ಬೆಂಗಳೂರು,ಫೆಬ್ರವರಿ,10,2023(www.justkannada.in): ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಿದ್ದು ಫೆಬ್ರವರಿ 17 ರಂದು ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ.
ಈ ನಡುವೆ ಇಂದು ಅಧಿವೇಶನದ ಮೊದಲ ದಿನದಂದು ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸರ್ಕಾರದ ಸಾಧನೆಯನ್ನ ಬಿಚ್ಚಿಟ್ಟಿದ್ದಾರೆ.
ಅಧಿವೇಶನದಲ್ಲಿ ಮಾತನಾಡುವ ಸೌಭಾಗ್ಯ ನನಗೆ ಸಿಕ್ಕಿದೆ. ರೈತಶಕ್ತಿಗೆ 400 ಕೋಟಿ ರೂ ಅನುದಾನ ನೀಡಲಾಗಿದೆ. ಕೀಟ ರೋಗ ನಿರ್ವಹಣೆಗೆ ಕೃಷಿ ಸಂಜೀವಿನಿ ಯೋಜನೆ, 160 ಸಂಚಾರಿ ಸಸ್ಯ ಚಿಕಿತ್ಸಾಲಯ ಲೋಕಾರ್ಪಣೆ ಮಾಡಲಾಗಿದೆ. ಬಳ್ಳಾರಿಯಲ್ಲಿ ವಿನೂತನ ಕೃಷಿ ಕಾಲೇಜು ತೆರೆಯಲಾಗುತ್ತಿದೆ. ರೈತರು, ನೇಕಾರರು,ಮೀನುಗಾರರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ ಜಾರಿ ಮಾಡಲಾಗಿದೆ. 10.79 ಲಕ್ಷ ವಿದ್ಯಾರ್ಥಿಗಳಿಗೆ ಯೋಜನೆಯ ಅನುಕೂಲ ತಲುಪಿದೆ ಎಂದರು.
ಪುಣ್ಯ ಕೋಟಿ ದತ್ತ ಯೋಜನೆ ಜಾರಿ ಮಾಡಲಾಗಿದೆ. ಈ ಮೂಲಕ ದೇಶದಲ್ಲಿ ಯೋಜನೆ ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯದಲ್ಲಿ ಪ್ರಧಾನಮಂತ್ರಿ ಮತ್ಸ್ಯ ಯೋಜನೆ ಜಾರಿ ಮಾಡಲಾಗಿದೆ. ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ ಸ್ಥಾಪನೆ, 4244 ಹೊಸ ಅಂಗನವಾಡಿ ತೆರೆಯಲು ಅನುಮೋದನೆ, ಬಾಲ್ಯ ವಿವಾಹ ತಡೆಗಟ್ಟಲು , ಸ್ಪೂರ್ತಿ ಯೋಜನೆ ಜಾರಿ ಮಾಡಲಾಗಿದೆ. ನಗರ ಪ್ರದೇಶಗಳಲ್ಲಿ 438 ನಮ್ಮ ಕ್ಲಿನಿಕ್ ಸ್ಥಾಪನೆ ಮಾಡಲಾಗುತ್ತಿದ್ದು ಈ ಪೈಕಿ ಈಗಾಗಲೆ 271 ನಮ್ಮ ಕ್ಲಿನಿಕ್ ಆರಂಭ ಮಾಡಲಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿಳಿಸಿದರು.
Key words: Budget-session- Governor -Thawar Chand Gehlot – government- achievements