ಬೆಂಗಳೂರು,ಜ,23,2020(www.justkannada.in): ಸಿಎಎ, ಎನ್ ಸಿ ಆರ್, ಎನ್ ಪಿಆರ್ ಈ ಮೂರು ಕಾಯ್ದೆಗಳು ದೇಶಕ್ಕೆ ಬಂದಿರುವ ಅತಿದೊಡ್ಡ ಗಂಡಾಂತರ. ಇದರ ವಿರುದ್ದ ಹೋರಾಟ ಮಾಡಬೇಕು ಎಂದು ತಮ್ಮ ಕಾರ್ಯಕರ್ತರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಕರೆ ನೀಡಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ನಡೆದ ಜೆಡಿಎಸ್ ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಎಲ್ಲೊ ಒಂದು ಕಡೆ ನಾವು ಎಡವಿದ್ದೇವೆ. ದೇಶಕ್ಕೆ ಸಂಕಷ್ಟದ ಪರಿಸ್ಥಿತಿ ಬಂದಿದೆ. ಜಾತ್ಯಾತೀತತೆ ಮೇಲೆ ವಿಶ್ವಾಸ ಇರೋ ಪ್ರಾದೇಶಿಕ ಪಕ್ಷಗಳು ಹಾಗೂ ಕಾಂಗ್ರೆಸ್ ಪಕ್ಷ ಮುಂದಾಗುವ ಅನಾಹುತಗಳನ್ನ ತಪ್ಪಿಸಲು ಒಂದು ಯೋಜನೆ ರೂಪಿಸಿಕೊಂಡು ಹೋಗೋದು ಸೂಕ್ತ ಎಂದು ಸಲಹೆ ನೀಡಿದರು.
ನಮ್ಮದು ಸಣ್ಣ ಪ್ರಾದೇಶಿಕ ಪಕ್ಷ. ಬಿಜೆಪಿಗೆ ಇರುವ ಸಂಖ್ಯಾ ಬಲದಿಂದ ಕಾಯ್ದೆಗಳನ್ನ ಜಾರಿ ಮಾಡಿದ್ದಾರೆ. ರಾಜ್ಯಸಭೆಯಲ್ಲಿ ಬಿಜೆಪಿಗೆ ಪೂರ್ಣ ಶಕ್ತಿ ಇಲ್ಲ. ಆದ್ರೆ ಅಧಿಕಾರ ದುರ್ಬಳಕೆ ಮಾಡಿಕೊಂಡು ವಿರುದ್ದವಾಗಿ ಮತ ಹಾಕದೇ ಇರೋ ರೀತಿ ಮಾಡಿದ್ರು. ಇದರ ದುಷ್ಪರಿಣಾಮ ಏನು ಅಂತ ಎಲ್ಲಾರಿಗೂ ತಿಳುವಳಿಕೆ ಆಗ್ತಿದೆ.
ದೆಹಲಿಯ ಜಂತರ್ ಮಂತರ್ ನಲ್ಲೂ ಹೋರಾಟ ಮಾಡುವ ಧೈರ್ಯ ನಿಮ್ಮಲ್ಲಿ ಬರಬೇಕು. ನಾನೊಬ್ಬನೇ ಹೋಗಿ ಕೂಗಿದ್ರೆ ಏನ್ ಪ್ರಯೋಜನ. ಸಿಎಎ, ಎನ್ ಸಿ ಆರ್, ಎನ್ ಪಿಆರ್ ಈ ಮೂರು ಕಾಯ್ದೆಗಳು ದೇಶಕ್ಕೆ ಬಂದಿರೋ ಅತಿದೊಡ್ಡ ಗಂಡಾಂತರ. ಇದರ ವಿರುದ್ದ ಹೋರಾಡಬೇಕು. ನಮ್ಮನ್ನ ಜೈಲಿಗೆ ಹಾಕಿದ್ರೂ ಹೋಗೋಕೆ ಸಿದ್ದರಾಗಿರಬೇಕು ಯಾವ ಹಂತದ ಹೋರಾಟಕ್ಕೂ ಸಿದ್ದರಿರಬೇಕು. ನಾವೆಲ್ಲ ಮೋದಿ, ಶಾ ನಿರ್ಧಾರಗಳ ವಿರುದ್ದ ಹೋರಾಟ ಮಾಡಬೇಕು. ಬಿಹಾರ, ಕೇರಳ, ಒರಿಸ್ಸಾ ಸರ್ಕಾರಗಳು ಕಾಯ್ದೆ ಜಾರಿ ಮಾಡಲ್ಲ ಅಂತ ಹೇಳಿವೆ ಎಂದು ಹೆಚ್.ಡಿ ದೇವೇಗೌಡರು ತಿಳಿಸಿದರು.
ಕಳೆದ ಬಾರಿ ಲೋಕಸಭೆ ಚುನಾವಣೆಗೆ ನಿಲ್ಲಬಾರದು ಅಂದುಕೊಂಡಿದ್ದೆ. ಆದ್ರೆ ಕಾರಣಾಂತರಗಳಿಂದ ನಿಲ್ಲಬೇಕಾಯ್ತು, ಸೋಲಲೂ ಬೇಕಾಯ್ತು. ಇವತ್ತು ತೆಗೆದುಕೊಂಡ ನಿರ್ಣಯಗಳು ಹಾಗೇ ಇರಬಾರದು. ಕಾರ್ಯಕರ್ತರು ಪಕ್ಷದ ಆಸ್ತಿ, ಪ್ರತಿಯೊಂದೂ ಜಿಲ್ಲೆಗಳಲ್ಲಿ ಉತ್ಸಾಹದಿಂದ ಹೋರಾಟ ಮಾಡಬೇಕು. ಇಲ್ಲದಿದ್ರೆ ಪಕ್ಷಕ್ಕೆ ಶಕ್ತಿ ಬರಲ್ಲ. ಮುಸ್ಲಿಂರನ್ನ ಎರಡನೇ ದರ್ಜೆ ನಾಗರೀಕರನ್ನಾಗಿ ಮಾಡಲು ಹೊರಟಿದ್ದಾರೆ. ಸುಮಾರು ನಲವತ್ತು ಕೋಟಿ ಮುಸ್ಲಿಂರು ಇದ್ದಾರೆ ಅವ್ರನ್ನೆಲ್ಲಾ ಎಲ್ಲಿಗೆ ಕಳಿಸುತ್ತಾರೆ ..? ಎಂದು ಹೆಚ್.ಡಿಡಿ ಪ್ರಶ್ನಿಸಿದರು.
ಜೆಡಿಎಸ್ ಪಕ್ಷವೇ ಮುಳುಗಿಹೋಯ್ತು ಅಂತ ಭಾವಿಸಬೇಡಿ…
ಫೆಬ್ರವರಿಯಲ್ಲಿ 10 ಮತ್ತು 11 ರಂದು ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಮಾಡ್ತೇವೆ ಹಾಗೂ ಮಹಿಳಾ ಘಟಕದ ಬೃಹತ್ ಸಮಾವೇಶ ಕೂಡ ಮಾಡ್ತೇವೆ. ಕೆಲವು ದಿನಗಳಿಂದ ಪಕ್ಷಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಉಪ ಚನಾವಣೆಯಲ್ಲಿ ಎಲ್ಲಾ 15 ಕಡೆ ಸೋತಿದ್ದೇವೆ. ಕಾಂಗ್ರೆಸ್ ಎರಡೂ ಕಡೆ ಮಾತ್ರ ಗೆದ್ದಿದೆ. ಜೆಡಿಎಸ್ ಪಕ್ಷವೇ ಮುಳುಗಿಹೋಯ್ತು ಅಂತ ಭಾವಿಸಬೇಡಿ. ದೇವೇಗೌಡ್ರೂ ಸೋತಿದ್ದಾರೆ, ಆದ್ರೆ ಪಕ್ಷವನ್ನ ಕಟ್ಟೋ ಕೆಲಸ ಕಾರ್ಯಕರ್ತರು ಮಾಡಬೇಕು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ಮಾಡುವ ಸೈನ್ಯ ಕಟ್ಟಬೇಕು ಎಂದು ಕಾರ್ಯಕರ್ತರಿಗೆ ಸ್ಪೂರ್ತಿ ತುಂಬಿದರು.
ಉಸಿರಿರುವ ತನಕ ರಾಜ್ಯದ ಜನತೆಗೋಸ್ಕರ ಹೋರಾಟ ಮಾಡುತ್ತೀನಿ…
ಕರುಣಾನಿಧಿ 96 ನೇ ವಯಸ್ಸಲ್ಲೂ ವೀಲ್ ಚೇರ್ ನಲ್ಲಿ ಹೋಗಿ ಪಕ್ಷ ಸಂಘಟನೆ ಮಾಡ್ತಿದ್ರು. ಅದೇ ರೀತಿ ನಾನು ನನ್ನ ಉಸಿರಿರುವ ತನಕ ರಾಜ್ಯದ ಜನತೆಗೋಸ್ಕರ ಹೋರಾಟ ಮಾಡುತ್ತೀನಿ. ನನಗೆ ಅಧಿಕಾರಕ್ಕಿಂತ ರಾಜ್ಯದ ನೆಲ ಜಲ ಭಾಷೆ ಅತಿ ಮುಖ್ಯ. ಇದಕ್ಕೊಸ್ಕರ ನನ್ನ ಉಸಿರು ಮುಡಿಪಾಗಿಡುತ್ತಿನಿ. ಜೊತೆಗೆ ಈ ಪಕ್ಷ ಸೂರ್ಯ ಚಂದ್ರರಿರುವ ತನಕ ಇರಬೇಕು. ಅದಕ್ಕೆಲ್ಲ ನಿಮ್ಮ ಸಹಕಾರ ಮತ್ತು ಪಕ್ಷದ ಉಳುವಿಗಾಗಿ ನಿಮ್ಮ ಹೋರಾಟ ಅತ್ಯವಶ್ಯಕ ಎಂದು ಹೆಚ್.ಡಿ ದೇವೇಗೌಡರು ತಮ್ಮ ಮನದಾಳದ ಮಾತುಗಳನ್ನು ಸಭೆಯಲ್ಲಿ ನೆರೆದಿದ್ದ ಸಹಸ್ರಾರು ಕಾರ್ಯಕರ್ತರಲ್ಲಿ ಹಂಚಿಕೊಂಡರು.
Key words: CAA-NCR – NPR – biggest -hazards -Former Prime Minister -HD Deve Gowda-jds- Convention