ಬೆಂಗಳೂರು,ಸೆಪ್ಟಂಬರ್,9,2020(www.justkannada.in): ರಾಜ್ಯದಲ್ಲಿ ನಕಲಿ ಅಂಕಪಟ್ಟಿಗಳ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯುವುದನ್ನು ತಡೆಯಲು ಆನ್ ಲೈನ್ ಮೂಲಕ ಅಂಕಪಟ್ಟಿಗಳನ್ನು ವಿತರಿಸುವ ಮತ್ತು ದೃಢೀಕರಿಸಲು ಸರ್ಕಾರ ಮುಂದಾಗಿದೆ. ಆನ್ ಲೈನ್ ಮೂಲಕ ಅಂಕಪಟ್ಟಿಗಳನ್ನು ವಿತರಿಸುವ ಮತ್ತು ದೃಢಿಕರಿಸಲು ತಗಲುವ ವೆಚ್ಚದ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಈ ಕುರಿತು ವಿಶೇಷ ರಾಜ್ಯ ಪತ್ರ ಹೊರಡಿಸಲಾಗಿದ್ದು, ರಾಜ್ಯದ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ಮಾಡುವ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಸಿಂಧುತ್ವ ಹಾಗೂ ಶೈಕ್ಷಣಿಕ ಪ್ರಮಾಣ ಪತ್ರಗಳ ನೈಜತೆಯನ್ನು ಅವುಗಳನ್ನು ವಿತರಿಸಿದ ವಿಶ್ವ ವಿದ್ಯಾನಿಲಯಗಳು ಮತ್ತು ಶೈಕ್ಷಣಿಕ ಮಂಡಳಿಗಳೊಂದಿಗೆ ಪರಿಶೀಲನೆ ನಡೆಸಬೇಕು ಎಂದು ಸೂಚಿಸಲಾಗಿದೆ
ಅಭ್ಯರ್ಥಿಗಳು ಸಲ್ಲಿಸುವ ಅಂಕಪಟ್ಟಿ, ಶೈಕ್ಷಣಿಕ ಪ್ರಮಾಣ ಪತ್ರಗಳ ನೈಜತೆಯನ್ನು ಅವುಗಳನ್ನು ವಿತರಿಸಿದ ವಿಶ್ವ ವಿದ್ಯಾನಿಲಯಗಳು ಶೈಕ್ಷಣಿಕ ಪರೀಕ್ಷಾ ಮಂಡಳಿಗಳೊಂದಿಗೆ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ತಗಲುವ ವೆಚ್ಚವನ್ನು ಆಯ್ಕೆಯಾದ ಅಭ್ಯರ್ಥಿಗಳಿಂದಲೇ ಭರಿಸುವಂತೆ ಸೂಚಿಸಲಾಗಿದೆ. ಒಂದು ವೇಳೆ ಎಲ್ಲಾ ಅಭ್ಯರ್ಥಿಗಳ ಅಂಕಪಟ್ಟಿ, ಶೈಕ್ಷಣಿಕ ಪ್ರಮಾಣ ಪತ್ರಗಳ ನೈಜತೆಯನ್ನು ಪರಿಶೀಲಿಸಬೇಕಾಗುತ್ತದೆ ಎಂಬ ಸಂದರ್ಭದಲ್ಲಿ ನೇಮಕಾತಿ, ಆಯ್ಕೆ ಪ್ರಾಧಿಕಾರಗಳು ನೇಮಕಾತಿಗಾಗಿ ಅಧಿಸೂಚನೆ ಹೊರಡಿಸುವ ಮುನ್ನವೇ ಅದಕ್ಕಾಗಿ ತಗಲುವ ಶುಲ್ಕವನ್ನು ಲೆಕ್ಕ ಹಾಕಿ ಅರ್ಜಿ ಶುಲ್ಕದೊಂದಿಗೆ ಸೇರಿಸಿಕೊಂಡು ಜಾಹೀರಾತು ನೀಡುವಂತೆ ಸರ್ಕಾರ ಸೂಚಿಸಿದೆ.
ಇದು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಅವರ ಆಡಳಿತ ವ್ಯಾಪ್ತಿಗೆ ಒಳಪಡುವ ಸ್ವಯತ್ತ ಸಂಸ್ಥೆಗಳು/ ವಿಶ್ವ ವಿದ್ಯಾನಿಲಯಗಳು , ಸಾರ್ವಜನಿಕ ಉದ್ದಿಮೆಗಳು, ಆಯೋಗ, ನಿಗಮ ಮಂಡಳಿಗಳು, ಸ್ಥಳೀಯ ಸಂಸ್ಥೆಗಳು ಸರ್ಕಾರದಿಂದ ಅನುದಾನ ಪಡೆಯುವ ಸಂಸ್ಥೆಗಳಿಗೆ ಈ ಸೂಚನೆ ಪಾಲಿಸಬೇಕು ಎಂದು ತಿಳಿಸಿದೆ.
Key words: Candidates -issuing Distribution – Authentication – Online- Cost– government-job