ಬೆಂಗಳೂರು:ಜುಲೈ-5:(www.justkannada.in) ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂ ಎಸ್ ಎಸ್ ಬಿ) ನೇಮಕಾತಿಗಾಗಿ ಕನ್ನಡದಲ್ಲಿ ತಪ್ಪು ಜಾಹೀರಾತು ಪ್ರಕಟಿಸಿ 50,000 ರೂ ಭಾರೀ ದಂಡ ಪಾವತಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಬಿಡಬ್ಲ್ಯೂಎಸ್ಎಸ್ಬಿ ವತಿಯಿಂದ ನೇಮಕಾತಿಗಾಗಿ ಜಾಹೀರಾತೊಂದು ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಪ್ರಕಟಿಸಲಾಗಿತ್ತು. ಆದರೆ ಕನ್ನಡದಲ್ಲಿ ಪ್ರಕಟವಾದ ಜಾಹೀರಾತು ತಪ್ಪಾಗಿ ಪ್ರಕಟವಾಗಿತ್ತು. ಆದರೆ ಅದಾಗಲೇ ಈ ಜಾಹೀರಾತನ್ನು ನೋಡಿ ಅಂಗವಿಕಲ ಉದ್ಯೋಕಾಂಕ್ಷಿಯೊಬ್ಬರು ಜಲಮಂಡಳಿ ನೇಮಕಾತಿ ಪರೀಕ್ಷೆಯನ್ನೂ ಬರೆದಿದ್ದರು. ಅಂತಿಮವಾಗಿ ನೇಮಕಾತಿ ಆಗದಿದ್ದಾಗ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು.
ಬಿಡಬ್ಲ್ಯೂಎಸ್ಎಸ್ಬಿ ನೇಮಕಾತಿಗಾಗಿ ಒಂದು ಅಧಿಸೂನೆಯನ್ನು ಹೊರಡಿಸಿತ್ತು. ಹೈದರಾಬಾದ್-ಕರ್ನಾಟಕ ಭಾಗ ಹೊರತಿ ಪಡಿಸಿ ನಾನ್ ಲೋಕಲ್ ಕೇಡರ್ ಅಡಿಯಲ್ಲಿ 11 ಅಸಿಸ್ಟೆಂಟ್ ಹುದ್ದೆಗಳಿಗಾಗಿ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಅಧಿಸೂಚನೆ ವಿಷಯ ಪ್ರಕಟಿಸಿತ್ತು. ಕನ್ನಡದಲ್ಲಿ ಪ್ರಕಟವಾದ ಜಾಹೀರಾತನ್ನು ನೋಡಿದ್ದ ದಾವಣಗೆರೆಯ ಚನ್ನಗೇರಿ ನಿವಾಸಿ ಗುರುದೇವಿ ಎಂಬುವವರು ಅದರಲ್ಲಿ ಒಂದು ಹುದ್ದೆಯನ್ನು ‘2 ಎ ದೈಹಿಕವಾಗಿ ಹ್ಯಾಂಡಿಕ್ಯಾಪ್ ವಿಭಾಗಕ್ಕೆ ಕಾಯ್ದಿರಿಸಲಾಗಿದೆ ಎಂದು ಬರೆದಿದ್ದನ್ನು ಗಮನಿಸಿದ್ದರು.
ತಕ್ಷಣ ಗುರುದೇವಿ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದಿದ್ದಾರೆ. ಹೀಗಾಗಿ ಆಕೆ ಆಯ್ಕೆಯ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶವಿತ್ತು ಆದರೆ ಅಗತ್ಯವಾದ ಅರ್ಹತೆಯ ಹೊರತಾಗಿಯೂ ಈ 2 ಎ ವಿಭಾಗದಲ್ಲಿ ಆಕೆ ಆಯ್ಕೆಯಾಗಿಲ್ಲ. ಇದರಿಂದ ಗುರುದೇವಿಯನ್ನು ತನ್ನ ಆಯ್ಕೆ ಮಾಡದಿರಲು ಕಾರಣವೆನೆಂದು ಪ್ರಶ್ನಿಸಿದಾಗ ಬಿಡಬ್ಲ್ಯೂಎಸ್ಎಸ್ಬಿ ಕನ್ನಡ ಜಾಹೀರಾತಿನಲ್ಲಿ ತಪ್ಪು ಸಂಭವಿಸಿದೆ ಎಂದು ಸಮಜಾಯಿಷಿ ನೀಡಿತ್ತು. ಇದರಿಂದ ನೊಂದ ಗುರುದೇವಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅಂತಿಮವಾಗಿ ನ್ಯಾಯಾಲಯ ಮಹಿಳೆ ಅನುಭವಿಸಿದ ಮಾನಸಿಕ ಸಂಕಟಕ್ಕೆ 50,000 ರೂ.ಗಳ ದಂಡವನ್ನು ಪಾವತಿಸುವಂತೆ ಬಿಡಬ್ಲ್ಯೂಎಸ್ಎಸ್ಬಿ ಗೆ ಆದೇಶಿಸಿದೆ. ಅಲ್ಲದೇ ಜಾಹೀರಾತು ಪ್ರಕಟಿಸುವಾಗ ಮಾಡಿದ ನಿರ್ಲಕ್ಷ್ಯತನಕ್ಕೆ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ.