ಬೆಂಗಳೂರು, ಅಕ್ಟೋಬರ್, 6, 2022(www.justkannada.in): ಭಾರತದ ನಿಯಂತ್ರಕರು ಮತ್ತು ಮಹಾಲೇಖಪಾಲರ (ಸಿಎಜಿ) ವರದಿ, ಕೇಂದ್ರ ಸರ್ಕಾರದ ದೀನದಯಾಳ್ ಉಪಾಧ್ಯಾಯ ಗ್ರಾಮ ಜಯೋತಿ ಯೋಜನೆ (ಡಿಡಿಯುಜಿಜೆವೈ) ಹಾಗೂ ಪ್ರಧಾನ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನೆ (ಸೌಭಾಗ್ಯ) ಯೋಜನೆಗಳಡಿ ಕರ್ನಾಟಕದಲ್ಲಿ ಐದು ವಿದ್ಯುತ್ ಸರಬರಾಜು ಕಂಪನಿಗಳಲ್ಲಿ (ಎಸ್ಕಾಂಗಳು), ಗುತ್ತಿಗೆಗಳ ಮಂಜೂರಾತಿ ಹಾಗೂ ನಿಧಿ ನಿರ್ವಹಣೆಯಡಿ ಉಂಟಾಗಿರುವ ಕೊರತೆಗಳು ಮತ್ತು ಲೋಪಗಳನ್ನು ಉಲ್ಲೇಖಿಸಿದೆ.
ರಾಜ್ಯದಲ್ಲಿ ವಿದ್ಯುತ್ ಸಂಪರ್ಕವಿಲ್ಲದ 39 ಗ್ರಾಮಗಳು, ಭಾಗಶಃ ವಿದ್ಯುತ್ ಸಂಪರ್ಕವಿರುವ ೧೩,೯೪೯ ಗ್ರಾಮಗಳು ಹಾಗೂ ೫,೭೦,೯೨೨ ಬಿಪಿಎಲ್ ಕುಟುಂಬಗಳಿಗೆ ಈ ಯೋಜನೆಗಳಡಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದರೂ ಸಹ, ಯೋಜನೆಯಡಿ ಉಂಟಾಗಿರುವ ಲೋಪಗಳು ಹಾಗೂ ಅದರಿಂದ ಆಗಿರುವ ಸಮಯ ಮತ್ತು ಹಣದ ನಷ್ಟದ ಕುರಿತು ನಿಗಾವಹಿಸುವಲ್ಲಿ ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಎಸ್ಕಾಂಗಳ ವೈಫಲ್ಯದ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಿಎಜಿ ಆಡಿಟ್ ಅಡಿ ಪರಿಗಣಿಸಲಾಗಿದ್ದಂತಹ ಐದು ಎಸ್ಕಾಂಗಳ ಪೈಕಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ), ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್), ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ), ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ), ಹಾಗೂ ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ)ಗಳು ಸೇರಿವೆ.
ಗುತ್ತಿಗೆ ಅನುಮೋದನೆ ಮಾಡುವಲ್ಲಿ ಉಂಟಾಗಿರುವ ಪ್ರಮುಖ ಲೋಪಗಳ ಕುರಿತು ಉಲ್ಲೇಖಿಸಿರುವ ವರದಿಯು, ಎಲ್ಲಾ ಐದು ಎಸ್ಕಾಂಗಳು, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕ ಕಾಯ್ದೆ (ಕೆಟಿಪಿಪಿ), ಕಲಂ ೪ಜಿ ಅಡಿ ವಿನಾಯಿತಿಯನ್ನು ಪಡೆದು, ಟೆಂಡರ್ ಗಳನ್ನು ಆಹ್ವಾನಿಸದೆಯೇ ಯೋಜನೆ ನಿರ್ವಹಣಾ ಏಜೆನ್ಸಿಯನ್ನು (ಪಿಎಂಎ) ನೇಮಕಾ ಮಾಡಿದೆ ಎಂದು ತಿಳಿಸಿದೆ. ಜೊತೆಗೆ, ಈ ಯೋಜನೆಯಡಿ ನೀಡಿದ್ದಂತಹ ಮಿತಿಗಿಂತಲೂ ಹೆಚ್ಚಿನ ದರದಲ್ಲಿ ಪಿಎಂಎ ನೇಮಕಾತಿಯ ಕುರಿತೂ ಉಲ್ಲೇಖಿಸಿದೆ.
ಗುತ್ತಿಗೆ ಮಂಜೂರಾತಿಗೆ ಸಂಬಂಧಪಟ್ಟಂತೆ ಬಿಡ್ಡರ್ ಅನ್ನು ಆಯ್ಕೆ ಮಾಡುವಲ್ಲಿ ಲೋಪಗಳಾಗಿವೆ ಹಾಗೂ ಮೌಲ್ಯಮಾಪನಕ್ಕಾಗಿ ಅಗತ್ಯವಿರುವ ಎಲ್ಲಾ ದಾಖಲಾತಿಗಳನ್ನು ಸಲ್ಲಿಸುವಲ್ಲಿ ವಿಫಲವಾಗಿದ್ದಂತಹ ಪ್ರತಿಕ್ರಿಯಸದ ಬಿಡ್ಡರ್ ಗಳನ್ನೂ ಸಹ ಪರಿಗಣಿಸಲಾಗಿರುವ ಅಂಶಗಳು ಬಹಿರಂಗಗೊಂಡಿವೆ. “ಬಿಡ್ ಷರತ್ತುಗಳ ಪ್ರಕಾರ ಅಗತ್ಯವಿದ್ದಂತಹ ಅಂಶಗಳನ್ನು ಪೂರೈಸದೇ ಇರುವಂತಹ ಬಿಡ್ಡರ್ ಗಳನ್ನು ಪರಿಗಣಿಸಿರುವ ಕುರಿತು ಯಾವುದೇ ಸ್ಪಷ್ಟನೆಗಳಿಲ್ಲ. ಮೇಲಾಗಿ, ಸ್ಪಂದಿಸದ ಬಿಡ್ಡರುಗಳಿಗೆ ಗುತ್ತಿಗೆ ನೀಡಿರುವುದು ಕೆಟಿಪಿಪಿ ನಿಯಮಗಳ ಉಲ್ಲಂಘನೆಯಾಗಿದೆ,” ಎಂದು ಆಡಿಟ್ ವರದಿಯಲ್ಲಿ ತಿಳಿಸಲಾಗಿದೆ.
ವರದಿಯ ಪ್ರಕಾರ, ಎಸ್ಕಾಂಗಳು ನಿಗಧಿತ ಅವಧಿಗಿಂತಲೂ ೧೨ ರಿಂದ ೩೭ ತಿಂಗಳು ಹೆಚ್ಚು ಸಮಯ ತೆಗೆದುಕೊಂಡಿದ್ದು, ಈ ಯೋಜನೆಯ ಫಲಾನುಭವಿಗಳನ್ನು ಮುಂದೂಡಿರುವುದು ಕಂಡು ಬಂದಿದೆ. ಇದಕ್ಕೆ ನೀಡಿರುವ ಪ್ರಮುಖ ಕಾರಣವೇನೆಂದರೆ ಗುತ್ತಿಗೆ ಮಂಜೂರಾತಿಯಲ್ಲಿ ವಿಳಂಬ ಹಾಗೂ ಕಾಮಗಾರಿ ಆರಂಭಿಸುವಲ್ಲಿ ಆಗಿರುವ ವಿಳಂಬ ಎಂದು ನೀಡಲಾಗಿದೆ. ಕೆಲವು ಪ್ರಕರಣಗಳಲ್ಲಿ, ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅರಣ್ಯ ಮತ್ತು ರೈಲ್ವೆ ಪ್ರಾಧಿಕಾರಗಳಿಂದ ಶಾಸನಬದ್ಧ ತೀರುವಳಿಗಳನ್ನು ಪಡೆಯುವಲ್ಲಿ ವಿಳಂಬವಾಗಿರುವುದನ್ನೂ ಕಾರಣಗಳೆಂದು ನೀಡಲಾಗಿದೆ.
ಜೊತೆಗೆ, ಎಸ್ಕಾಂಗಳು ವಿವರವಾದ ಯೋಜನಾ ವರದಿಗಳನ್ನು (ಡಿಪಿಆರ್) ತಯಾರಿಸುವಾಗ ಕ್ಷೇತ್ರ ಸಮೀಕ್ಷೆಗಳನ್ನು ನಡೆಸಿಲ್ಲ. ಇದರಿಂದಾಗಿ ಅಗತ್ಯವಿರುವ ಸಾಮಗ್ರಿಗಳ ಪ್ರಮಾಣದಲ್ಲಿ ವ್ಯತ್ಯಾಸವಾಗಿದ್ದು, ವೆಚ್ಚಗಳು ಅನೇಕ ಬಾರಿ ಮರುಹಂಚಿಕೆಯಾಗಿರುವುದು ಬಹಿರಂಗಗೊಂಡಿದೆ.
ಮಂಜೂರಾಗಿರುವಂತಹ ಒಟ್ಟು ವೆಚ್ಚಕ್ಕಿಂತ ರೂ.೨೨೫.೪೯ ಕೋಟಿ ಹೆಚ್ಚುವರಿ ಹಣಕಾಸಿನ ಹೊರೆ ಉಂಟಾಗಿದ್ದು, ಡಿಡಿಯುಜಿಜೆವೈ ಅಡಿ ಯಾವುದೇ ಅರ್ಹ ಅನುದಾನ ಇಲ್ಲದಿರುವ ಅಂಶವನ್ನೂ ದಾಖಲಿಸಲಾಗಿದೆ. ರಾಜ್ಯ ಸರ್ಕಾರ ಹಾಗೂ ಎಸ್ಕಾಂಗಳು ಯೋಜನೆಯ ಪ್ರಗತಿಯನ್ನು ಕಾಲಕಾಲಕ್ಕೆ ನಿಗಾವಣೆ ಮಾಡುವಲ್ಲಿ ವಿಫಲವಾಗಿರುವ ವಿಷಯವನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಡಿಡಿಯುಜಿಜೆವೈ ಹಾಗೂ ಸೌಭಾಗ್ಯ ಎರಡೂ ಯೋಜನೆಗಳು ಕೇಂದ್ರ ಸರ್ಕಾರದ ಉಪಕ್ರಮಗಳಾಗಿದ್ದು, ದೇಶದ ಪ್ರತಿಯೊಂದು ಗ್ರಾಮದ, ವಿದ್ಯುತ್ ಸಂಪರ್ಕ ಇಲ್ಲದಿರುವಂತಹ ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಉದ್ದೇಶವನ್ನು ಹೊಂದಿದೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: CAG- report – lapses – implementation – Rural -Electrification -Scheme.