ಬೆಂಗಳೂರು, ನ.10,2019(www.justkannada.in): ಡಿಸೆಂಬರ್ 5 ರಂದು ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ಉಪಚುನಾವಣೆ ಹಿನ್ನೆಲೆ, ನಾಳೆಯಿಂದ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದ್ದಾರೆ.
ಇಂದು ಸುದ್ಧಿಗೋಷ್ಠಿ ನಡೆಸಿ ಉಪಚುನಾವಣೆ ಬಗ್ಗೆ ಮಾಹಿತಿ ನೀಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ನಾಳೆಯಿಂದ ನೀತಿಸಂಹಿತೆ ಜಾರಿಗೆ ಬರಲಿದೆ. ನಾಳೆಯಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ನವೆಂಬರ್ 18 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ನ.19ರಂದು ನಾಮಪತ್ರ ಪರಿಶೀಲನೆ , ನ.21 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. 15 ಕ್ಷೇತ್ರಗಳಲ್ಲಿ ಮತದಾನ ಡಿಸೆಂಬರ್ 5ರಂದು ನಡೆಯಲಿದ್ದು, ಡಿಸೆಂಬರ್.9ರಂದು ಮತಗಳ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.
15 ಮತ ಕ್ಷೇತ್ರಗಳಲ್ಲಿ ಒಟ್ಟು 4185 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, 22,598 ಚುನಾವಣೆ ಸಿಬ್ಬಂದಿ ನೇಮಕ ಮಾಡಲಾಗಿದೆ. ಈ 15 ಕ್ಷೇತ್ರಗಳಲ್ಲಿ ಒಟ್ಟು 37,50,565 ಮತದಾರರಿದ್ದಾರೆ. ಅದರಲ್ಲಿ 19,1791 ಪುರುಷ ಮತದಾರರು, 18,37375 ಮಹಿಳಾ ಮತದಾರರು. 399 ಇತರೆ ಮತದಾರರಿದ್ದಾರೆ. 18 ರಿಂದ 19 ವರ್ಷದ 71,613 ಯುವ ಮತದಾರರು ಇದ್ದಾರೆ. ಯಾವುದೇ ಭಯ, ಆತಂಕ ಇಲ್ಲದೆ ಎಲ್ಲರೂ ಬಂದು ಮತದಾನ ಮಾಡಬಹುದು. ಮತದಾನಕ್ಕೆ ಬೇಕಾದ ಎಲ್ಲ ಭದ್ರತೆಯನ್ನು ನಾವು ವ್ಯವಸ್ಥೆ ಮಾಡಿದ್ದೇವೆ ಎಂದು ಸಂಜೀವ್ ಕುಮಾರ್ ತಿಳಿಸಿದರು.
ಅಥಣಿ, ಕಾಗವಾಡ, ಗೋಕಾಕ್, ಎಲ್ಲಾಪುರ, ಹಿರೇಕೇರೂರು, ರಾಣೆಬೆನ್ನೂರು, ವಿಜಯ್ ನಗರ, ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆ.ಆರ್. ಪೇಟೆ, ಹುಣಸೂರು ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಹಿಂದೆ ಕೂಡ ನಾಮಪತ್ರ ಸಲ್ಲಿಕೆ ಆಗಿತ್ತು. ಅವೂ ಪರಿಗಣನೆ ಆಗುತ್ತವೆ ಎಂದು ರಾಜ್ಯ ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದರು.
“ಈ ಬಾರಿ ಎಂ-3 ಮಾದರಿಯ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತದೆ. ಚುನಾವಣೆಗೆ ಸಂಬಂಧಿಸಿದ ದೂರು ಸಲ್ಲಿಸಲು ಸಹಾಯವಾಣಿ ಆರಂಭಿಸಲಾಗಿದ್ದು,1950ಗೆ ಕರೆ ಮಾಡಿ ದೂರು ಸಲ್ಲಿಸಬಹುದು. ಸಿ ವಿಜಲ್ ಆ್ಯಪ್ ಮೂಲಕವೂ ದೂರು ಸಲ್ಲಿಸಬಹುದು ಎಂದು ಸಂಜೀವ್ ಕುಮಾರ್ ಮಾಹಿತಿ ನೀಡಿದರು.
ಚುನಾವಣೆ ಆಯೋಗ ಯಾವುದೇ ದ್ವಂದ್ವದಲ್ಲಿ ಇಲ್ಲ. ಈ ವಿಷಯ ಸುಪ್ರೀಂ ಕೋರ್ಟ್ ನಲ್ಲಿರುವುದರಿಂದ ನಾನು ಏನೂ ಹೇಳೊಲ್ಲ. ಉಪ ಚುನಾವಣೆಯ ಅನರ್ಹತೆಯ ಕುರಿತು ಯಾವ ವಿಷಯಕ್ಕೂ ಪ್ರತಿಕ್ರಿಯೆ ನೀಡಲಾರೆ. ಬುಧವಾರ ಅನರ್ಹರ ವಿಚಾರವನ್ನ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಬಹುದು. ಹೀಗಾಗಿ ಎಲ್ಲರೂ ಕಾದು ನೋಡಿ ಎಂದು ಸಂಜೀವ ಕುಮಾರ್ ತಿಳಿಸಿದರು.
Key words: By-election-Code of Conduct – State Election Commissioner- Sanjeev Kumar -Information