ಬೆಂಗಳೂರು,ಮಾರ್ಚ್,4,2025 (www.justkannada.in): ಇಂದು ಎರಡನೇ ದಿನದ ಬಜೆಟ್ ಅಧಿವೇಶನ ಶುರವಾಗಲಿದ್ದು, ಇಂದಿನಿಂದ ಸದನದಲ್ಲಿ ಆಡಳಿತ ಪಕ್ಷ, ಪ್ರತಿಪಕ್ಷ ಗಳ ನಡುವೆ ಜಟಾಪಟಿ, ವಾಕ್ಸಮರ ನಡೆಯಲಿದೆ.
ನಿನ್ನೆ ಬಜೆಟ್ ಅಧಿವೇಶನದ ಮೊದಲ ದಿನದಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ್ದು ಇಂದಿನಿಂದ ರಾಜ್ಯಪಾಲರ ಭಾಷಣದ ಮೇಲೆ ಸುದೀರ್ಘ ಚರ್ಚೆಯಾಗಲಿದೆ.
ತಮ್ಮ ಭಾಷಣದಲ್ಲಿ ರಾಜ್ಯ ಸರ್ಕಾರ ಆಡಳಿತ ವೈಖರಿಯನ್ನು ಹೊಗಳಿರುವ ರಾಜ್ಯಪಾಲರು, ಕಲ್ಯಾಣ ಕಾರ್ಯಕ್ರಮ ಸಮರ್ಪಕ ಅನುಷ್ಠಾನವಾಗುತ್ತಿದೆ. ಅಸಮಾನತೆ ತೀವ್ರತೆ ಕಡಿಮೆಯಾಗುತ್ತಿದೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿ ರಾಜ್ಯ ಇದೆ. ಜಿಎಸ್ಟಿ ಉತ್ತಮವಾಗಿದೆ. 2024-25 ನೇ ಸಾಲಿನ ಬಜೆಟ್ ನಲ್ಲಿ ಆದೇಶ ಹೊಡಿಸಬೇಕಿದ್ದ 344 ಘೋಷಣೆಗಳ ಪೈಕಿ 331 ಘೋಷಣೆಗೆ ಆದೇಶ ಹೊರಡಿಸಲಾಗಿದೆ. ಮೈಕ್ರೋ ಫೈನಾನ್ಸ್ ಕಂಪನಿಗಳ ನಿಯಂತ್ರಣಕ್ಕೆ ಸುಗ್ರೀವಾಜ್ಞೆ ಜಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಹೊಸ ಕೈಗಾರಿಕಾ ನೀತಿ, ಸೇರಿದಂತೆ ಹಲವು ವಿಚಾರಗಳ ಕುರಿತು ಭಾಷಣದಲ್ಲಿ ರಾಜ್ಯಪಾಲರು ಉಲ್ಲೇಖಿಸಿದ್ದರು.
ಇದೇ ವೇಳೆ ರಾಜ್ಯಪಾಲರ ಭಾಷಣ ಕುರಿತು ಟೀಕಿಸಿದ ವಿಪಕ್ಷಗಳ ನಾಯಕರು, ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಕೆ ಕೊಡಿಸಿದ್ದಾರೆ. ಅಭಿವೃದ್ಧಿ ಶೂನ್ಯವಾದರೂ ವಿಕಾಸ ಎಂದು ಹೇಳಿಸಿದ್ದಾರೆ. ಕಳೆದ 2 ವರ್ಷಗಳಿಂದ ಏನೂ ಅಭಿವೃದ್ಧಿ ಆಗಿಲ್ಲ. ಆದರೆ ಕಾಂಗ್ರೆಸ್ ಶಾಸಕರ ಜೇಬು ತುಂಬಿದೆ ಎಂದು ಕಾಲೆಳೆದಿದ್ದರು.
ಈ ಮಧ್ಯೆ ರಾಜ್ಯಪಾಲರ ಭಾಷಣ ಕುರಿತು ಇಂದಿನಿಂದ ಗುರುವಾರದವರೆಗೆ ಸುದೀರ್ಘ ಚರ್ಚೆಯಾಗಲಿದ್ದು, ಆಡಳಿತ ಪಕ್ಷ, ವಿಪಕ್ಷಗಳ ನಡುವೆ ವಾಕ್ಸಮರ ಇಂದು ಆರಂಭವಾಗಲಿದೆ. ಸದನದ ಬಾವಿಗಳಿದು ಹೋರಾಟ, ಸಭಾತ್ಯಾಗಳಂತಹ ಹೈಡ್ರಾಮ ಇಂದಿನಿಂದ ಶುರುವಾಗಲಿದೆ. ಎರಡು ವಾರಗಳ ಕಾಲ ಪರಸ್ಪರ ಕಿತ್ತಾಟ, ರಂಪಾಟಕ್ಕೆ ಬಜೆಟ್ ಅಧಿವೇಶನ ವೇದಿಕೆಯಾಗಲಿದೆ ಎನ್ನಲಾಗಿದೆ.
Key words: Budget session, 2nd day, Governor, speech, discussion