ಮೈಸೂರು,ಸೆಪ್ಟಂಬರ್,4,2021(www.justkannada.in): ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ಮಹದೇವಸ್ವಾಮಿ ಅವರ ವಿರುದ್ಧ ಮೃಗಲಾಯಕ್ಕೆ ಬಂದ ದೇಣಿಗೆ ಹಣದಿಂದ ಐಷರಾಮಿ ಕಾರು ಖರೀದಿಸಿರುವ ಆರೋಪ ಕೇಳಿ ಬಂದಿದೆ.
ರಾಜ್ಯದಲ್ಲಿ ಕೊರೋನಾ ಮಹಾಮಾರಿ ಹರಡಿದ ಹಿನ್ನೆಲೆ ಪ್ರಾಣಿಗಳನ್ನು ಸಾಕುವುದು ಕಷ್ಟವಾಗಿತ್ತು. ಹೀಗಾಗಿ ಮೃಗಾಲಯಗಳಿಗೆ ಜನರಿಂದ ಕೋಟ್ಯಂತರ ರೂಪಾಯಿ ದೇಣಿಗೆ ಬಂದಿತ್ತು. ಆದರೆ ಈ ಹಣ ಈಗ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಮಧ್ಯೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವ ಸ್ವಾಮಿ ಕಾರು ಖರೀದಿಸಿದ್ದಾರೆ. ಆ ಕಾರು 21 ಲಕ್ಷದ 13 ಸಾವಿರ ಬೆಲೆ ಬಾಳುತ್ತದೆ. ಅದೇ ಕಾರಿನಿಂದ ಮಹದೇವಸ್ವಾಮಿ ಮೈಸೂರು ಮೃಗಾಲಯಕ್ಕೆ ಆಗಮಿಸಿದ್ದರು. ಕಾರು ಖರೀದಿಗೆ 147ನೇ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು ಎಂಬುವುದು ತಿಳಿದು ಬಂದಿದೆ. ಇನ್ನು ಅಧ್ಯಕ್ಷರ ಹಳೇ ಕಾರನ್ನು ಮೃಗಾಲಯ ನಿರ್ದೇಶಕರಿಗೆ ನೀಡಲಾಗಿದೆ.
ಈ ನಡುವೆ ಕಾರು ಖರೀದಿ ಬಗ್ಗೆ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿರುವಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿ, ಜನರ ದೇಣಿಗೆ ದುಡ್ಡಿನಿಂದ ನಾನು ಕಾರು ಖರೀದಿಸಿಲ್ಲ. ಹಿಂದಿನ ಅಧ್ಯಕ್ಷರು ಇಟ್ಟಿದ್ದ ಬೇಡಿಕೆಯ ಕಾರು ಈಗ ಬಂದಿದೆ ಅಷ್ಟೆ. ನೂತನ ಕಾರಿಗೆ ಜನರ ದೇಣಿಗೆ ಹಣ ಬಳಕೆ ಆಗಿಲ್ಲ. ಈಗಾಗಲೇ ಮೃಗಾಲಯ ನಿರ್ದೇಶಕರಿಗೆ ಇಟ್ಟಿದ್ದ ಹಳೆ ಕಾರು ಬಳಕೆ ಮಾಡಲಾಗುತ್ತಿತ್ತು. ಅದು 7 ವರ್ಷಗಳ ಹಳೆಯ ಕಾರು. ಅದನ್ನೇ ನಾನು ಬಳಕೆ ಮಾಡುತ್ತಿದ್ದೆ. ಅದೂ ಕೂಡ ಮಾಧ್ಯಮದಲ್ಲಿ ಸುದ್ದಿ ಆಗಿತ್ತು ಎಂದು ತಿಳಿಸಿದರು.
ನನಗೆ ಐಷಾರಾಮಿ ಕಾರಿನಲ್ಲಿ ತಿರುಗಾಡಬೇಕು ಎಂಬ ಆಸೆ ಇಲ್ಲ. ಮೃಗಾಲಯ ಅಭಿವೃದ್ಧಿ ಮಾಡಬೇಕು ಎಂಬ ಆಸೆ ಇದೆ. ಧಾರವಾಡ, ಬಳ್ಳಾರಿ, ಶಿವಮೊಗ್ಗ ಹೋಗುವಾಗ ಮಾತ್ರ ಸರ್ಕಾರಿ ಕಾರು ಬಳಸುತ್ತೇನೆ. ಉಳಿದ ಸಮಯದಲ್ಲಿ ನನ್ನ ಖಾಸಗಿ ಕಾರಿನಲ್ಲೇ ತಿರುಗಾಡುತ್ತಿರುವೆ ಎಂದು ಮಹದೇವಸ್ವಾಮಿ ತಿಳಿಸಿದ್ದಾರೆ.
Key words: buying – luxury car – donated money- Zoo Authority- Chairman -Mahadevaswamy