ಮೈಸೂರು,ಆಗಸ್ಟ್,19,2022(www.justkannada.in): ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕರ್ತವ್ಯ ಲೋಪ, ಹಣ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗೆ ಶಾಸಕ ಸಾ ರಾ ಮಹೇಶ್ 1200 ಪುಟಗಳಷ್ಟು ದಾಖಲೆಗಳನ್ನು ಸಲ್ಲಿಸಿದ್ದಾರೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧದ ಪ್ರಕರಣ ಕುರಿತ ತನಿಖೆ ಇದೀಗ ಆರಂಭವಾಗಿದ್ದು, ವಸತಿ ಇಲಾಖೆ ಕಾರ್ಯದರ್ಶಿ ಹಾಗೂ ಅಬಕಾರಿ ಇಲಾಖೆಯ ಆಯುಕ್ತ ಡಾ ಜೆ . ರವಿಶಂಕರ್ ನೇತೃತ್ವದಲ್ಲಿ ಮೈಸೂರು ಡಿಸಿ ಕಚೇರಿಯ ಸಭಾಂಗಣದಲ್ಲಿ ತನಿಖೆ ನಡೆಯುತ್ತಿದೆ. ಎಡಿಸಿ ಮಂಜುನಾಥ್ ಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದಾರೆ.
ಈ ಹಿಂದೆ ಪ್ರಕರಣಗಳ ಕುರಿತು ಶಾಸಕ ಸಾ ರಾ ಮಹೇಶ್ ಗೆ ಡಾ ಜೆ ರವಿಶಂಕರ್ ನೋಟಿಸ್ ನೀಡಿದ್ದರು. ಇದೀಗ ತನಿಖಾಧಿಕಾರಿ, ರವಿಶಂಕರ್ ಅವರಿಗೆ ಶಾಸಕ ಸಾ ರಾ ಮಹೇಶ್ 1200 ಪುಟಗಳಷ್ಟು ದಾಖಲೆಗಳನ್ನು ಸಲ್ಲಿಸಿದರು.
ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಸಾ ರಾ ಮಹೇಶ್, ಇನ್ನು 30 ದಿನದಲ್ಲಿ ವಿಚಾರಣೆ ಪ್ರಕ್ರಿಯೆ ಮುಗಿಯುತ್ತದೆ. ಈ ಪ್ರಕರಣದಲ್ಲಿ ನಾನು ಮಾಡಿದ್ದ ಎಲ್ಲಾ ಆರೋಪಕ್ಕೂ ದಾಖಲೆಗಳನ್ನು ನೀಡಿದ್ದೇನೆ. ಐಎಎಸ್ ಅಧಿಕಾರಿಗೆ ಈ ಪ್ರಕರಣದಿಂದ ಅಮಾನತು ಮಾಡಬೇಕಾಗಿದೆ. ನನಗೆ ತನಿಖೆಯ ಮೇಲೆ ವಿಶ್ವಾಸವಿದೆ. ನಾನು ಯಾವ ದುರುದ್ದೇಶದಿಂದಲೂ ಈ ಆರೋಪಗಳನ್ನು ಮಾಡಿಲ್ಲ. ಐಎಎಸ್ ಅಧಿಕಾರಿ ನನ್ನ ಮೇಲೆ ದುರುದ್ದೇಶದ ಭೂ ಅಕ್ರಮ ಆರೋಪ ಮಾಡಿದ್ದರು. ಈ ತನಿಖೆಯ ವರದಿ ಬಂದ ಮೇಲೆ ಜನರಿಗೆ ಆ ಅಧಿಕಾರಿಯ ನಿಜ ಬಣ್ಣ ಗೊತ್ತಾಗಲಿದೆ. ಆ ಐಎಎಸ್ ಅಧಿಕಾರಿಯ ಬಣ್ಣ ಬಯಲು ಮಾಡುವುದೇ ನನ್ನ ಉದ್ದೇಶವಾಗಿದೆ. ಐಎಎಸ್ ಅಧಿಕಾರಿಯ ಮೇಲೆ ಮಾಡಿರುವ ಆರೋಪ ಸಾಬೀತಾಗುವ ವಿಶ್ವಾಸವಿದೆ. ಆಗಲೂ ಐಎಎಸ್ ಅಧಿಕಾರಿ ವಿರುದ್ದ ಸರ್ಕಾರ ಕ್ರಮ ಕೈಗೊಳ್ಳದಿದ್ದರೇ ಸದನದ ಒಳಗೆ-ಹೊರಗೂ ಮಾತ್ರವಲ್ಲದೇ ನ್ಯಾಯಾಲಯದಲ್ಲೂ ಹೋರಾಟ ನಡೆಸುತ್ತೇನೆ ಎಂದು ಶಾಸಕ ಸಾ ರಾ ಮಹೇಶ್ ಹೇಳಿದರು.
Key words: Case- against -IAS officer- Rohini Sindhuri-MLA-Sara Mahesh