ಬಿಜೆಪಿ ರಾಜ್ಯಾಧ್ಯಕ್ಷರಾಗಿ ಒಂದು ವರ್ಷ: ಪ್ರಧಾನಿ ಮೋದಿ ಭೇಟಿ ಮಾಡಿದ ಬಿವೈ ವಿಜಯೇಂದ್ರ

ನವದೆಹಲಿ,ಡಿಸೆಂಬರ್,18,2024 (www.justkannada.in):  ಬಿಜೆಪಿ ರಾಜ್ಯಾಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿವೈ ವಿಜಯೇಂದ್ರ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿಯಾಗಿ ಆಶೀರ್ವಾದ ಪಡೆದರು.

ಈ ಕುರಿತು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡ ಬಿವೈ ವಿಜಯೇಂದ್ರ, ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಂಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸನ್ಮಾನ್ಯ ಪ್ರಧಾನಿ  ಶ್ರೀ ನರೇಂದ್ರ ಮೋದಿ ಜೀ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು.

ವಿಕಸಿತ ಭಾರತ ನಿರ್ಮಾಣಕ್ಕಾಗಿ ಮಹಾಸಂಕಲ್ಪ ತೊಟ್ಟು ತಪಸ್ವಿ ಸಾಧಕರಂತೆ ದೇಶ ಕಟ್ಟುವ ಕಾಯಕದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿರುವ ಹೆಮ್ಮೆಯ ಪ್ರಧಾನಿ ಮೋದಿಜೀಯವರ ಕಾರ್ಯ ಶೈಲಿ ನಮ್ಮಂಥ ಕಾರ್ಯಕರ್ತರಿಗೆ ನಿತ್ಯ ಚೈತನ್ಯದ ಚಿಲುಮೆಯಾಗಿದೆ.

ಅವರ ಆಶೀರ್ವಾದದ ಮಾರ್ಗದರ್ಶನ ರಾಜ್ಯದಲ್ಲಿ ಪಕ್ಷ ಕಟ್ಟುವ ಕಾರ್ಯಕ್ಕೆ ಅದಮ್ಯ ಉತ್ಸಾಹ ತುಂಬಿದೆ, ಇಂದಿನ ಅವರ ಭೇಟಿಯ ಸಂದರ್ಭದ ಮಾತುಗಳು ಸಂಘಟನೆಯ ಬಲವೃದ್ಧಿಯ ಜೊತೆ ಜೊತೆಗೇ ರಾಷ್ಟ್ರ ಬಲಿಷ್ಠಗೊಳಿಸುವ ಮಹಾ ಕಾರ್ಯದಲ್ಲಿ ಯುವಜನರ ಸಹಭಾಗಿತ್ವ ನಿರೀಕ್ಷೆ ಮೀರಿ ತೊಡಗಿಸಿಕೊಳ್ಳುವಂತೆ ಕಾರ್ಯಕ್ರಮಗಳನ್ನು ರೂಪಿಸಲು ಪ್ರೇರಣೆ ನೀಡಿತು ಎಂದು ಸಂತಸ ಹಂಚಿಕೊಂಡರು.

ಭಾರತದ ಆರ್ಥಿಕ, ಔದ್ಯೋಗಿಕ, ಶೈಕ್ಷಣಿಕ ಕ್ಷೇತ್ರಗಳ ಪ್ರಗತಿ ಜಾಗತಿಕ ಮಟ್ಟದಲ್ಲಿ ಅಗ್ರ ಸಾಧನೆಗೈಯಲು ಮಹತ್ವದ ಪಾತ್ರ ವಹಿಸಲಿದ್ದು ಈ ನಿಟ್ಟಿನಲ್ಲಿ ಕರ್ನಾಟಕದ ಕೊಡುಗೆ ಮುಂಚೂಣಿ ಸ್ಥಾನದಲ್ಲಿರುವಂತೆ ಕಾಳಜಿ ವಹಿಸಲು ಕೇಂದ್ರ ಸರ್ಕಾರದ ಯೋಜನೆಗಳು ಜನರಿಗೆ ತಲುಪುವಂತಾಗಬೇಕು, ಇದಕ್ಕಾಗಿ ಪಕ್ಷದ ಕಾರ್ಯಕರ್ತರು ಯೋಜಿತವಾಗಿ ತೊಡಗಿಸಿಕೊಳ್ಳಲು ಕಾರ್ಯಕ್ರಮ ರೂಪಿಸಲು ಮಾನ್ಯ ಪ್ರಧಾನಿಗಳು ಸೂಚಿಸಿದರು.

ಮಾನ್ಯ ಪ್ರಧಾನಿ ಮೋದಿ ಜೀ ಅವರ ಭೇಟಿಯ ಅಪೂರ್ವ ಕ್ಷಣಗಳು-ಪಕ್ಷ ಬಲವರ್ಧನೆಗೆ ದೊರೆತ ಪ್ರೇರಣೆಯ ಕಿರಣಗಳು ಎಂದು ಟ್ವೀಟ್ಟರ್ ನಲ್ಲಿ ತಿಳಿಸಿದ್ದಾರೆ.

Key words: One year, BJP, state president,  BY Vijayendra, meets, PM Modi