ಹಣದ ಹೊಳೆ ಹರಿಸಿ ಕಾಂಗ್ರೆಸ್ ಗೆಲುವು: ಸಂಸದ ಬಸವರಾಜ ಬೊಮ್ಮಾಯಿ ಆರೋಪ

ಹುಬ್ಬಳ್ಳಿ,ನವೆಂಬರ್,23,2024 (www.justkannada.in):  ಉಪ ಚುನಾವಣೆಯಲ್ಲಿ ಶಿಗ್ಗಾವಿ ಸವಣೂರು ಕ್ಷೇತ್ರದ ಜನರ ತೀರ್ಪನ್ನು ನಾನು ತಲೆಬಾಗಿ ಒಪ್ಪಿಕೊಳ್ಳುತ್ತೇನೆ. ನಮಗೆ ಗೆಲ್ಲುವ ಭರವಸೆ ಇತ್ತು. ಆದರೆ ವಿಪರೀತ ಹಣದ ಹೊಳೆ ಹರಿಸಿ ಕಾಂಗ್ರೆಸ್ ನವರು ಗೆಲುವು ಸಾಧಿಸಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಶಿಗ್ಗಾವಿ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಬಂದ ನಂತರ  ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಿಗ್ಗಾವಿ ಕ್ಷೇತ್ರದ ಜನರ ತೀರ್ಪನ್ನು ನಾನು ತಲೆಬಾಗಿ ಒಪ್ಪಿಕೊಳ್ತೇನೆ, ಸ್ವೀಕಾರ ಮಾಡುತ್ತೇನೆ. ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಗೆ ಅಭಿನಂದನೆ ಸಲ್ಲಿಸುತ್ತೇನೆ. ಚುನಾವಣೆ ಸಂದರ್ಭದಲ್ಲಿ ಅಲ್ಲಿಯ ಜನರ ಸ್ಪಂದನೆ ನೋಡಿದರೆ ನಮಗೆ ಗೆಲ್ಲುವ ಭರವಸೆ ಇತ್ತು. ಆದರೆ ವಿಪರೀತ ಹಣದ ಹೊಳೆ ಹರಿಸಿ ಕಾಂಗ್ರೆಸ್ ನವರು ಗೆಲುವು ಸಾಧಿಸಿದ್ದಾರೆ. ಸರ್ಕಾರ ಅವರದ್ದೇ ಇದೆ, ಆಡಳಿತ ಪಕ್ಷದ ಅಂತ ಕಾಂಗ್ರೆಸ್ ಶಾಸಕರನ್ನು ಜನ ಆಯ್ಕೆ ಮಾಡಿದ್ದಾರೆ ಎಂದರು.

ನಾವು ಶಿಗ್ಗಾವಿ, ಸವಣೂರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ಅಭಿವೃದ್ಧಿ ಪರ್ವ ಹಾಗೆಯೇ ಮುಂದುವರೆಯಲಿ ಅಂತ ಆಶಿಸುತ್ತೇನೆ. ಕ್ಷೇತ್ರದ ಜನರಿಗೆ ಒಳ್ಳೆದಾಗಲಿ ಅಂತ ಬಯಸುತ್ತೇನೆ. ಚುನಾವಣೆಯಲ್ಲಿ 10 ಜನ ಸಚಿವರು, 40ಕ್ಕಿಂತ ಹೆಚ್ಚು ಶಾಸಕರು, ಮಾಜಿ ಶಾಸಕರು ಬಂದು ಇಲ್ಲಿಯೇ ಕುಳಿತು ಪ್ರಚಾರ ಮಾಡಿದರು. ಸರ್ಕಾರ ವರ್ಸಸ್ ಬೊಮ್ಮಾಯಿ ಎಂದೇ ಬಿಂಬಿತವಾಯಿತು. ಅವರು ಸರ್ಕಾರದ ಯಂತ್ರ, ಹಣದಿಂದ ಚುನಾವಣೆ ಗೆದ್ದಿದ್ದಾರೆ ಎಂದು ಆರೋಪಿಸಿದರು.

ಶಿಗ್ಗಾವಿಯಲ್ಲಿ ಎಂಪಿ ಚುನಾವಣೆ ನಂತರ ನಾವು ಚೆನ್ನಾಗಿ ಕೆಲಸ ಮಾಡಿದ್ದೇವು. ಆದರೆ ಇಡೀ ಸರ್ಕಾರನೇ ಬಂತು. ಸಾಮಾನ್ಯವಾಗಿ ಉಪಚುನಾವಣೆಯಲ್ಲಿ ಸರ್ಕಾರಕ್ಕೆ ಅನುಕೂಲ ಇರುತ್ತದೆ‌. ನಾವು ಕೂಡ ಒಂದು ಕಾಲದಲ್ಲಿ 17 ಉಪ ಚುನಾವಣೆಯಲ್ಲಿ 13 ಕ್ಷೇತ್ರ ಗೆದ್ದಿದ್ದೇವು. ಈ ಸರ್ಕಾರದ  ಕೆಲಸದ  ಮೇಲೆ ಮತ ಬಂದಿದೆ ಅಂತೇನಿಲ್ಲ. ನಾವು ಉಪ ಚುನಾವಣೆಯಲ್ಲಿ ಅಷ್ಟು ಸ್ಥಾನ ಗೆದ್ದು ಅದಾದ ಮೇಲೆ ಸರ್ಕಾರ ಕಳೆದುಕೊಂಡಿದ್ದೇವು. ಹೀಗಾಗಿ ಕಾಂಗ್ರೆಸ್ ಸರ್ಕಾರ ಒಂದೂವರೆ ವರ್ಷದ ಆಡಳಿತಕ್ಕೆ ಸರ್ಟಿಫಿಕೇಟ್ ಅಂತ ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಇನ್ನು ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಹಾರಾಷ್ಟ್ರದಲ್ಲಿ ನಿರೀಕ್ಷೆಯಂತೆ ಬಹುಮತ ಬಂದಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವ, ಮೂರು ಪಕ್ಷದ ಒಗ್ಗಟ್ಟಿನಿಂದ ಕಳೆದ ಮೂರು ವರ್ಷದ ಸರ್ಕಾರದ ಅಭಿವೃದ್ಧಿ ಮೇಲೆ ಜಯ ಸಿಕ್ಕಿದೆ. ಲೋಕಸಭಾ ಚುನಾವಣೆ ನಂತರ ಜನ ನರೇಂದ್ರ ಮೋದಿಯವರ ಪರ ನಿಂತಿರುವುದು ಗೊತ್ತಾಗುತ್ತದೆ ಎಂದರು.

Key words: By-election, congress, win,  Basavaraja bommai