“ ಕಾವೇರಿ ಆನ್‌ ವ್ಹೀಲ್ಸ್‌ “:  ಆಪ್‌ ಮೂಲಕ ಬುಕ್ಕಿಂಗ್ ಮಾಡಿ, ಪ್ರಾಮಾಣೀಕೃತ ಶುದ್ದ ಕುಡಿಯುವ ನೀರು ಪಡೆಯಿರಿ.

“Cauvery on Wheels”: Book through the app and get certified clean drinking water.

ಬೆಂಗಳೂರು ಏಪ್ರಿಲ್‌ 03 : ಆನ್‌ಲೈನ್‌ ಮೂಲಕ ಬುಕ್ಕಿಂಗ್‌ ಮಾಡಿದ ಜನರ ಮನೆಬಾಗಿಲಿಗೆ  ಬಿಐಎಸ್‌ ಪ್ರಾಮಾಣೀಕೃತ ಶುದ್ದ ಕುಡಿಯುವ ನೀರನ್ನು ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವ ವಿನೂತನ ಯೋಜನೆ “ ಸಂಚಾರಿ ಕಾವೇರಿ – ಕಾವೇರಿ ಆನ್‌ ವ್ಹೀಲ್ಸ್‌ “  ಯೋಜನೆ ಅನುಷ್ಠಾನಕ್ಕೆ ಬೆಂಗಳೂರು ಜಲಮಂಡಳಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ.

ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ ರಾಮ್‌ ಪ್ರಸಾತ್‌ ಮನೋಹರ್‌  ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದು ವಿವರ ಹೀಗಿದೆ..

ಬೇಸಿಗೆಯಲ್ಲಿ ಅಂತರ್ಜಲಮಟ್ಟ ಕಡಿಮೆಯಾದಾಗ ನೀರಿನ ಕೊರತೆ ಹೆಚ್ಚಾಗುತ್ತದೆ. ಈ ಸಂಧರ್ಭದಲ್ಲಿ ಖಾಸಗಿ ಟ್ಯಾಂಕರ್‌ಗಳು ದರ ಹೆಚ್ಚಿಸುವುದರಿಂದ ಜನಸಾಮಾನ್ಯರಿಗೆ ಇನ್ನಷ್ಟು ತೊಂದರೆಯಾಗುತ್ತದೆ.  ಈ ತೊಂದರೆಯಿಂದ ತಪ್ಪಿಸುವ ನಿಟ್ಟಿನಲ್ಲಿ ಹೊಸ ಯೋಜನೆ ರೂಪಿಸುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ಬಿಐಎಸ್‌ ಪ್ರಾಮಾಣೀಕೃತ ಶುದ್ದ ಕುಡಿಯುವ ನೀರನ್ನು ಜನರ ಮನೆಬಾಗಿಲಿಗೆ ತಲುಪಿಸುವ ವಿನೂತನ ಯೋಜನೆಯಾಗಿರುವ “ಸಂಚಾರಿ ಕಾವೇರಿ – ಕಾವೇರಿ ಆನ್‌ ವ್ಹೀಲ್ಸ್‌” ಅನ್ನು ಅನುಷ್ಠಾನಗೊಳಿಸಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಆಪ್‌ ಹಾಗೂ ವೆಬ್‌ಸೈಟ್‌ ರೂಪಿಸಲಾಗಿದೆ.

ಸಂಚಾರಿ ಕಾವೇರಿ – ಕಾವೇರಿ ಆನ್‌ ವ್ಹೀಲ್ಸ್‌ ಯೋಜನೆಯ ಪ್ರಮುಖ ಅಂಶಗಳು :

⦁ಟ್ಯಾಂಕರ್‌ ಟ್ರಾಕಿಂಗ್‌, ಓಟಿಪಿ ಪ್ರೊಟೆಕ್ಟೆಡ್‌ ಸೇವೆ

⦁ಬೆಂಗಳೂರು ನಾಗರೀಕರು ಆನ್‌ ಡಿಮ್ಯಾಂಡ್‌ ಟ್ಯಾಂಕರ್‌ ನೀರು ಬುಕ್ಕಿಂಗ್‌ ಮಾಡಲು ಅವಕಾಶ

⦁ಬಿಐಎಸ್‌ ಪ್ರಮಾಣಿತ ಶುದ್ದ ಹಾಗೂ ಸ್ವಚ್ಚ ಕುಡಿಯುವ ನೀರು ಲಭ್ಯ

⦁ಸಕಾಲದಲ್ಲಿ ಸರಿಯಾದ ಪ್ರಮಾಣದಲ್ಲಿ ನೀರು ನೀಡುವ ವ್ಯವಸ್ಥೆ

⦁ದರ ಏರಿಕೆಯ ಭಯವಿಲ್ಲದೇ ಜನರು ನಿಗದಿತ ರಿಯಾಯತಿ ದರದಲ್ಲಿ ಟ್ಯಾಂಕರ್‌ ನೀರು ಬುಕ್ಕಿಂಗ್‌ ಗೆ ಅವಕಾಶ

⦁ಯಾವುದೇ ಸರ್‌ಚಾರ್ಜ್‌, ಬೇಡಿಕೆ ಹೆಚ್ಚಾಗುವ ಛಾರ್ಜ್‌ಗಳ ಭಯವಿಲ್ಲ

ಅತ್ಯಂತ ಸುಲಭ ವಿಧಾನದಲ್ಲಿ ಜನರು ತಮಗೆ ಅಗ್ಯವಿರುವಷ್ಟು ನೀರನ್ನು ಬುಕ್ಕಿಂಗ್‌ ಮಾಡಲು ಇಲ್ಲಿ ಅನುವು ಮಾಡಲಾಗಿದೆ. ಕಾವೇರಿ ಕನೆಕ್ಟ್‌ ಸೆಂಟರ್‌ಗಳಿಂದ ಬಿಐಎಸ್‌ ಪ್ರಮಾಣೀಕೃತ ಶುದ್ದ ನೀರನ್ನು ಮನೆಬಾಗಿಲಿಗೆ ತಲುಪಿಸುವುದು ನಮ್ಮ ಉದ್ದೇಶವಾಗಿದೆ. ಗ್ರಾಹಕರು ನೇರವಾಗಿ ನಮ್ಮ ಆನ್‌ಲೈನ್‌ ಪ್ಲಾಟ್‌ಫಾರಂಗಳ ಮೂಲಕ ಹಣಪಾವತಿಸಿ ಟ್ಯಾಂಕರ್‌ ಬುಕ್ಕಿಂಗ್‌ ಮಾಡಲು ಅವಕಾಶ ನೀಡಲಾಗಿದೆ ಎಂದು ಡಾ ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ಇದೊಂದು ವಿಶೇಷ ಹಾಗೂ ವಿನೂತನ ಯೋಜನೆಯಾಗಿದೆ. ದೇಶದ ಯಾವುದೇ ಜಲಮಂಡಳಿಯೂ ಇದುವರೆಗೂ ಪ್ರಾರಂಭಿಸದೇ ಇರುವಂತಹ ಹೊಸ ಯೋಜನೆ ಇದಾಗಿದ್ದು, ನಮ್ಮಲ್ಲಿ ಲಭ್ಯವಿರುವಂತಹ ನೀರನ್ನು ಅಗತ್ಯವಿರುವ ಜನರಿಗೆ ಸರಬರಾಜು ಮಾಡುವ ವ್ಯವಸ್ಥೆ ಇದಾಗಿದೆ. ಖಾಸಗಿ ಟ್ಯಾಂಕರ್‌ಗಳು ಪೂರೈಸುವಂತಹ ನೀರಿನ ಗುಣಮಟ್ಟ, ಅವುಗಳ ಅಳತೆಯಲ್ಲಿ ವ್ಯತ್ಯಾಸ, ಬೇಡಿಕೆ ಹೆಚ್ಚಾದಾಗ ದರ ಹೆಚ್ಚಳ ಈ ಎಲ್ಲಾ ಸಮಸ್ಯೆಗಳನ್ನು ಏಕಕಾಲದಲ್ಲಿ ಪರಿಹರಿಸುವ ಯೋಜನೆ ಇದಾಗಿದೆ. ಸಾರ್ವಜನಿಕರು ಟ್ಯಾಂಕರ್‌ ಬುಕ್ಕಿಂಗ್‌ ಗೆ ಅವಕಾಶ ನೀಡುವ ಸೇವೆಗೆ ಸದ್ಯದಲ್ಲೇ ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್‌ ಅವರು ಚಾಲನೆ ನೀಡಲಿದ್ದಾರೆ ಎಂದು ಡಾ ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

110 ಹಳ್ಳಿಗಳಿಗೆ ಹಾಗೂ ಕಾವೇರಿ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿರುವ ಅರ್ಜಿದಾರರಿಗೆ ಆದ್ಯತೆ:

110 ಹಳ್ಳಿಗಳ ವ್ಯಾಪ್ತಿಯಲ್ಲಿ ಕಾವೇರಿ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿದ್ದು, ಸಂಪರ್ಕದ ಕಾಮಗಾರಿ ಪ್ರಗತಿಯಲ್ಲಿರುವಂತವರಿಗೆ ಹಾಗೂ ಅರ್ಜಿದಾರರಿಗೆ ಆದ್ಯತೆ ನೀಡಲಾಗುವುದು ಎಂದು ಡಾ ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ಟ್ಯಾಂಕರ್‌ ಮಾಲೀಕರ ನೊಂದಣಿಗೆ ಅವಕಾಶ:

ನಗರದ ಹಲವಷ್ಟು ಪ್ರದೇಶಗಳಲ್ಲಿ ಈಗಾಗಲೇ ಟ್ಯಾಂಕರ್‌ಗಳು ದರ ಏರಿಕೆ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಗಳಾಗಿವೆ. ಅಲ್ಲದೇ ಕೆಲವು ಕಡೆಗಳಲ್ಲಿ ಟ್ಯಾಂಕರ್‌ಗಳಿಗೆ ಬೇಡಿಕೆ ಇಲ್ಲದ ಬಗ್ಗೆಯೂ ಮಾಹಿತಿಗಳಿವೆ. ಬೆಂಗಳೂರು ಜಲಮಂಡಳಿಯ ಬಳಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಲಭ್ಯತೆಯಿದೆ. 110 ಹಳ್ಳಿಗಳ ವ್ಯಾಪ್ತಿಯಲ್ಲಿ ಹಾಗೆಯೇ ಟ್ಯಾಂಕರ್‌ಗಳ ಮೇಲೆ ಅವಲಂಬಿತರಾಗಿರುವ ಜನರಿಗೆ ಉತ್ತಮ ನೀರನ್ನು ಒದಗಿಸುವುದು ನಮ್ಮ ಮುಖ್ಯ ಗುರಿಯಾಗಿದೆ.  ಈ ನಿಟ್ಟಿನಲ್ಲಿ ಖಾಸಗಿ ಟ್ಯಾಂಕರ್‌ಗಳ ಮಾಲೀಕರು ನಮ್ಮ ಸಂಚಾರಿ ಕಾವೇರಿ ಪ್ಲಾಟ್‌ಫಾರಂನಲ್ಲಿ ನೊಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಈ ಸೇವೆಯನ್ನು ಒದಗಿಸಲು ಖಾಸಗಿ ಟ್ಯಾಂಕರ್‌ನವರು ಜಲಮಂಡಳಿಗೆ ತಮ್ಮ ಟ್ಯಾಂಕರ್‌ ಗಳನ್ನು ಬಾಡಿಗೆ ಆಧಾರದಲ್ಲಿ ನೀಡಬಹುದಾಗಿದೆ. ಸದರಿ ಯೋಜನೆಯಲ್ಲಿ ಜಲಮಂಡಳಿಗೆ ಬಾಡಿಗೆ ಆಧಾರದಲ್ಲಿ ಟ್ಯಾಂಕರ್‌ ನೀಡಲು ಇಚ್ಚಿಸಿರುವ ಟ್ಯಾಂಕರ್‌ ಮಾಲೀಕರು, ನೇರವಾಗಿ ಈ ಪ್ಲಾಟ್‌ಫಾರಂ ಗಳಲ್ಲಿ ನೊಂದಣಿ ಮಾಡಿಕೊಂಡು ಸೇವೆಯನ್ನು ಒದಗಿಸಬಹುದಾಗಿದೆ. ಏಪ್ರಿಲ್‌ 10 ರ ವರೆಗೆ ಟ್ಯಾಂಕರ್‌ಗಳು ನೊಂದಣಿ ಮಾಡಿಕೊಳ್ಳಬಹುದು ಎಂದು ಡಾ ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ಟ್ಯಾಂಕರ್‌ ನೊಂದಣಿಗೆ https://bwssb.karnataka.gov.in/ ಜಾಲತಾಣದಲ್ಲಿ ಅವಕಾಶ ನೀಡಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮುಖ್ಯ ಅಭಿಯಂತರರು (ಗುಣ & ವಿನ್ಯಾಸ ಆಶ್ವಾಸನೆ) ಸನತ್‌ ಕುಮಾರ್‌ ವಿ ಮೊ: 990188838 ಅವರನ್ನು ಸಂಪರ್ಕಿಸಬಹುದಾಗಿದೆ.

key words: “Cauvery on Wheels”, app, certified clean drinking water. BWSSB

SUMMARY:

“Cauvery on Wheels”: Book through the app and get certified clean drinking water.