ಮಾದಪ್ಪನ ಸನ್ನಿಧಿಯಲ್ಲಿ ಸಿದ್ದು ಕ್ಯಾಬಿನೆಟ್‌ ಸಭೆ: ಚು.ಆಯುಕ್ತರಿಗೆ  ಜಿಲ್ಲಾಧಿಕಾರಿ‌ ಶಿಲ್ಪನಾಗ್ ಪತ್ರ..!

CM Siddu's cabinet meeting in M.M.Hills : Deputy Commissioner Shilpa Nag writes to Election Commissioner

ಚಾಮರಾಜನಗರ, ಏ.೧೯,೨೦೨೫ :  ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಬೇಕಾಗಿದ್ದ ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆಗೆ ಇದೀಗ ಕಾನೂನು ತೊಡಕು ಎದುರಾಗಿದೆ.

ಹಲವು ಬಾರಿ ಮುಂದೂಡಲ್ಪಟ್ಟ ನಂತರ ಇದೀಗ ಏಪ್ರಿಲ್ 24 ಕ್ಕೆ ಮಲೆ ಮಹಾದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆಗೆ ದಿನಾಂಕ ನಿಗಧಿಯಾಗಿದೆ. ಈ ನಡುವೆ ರಾಜ್ಯಾದ್ಯಂತ ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆಗೆ ದಿನಾಂಕ ನಿಗಧಿಯಾಗಿದ್ದು, ರಾಜ್ಯ ಚುನಾವಣಾ ಆಯೋಗ ನೀತಿ ಸಂಹಿತೆ ಜಾರಿಗೊಳಿಸಿದೆ. ಮಲೆ ಮಹಾದೇಶ್ವರ ಬೆಟ್ಟದ ಗ್ರಾಮ ಪಂಚಾಯ್ತಿಗೂ ಮೇ ೧೩ ರಂದು ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮ.ಬೆಟ್ಟದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕ್ಯಾಬಿನೆಟ್‌ ಮೀಟಿಂಗ್‌ ಮಾಡಬಹುದೇ ಎಂಬ ಕಾನೂನು ತೊಡರು ಎದುರಾಗಿದೆ.

ಚುನಾವಣಾ ಆಯುಕ್ತರಿಗೆ ಪತ್ರ :

ಇದನ್ನು ಮನಗಂಡ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್‌  ಅವರು ರಾಜ್ಯ ಚುನಾವಣಾ ಆಯುಕ್ತರಿಗೆ ಈ ಸಂಬಂಧ ಪತ್ರ ಬರೆದು ಮಾಹಿತಿ ಕೋರಿದ್ದಾರೆ.  ಜತೆಗೆ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೂ ಈ ವಿಷಯ ಬಗ್ಗೆ ಗಮನ ಸೆಳೆದಿದ್ದಾರೆ.

ಡಿಸಿ ಸ್ಪಷ್ಟನೆ:

ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಚಾ.ನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಅವರನ್ನು ಜಸ್ಟ್‌ ಕನ್ನಡ ಸಂಪರ್ಕಿಸಿದಾಗ, ಮಲೆ ಮಹಾದೇಶ್ವರ ಬೆಟ್ಟದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಹಿನ್ನೆಲೆ ನೀತಿ ಸಂಹಿತೆ ಜಾರಿ ಯಲ್ಲಿದೆ. ಆದ್ದರಿಂದ ಈ ಬಗ್ಗೆ ರಾಜ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದು ಅವರಿಂದ ಮಾರ್ಗ ದರ್ಶನ ಕೇಳಲಾಗಿದೆ. ಕ್ಯಾಬಿನೆಟ್‌  ಸಭೆ ನಡೆಸಲು ಯಾವುದೇ ನಿರ್ಬಂಧವಿಲ್ಲ. ಆದರೆ ಸಭೆ ಬಳಿಕ ಮಾಹಿತಿ ನೀಡುವಾಗ ಯಾವುದೇ ಆಶ್ವಾಸನೆ ನೀಡದೆ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಮುಂಜಾಗ್ರತೆ ವಹಿಸಬೇಕು ಎಂದಿದ್ದಾರೆ. ಈ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೂ ಮಾಹಿತಿ ನೀಡಲಾಗಿದೆ ಎಂದರು.

ಆಯುಕ್ತರ ಸ್ಪಷ್ಟನೆ:

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಇದೇ ಏ.೨೪ ರಂದು ನಿಗಧಿಯಾಗಿರುವ ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆ ಕುರಿತು ರಾಜ್ಯ ಚುನಾವಣಾ ಆಯುಕ್ತರಾದ ಸಂಗ್ರೇಸಿ ಅವರನ್ನು ಜಸ್ಟ್‌ ಕನ್ನಡ ಸಂಪರ್ಕಿಸಿದಾಗ, ಕ್ಯಾಬಿನೆಟ್‌ ಮೀಟಿಂಗ್‌ ಗೆ ನಿರ್ಬಂಧ ಹೇರುವ ಅಧಿಕಾರ ಆಯೋಗಕ್ಕೆ ಇಲ್ಲ. ಆದರೆ, ಮೀಟಿಂಗ್‌ ಬಳಿಕ ಸಾರ್ವಜನಿಕವಾಗಿ ಅಥವಾ ಮಾಧ್ಯಮಗಳ ಮೂಲಕ ಹೇಳಿಕೆಗಳನ್ನು ನೀಡುವಾಗ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರದೇಶಗಳ ಬಗೆಗೆ ಯಾವುದೇ ವಿಷಯ ಪ್ರಸ್ತಾಪ ಮಾಡದಂತೆ ಎಚ್ಚರಿಕೆ ವಹಿಸಬೇಕು. ಆಮೂಲಕ ನೀತಿ ಸಂಹಿತೆ ಉಲ್ಲಂಘನೆಯಾಗಬಾರದು ಎಂದು ಸ್ಪಷ್ಟಪಡಿಸಿದರು.

ಈ ಸಂಬಂದ ಚಾ.ನಗರ ಜಿಲ್ಲಾಧಿಕಾರಿಗಳು ಸಹ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಅವರಿಗೂ ಇದನ್ನೇ ಸ್ಪಷ್ಟಪಡಿಸಲಾಗಿದೆ ಎಂದರು.

ಮೀಟಿಂಗ್‌ ಹಿನ್ನೆಲೆ:

ಈ ಸಭೆಯು ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಯೋಜನೆಗಳನ್ನು ಅನುಮೋದಿಸಲು ನಿರೀಕ್ಷಿಸಲಾಗಿದೆ. ಇದು ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಮೊದಲ ಸಂಪುಟ ಸಭೆಯಾಗಿದ್ದು, ಈ ಪ್ರದೇಶದ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ನಿರೀಕ್ಷೆಯಿದೆ.

ಈ ಸಭೆ ಚಾಮರಾಜನಗರ ಜಿಲ್ಲೆಗೆ ಹೆಚ್ಚಿನ ಅನುದಾನಗಳನ್ನು ಒದಗಿಸಲು ಮತ್ತು ಹಳೆ ಮೈಸೂರು ಭಾಗದ ಜಿಲ್ಲೆಗಳ ಅಭಿವೃದ್ಧಿಗೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಸಹಾಯಕವಾಗಲಿದೆ ಎಂದೇ ನಿರೀಕ್ಷಿಸಲಾಗಿದೆ. ಎರಡು ದಶಕಗಳ ಬಳಿಕ ಚಾಮರಾಜನಗರಲ್ಲಿ ನಡೆಯುತ್ತಿರುವ ಸಂಪುಟ ಸಭೆ. ಸಿಎಂ ಸಿದ್ದರಾಮಯ್ಯ ಗಡಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ನಿರೀಕ್ಷೆಯಲ್ಲಿ ಜಿಲ್ಲೆಯ ಜನತೆ.

key words: CM Siddu’s, cabinet meeting,M.M.Hills, Deputy Commissioner Shilpa Nag, Election Commissioner

 

CM Siddu’s cabinet meeting in M.M.Hills : Deputy Commissioner Shilpa Nag writes to Election Commissioner