ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ಬಸ್ ಪ್ರಯಾಣ ದರ ಜಾರಿ

ಬೆಂಗಳೂರು, ಜನವರಿ 4,2025 (www.justkannada.in): ರಾಜ್ಯದಲ್ಲಿ ಬಸ್ ಪ್ರಯಾಣ ದರ ಹೆಚ್ಚಳ ಮಾಡುವುದಕ್ಕೆ ಕಳೆದ ಸಚಿವ ಸಂಪುಟ ಸಭೆಯಲ್ಲಿ  ಅನುಮೋದನೆ ನೀಡಲಾಗಿದ್ದು, ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ಬಸ್ ಪ್ರಯಾಣ ದರ ಅಧಿಕೃತವಾಗಿ ಜಾರಿಯಾಗಲಿದೆ.

ಈ ಕುರಿತು ಸರ್ಕಾರ ಆದೇಶ ಹೊರಡಿಸಿದ್ದು, ಕೆಎಸ್​ಆರ್​ಟಿಸಿ  ಬಿಎಂಟಿಸಿ, ಎನ್​ಡಬ್ಲ್ಯುಕೆಆರ್​ಟಿಸಿ ಹಾಗೂ ಕೆಕೆಆರ್​ಟಿಸಿ ಬಸ್ ಟಿಕೆಟ್ ದರ ಶೇ 15ರಷ್ಟು ಹೆಚ್ಚಳವಾಗಲಿದೆ.

ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಗಳು ಆರ್ಥಿಕವಾಗಿ ಮುನ್ನಡೆಯಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿಯ ಸುಧಾರಣೆಗೆ ಹಾಗೂ ಹಮ್ಮಿಕೊಳ್ಳಲಾಗಿರುವ ಯೋಜನೆಗಳನ್ನು ಜಾರಿಗೊಳಿಸಲು ಪ್ರಯಾಣಿಕ ಬಸ್ ದರಗಳನ್ನು ಶೇಕಡ 33ರಷ್ಟು ಹೆಚ್ಚಿಸಲು ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಶೇಕಡ 42ರಷ್ಟು ಹೆಚ್ಚಿಸಲು ಅನುಮೋದನೆ ದೊರಕಿಸಿಕೊಡುವಂತೆ  ಮನವಿ ಸಲ್ಲಿಸಿದ್ದರು.

ಪ್ರಸ್ತಾವನೆಯನ್ನು ಪರಿಶೀಲಿಸಿ, ಸರ್ಕಾರವು ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ ಪ್ರಯಾಣ ದರವನ್ನು ಶೇ. 15ರಷ್ಟು ಹೆಚ್ಚಿಸಿ ಪರಿಷ್ಕರಿಸಲು ಆಡಳಿತಾತ್ಮಕ ಅನುಮೋದನ ನೀಡಿ ಆದೇಶಿಸಿದೆ ಎಂದು ಸರ್ಕಾರ ತಿಳಿಸಿದೆ.

ಕಳೆದ ಗುರವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ  ಬಸ್ ಟಿಕೆಟ್ ದರ ಹೆಚ್ಚಳ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿತ್ತು. ಇನ್ನು ಬಸ್ ಪ್ರಯಾಣ ದರ ಹೆಚ್ಚಳಕ್ಕೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದೆ.

Key words: Revised, bus fares , midnight, today