ಬೆಂಗಳೂರು:ಜುಲೈ-30: ವಾರದ ಹಿಂದಷ್ಟೇ ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರನ್ನು ನೇಮಕ ಮಾಡಿದ್ದ ರಾಜ್ಯ ಸರ್ಕಾರ, ಇದೀಗ ಆ ಆದೇಶಕ್ಕೆ ತಡೆಹಿಡಿದಿದೆ. ಎಚ್.ಡಿ.ಕುಮಾರ ಸ್ವಾಮಿ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವ ಮೂರು ದಿನ ಮೊದಲು ರಾಜ್ಯದ 13 ವಿವಿಗಳಿಗೆ ಪ್ರತಿ ವಿವಿಗೆ ಆರು ಸದಸ್ಯರನ್ನು ನಾಮನಿರ್ದೇಶನ ಮಾಡಿ ತಕ್ಷಣ ಜಾರಿಗೆ ಬರುವಂತೆ ಆದೇಶಿಸಿತ್ತು, ಇವರ ಅಧಿಕಾರವಧಿ ಮುಂದಿನ ಮೂರು ವರ್ಷ ಅಥವಾ ಹೊಸ ಆದೇಶ ಹೊರಡಿಸುವವರೆಗೆ ಎಂದು ಸ್ಪಷ್ಟವಾಗಿ ಸೂಚಿಸಿತ್ತು. ಎಚ್ಡಿಕೆ ಸಿಎಂ ಸ್ಥಾನ ತೊರೆದು ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದ ಮೇಲೆ ಈ ಹಿಂದಿನ ಸರ್ಕಾರ ಜುಲೈನಲ್ಲಿ ಹೊರಡಿಸಿರುವ ಪ್ರಸ್ತಾವನೆಗಳು, ಇತರ ಆದೇಶ ಗಳನ್ನು ತಡೆಹಿಡಿ ಯುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿಗಳು ಜು.26ರಂದು ಅದೇಶ ಹೊರಡಿಸುವ ಮೂಲಕ ಸಿಂಡಿಕೇಟ್
ಸದಸ್ಯರ ನೇಮಕವನ್ನು ತಡೆ ಹಿಡಿದಿದ್ದಾರೆ. ಸರ್ಕಾರಿಂದ ಮುಂದಿನ ಆದೇಶ ಸ್ವೀಕೃತ ವಾಗುವವರೆಗೆ ಯಾವುದೇ ಕ್ರಮವಹಿಸದಂತೆ ಹಾಗೂ ಈಗಾಗಲೇ ಕ್ರಮವಹಿಸಿದ್ದಲ್ಲಿ ತಕ್ಷಣದಿಂದ ತಡೆಹಿಡಿಯುವಂತೆ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ 2000 ಅನ್ವಯ ರಾಜ್ಯ ವ್ಯಾಪ್ತಿಯಲ್ಲಿರುವ ಎಲ್ಲ ವಿವಿಗಳಿಗೆ ಸೂಚನೆ ನೀಡಿದ್ದಾರೆ.
ಒಳ ಜಗಳ: 2018 ಜುಲೈನಲ್ಲಿ ಜಿ.ಟಿ.ದೇವೇಗೌಡ ಉನ್ನತ ಶಿಕ್ಷಣ ಸಚಿವ ರಾದಾಗ, ಆ ಹಿಂದಿನ ಸರ್ಕಾರದಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ನೇಮಕ
ಮಾಡಿದ್ದ ಸಿಂಡಿಕೇಟ್ ಸದಸ್ಯರನ್ನು ಏಕಾಏಕಿ ತೆಗೆದುಹಾಕಿದ್ದರು. ಹೀಗಾಗಿ ಜಿಟಿಡಿ ಮತ್ತು ಸಿದ್ದರಾಮಯ್ಯ ನಡುವೆ ಒಳ ಜಗಳ ಆರಂಭವಾಗಿತ್ತು. ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದು ಸಿಂಡಿಕೇಟ್ ಸದಸ್ಯರನ್ನು ತೆಗೆಯದಂತೆ ಮನವಿ ಮಾಡಿದ್ದರು. ಇದಕ್ಕೂ ಜಿಟಿಡಿ ಯಾವುದೇ ಬೆಲೆ ನೀಡಿರಲಿಲ್ಲ.
ದುಡ್ಡು ಕೊಟ್ಟವರು ಕೋಡಂಗಿ
ಕಳೆದೊಂದು ವರ್ಷದಿಂದ ಖಾಲಿ ಇದ್ದ ಈ ಸಿಂಡಿಕೇಟ್ ಸದಸ್ಯರ ನೇಮಕಕ್ಕೆ ಸರ್ಕಾರ ಅರ್ಜಿ ಆಹ್ವಾನಿಸಿತ್ತು. ಬಹುತೇಕರು ಸದಸ್ಯತ್ವದ ಆಸೆಗಾಗಿ 10ರಿಂದ 15 ಲಕ್ಷ ರೂ. ಪಾವತಿಸಿದ್ದರು ಎಂದು ತಿಳಿದು ಬಂದಿದೆ. ಸದಸ್ಯತ್ವ ಸಿಕ್ಕವರು ಕೊಟ್ಟ ಹಣವನ್ನು ವಿವಿಧ ಮೂಲಗಳ ಮೂಲಕ ಕ್ರೊಡೀಕ ರಿಸುವ ಆತುರದಲ್ಲಿದ್ದರು. ಏಕಾಏಕಿ, ಸರ್ಕಾರ ಸದಸ್ಯತ್ವ ಹಿಂಪಡೆಯುವ ಅದೇಶ ಹೊರಡಿಸಿರುವುದರಿಂದ ಸದಸ್ಯರಿಗೆ ಆರ್ಥಿಕ ನಷ್ಟ ಉಂಟಾಗಲಿದೆ. ಹಣ ನೀಡಿದವರ ಬಳಿ ಮತ್ತೆ ವಾಪಸ್ ನೀಡುವಂತೆ ಕೇಳುವುದಕ್ಕೂ ಸಾಧ್ಯವಾಗದೆ ಇರುವುದರಿಂದ ಸರ್ಕಾರ ಬದಲಾವಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಸ ಸದಸ್ಯರ ನೇಮಕಕ್ಕೆ ರಾಜ್ಯ ಸರ್ಕಾರ ಒಂದು ವರ್ಷ ತೆಗೆದುಕೊಂಡಿದೆ. ಬಿಜೆಪಿ ಸರ್ಕಾರ ಎಷ್ಟು ತಿಂಗಳಲ್ಲಿ ಹೊಸವರನ್ನು ನೇಮಕ ಮಾಡಲಿದೆ ಎಂಬುದನ್ನು ಕಾದುನೋಡಬೇಕಿದೆ.
ಕೃಪೆ:ವಿಜಯವಾಣಿ