ಬೆಂಗಳೂರು,ಅಕ್ಟೋಬರ್,18,2024 (www.justkannada.in): ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಇಂದು ಅಧಿಸೂಚನೆ ಹೊರಡಿಸಲಾಗಿದ್ದು, ಇಂದಿನಿಂದ ನಾಮಪತ್ರ ಸಲ್ಲಿಕೆ ಕಾರ್ಯ ಶುರುವಾಗಲಿದೆ.
ಹೆಚ್.ಡಿ ಕುಮಾರಸ್ವಾಮಿ ಅವರಿಂದ ತೆರವಾದ ಚನ್ನಪಟ್ಟಣ, ತುಕಾರಾಂ ಅವರಿಂದ ತೆರವಾದ ಸಂಡೂರು ಮತ್ತು ಬಸವರಾಜ ಬೊಮ್ಮಾಯಿ ಅವರಿಂದ ತೆರವಾದ ಶಿಗ್ಗಾವಿ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.
ಅಕ್ಟೊಬರ್ 25 ನಾಮಪತ್ರ ಸಲ್ಲಿಕೆಗೆ ಕಡೇ ದಿನವಾಗಿದ್ದು, ಅಕ್ಟೋಬರ್ 30 ನಾಪಪತ್ರ ವಾಪಸ್ ಪಡೆಯಲು ಕಡೇ ದಿನವಾಗಿದೆ. ಮೂರು ವಿಧಾನಸಭಾ ಕ್ಷೇತ್ರಕ್ಕೂ ನವೆಂಬರ್ 13 ರಂದು ಮತದಾನ ನಡೆಯಲಿದೆ. ನವೆಂಬರ್ 23 ರಂದು ಫಲಿತಾಂಶ ಪ್ರಕಟವಾಗಲಿದೆ.
ಉಪ ಚುನಾವಣಾ ಕ್ಷೇತ್ರಗಳು ರಣಕಣವಾಗಿದ್ದು, ಮೂರು ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧೆಗಿಳಿದಿದೆ. ಬಿಜೆಪಿ ಜೆಡಿಎಸ್ ದೋಸ್ತಿಗಳಾಗಿ ಕಣಕ್ಕಿಳಿಯುತ್ತಿದ್ದು, ಮೂರರಲ್ಲಿ ಸಂಡೂರು, ಶಿಗ್ಗಾವಿ ಬಿಜೆಪಿ ಅಭ್ಯರ್ಥಿ, ಚನ್ನಪಟ್ಟಣ ಜೆಡಿಎಸ್ ಅಭ್ಯರ್ಥಿಗೆ ಬಿಟ್ಟುಕೊಡಲು ಒಪ್ಪಂದವಾಗಿದೆ. ಇತ್ತ ಚನ್ನಪಟ್ಟಣದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಮಾಜಿ ಸಚಿವ ಸಿಪಿ ಯೋಗೇಶ್ವರ್ ನಡೆ ದೋಸ್ತಿಗಳಿಗೆ ನುಂಗಲಾರದ ತುತ್ತಾಗಿದೆ.
ಚನ್ನಪಟ್ಟಣ ಟಿಕೆಟ್ ಗೆ ಸಿಪಿ ಯೋಗೇಶ್ವರ್ ಪಟ್ಟು ಹಿಡಿದಿದ್ದು, ಆದರೆ ಟಿಕೆಟ್ ನಿರ್ಧಾರ ಮಾಡುವುದು ಕೇಂದ್ರ ಸಚಿವ ಹೆಚ್ ಡಿಕೆ ಹೆಗಲ ಮೇಲಿದೆ. ಈ ಮಧ್ಯೆ ತಮ್ಮ ಪುತ್ರ ನಿಖಿಲ್ ಗೆ ಟಿಕೆಟ್ ಕೊಡಿಸಲು ಹೆಚ್ ಡಿಕೆ ಪ್ಲಾನ್ ಮಾಡಿದ್ದು, ಆದರೆ ಇತ್ತ ಎನ್ ಡಿಎ ಅಭ್ಯರ್ಥಿಯಾಗಿ ನನಗೆ ಟಿಕೆಟ್ ಕೊಡಿ ಎಂದು ಯೋಗೇಶ್ವರ್ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ಅನೌನ್ಸ್ ಆದರೆ ಸಿಪಿ ಯೋಗೇಶ್ವರ್ ಬಂಡಾಯವಾಗಿ ಸ್ಪರ್ಧಿಸುವ ಭೀತಿ ದೋಸ್ತಿಗಳಿಗೆ ಎದುರಾಗಿದೆ.
ಈಗಾಗಲೇ ಪಕ್ಷೇತರವಾಗಿ ಸ್ಪರ್ಧೆ ಮಾಡುವ ಬಗ್ಗೆ ಸಿಪಿ ವೈ ಎಚ್ಚರಿಕೆ ನೀಡಿದ್ದು, ಇದರಿಂದ ದೋಸ್ತಿಗಳಲ್ಲಿ ಬಿರುಕು ಮೂಡುವ ಸಂಭವ ಹೆಚ್ಚಾಗಿದೆ. ಇದೆಲ್ಲದರ ಮಧ್ಯೆ ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬಂತೆ ಲಾಭ ಪಡೆಯಲು ಕಾಂಗ್ರೆಸ್ ಪಡೆ ಸ್ಕೆಚ್ ಹಾಕಿದ್ದು, ಲೋಕಸಭಾ ಚುನಾವಣೆಯಲ್ಲಿ ಪರಾಜಿತವಾದ ಡಿಕೆ ಸುರೇಶ್ ಕಣಕ್ಕಿಳಿಸಲು ಪ್ಲಾನ್ ಮಾಡಿದೆ. ಹೀಗಾಗಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ರಣಕಣವಾಗಿದ್ದು, ಯಾರಿಗೆ ಗೆಲುವು ಯಾರಿಗೆ ಸೋಲು ಎಂಬ ಕುತೂಹಲ ಜನ ಸಾಮಾನ್ಯರಲ್ಲಿದೆ.
Key words: By-election, Nomination, Submission, Starts, Today