ಹುಣಸೂರು,ನ,20,2019(www.justkannada.in): ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ ತೀವ್ರ ಕುತೂಹಲ ಮೂಡಿಸಿರುವ ಹುಣಸೂರು ಕ್ಷೇತ್ರದಲ್ಲಿ ಪ್ರಚಾರದ ಭರಾಟೆ ಜೋರಾಗಿದ್ದು ಅಲ್ಲಿನ ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ವಿರುದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಿಂದ ಸಿದ್ದರಾಮಯ್ಯ ಹೊರಹಾಕಿದ್ದಕ್ಕೆ ಬರಬೇಕಾಯಿತೆಂದು ಹೆಚ್.ವಿಶ್ವನಾಥ್ ಅವರೇ ಹೇಳಿದ್ದಾರೆ. ಅಂತಹ ಸ್ಥಿತಿಯಲ್ಲಿ ಅವರಿಗೆ ಅಶ್ರಯ ಕೊಟ್ಟಿದ್ದು ಜೆಡಿಎಸ್ ಪಕ್ಷ. ಅಂತಹ ಪಕ್ಷಕ್ಕೆ ದ್ರೋಹ ಮಾಡಿದ್ದು ಸರೀನಾ..? ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದರು.
ಹುಣಸೂರು ಬೈ ಎಲೆಕ್ಷನ್ ಅಖಾಡಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಎಂಟ್ರಿ ಪಡೆದಿದ್ದು, ಮಾಜಿ ಶಾಸಕ ದಿ. ಚಿಕ್ಕಮಾದು ಹುಟ್ಟೂರು ರಾಮೇನಹಳ್ಳಿಯಲ್ಲಿ ಪ್ರಚಾರಕ್ಕೆ ಚಾಲನೆ ನೀಡಿದರು. ದಿ. ಚಿಕ್ಕಮಾದು ಅವರ ಸಮಾಧಿಗೆ ಹೆಚ್.ಡಿ ಕುಮಾರಸ್ವಾಮಿ ಪುಷ್ಪಾರ್ಚನೆ ಮಾಡಿದರು.
ಪ್ರಚಾರದಲ್ಲಿ ತೊಡಗಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಉಪ ಚುನಾವಣೆಯಲ್ಲಿ ಅನರ್ಹ ಶಾಸಕರನ್ನ ಸೋಲಿಸುವುದೇ ನಮ್ಮ ಗುರಿ. ಈ ಚುನಾವಣೆಯಲ್ಲಿ ಜೆಡಿಎಸ್ ಶಕ್ತಿ ಏನೆಂಬುದನ್ನು ತೋರಿಸುತ್ತೇವೆ. ನಾವು ನಮ್ಮದೇ ಆದ ಕಾರ್ಯ ತಂತ್ರ ರೂಪಸಿದ್ದೇವೆ. ಯಾರನ್ನೋ ಸೋಲಿಸುವುದು, ಗೆಲ್ಲಿಸುವುದು ನಮ್ಮ ಉದ್ದೇಶವಲ್ಲ. ಉಪ ಚುನಾವಣೆ ಫಲಿತಾಂಶದ ನಂತರ ಈ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು.
ವಿಶ್ವನಾಥ್ ವಯಸ್ಸು, ಅನುಭವಕ್ಕೆ ತಕ್ಕಂತೆ ಮಾತನಾಡಬೇಕು. ಸಮ್ಮಿಶ್ರ ಸರ್ಕಾರದಲ್ಲಿ ರಾಕ್ಷಸಿ ಆಡಳಿತ ಇತ್ತು ಎಂಬ ಪದ ಬಳಕೆ ಸರಿಯಲ್ಲ. ರೈತರ ಸಾಲಮನ್ನಾ ರಾಕ್ಷಸಿ ಕೃತ್ಯವೇ ಎಂದು ಹೆಚ್.ವಿಶ್ವನಾಥ್ ವಿರುದ್ದ ಹರಿಹಾಯ್ದರು. ಅಶ್ರಯ ಕೊಟ್ಟ ಜೆಡಿಎಸ್ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ. ಅವರಿಗೆ ಕ್ಷೇತ್ರದ ಜನ ಇದಕ್ಕೆ ತಕ್ಕ ಪಾಠ ಕಲಿಸ್ತಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಸರ್ಕಾರದಲ್ಲಿ ಪಿಎಫ್ಐ ಸಂಘಟನೆ ಮೇಲೆ ಹಾಕಿದ್ದ ಕೇಸ್ ಗಳನ್ನು ವಾಪಸ್ ಪಡೆದ ಬಗ್ಗೆ ಸಿಎಂ, ಮಾಜಿ ಸಿಎಂ ಅರೋಪ ಪ್ರತ್ಯಾರೋಪ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ಪ್ರಕರಣ ಇನ್ನು ತನಿಖಾ ಹಂತದಲ್ಲಿದೆ. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಲು ಅವಕಾಶ ಕೊಡಬೇಕು. ತನಿಖೆ ಹಂತದಲ್ಲಿ ಜವಾಬ್ದಾರಿ ಸ್ಥಾನದಲ್ಲಿರೋ ಇಬ್ಬರೂ ಹೀಗೆ ಹೇಳಿಕೆ ಕೊಡೋದು ಸರಿಯಲ್ಲ. ಇದು ಪೊಲೀಸರ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಬೇಕು. ಪೊಲೀಸರು ಪೂರ್ಣ ತನಿಖೆ ನಡೆಸಿ ಆರೋಪಿಗಳನ್ನು ಹೊರತರುವ ತನಕ ಹೇಳಿಕೆ ನಿಲ್ಲಿಸಬೇಕು ಎಂದು ಸಲಹೆ ನೀಡಿದರು.
Key words: campaign –hunsur-by-election –JDS-HD Kumaraswamy –against- H.Vishwanath