ಮೈಸೂರು, ಅಕ್ಟೋಬರ್, 3,2022(www.justkannada.in): ಮೈಸೂರು ಬಂಡಿಹಾಳದ ಎಪಿಎಂಸಿ ಆವರಣದಲ್ಲಿ ಸಹಕಾರ ಇಲಾಖೆಯಿಂದ ನೂತನವಾಗಿ ಆರಂಭಿಸಿರುವ ಕ್ಯಾಂಟೀನ್ ಅನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಉದ್ಘಾಟಿಸಿದರು.
ಶ್ರೀ ಅನ್ನಪೂರ್ಣ ಕ್ಯಾಂಟೀನ್ ನ ವೀಕ್ಷಣೆ ಮಾಡಿದ ಬಳಿಕ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಕ್ಯಾಂಟೀನ್ ನಲ್ಲಿ ದಸರಾವರೆಗೆ ಉಚಿತ ಊಟ ನೀಡಲಾಗುತ್ತದೆ. ನಂತರದ ದಿನಗಳಲ್ಲಿ ಹತ್ತು ರೂಪಾಯಿಗೆ ಊಟ ನೀಡಲಾಗುತ್ತದೆ ಎಂದರು.
ದಾನಿಗಳ ನೆರವಿನಿಂದ ರೈತ ಬಾಂಧವರಿಗೆ ರುಚಿ ಮತ್ತು ಶುಚಿಯಾದ ಊಟ ನೀಡುವ ಕೆಲಸವನ್ನು ವರ್ತಕರು ಮಾಡುತ್ತಿದ್ದಾರೆ. ಸಹಕಾರ ಕ್ಷೇತ್ರದಿಂದ ಈ ಕ್ಯಾಂಟೀನ್ ಆರಂಭಿಸಲಾಗಿದೆ. ದಾನಿಗಳು ಮುಂದೆ ಬಂದರೆ ರಾಜ್ಯದ ವಿವಿಧೆಡೆಯ ಎಪಿಎಂಸಿಗಳಲ್ಲಿ ಕೂಡ ಕ್ಯಾಂಟೀನ್ ತೆರೆಯುವ ಚಿಂತನೆ ಮಾಡಲಾಗುವುದು ಎಂದರು.
ಇದೇ ವೇಳೆ ದಸರಾ ಜಂಬೂಸವಾರಿಯಲ್ಲಿ ಸಾಗಲಿರುವ ಸ್ತಬ್ಧಚಿತ್ರಗಳನ್ನು ವೀಕ್ಷಿಸಿದರು. ಪ್ರತಿ ಜಿಲ್ಲೆಯಿಂದ ಸ್ತಬ್ಧಚಿತ್ರಗಳು ಆಗಮಿಸಿವೆ. ಆಯಾ ಜಿಲ್ಲೆಯ ಕಲೆ, ಸಂಸ್ಕೃತಿ ಬಿಂಬಿಸುವ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ. ಜಂಬೂಸವಾರಿ ತಯಾರಿ ಅಂತಿಮ ಹಂತದಲ್ಲಿದೆ. ಯಾವುದೇ ಕೊರತೆ ಇಲ್ಲ. ಕಲಾತಂಡಗಳ ಆಗಮನವಾಗಿದೆ ಎಂದರು.
ಈ ವೇಳೆ ಶಾಸಕರಾದ ನಿರಂಜನ್ ಕುಮಾರ್, ಜಿ.ಟಿ.ದೇವೇಗೌಡ, ಮೂಡಾ ಮಾಜಿ ಅಧ್ಯಕ್ಷರಾದ ರಾಜೀವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Key words: canteen Inauguration –dasara-tablo-Minister- ST Somashekhar