ಬೆಂಗಳೂರು, ಜುಲೈ, 22,2021(www.justkannada.in): ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಗೆ ಹೋಗಿ ವಾಪಸ್ ಬಂದ ಬಳಿಕ ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಚರ್ಚೆ ಕಾವೇರಿದ್ದು, ಈ ನಡುವೆಯೇ ಇಂದು ಸಚಿವ ಸಂಪುಟ ಸಭೆ ನಡೆಯಲಿದೆ.
ಇನ್ನು ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಿಎಂ ಬಿಎಸ್ ವೈ ಪರ ಹಲವು ಮಠಾಧೀಶರು ಬೆಂಬಲಕ್ಕೆ ನಿಂತಿದ್ದಾರೆ. ಇದೇ ವಿಚಾರವಾಗಿ ನಿನ್ನೆ ಟ್ವೀಟ್ ಮಾಡಿದ್ದ ಸಿಎಂ ಬಿಎಸ್ ಯಡಿಯೂರಪ್ಪ ತಮ್ಮ ಪರವಾಗಿ ಯಾರೂ ಕೂಡ ಪ್ರತಿಭಟನೆ ಮಾಡುವುದಾಗಲಿ ಅಥವಾ ಹೇಳಿಕೆಗಳನ್ನು ಕೊಡುವುದಾಗಲಿ ಮಾಡಬಾರದು ಎಂದು ಆಪ್ತರು ಹಾಗೂ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಇಂದು ಸಂಜೆ 4 ಗಂಟೆಗೆ ಮಹತ್ವದ ಸಚಿವ ಸಂಪುಟ ಸಭೆಯೂ ನಡೆಯಲಿದೆ. ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ಮೊದಲನೆಯದಾಗಿ ಜುಲೈ 26ಕ್ಕೆ ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಲಿದೆ. ಹೀಗಾಗಿ ಈ ಎರಡು ವರ್ಷಗಳಲ್ಲಿ ಸಹಕಾರ ಕೊಟ್ಟಿರುವ ಎಲ್ಲ ಸಚಿವರಿಗೆ ಯಡಿಯೂರಪ್ಪ ಧನ್ಯವಾದಗಳನ್ನು ಹೇಳಲಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಕಂದಾಯ ಇಲಾಖೆಯ ತಹಶೀಲ್ದಾರ್ ಹುದ್ಧೆಗೆ ಇತರೆ ಇಲಾಖೆಯ ಅಧಿಕಾರಿಗಳನ್ನು ನೇಮಿಸುವ ಬಗ್ಗೆ ಮಹತ್ವದ ತೀರ್ಮಾನ ಬಗ್ಗೆ ಚರ್ಚೆ ಸಾಧ್ಯತೆ ಇದೆ. ಅದರೊಂದಿಗೆ ರಾಜ್ಯ ಸರ್ಕಾರಿ ನೌಕರರಿಗೆ ಆರೋಗ್ಯ ಸಂಜಿವಿನಿ ಯೋಜನೆ ಅಡಿಯಲ್ಲಿ ನಗದು ರಹಿತ ವೈದ್ಯಕೀಯ ಸೌಲಭ್ಯ ಒದಗಿಸುವುದು. ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ವಸತಿ ಇಲಾಖೆ ಮೂಲಕ 6 ಲಕ್ಷ ಮನೆ ನಿರ್ಮಾಣ ಮಾಡುವ ಕುರಿತು ಸಂಪುಟದಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.
Key words: cabinet -meeting -today – CM change.