ಬೆಂಗಳೂರು,ಮಾರ್ಚ್, 20,2021(www.justkannada.in): ಮುಂದಿನ ತಿಂಗಳು ಉಪಚುನಾವಣೆ ನಡೆಯಲಿರುವ ಮಸ್ಕಿಯಲ್ಲಿ ಇದೇ ತಿಂಗಳು 29 ರಂದು ಹಾಗೂ ಬಸವ ಕಲ್ಯಾಣದಲ್ಲಿ 30 ರಂದು ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಒಬ್ಬರೇ ಅಭ್ಯರ್ಥಿ ಹೆಸರು ಶಿಫಾರಸ್ಸು ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಕ್ಷೇತ್ರ, ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ಕಾರ್ಯತಂತ್ರ ಕುರಿತು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಪಕ್ಷದ ಕಚೇರಿಯಲ್ಲಿ ಶನಿವಾರ ನಡೆದ ಮುಖಂಡರ ಸಭೆಯ ನಂತರ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದ ಅವರು ಹೇಳಿದ್ದಿಷ್ಟು:
‘ಒಂದು ಲೋಕಸಭಾ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಪಕ್ಷದ ನಾಯಕರಿಗೆ ಉಸ್ತುವಾರಿ ವಹಿಸಲಾಗುವುದು. ಸ್ಥಳೀಯ ನಾಯಕರ ಅಭಿಪ್ರಾಯದ ಬಗ್ಗೆ ಚರ್ಚಿಸಿದ್ದೇವೆ. ರಾಜ್ಯದ ಹಿರಿಯ ನಾಯಕರು ಜವಾಬ್ದಾರಿ ತೆಗೆದುಕೊಳ್ಳಬೇಕೆಂದು ತೀರ್ಮಾನ ಮಾಡಲಾಗಿದೆ. ಹೆಚ್ಚು ಬಹಿರಂಗ ಸಭೆಗಳನ್ನು ಮಾಡದೇ, ಎರಡೆರಡು ಕಾರ್ಯಕ್ರಮಗಳನ್ನು ಮಾತ್ರ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ.
ಕೊರೋನಾ ಮಾರ್ಗಸೂಚಿ ಇನ್ನೂ ಗೊಂದಲದಲ್ಲಿದೆ. 500 ಜನ ಅಂತ ಹೇಳಿದ್ದರು. ನಾವು ಕೂಡ ನಿನ್ನೆ, ಇವತ್ತು ಹಾಗೂ ನಾಳೆ ನಿಗದಿಯಾಗಿದ್ದ ಸಭೆಯನ್ನು ಕೊರೋನಾ ಮಾರ್ಗಸೂಚಿ ಹಿನ್ನೆಲೆಯಲ್ಲಿ ರದ್ದು ಮಾಡಿದೆವು. ಆಡಳಿತ ಪಕ್ಷ ಇವತ್ತು ಸಭೆ ನಡೆಸುತ್ತಿದೆ. ಸರ್ಕಾರವಂತೂ ಈ ಚುನಾವಣೆ ಹಾಗೂ ಮಾರ್ಗಸೂಚಿ ವಿಚಾರದಲ್ಲಿ ಗೊಂದಲದಲ್ಲಿದೆ.
ಎರಡು ವಿಧಾನಸಭಾ ಕ್ಷೇತ್ರಗಳ ಪೈಕಿ ಮಸ್ಕಿಯಲ್ಲಿ 29 ರಂದು, ಬಸವ ಕಲ್ಯಾಣದಲ್ಲಿ 30 ರಂದು ನಾಮಪತ್ರ ಸಲ್ಲಿಸಲಾಗುವುದು. ನಾವೆಲ್ಲರೂ ಅಲ್ಲಿಗೆ ಹೋಗುತ್ತಿದ್ದೇವೆ. ಬೆಳಗಾವಿಯಲ್ಲಿ ನಾಮಪತ್ರ ಸಲ್ಲಿಕೆ ವಿಚಾರದಲ್ಲಿ ಅಂತಿಮ ತೀರ್ಮಾನ ಮಾಡಿಲ್ಲ.
ಈ ಉಪಚುನಾವಣೆಗೆ ಎಲ್ಲರೂ ಉತ್ಸಾಹದಲ್ಲಿದ್ದು, ಮೂರೂ ಕ್ಷೇತ್ರಗಳಲ್ಲೂ ಗೆಲ್ಲುವ ವಿಶ್ವಾಸವಿದೆ. ಮತದಾರರ ಮೇಲೆ ಅಪಾರ ನಂಬಿಕೆ ಇಟ್ಟಿದ್ದೇವೆ. ಈ ರಾಜ್ಯದಲ್ಲಿ ಬದಲಾವಣೆ ಅಗತ್ಯವಿದೆ ಎಂದು ಮತದಾರ ತೀರ್ಮಾನಿಸಿದ್ದು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಮನವಿ ಮಾಡಿ ಅಭ್ಯರ್ಥಿ ಗೆಲ್ಲಿಸಲು ನಾವೆಲ್ಲ ಪ್ರಯತ್ನ ಮಾಡುತ್ತೇವೆ.
ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆಗೆ ನಮ್ಮ ಸಮಿತಿ ಒಂದೇ ಹೆಸರು ಶಿಫಾರಸ್ಸು ಮಾಡಿದೆ. ನಮ್ಮ ಪಕ್ಷಕ್ಕೆ ಯಾರು ಸೂಕ್ತ ಅಭ್ಯರ್ಥಿ ಎಂದು ನಾವು ತೀರ್ಮಾನ ಮಾಡುತ್ತೇವೆಯೇ ಹೊರತು, ಬೇರೆಯವರು ಹೇಳಿದಂತೆ ಅಲ್ಲ.’
Key words: By-election- Maski –march 30- nominated for Basava kalyana -March 30-nomination- KPCC President D.K. Shivakumar