ಶಿಕ್ಷಣವು ಜಾತಿ ಮತ್ತು ವರ್ಗದ ನಿರ್ಬಂಧಗಳನ್ನು ತೊಲಗಿಸಿ, ಹುಟ್ಟಿನಿಂದ ಅಥವಾ ಇನ್ನಾವುದೇ ಪರಿಸ್ಥಿತಿಯಿಂದ ಉದ್ಭವಿಸಿದ ಅಸಮಾನತೆಗಳನ್ನು ನಿವಾರಿಸುತ್ತದೆʼ.
– ಶ್ರೀಮತಿ ಇಂದಿರಾ ಗಾಂಧಿ
- ಶಾಲಾ ಶಿಕ್ಷಣ ಮಗುವಿನ ವ್ಯಕ್ತಿತ್ವ ನಿರ್ಮಾಣದಲ್ಲಿ, ಆ ಮೂಲಕ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಣವು ಮಕ್ಕಳ ಶಾರೀರಿಕ ಹಾಗೂ ಭಾವನಾತ್ಮಕ ಬೆಳವಣಿಗೆಗೆ, ಜ್ಞಾನ ಮತ್ತು ಮನೋವಿಕಾಸಕ್ಕೆ ಪೂರಕವಾಗಿರಬೇಕು. ಶಿಕ್ಷಣವು ಬಾಂಧವ್ಯ, ಭ್ರಾತೃತ್ವ, ಸಾಮರಸ್ಯ ಮತ್ತು ಸಹಬಾಳ್ವೆಯ ಮನೋಭಾವ ಮೂಡಿಸುವಂತಿರಬೇಕು. ಈ ಆಶಯಕ್ಕೆ ವಿರುದ್ಧವಾದ ಪಠ್ಯಗಳನ್ನು ಹಿಂದಿನ ಸರ್ಕಾರವು ಪಠ್ಯ ಪರಿಷ್ಕರಣೆಯಲ್ಲಿ ಸೇರ್ಪಡೆಗೊಳಿಸಿದ್ದು, ಅವುಗಳನ್ನು ಪ್ರಸಕ್ತ ಸಾಲಿನಿಂದಲೇ ಕೈಬಿಡಲು ಕ್ರಮ ಕೈಗೊಳ್ಳಲಾಗಿದೆ.
- ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಉತ್ತಮ ಸೌಲಭ್ಯಗಳನ್ನು ನೀಡಲು ಶಾಲಾ ಕೊಠಡಿಗಳಿಗೆ 310 ಕೋಟಿ ರೂ.ಗಳು ಹಾಗೂ ಪದವಿ ಪೂರ್ವ ಕಾಲೇಜು ಕೊಠಡಿಗಳಿಗೆ 240 ಕೋಟಿ ರೂ. ಸೇರಿದಂತೆ ಒಟ್ಟು 550 ಕೋಟಿ ರೂ.ಗಳ ವೆಚ್ಚದಲ್ಲಿ 8,311 ಕೊಠಡಿಗಳ ನಿರ್ಮಾಣ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು.
- ವಿದ್ಯಾರ್ಥಿಗಳ ಶಿಕ್ಷಣ ಮತ್ತು ಆರೋಗ್ಯದ ದೃಷ್ಟಿಯಿಂದ, ಮಕ್ಕಳ ಸಂಖ್ಯೆಗೆ ಅನುಗುಣವಾಗಿ, ಕಡಿಮೆ ಶೌಚಾಲಯಗಳಿರುವ 5,775 ಶಾಲೆಗಳಲ್ಲಿ ಹಾಗೂ 150 ಕಾಲೇಜುಗಳಲ್ಲಿ ಶೌಚಾಲಯ ಘಟಕಗಳನ್ನು ನರೇಗಾ ಯೋಜನೆಯ ಸಂಯೋಜನೆಯೊಂದಿಗೆ 200 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು.
- ಹಳೆಯ ಶಾಲಾ ಕಾಲೇಜು ಕಟ್ಟಡಗಳು ಹಾಗೂ ಮಳೆಯಿಂದಾಗಿ ಶಿಥಿಲಗೊಂಡಿರುವ 3,833 ಶಾಲೆಗಳು ಹಾಗೂ 724 ಪದವಿ ಪೂರ್ವ ಕಾಲೇಜು ಕೊಠಡಿಗಳನ್ನು 100 ಕೋಟಿ ರೂ.ಗಳ ವೆಚ್ಚದಲ್ಲಿ ದುರಸ್ತಿಗೊಳಿಸುವ ಮೂಲಕ ಬಳಕೆಗೆ ಯೋಗ್ಯಗೊಳಿಸಲಾಗುವುದು.
- ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ನಿರ್ವಹಣೆಗಾಗಿ ನೀಡುತ್ತಿರುವ ಅನುದಾನವನ್ನು ಕನಿಷ್ಠ 20,000 ರೂ. ದಿಂದ
45,000 ರೂ. ಗಳವರೆಗೆ ಹೆಚ್ಚಿಸಿ 4೭,2೭೨ ಶಾಲೆಗಳು ಹಾಗೂ 1,231 ಪದವಿ ಪೂರ್ವ ಕಾಲೇಜುಗಳ ನಿರ್ವಹಣೆಗಾಗಿ ಒಟ್ಟಾರೆಯಾಗಿ 153 ಕೋಟಿ ರೂ. ಅನುದಾನ ಒದಗಿಸಲಾಗುವುದು.
- ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರದಲ್ಲಿ ಒಂದು ಬಾರಿ ಮೊಟ್ಟೆ/ ಶೇಂಗಾ ಚಿಕ್ಕಿ/ ಬಾಳೆಹಣ್ಣನ್ನು ವಿತರಿಸಲಾಗುತ್ತಿದ್ದು, ಈಗ ವಾರದಲ್ಲಿ ಎರಡು ದಿವಸ ವಿತರಿಸಲಾಗುವುದು. ಪ್ರಸಕ್ತ ಸಾಲಿನಿಂದ ಈ ಯೋಜನೆಯನ್ನು 9 ಮತ್ತು 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ವಿಸ್ತರಿಸಿ 280 ಕೋಟಿ ರೂ.ಗಳ ವೆಚ್ಚದಲ್ಲಿ 60 ಲಕ್ಷ ಮಕ್ಕಳಿಗೆ ಒದಗಿಸಲಾಗುವುದು.
- ಮಕ್ಕಳಲ್ಲಿ ಉಂಟಾಗಿರುವ ಕಲಿಕಾ ನ್ಯೂನತೆಯನ್ನು ಹೋಗಲಾಡಿಸಲು ಸುಮಾರು 33 ಲಕ್ಷ ವಿದ್ಯಾರ್ಥಿಗಳಿಗೆ 80 ಕೋಟಿ ರೂ.ಗಳ ವೆಚ್ಚದಲ್ಲಿ ಕಲಿಕಾ ಬಲವರ್ಧನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ʻಮರುಸಿಂಚನʼ ಎಂಬ ಹೊಸ ಯೋಜನೆಯಡಿಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಒಂದೂವರೆ ಲಕ್ಷ ವಿದ್ಯಾರ್ಥಿಗಳನ್ನು ಪ್ರೌಢ ಹಂತದ ಪರೀಕ್ಷೆಗಳಿಗೆ ಸಜ್ಜುಗೊಳಿಸಲು ವಿಶೇಷ ತರಬೇತಿಯನ್ನು ನೀಡಲಾಗುವುದು.
- ಶಾಲಾ ಶಿಕ್ಷಣ ಇಲಾಖೆಯಲ್ಲಿನ ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸುವ ಸ್ಯಾಟ್ಸ್ ತಂತ್ರಾಂಶವನ್ನು SATS 2.0 ಎಂದು ಉನ್ನತೀಕರಿಸಲಾಗುವುದು.
- ಹೊಸ ಕಲ್ಪನೆಯನ್ನು ವಾಸ್ತವಕ್ಕೆ ತರಲು ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಮಾಧ್ಯಮಿಕ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಇನ್ನೋವೇಶನ್ ಲ್ಯಾಬ್‌ಗಳನ್ನು ಸ್ಥಾಪಿಸಲಾಗುವುದು.
2023-24ನೇ ಸಾಲಿನಲ್ಲಿ ರಾಜ್ಯದ ಪ್ರತಿ ಕಂದಾಯ ವಿಭಾಗದಲ್ಲಿ ನಾಲ್ಕು ಪ್ರಯೋಗಾಲಯಗಳನ್ನು ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ಸ್ಥಾಪಿಸಲಾಗುವುದು.
- ಶಿಕ್ಷಣ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಸ್ಥಳಾವಕಾಶವುಳ್ಳ ಶಾಲೆಗಳ ಸುತ್ತಮುತ್ತ ಒಂದು ವರ್ಷದ ಕಾಲಾವಧಿಯಲ್ಲಿ 50 ಲಕ್ಷ ಸಸಿಗಳನ್ನು ನೆಡುವ ವಿನೂತನ ʻಸಸ್ಯ ಶ್ಯಾಮಲʼ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.
- ರಾಜ್ಯದ ಸಾಹಿತಿಗಳ ಹಾಗೂ ಪ್ರಕಾಶಕರ ಬೇಡಿಕೆಗಳಿಗೆ ಸ್ಪಂದಿಸಿ ಸಾರ್ವಜನಿಕ ಗ್ರಂಥಾಲಯಗಳಿಗೆ ಉತ್ತಮ ಪುಸ್ತಕಗಳನ್ನು ಖರೀದಿಸಲು ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ. ಅನುದಾನ ಒದಗಿಸಲಾಗುವುದು.
ಉನ್ನತ ಶಿಕ್ಷಣ
- ಕೇಂದ್ರ ಸರ್ಕಾರ ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿರುವಂತಹ ಹಾಗೂ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿರುವ ಅವೈಜ್ಞಾನಿಕ ಅಂಶಗಳನ್ನು ಒಳಗೊಂಡಿದೆ. ಬಹುಧರ್ಮ, ಬಹುಭಾಷೆ, ಬಹುಸಂಸ್ಕೃತಿ ಇರುವ ನಮ್ಮ ದೇಶಕ್ಕೆ ಏಕರೂಪದ ಶಿಕ್ಷಣ ವ್ಯವಸ್ಥೆ ಹೊಂದಿಕೊಳ್ಳುವುದಿಲ್ಲ. ರಾಜ್ಯದ ಅಸ್ಮಿತೆಯನ್ನು ಎತ್ತಿ ಹಿಡಿಯುವ, ಉನ್ನತ ಶಿಕ್ಷಣವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಶಿಕ್ಷಣವನ್ನು ನೀಡಿ ಯುವಜನರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲಗೊಳಿಸಲು ಒತ್ತು ನೀಡುವ ನಿಟ್ಟಿನಲ್ಲಿ ಸ್ಥಳೀಯವಾದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ವಾಸ್ತವಾಂಶಗಳನ್ನು ಒಳಗೊಂಡ ಹೊಸ ಶಿಕ್ಷಣ ನೀತಿಯನ್ನು ರೂಪಿಸಲಾಗುವುದು.
- ಬೆಂಗಳೂರಿನಲ್ಲಿರುವ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಯೂನಿವರ್ಸಿಟಿಯನ್ನು (UVCE) ಉನ್ನತೀಕರಣಗೊಳಿಸಲು ಮೂಲಭೂತ ಸೌಕರ್ಯಕ್ಕಾಗಿ 25 ಕೋಟಿ ರೂ. ಅನುದಾನ ಒದಗಿಸಲಾಗುವುದು.
- ನಕಲಿ ಅಂಕಪಟ್ಟಿ ಹಾವಳಿಯನ್ನು ತಪ್ಪಿಸುವ ದೃಷ್ಟಿಯಿಂದ ರಾಜ್ಯದ ಎಲ್ಲಾ ಉನ್ನತ ಶಿಕ್ಷಣದ ವಿದ್ಯಾರ್ಥಿಗಳು Academic Bank of Credits ನಲ್ಲಿ ನೋಂದಾಯಿಸಿಕೊಂಡು ಹಾಗೂ ನೇಮಕಾತಿಯಲ್ಲಿ NAD/Digilocker ನಲ್ಲಿನ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಲು ಕ್ರಮಕೈಗೊಳ್ಳಲಾಗುವುದು.
- ಉನ್ನತ ಶಿಕ್ಷಣ ಇಲಾಖೆಯಡಿ ನಿರ್ಮಿಸಿರುವ 13,169 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿರುವ 224 ವಸತಿ ನಿಲಯಗಳನ್ನು ವಿದ್ಯಾರ್ಥಿಗಳಿಗೆ ಅನುಕೂಲ ಮಾಡುವ ದೃಷ್ಟಿಯಿಂದ ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ವರ್ಗಾಯಿಸಲಾಗುವುದು.
- ಉನ್ನತ ಶಿಕ್ಷಣ ಇಲಾಖೆಯಡಿ ಎಲ್ಲಾ ಶಿಷ್ಯ ವೇತನ ಕಾರ್ಯಕ್ರಮಗಳನ್ನು ಒಗ್ಗೂಡಿಸಿ ಏಕ ಶಿಷ್ಯ ವೇತನ ಕಾರ್ಯಕ್ರಮದಡಿ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುವುದು.
- ಸಾರ್ವಜನಿಕ ವಿಶ್ವವಿದ್ಯಾಲಯಗಳ ಆಡಳಿತ ವ್ಯವಸ್ಥೆಯನ್ನು ಉತ್ತಮಪಡಿಸಲು 10 ಸುಶಾಸನ ಸೂಚ್ಯಂಕಗಳನ್ನು (Good Governance Indicators) ರಚಿಸಲಾಗಿದ್ದು, ಇದರನ್ವಯ ಅತ್ಯುತ್ತಮ ಸಾಧನೆ ಮಾಡುವ ವಿಶ್ವವಿದ್ಯಾಲಯಗಳಿಗೆ ತಲಾ 50 ಲಕ್ಷ ರೂ. ಗಳಂತೆ ಪ್ರೋತ್ಸಾಹ ಧನ ನೀಡಲಾಗುವುದು.
- ವೃತ್ತಿ ಚೈತನ್ಯ ಯೋಜನೆಯಡಿಯಲ್ಲಿ ಇಲಾಖೆಯ ಸುಮಾರು 7,800 ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ಕಾರ್ಯಕ್ರಮಗಳನ್ನು ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿಯಲ್ಲಿ 10 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಆಯೋಜಿಸಲಾಗುವುದು.
- ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ Ph.D. ಸೀಟುಗಳನ್ನು ಭರ್ತಿ ಮಾಡುವ ವಿಧಾನದಲ್ಲಿ ಏಕರೂಪತೆಯನ್ನು ತರಲಾಗುವುದು. ಎಲ್ಲಾ ಸರ್ಕಾರಿ ವಿಶ್ವವಿದ್ಯಾಲಯಗಳ Ph.D. ಸೀಟುಗಳಿಗೆ ಮತ್ತು ಖಾಸಗಿ ವಿಶ್ವವಿದ್ಯಾಲಯಗಳ ಶೇ.40 ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಲಾಗುವುದು.
- ಬೆಂಗಳೂರಿನ ಎಸ್.ಕೆ.ಎಸ್.ಜೆ.ಟಿ.ಐ ಎಂಜಿನಿಯರಿಂಗ್ ಕಾಲೇಜಿನಲ್ಲಿರುವ ಜವಳಿ ತಂತ್ರಜ್ಞಾನ ವಿಭಾಗವನ್ನು ರಾಷ್ಟ್ರೀಯ Technical Textile ಅಭಿಯಾನ ಮತ್ತು ಪಿಎಂ-ಮಿತ್ರ ಯೋಜನೆಗಳಡಿ Smart and Technical Textile Centre ಆಗಿ ಉನ್ನತೀಕರಿಸಲಾಗುವುದು.
- ರಾಜ್ಯದ ಎಲ್ಲಾ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಬ್ರಿಟಿಷ್ ಕೌನ್ಸಿಲ್ ಮತ್ತು ಪ್ರಾದೇಶಿಕ ಆಂಗ್ಲ ಸಂಸ್ಥೆಯ ಸಹಕಾರದೊಂದಿಗೆ ವ್ಯಾವಹಾರಿಕ ಆಂಗ್ಲ ತರಗತಿಗಳನ್ನು ಪ್ರಾರಂಭಿಸಲಾಗುವುದು.
- ಉನ್ನತ ಶಿಕ್ಷಣ ಪಡೆಯಲು ಇರುವ ಭಾಷೆಯ ತೊಡಕು ನಿವಾರಿಸಲು ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅನುವಾಗುವಂತೆ ವ್ಯಾಪಕ ಬಳಕೆಯಲ್ಲಿರುವ ರೆಫರೆನ್ಸ್ ಪುಸ್ತಕಗಳನ್ನು ಹಾಗೂ ಪಠ್ಯ ವಿಷಯಗಳನ್ನು ಭಾಷಾಂತರಿಸಲು ಕ್ರಮ ಕೈಗೊಳ್ಳಲಾಗುವುದು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ
- ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಬಡವರಿಗೆ ಉಚಿತ ಡಯಾಲಿಸಿಸ್ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿತ್ತು. ಇದೀಗ ಏಕಬಳಕೆಯ ಡಯಾಲೈಸರ್‌ಗಳನ್ನು ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಅಳವಡಿಸುವ ಮೂಲಕ ಸೇವೆಯ ಗುಣಮಟ್ಟವನ್ನು ಸುಧಾರಿಸಲಾಗುವುದು. ಇದರೊಂದಿಗೆ ರಾಜ್ಯದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ 173 ಡಯಾಲಿಸಿಸ್ ಕೇಂದ್ರಗಳನ್ನು 219ಕ್ಕೆ ಹೆಚ್ಚಿಸಲಾಗುವುದು. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ ಒಟ್ಟು 92 ಕೋಟಿ ರೂ. ಗಳನ್ನು ಒದಗಿಸಲಾಗುವುದು.
- ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ಈಗಾಗಲೇ 23 PHC ಗಳನ್ನು CHC ಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ಈ CHC ಗಳನ್ನು ಕಾರ್ಯಗತಗೊಳಿಸಲು ಬೇಕಿರುವ ಅಗತ್ಯ ಉಪಕರಣಗಳು ಮತ್ತು ಮಾನವ ಸಂಪನ್ಮೂಲಗಳನ್ನು ಒದಗಿಸಲು 70 ಕೋಟಿ ರೂ.ಗಳನ್ನು ಒದಗಿಸಲಾಗುವುದು.
- ರಾಜ್ಯದಲ್ಲಿ ನವಜಾತ ಶಿಶುಗಳು, ಮಕ್ಕಳು, ಹದಿಹರೆಯದವರು, ಗರ್ಭಿಣಿಯರು, ತಾಯಂದಿರು ಮತ್ತು ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆಯನ್ನು ನಿವಾರಿಸಲು ಸಮಗ್ರವಾದ ಪರೀಕ್ಷೆ, ಚಿಕಿತ್ಸೆ, ಅರಿವು ಮೂಡಿಸುವಿಕೆ ಮತ್ತು ಆರೋಗ್ಯ ಕಾರ್ಯಕರ್ತರ ಸಾಮರ್ಥ್ಯ ಬಲವರ್ಧನೆಗೆ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು. ಇದಕ್ಕಾಗಿ 25 ಕೋಟಿ ರೂ. ಗಳನ್ನು ಒದಗಿಸಲಾಗುವುದು.
- ರಾಜ್ಯವು ಕಳೆದ ವರ್ಷ ನಿಮ್ಹಾನ್ಸ್ ಸಹಯೋಗದೊಂದಿಗೆ ಮೆದುಳಿನ ಆರೋಗ್ಯ ಆರೈಕೆ ಸೇವೆಗಳನ್ನು ಉತ್ತೇಜಿಸಲು ಮೂರು ಜಿಲ್ಲೆಗಳಲ್ಲಿ ʻಬ್ರೈನ್ ಹೆಲ್ತ್ ಇನಿಶಿಯೇಟಿವ್ʼ (Brain Health Initiative) ಎಂಬ ವಿಶಿಷ್ಟ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಯಶಸ್ವಿ ಪ್ರಾಯೋಗಿಕ ಅನುಷ್ಠಾನದ ನಂತರ ಈ ಯೋಜನೆಯನ್ನು ಇಡೀ ರಾಜ್ಯಕ್ಕೆ ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.
- ʻಆಶಾಕಿರಣʼ ಎಂಬ ಕಾರ್ಯಕ್ರಮದಡಿಯಲ್ಲಿ ಅಭಿಯಾನ ರೂಪದಲ್ಲಿ ಕಣ್ಣಿನ ಶಿಬಿರಗಳು, ಕನ್ನಡಕ ವಿತರಣೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗಳ ಚಟುವಟಿಕೆಗಳನ್ನು ಹಂತ ಹಂತವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆಸಲಾಗುವುದು. 2023-24ನೇ ಸಾಲಿನಲ್ಲಿ ಚಿತ್ರದುರ್ಗ, ರಾಯಚೂರು, ಉತ್ತರ ಕನ್ನಡ ಮತ್ತು ಮಂಡ್ಯ ಜಿಲ್ಲೆಗಳಲ್ಲಿ 21 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು.
- ಸಮಾಜದ ದುರ್ಬಲ ವರ್ಗಗಳಲ್ಲಿ ಕ್ಷಯರೋಗವನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆಹಚ್ಚಲು ಸಮುದಾಯ ಆಧಾರಿತ ತಪಾಸಣಾ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು. ರಾಜ್ಯದ ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ, ಪ್ರತಿ ಜಿಲ್ಲೆಗೆ ಎರಡರಂತೆ ಕೈಚಾಲಿತ-ಕ್ಷ-ಕಿರಣ (Hand Held X-ray) ಉಪಕರಣವನ್ನು ಒದಗಿಸಲಾಗುವುದು. ಪ್ರತಿ X-ray ಯಂತ್ರಕ್ಕೆ 20 ಲಕ್ಷ ರೂ. ದಂತೆ ಒಟ್ಟು ಮೂರು ಕೋಟಿ ರೂ. ಒದಗಿಸಲಾಗುವುದು.
- ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳನ್ನು ಪತ್ತೆಹಚ್ಚಲು ಮತ್ತು ಅಗತ್ಯ ಔಷಧಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸಲು ಪ್ರಾಯೋಗಿಕವಾಗಿ ರಾಜ್ಯದ ನಾಲ್ಕು ವಿಭಾಗಗಳ ಎಂಟು ಜಿಲ್ಲೆಗಳಲ್ಲಿ ಸಮಗ್ರ ತಪಾಸಣೆ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುವುದು.
- ಕರ್ನಾಟಕ ರತ್ನ ಡಾ|| ಪುನೀತ್ ರಾಜ್‌ಕುಮಾರ್‌ರವರ ಸ್ಮರಣಾರ್ಥವಾಗಿ ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಗಟ್ಟಲು Automated External Defibrillators (AED) ಗಳನ್ನು ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಅಳವಡಿಸಲಾಗುವುದು. ಇದಕ್ಕಾಗಿ ಆರು ಕೋಟಿ ರೂ. ಅನುದಾನ ಒದಗಿಸಲಾಗುವುದು.
- ರಾಜ್ಯದಲ್ಲಿ 15 ಸಿ.ಟಿ ಸ್ಕ್ಯಾನಿಂಗ್ ಮತ್ತು ಆರು ಎಂ.ಆರ್.ಐ ಸ್ಕ್ಯಾನಿಂಗ್ ಕೇಂದ್ರಗಳನ್ನು ಕೆಲವು ಜಿಲ್ಲಾಸ್ಪತ್ರೆಗಳಲ್ಲಿ ಈಗಾಗಲೇ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಿ, ಉಚಿತ ಪ್ರಯೋಗಾಲಯ ಸೇವೆಗಳನ್ನು ನೀಡಲಾಗುತ್ತಿದೆ. ಈ ಸೇವೆಗಳನ್ನು ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಿಗೂ ವಿಸ್ತರಿಸಲಾಗುವುದು.
- ರಾಜ್ಯವು ಈಗಾಗಲೇ ಮಾಹಿತಿ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವಂತೆ ಆರೋಗ್ಯ ತಂತ್ರಜ್ಞಾನದ ಆವಿಷ್ಕಾರಗಳ ಅಳವಡಿಕೆಯಲ್ಲಿಯೂ ಪ್ರಮುಖ ಕೇಂದ್ರವಾಗುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಎಂಟು ಕೋಟಿ ರೂ.ಗಳ ವೆಚ್ಚದಲ್ಲಿ ಕರ್ನಾಟಕ ಆರೋಗ್ಯ ತಂತ್ರಜ್ಞಾನ ಪ್ರಯೋಗಾಲಯವನ್ನು ಸ್ಥಾಪಿಸಲಾಗುವುದು.
- ರಾಜ್ಯದಲ್ಲಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಯೋಜನೆ ಹಾಗೂ ಆರೋಗ್ಯ ದಾಖಲಾತಿಗಳ ಡಿಜಿಟಲೀಕರಣ ಸೇರಿದಂತೆ ಇಲಾಖೆಯ ಇನ್ನಿತರ ಎಲ್ಲಾ ಅಂತರ್ಜಾಲ ಉಪಕ್ರಮಗಳನ್ನು ಅನುಷ್ಠಾನ ಮಾಡಲು ಕರ್ನಾಟಕ ಡಿಜಿಟಲ್ ಹೆಲ್ತ್ ಸೊಸೈಟಿಯನ್ನು (Karnataka Digital Health Society) ಸ್ಥಾಪನೆ ಮಾಡಲಾಗುವುದು.
ವೈದ್ಯಕೀಯ ಶಿಕ್ಷಣ
- ರಾಜ್ಯದಲ್ಲಿ ಈಗಾಗಲೇ ಆರಂಭಿಸಲಾಗಿರುವ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗಳ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ
450 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಗದಗ, ಕೊಪ್ಪಳ, ಕಾರವಾರ ಮತ್ತು ಕೊಡಗು ಜಿಲ್ಲೆಗಳಲ್ಲಿ 450 ಬೆಡ್ ಆಸ್ಪತ್ರೆಗಳ ನಿರ್ಮಾಣ ಕಾರ್ಯವನ್ನು ಆದ್ಯತೆ ಮೇಲೆ ಪೂರ್ಣಗೊಳಿಸಲಾಗುವುದು.
- ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿ ಒಂದು ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲಾಗುವುದು.
- ಮೈಸೂರು, ಕಲಬುರಗಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಕಾರ್ಯಾರಂಭ ಮತ್ತು ಸುಟ್ಟ ಗಾಯಗಳ ಘಟಕ ಸ್ಥಾಪನೆಗೆ 155 ಕೋಟಿ ರೂ.ಗಳನ್ನು ಒದಗಿಸಲಾಗುವುದು.
- NIMHANS ಸಂಸ್ಥೆಯ ಆವರಣದಲ್ಲಿ 146 ಕೋಟಿ ರೂ.ಗಳ ವೆಚ್ಚದಲ್ಲಿ ಅಂಗಾಂಗ ಜೋಡಣೆಗೆ ಮೀಸಲಾದ ದೇಶದ ಪ್ರಥಮ ಸಾರ್ವಜನಿಕ ಆಸ್ಪತ್ರೆಯನ್ನು ಸ್ಥಾಪಿಸಲಾಗುವುದು. ಜೊತೆಯಲ್ಲಿ ನಾನ್ ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಖಾಯಿಲೆಯ (NAFLD) ರೋಗಿಗಳಲ್ಲಿ ಸಿರೋಸಿಸ್ ಮತ್ತು ಕ್ಯಾನ್ಸರ್ ಪತ್ತೆ ಹಚ್ಚಲು ಒಂದು FibroScan ಅನ್ನು ಒದಗಿಸಲಾಗುವುದು.
- ಕಲಬುರಗಿಯ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (GIMS) 200 ಹಾಸಿಗೆಯ ಹೊಸ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು 70 ಕೋಟಿ ರೂ. ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು.
- ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ವತಿಯಿಂದ ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ, ದಾವಣಗೆರೆ, ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ಅತ್ಯಾಧುನಿಕ ಕೌಶಲ್ಯ ಪ್ರಯೋಗಾಲಯಗಳು, ಸಂಶೋಧನಾ ಕೇಂದ್ರ ಮತ್ತು ಒಳಾಂಗಣ ಕ್ರೀಡಾ ಸೌಲಭ್ಯಗಳನ್ನು ಹಾಗೂ ಕಲಬುರಗಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ಅಲೈಡ್ ಹೆಲ್ತ್ ಸೈನ್ಸಸ್ (Allied Health Sciences) ಕಾಲೇಜುಗಳನ್ನು ಸ್ಥಾಪಿಸಲಾಗುವುದು.
- ಮೈಸೂರು ಮತ್ತು ಕಲಬುರಗಿಯಲ್ಲಿ ಟ್ರಾಮಾ ಕೇರ್ ಸೆಂಟರ್‌ಗಳ (Trauma Care Center) ಕಾರ್ಯಾಚರಣೆಗೆ 30 ಕೋಟಿ ರೂ.ಗಳನ್ನು ಒದಗಿಸಲಾಗುವುದು.
- ರಾಜ್ಯದ ಸಾವಿರಾರು ಬಡಜನರಿಗೆ ಕೈಗೆಟಕುವ ದರದಲ್ಲಿ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ನೀಡುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು (Kidwai Memorial Institute of Oncology) ಸುವರ್ಣ ಮಹೋತ್ಸವದ ಹೊಸ್ತಿಲಿನಲ್ಲಿದೆ. ಈ ಸಂದರ್ಭದಲ್ಲಿ ಆಸ್ಪತ್ರೆಯ ಕಲಬುರಗಿ ಮತ್ತು ಮೈಸೂರಿನಲ್ಲಿರುವ ಪ್ರಾದೇಶಿಕ ಘಟಕಗಳಲ್ಲಿ ಸೌಲಭ್ಯಗಳ ಸುಧಾರಣೆಗೆ 20 ಕೋಟಿ ರೂ. ಒದಗಿಸಲಾಗುವುದು.
- ಚಿತ್ರದುರ್ಗದ ವೈದ್ಯಕೀಯ ಕಾಲೇಜು ಪ್ರಾರಂಭಿಸಲು ಎಲ್ಲಾ ಪೂರ್ವ ಸಿದ್ಧತೆಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ.
- ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸಂಪೂರ್ಣ ಸ್ವಯಂಚಾಲಿತ ಮತ್ತು ಕೇಂದ್ರೀಕೃತ ರಕ್ತನಿಧಿ ನಿರ್ವಹಣಾ ವ್ಯವಸ್ಥೆಯನ್ನು ಐದು ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.
Key words: budget – CM Sidduramaiah-legislative Assembly