ಬೆಂಗಳೂರು,ಏಪ್ರಿಲ್,6,2023(www.justkannada.in): ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಇದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಏಪ್ರಿಲ್ 13ರವರೆಗೆ ವಿಸ್ತರಿಸಿ ಆದೇಶಿಸಿದೆ.
ಸಿಬಿಐ ತನಿಖೆಗೆ ಅನುಮತಿ ಹಾಗೂ ಸಿಬಿಐ ತನಿಖೆಯನ್ನು ಪ್ರಶ್ನಿಸಿ ಡಿಕೆ ಶಿವಕುಮಾರ್ ಹೈಕೋರ್ಟ್ಗೆ ಎರಡು ಅರ್ಜಿಗಳನ್ನು ಸಲ್ಲಿಸಿದ್ದರು. ಎರಡೂ ಅರ್ಜಿಗಳ ವಿಚಾರಣೆಯನ್ನ ಹೈಕೋರ್ಟ್ ಏಪ್ರಿಲ್ 13ಕ್ಕೆ ಮುಂದೂಡಿದೆ. ತನಿಖೆಗೆ ಇದ್ದ ತಡೆಯಾಜ್ಞೆಯನ್ನೂ ಏಪ್ರಿಲ್ 13ರವರೆಗೆ ವಿಸ್ತರಿಸಿದೆ.
ಸಿಬಿಐ ತನಿಖೆಗೆ ಅನುಮತಿ ನೀಡಿದ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಡಿ.ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಫೆ.24ರವರೆಗೂ ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿ ಹೈಕೋರ್ಟ್ ಆದೇಶ ಹೊರಡಿಸಿತ್ತು. ತನಿಖಾಧಿಕಾರಿ ತನಿಖೆಯ ಪ್ರಗತಿ ವರದಿ ಹಾಜರುಪಡಿಸಲಿ. ಫೆಬ್ರವರಿ 24ರ ಒಳಗೆ ತನಿಖೆ ವರದಿ ಸಲ್ಲಿಸಲಿ. ಅಲ್ಲಿಯವರೆಗೆ ತನಿಖೆ ಮುಂದುವರಿಸದಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಬಳಿಕ ನಡೆದ ವಿಚಾರಣೆ ವೇಳೆ ಕೋರ್ಟ್, ತಡೆಯಾಜ್ಞೆಯನ್ನು ಮತ್ತೊಮ್ಮೆ ವಿಸ್ತರಿಸಿತ್ತು.
ಇದಾದ ಬಳಿಕ ಮಾರ್ಚ್ 31ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿತ್ತು. ಮಾರ್ಚ್ 31ರಂದು ನಡೆದ ವಿಚಾರಣೆ ವೇಳೆ ಸಿಬಿಐ ತನಿಖೆಗೆ ಅನುಮತಿ ನೀಡಿದ ಆದೇಶವನ್ನು ಪ್ರಶ್ನಿಸಿರುವ ಶಿವಕುಮಾರ್ ಅವರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಿಬಿಐ ಪರ ವಕೀಲರು ಮನವಿ ಮಾಡಿದ್ದರು. ಆರಂಭದಲ್ಲಿ ಅಸಮಾಧಾನ ಹೊರಹಾಕಿದ್ದ ಕೋರ್ಟ್, ನಂತರ ಏಪ್ರಿಲ್ 6ರ ವರೆಗೆ ಆಕ್ಷೇಪಣೆ ಸಲ್ಲಿಸಲು ಕಾಲವಕಾಶ ನೀಡಿ ಆದೇಶಿಸಿತ್ತು.
Key words: case –against- DK Shivakumar- CBI -probe -extended –High court