ಸಿಂದಗಿ,ಅಕ್ಟೋಬರ್,18,2021(www.justkannada.in): ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷ ಆಗಿದೆ, ಅವರು ರಾಜ್ಯದ ಜನರಿಗಾಗಿ ಏನೆಲ್ಲಾ ಕೆಲಸ ಮಾಡಿದ್ದಾರೆ ಎಂದು ಅವರೂ ಪಟ್ಟಿಕೊಡಲಿ, ಐದು ವರ್ಷದ ನನ್ನ ಆಡಳಿತದಲ್ಲಿ ನಾನು ಯಾವೆಲ್ಲಾ ಯೋಜನೆ ಜಾರಿ ಮಾಡಿದ್ದೆ ಎಂದು ಪಟ್ಟಿ ಕೊಡುತ್ತೇನೆ ಎಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಸವಾಲು ಹಾಕಿದರು.
ಸಿಂಧಗಿ ವಿಧಾನಸಭೆ ಕ್ಷೇತ್ರದ ಮೊರಟಗಿ ಗ್ರಾಮದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಭಾಗವಹಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ್ ಮನಗೂಳಿ ಅವರ ಪರ ಪ್ರಚಾರ ಭಾಷಣ ಮಾಡಿದರು.
ಈ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಹೇಳಿದ್ದಿಷ್ಟು….
ಸಿಂಧಗಿ ಕ್ಷೇತ್ರದಿಂದ ಎಂ.ಸಿ ಮನಗೂಳಿಯವರು ಈ ಹಿಂದೆ ಶಾಸಕರಾಗಿ ಆಯ್ಕೆಯಾಗಿದ್ದರು, ಆದರೆ ದುರಾದೃಷ್ಟವಶಾತ್ ಅವರು ದೈವಾದೀನರಾಗಿದ್ದಾರೆ. ಅವರ ಅಗಲಿಕೆಯಿಂದ ತೆರವಾದ ಸ್ಥಾನಕ್ಕೆ ಈಗ ಉಪಚುನಾವಣೆ ನಡೆಯುತ್ತಿದೆ. ಇದನ್ನು ನಾವ್ಯಾರು ಬಯಸಿರಲಿಲ್ಲ. ಎಂ.ಸಿ ಮನಗೂಳಿಯವರು ಸಾಯುವ ಮುನ್ನ ನಮ್ಮ ಮನೆಗೆ ಬಂದಿದ್ದರು, ಆಗ ಅವರು ತಮ್ಮ ಮಗನನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡು ರಾಜಕೀಯವಾಗಿ ಬೆಳೆಸಿ ಎಂದು ನನ್ನ ಬಳಿ ಕೇಳಿಕೊಂಡಿದ್ದರು. ತಂದೆಯ ಇಚ್ಛೆಯಂತೆ ಅಶೋಕ್ ಮನಗೂಳಿ ಕಾಂಗ್ರೆಸ್ ಸೇರಿದರು. ಈಗಿನ ಉಪಚುನಾವಣೆಯಲ್ಲಿ ನಮ್ಮ ಸರ್ವಸಮ್ಮತ ಅಭ್ಯರ್ಥಿ ಕೂಡ ಆಗಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗದ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ನ ಸಮ್ಮಿಶ್ರ ಸರ್ಕಾರ ರಚನೆಯಾಯಿತು. ಯಡಿಯೂರಪ್ಪ ಅವರು ಅಧಿಕಾರ ಇಲ್ಲದೆ ಸುಮ್ಮನಿರೊ ಗಿರಾಕಿಯಲ್ಲ, ಹಾಗಾಗಿ ಎರಡೂ ಪಕ್ಷಗಳ ಶಾಸಕರಿಗೆ ಹಣ, ಅಧಿಕಾರದ ಆಮಿಷವೊಡ್ಡಿ ಅವರನ್ನು ಖರೀದಿಸಿ, ಅನೈತಿಕ ಮಾರ್ಗದಲ್ಲಿ ಸರ್ಕಾರ ರಚನೆ ಮಾಡಿದರು. ಬಿಜೆಪಿಯವರು ಯಡಿಯೂರಪ್ಪ ಅವರನ್ನು ಮುಂದೆ ಬಿಟ್ಟು ಕೋಟ್ಯಂತರ ರೂಪಾಯಿ ಖರ್ಚು ಮಾಡಿಸಿ, ಸರ್ಕಾರ ರಚನೆ ಮಾಡಿಸಿದ್ರು, ಎರಡು ವರ್ಷ ಅಸಗ್ತಾ ಇದ್ದ ಹಾಗೆ ಯಡಿಯೂರಪ್ಪ ಅವರನ್ನೇ ಕಿತ್ತು ಬಿಸಾಕಿದರು.
ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷ ಆಗಿದೆ, ರಾಜ್ಯದ ಜನರಿಗಾಗಿ ಏನೆಲ್ಲಾ ಕೆಲಸ ಮಾಡಿದ್ದಾರೆ ಎಂದು ಅವರೂ ಪಟ್ಟಿಕೊಡಲಿ, ಐದು ವರ್ಷದ ನನ್ನ ಆಡಳಿತದಲ್ಲಿ ನಾನು ಯಾವೆಲ್ಲಾ ಯೋಜನೆ ಜಾರಿ ಮಾಡಿದ್ದೆ ಎಂದು ಪಟ್ಟಿ ಕೊಡುತ್ತೇನೆ. ಇಂಧಗಿ ಕ್ಷೇತ್ರದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಹೋರಾಟ ಮಾಡಿದವರು ಎಂ.ಸಿ ಮನಗೂಳಿ ಅವರು, ಇವತ್ತು ಅವರ ಹೋರಾಟದ ಲಾಭವನ್ನು ಪಡೆಯಲು ಇನ್ಯಾರೋ ಹೊರಟಿದ್ದಾರೆ. ಅಂಥವರಿಗೆ ಮತ ನೀಡಬಾರದು. ಕೃಷಿಭಾಗ್ಯ, ಕ್ಷೀರಧಾರೆ, ಪಶುಭಾಗ್ಯ, ಶೂ ಭಾಗ್ಯ, ಶಾದಿಭಾಗ್ಯ, ವಿದ್ಯಾಸಿರಿ, ಮಾತೃಪೂರ್ಣ ಹೀಗೆ ನಮ್ಮ ಸರ್ಕಾರ ಹಲವು ಯೋಜನೆಗಳು ಇಂದು ಸ್ಥಗಿತಗೊಂಡಿವೆ. ಅನ್ನಭಾಗ್ಯದ ಅಕ್ಕಿ ಪ್ರಮಾಣವನ್ನು ಕಡಿತ ಮಾಡಿದ್ದಾರೆ.
ಕೊರೊನಾ ಹೆಚ್ಚಿರೋದ್ರಿಂದ ಲಾಕ್ ಡೌನ್ ಇದೆ, ಜನರಿಗೆ ದುಡಿಮೆ ಇಲ್ಲ, ಹೊಟ್ಟೆಪಾಡಿಗೂ ಕಷ್ಟ ಆಗಿದೆ ಉಚಿತವಾಗಿ ಹತ್ತು ಕೆ.ಜಿ ಅಕ್ಕಿ ಕೊಡಿ, ಪ್ರತಿ ಬಿಪಿಎಲ್ ಕುಟುಂಬಕ್ಕೆ ಹತ್ತು ಸಾವಿರ ಧನಸಹಾಯ ಮಾಡಿ ಎಂದು ಸದನದಲ್ಲಿ ಹೇಳಿದೆ, ಅದಕ್ಕೆ ಯಡಿಯೂರಪ್ಪ ಸರ್ಕಾರದ ಬಳಿ ಹಣವಿಲ್ಲ ಎಂದರು. ಕೊರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಕೊಡ್ತೀವಿ ಎಂದು ಹೇಳಿ ಇವತ್ತಿನವರೆಗೆ ನಯಾಪೈಸೆ ಪರಿಹಾರ ನೀಡಿಲ್ಲ.
ಜನ ಕೊರೊನಾದಿಂದ ನರಳುತ್ತಿರುವಾಗ ಸರ್ಕಾರ ಆಸ್ಪತ್ರೆ, ಆಕ್ಸಿಜನ್, ಹಾಸಿಗೆಗಳು, ವೆಂಟಿಲೇಟರ್, ಆಂಬುಲೆನ್ಸ್ ವ್ಯವಸ್ಥೆ ಮಾಡದೆ ಬೀದಿ ಬೀದಿಯಲ್ಲಿ ಸಾಯಲು ಬಿಟ್ರು. ರಾಜ್ಯದಲ್ಲಿ ಕನಿಷ್ಟ 4 ಲಕ್ಷ ಮತ್ತು ದೇಶದಲ್ಲಿ ಸುಮಾರು 50 ಲಕ್ಷ ಜನ ಕೊರೊನಾದಿಂದ ಸತ್ತಿದ್ದಾರೆ. ಇಂಥಾ ಕೊಲೆಗಡುಕ ಸರ್ಕಾರಕ್ಕೆ ನಿಮ್ಮ ಮತ ನೀಡ್ತೀರಾ? ಎಂದು ಜನ ಯೋಚನೆ ಮಾಡಬೇಕು ಎಂದು ಸಿದ್ಧರಾಮಯ್ಯ ಹೇಳಿದರು.
ನಮ್ಮ ಸರ್ಕಾರ ಐದು ವರ್ಷಗಳಲ್ಲಿ ಹದಿನೈದು ಲಕ್ಷ ಮನೆಗಳನ್ನು ನಿರ್ಮಾಣ ಮಾಡಿತ್ತು, ಈಗಿನ ಸರ್ಕಾರ ಒಂದೇ ಒಂದು ಮನೆ ಕಟ್ಟಿ ಕೊಟ್ಟ ಉದಾಹರಣೆ ಇದ್ದರೆ ತೋರಿಸಿ ನೋಡೋಣ. ನಾವು ಕೊಟ್ಟಿದ್ದ ಕೆಲವು ಮನೆಗಳಿಗೆ ಹಣ ಬಿಡುಗಡೆ ಮಾಡದೆ ಲಾಕ್ ಮಾಡಿದ್ದಾರೆ. ಪಾಪ ಬಡವರು ಮನೆ ಇಲ್ಲದೆ ಎಲ್ಲಿಗೆ ಹೋಗಬೇಕು? ಎಂದು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.
ಏಳು ವರ್ಷ ಆಯ್ತಲ್ಲಾ ನಿಮಗೆಲ್ಲಾ ಅಚ್ಚೇ ದಿನ ಬಂತಾ?
ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿ ಸಿದ್ಧರಾಮಯ್ಯ, ಉದ್ಯೋಗ ಖಾತ್ರಿ ಯೋಜನೆ, ಆಹಾರ ಸುರಕ್ಷತಾ ಕಾಯಿದೆ, ಮಾಹಿತಿ ಹಕ್ಕು ಕಾಯಿದೆ ಜಾರಿಗೆ ತಂದಿದ್ದು ಮನಮೋಹನ್ ಸಿಂಗ್ ಅವರ ಯುಪಿಎ ಸರ್ಕಾರ. ಹಾಗಾದರೆ ನರೇಂದ್ರ ಮೋದಿ ಅವರ ಕೊಡುಗೆ ಏನು? ಅಚ್ಚೇ ದಿನ್ ಬರುತ್ತೆ ಎಂದು ಮೋದಿ ಹೇಳಿದ್ರು, ಅವರು ಅಧಿಕಾರಕ್ಕೆ ಬಂದು ಏಳು ವರ್ಷ ಆಯ್ತಲ್ಲಾ ನಿಮಗೆಲ್ಲಾ ಅಚ್ಚೇ ದಿನ ಬಂತಾ? ಎಂದು ಲೇವಡಿ ಮಾಡಿದರು.
ಈಗ ಪೆಟ್ರೋಲ್ ಬೆಲೆ 110, ಡೀಸೆಲ್ ಬೆಲೆ 100, ಗ್ಯಾಸ್ ಬೆಲೆ 950 ರೂಪಾಯಿ ಆಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎದ್ವಾತದ್ವಾ ತೆರಿಗೆ ಹೆಚ್ಚಳ ಮಾಡಿರುವ ಕಾರಣ ಇವುಗಳ ಬೆಲೆ ಗಗನಕ್ಕೇರಿದೆ. ಒಂದು ಲೀಟರ್ ಪೆಟ್ರೋಲ್ ನ ನೈಜ ಬೆಲೆ 45 ರೂಪಾಯಿ, ಉಳಿದ 60 ರೂಪಾಯಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ತೆರಿಗೆ.
ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಎಂದು ಯುವಕರಿಗೆ ಮೋದಿ ಭರವಸೆ ನೀಡಿದ್ರು, ಪಾಪ ಯುವಕರು ನಂಬಿ ಓಟು ಹಾಕಿ ಗೆಲ್ಲಿಸಿದ್ರು, ಈಗ ಹನ್ನೆರಡು ಕೋಟಿ ಉದ್ಯೋಗ ಕಿತ್ತುಕೊಂಡು ಹೋಗಿದೆ. ಜನ ಉದ್ಯೋಗ ಕೇಳಿದ್ರೆ ಪಕೋಡ ಮಾರಿ ಎಂದು ಉಪದೇಶ ಕೊಡ್ತಾರೆ. ಮೊದಲು ಮೋದಿ ಮೋದಿ ಎಂದು ಕೂಗುತ್ತಿದ್ದವರೇ ಇಂದು ಮೋದಿ ಹೆಸರು ಕೇಳಿದರೆ ಉರಿದು ಬೀಳ್ತಿದ್ದಾರೆ. ಎಂದು ಸಿದ್ಧರಾಮಯ್ಯ ಟಾಂಗ್ ನೀಡಿದರು.
ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಿಷನ್ ಹಾನಗಲ್, ಮಿಷನ್ ಸಿಂಧಗಿ ಎಂಬ ಅಭಿವೃದ್ಧಿ ಯೋಜನೆ ಘೋಷಣೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ಬಂದು ಎರಡು ವರ್ಷ ಆಯ್ತಲ್ಲಾ ಇವತ್ತು ಅವರಿಗೆ ಹಾನಗಲ್ ಮತ್ತು ಸಿಂಧಗಿ ನೆನಪಾಗಿದ್ದಾ? ಇಂಥಾ ಬೂಟಾಟಿಕೆಯ ಮಾತುಗಳನ್ನು ನಂಬಿ ಜನ ಮೋಸಹೋಗಬಾರದು, ಬಿಜೆಪಿಯವರು ಸುಳ್ಳಿನ ಕಾರ್ಖಾನೆಯನ್ನೇ ನಡೆಸೋರು. ಕರ್ನಾಟಕದಲ್ಲಿ ಬಿಜೆಪಿ ಜೀವಂತವಾಗಿರೋದು ನರೇಂದ್ರ ಮೋದಿ ಅವರ ಹೆಸರೇಳಿಕೊಂಡು. ಇಲ್ಲಿನ ನಾಯಕರಿಗೆ ಮತ ಕೇಳಲು ಸ್ವಂತ ವರ್ಚಸ್ಸು ಇಲ್ಲ.
14ನೇ ಹಣಕಾಸು ಶಿಫಾರಸಿನ ಪ್ರಕಾರ ರಾಜ್ಯದ ತೆರಿಗೆ ಪಾಲು 38,000 ಕೋಟಿ ರೂಪಾಯಿ ಬರುತ್ತಿತ್ತು. ಈಗದು 20,000 ಕೋಟಿ ರೂಪಾಯಿಗೆ ಬಂದು ನಿಂತಿದೆ. ಕೇಂದ್ರದ ಸಹಾಯಧನ, ಜಿ.ಎಸ್.ಟಿ ಪರಿಹಾರದ ಹಣ ಇವೆಲ್ಲಾ ಕಡಿಮೆಯಾಗಿ ರಾಜ್ಯಕ್ಕೆ ಕನಿಷ್ಟ. 40,000 ಕೋಟಿ ನಷ್ಟವಾಗ್ತಿದೆ. ರಾಜ್ಯ ಬಿಜೆಪಿ ನಾಯಕರ ಹೇಡಿತನ ಮತ್ತು ಗುಲಾಮಗಿರಿ ಇಷ್ಟಕ್ಕೆಲ್ಲಾ ಕಾರಣ. ಈ ಅನ್ಯಾಯಗಳ ಬಗ್ಗೆ ಒಮ್ಮೆಯಾದರೂ ಬಾಯಿಬಿಟ್ಟು ಮಾತನಾಡಿದ್ದಾರ? ನಮ್ಮ ಸರ್ಕಾರವೇ ಅಧಿಕಾರದಲ್ಲಿ ಇದ್ದಿದ್ದರೆ ನರೇಂದ್ರ ಮೋದಿ ಅವರ ಮುಂದೆ ಧರಣಿ ಮಾಡಿ ನಮ್ಮ ಪಾಲಿನ ಹಣವನ್ನು ವಸೂಲಿ ಮಾಡಿಕೊಂಡು ಬರ್ತಿದ್ದೆ. ರಾಜ್ಯ ಬಿಜೆಪಿಯವರು ತಮ್ಮ ಸ್ವಾಮಿನಿಷ್ಠೆಗೆ ರಾಜ್ಯವನ್ನು ಬಲಿಕೊಡಲು ಹೊರಟಿದ್ದಾರೆ. ಇದನ್ನು ನೋಡಿಕೊಂಡು ನಾವು ಸುಮ್ಮನಿರಬೇಕ?
ರಾಜ್ಯಕ್ಕೆ ಬಿಜೆಪಿ ಮಾಡಿರುವ ಅನ್ಯಾಯಗಳಿಗೆ ತಕ್ಕ ಉತ್ತರ ನೀಡಲು ಜನರಿಗೆ ಉಪಚುನಾವಣೆಯಲ್ಲಿ ಒಂದು ಅವಕಾಶ ಇದೆ. ಹಾಗಾಗಿ ಕಾಂಗ್ರೆಸ್ ಗೆ ಮತ ನೀಡುವ ಮೂಲಕ ಅಶೋಕ್ ಮನಗೂಳಿ ಅವರನ್ನು ವಿಧಾನಸಭೆಗೆ ಕಳಿಸಿಕೊಡಿ ಎಂದು ಸಿದ್ಧರಾಮಯ್ಯ ಮನವಿ ಮಾಡಿದರು.
Key words: By-election –campaign- Former CM -Siddaramaiah -challenged – state government