ಮೈಸೂರು,ಜ,24,2020(www.justkannada.in): ದೇಶದಲ್ಲಿ ಮುಸ್ಲಿಮರು ಸುರಕ್ಷಿತವಾಗಿದ್ದು, ಮುಂದೆಯೂ ಸುರಕ್ಷಿತವಾಗಿಯೇ ಇರಲಿದ್ದಾರೆ. ಸಿಎಎ ಕಾಯ್ದೆ ಜಾರಿಯಾದರೂ ಅವರು ಸುರಕ್ಷಿತವಾಗಿಯೇ ಇರಲಿದ್ದಾರೆ ಎಂದು ಬಿಜೆಪಿ ರಾಷ್ಟ್ರಿಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ತಿಳಿಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮೈಸೂರಿನ ನಗರದ ಜೆ.ಕೆ.ಮೈದಾನದ ಅಮೃತೋತ್ಸವ ಭವನದಲ್ಲಿ ಮಿಮರ್ಶೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿಎಎ ಕುರಿತು ಬಿಜೆಪಿ ರಾಷ್ಟ್ರಿಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ಜಿಲ್ಲಾಧ್ಯಕ್ಷ ಮಂಜುನಾಥ್, ನಗರಾಧ್ಯಕ್ಷ ಕೋಟೆ ಎಂ ಶಿವಣ್ಣ, ಬಿಜೆಪಿ ಮೈಸೂರು ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಸೇರಿ ಬಿಜೆಪಿ ಶಾಸಕರು ಹಾಗೂ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ಎಲ್ ಸಂತೋಷ್ ಅವರು, ಸ್ವಾತಂತ್ರ್ಯ ಬಂದನಂತರ ಕಳೆದ 70 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಲವಾರು ಸಮಸ್ಯೆಗಳನ್ನು ನಿವಾರಿಸಲು ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಮುಂದಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಒಂದೊಂದೇ ವಿಚಾರಗಳನ್ನು ಕೈಗೆತ್ತಿಕೊಂಡು ಅನುಷ್ಠಾನಕ್ಕೆ ತರುತ್ತಿದೆ. ಸಂವಿಧಾನದ ಆಶಯಕ್ಕೆ ಅನುಗುಣವಾಗಿ ಸಿಎಎ ಕಾಯ್ದೆ ಜಾರಿಗೊಳಿಸಲಾಗಿದೆ. ಇದನ್ನು ಜಾರಿಗೊಳಿಸದೇ ಇರಲು ಯಾರಿಗೂ ಸಾಧ್ಯವಿಲ್ಲ. ಬಾಯಿ ಚಪಲಕ್ಕಾಗಿ ಕೇರಳ ಸರ್ಕಾರದವರು ಅನುಷ್ಠಾನಕ್ಕೆ ತರುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಇದನ್ನು ಜಾರಿಗೊಳಿಸುವುದು, ಬಿಡುವುದು ಕೇಂದ್ರ ಸರ್ಕಾರದಿಂದ ಮಾತ್ರ ಸಾಧ್ಯ. ಸಿಎಎ ಕುರಿತು ಸುಳ್ಳು ಪ್ರಚಾರಗಳನ್ನು ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಸತ್ಯವನ್ನು ಸುಳ್ಳಿನ ಮೂಲಕ ಹೆಚ್ಚು ದಿನ ಮುಚ್ಚಿಡಲು ಸಾಧ್ಯವಿಲ್ಲ. ದೇಶದ ಜನರಿಗೆ ಸತ್ಯದ ಅರಿವಾಗುತ್ತಿದೆ. ಕಳೆದ 70 ವರ್ಷಗಳಲ್ಲಿ ದೇಶಾದ್ಯಂತ ಮುಸ್ಲಿಮರಿಗೆ ತೊಂದರೆಯಾಗಿಲ್ಲ. ಮುಸ್ಲಿಂ ಸಮುದಾಯಕ್ಕೆ ಸೇರಿದ ಹಲವು ಮಹನೀಯರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ, ಸಮಾಜದ ವಿವಿಧ ಸ್ತರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅವರನ್ಯಾರೂ ಮುಸ್ಲಿಮರು ಎಂದು ಬಿಂಬಿಸಲಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದನಂತರ ಮುಸ್ಲಿಮರ ಸರಾಸರಿ ಜನಸಂಖ್ಯೆ ಹೆಚ್ಚಳವಾಗಿದೆ. ಆದರೆ ಹಿಂದೂಗಳ ಸರಾಸರಿ ಜನ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ದೇಶದಲ್ಲಿ ಮುಸ್ಲಿಮರು ಸುರಕ್ಷಿತವಾಗಿದ್ದು, ಮುಂದೆಯೂ ಸುರಕ್ಷಿತವಾಗಿಯೇ ಇರಲಿದ್ದಾರೆ. ಸಿಎಎ ಕಾಯ್ದೆ ಜಾರಿಯಾದರೂ ಅವರು ಸುರಕ್ಷಿತವಾಗಿಯೇ ಇರಲಿದ್ದಾರೆ ಎಂದು ನುಡಿದರು.
ನೆರೆ ದೇಶಗಳಲ್ಲಿ ಇರುವ ಅಲ್ಪ ಸಂಖ್ಯಾತರ ಸ್ಥಿತಿ ಈ ರೀತಿ ಇಲ್ಲ. ಅಲ್ಲಿನ ಅಲ್ಪ ಸಂಖ್ಯಾತರು ಸುರಕ್ಷಿತವಾಗಿಲ್ಲ. ನೆರೆ ದೇಶಗಳು ಇಸ್ಲಾಮಿಕ್ ರಾಷ್ಟ್ರವೆಂದು ಘೋಷಿಸಿಕೊಂಡಿವೆ. ಅಲ್ಲಿಂದ ಬಂದಿರುವ ಅಲ್ಪಸಂಖ್ಯಾತರಿಗೆ ನೆಲೆ ಕಲ್ಪಿಸುವುದು ನಮ್ಮ ಜವಾಬ್ದಾರಿ ಆಗಿದೆ ಎಂದು ಬಿ.ಎಲ್ ಸಂತೋಷ್ ಪ್ರತಿಪಾದನೆ ಮಾಡಿದರು.
ಸಂಸದ ಪ್ರತಾಪ್ ಸಿಂಹರನ್ನ ಗುಣಗಾನ ಮಾಡಿದ .ಬಿಎಲ್ ಸಂತೋಷ್…
ಬರೀ ರೈಲು ಬಿಡುವ ಸಂಸದರ ನಡುವೆಯೂ ಸಂಸದ ಪ್ರತಾಪ್ ಸಿಂಹ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಸತತ ಎರಡನೇ ಬಾರಿ ಆಯ್ಕಾಯಾಗಿರುವ ಪ್ರತಾಪ್ ಸಿಂಹ ಹಲವಾರು ರೈಲ್ವೆ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ ಎಂದು ಬಿಜೆಪಿ ರಾಷ್ಟ್ರಿಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಗುಣಗಾನ ಮಾಡಿದರು.
Key words: CAA Act- Muslims – no trouble- BJP organize general secretary -BL Santosh – Mysore.