ಮಂಡ್ಯ,ಅಕ್ಟೋಬರ್,5,2023(www.justkannada.in): ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟು ಬರಪರಿಸ್ಥಿತಿ ಎದುರಾಗಿದ್ದರೂ ಸಹ ಕೆಆರ್ ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕೃಷಿ ಸಚಿವ ಚಲುವರಾಯಸ್ವಾಮಿ, ಈ ಬಗ್ಗೆ ಜೆಡಿಎಸ್, ಬಿಜೆಪಿ ನಾಯಕರು ಪ್ರಧಾನಿ ಬಳಿ ಹೋಗಿ ಕೇಳಲಿ ಎಂದು ಉತ್ತರಿಸಿದ್ದಾರೆ.
ಈ ಕುರಿತು ಇಂದು ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಸಿಎಂ ಸಿದ್ದರಾಮಯ್ಯ ಬಳಿ ನಮ್ಮ ಶಾಸಕರು ಬಂದು ಮಾತನಾಡಿದ ಹಾಗೆಯೇ ಬಿಜೆಪಿ, ಜೆಡಿಎಸ್ ನಾಯಕರು ಪ್ರಧಾನಿ ಮೋದಿ ಜೊತೆ ಮಾತನಾಡಲಿ. ಲೋಕಸಭಾ ಚುನಾವಣೆಯಲ್ಲಿ ಏನೋ ಸಾಧನೆ ಮಾಡುವುದಕ್ಕಾಗಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ ಎಂದು ಕುಟುಕಿದರು.
ಮಂಡ್ಯ ಜಿಲ್ಲೆಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕೊಡುಗೆ ಏನು?
ಇದೇ ವೇಳೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ಸಚಿವ ಚಲುವರಾಯಸ್ವಾಮಿ, ಮಂಡ್ಯ ಜಿಲ್ಲೆಗೆ, ಕಾವೇರಿ ಅಚ್ಚುಕಟ್ಟೆಗೆ ಕುಮಾರಸ್ವಾಮಿ ಕೊಡುಗೆ ಏನು..? ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಸಾಧನೆ ಏನು ಅಂತಾ ನಮಗೂ ಗೊತ್ತಿದೆ. ವೋಟ್ ಹಾಕಿಸಿಕೊಳ್ಳಲು ಏನು ಮಾತಾಡ್ಬೇಕೋ ಅದನ್ನು ಮಾಡುತ್ತಾರೆ. ಅವರ ತಂದೆ ಕೊಡುಗೆಯನ್ನೇ ಎಷ್ಟುಸಲ ಹೇಳುತ್ತಾರೆ? ಅವರ ತಂದೆ ಕೊಡುಗೆ ಕೊಟ್ಟಾಯ್ತು, ಜನರು ಕೃತಜ್ಞತೆ ಸಲ್ಲಿಸಿದ್ದಾಯ್ತು. ಕುಮಾರಸ್ವಾಮಿಯವರ ವೈಯಕ್ತಿಕ ಕೊಡುಗೆ ಏನು? ದೇವೇಗೌಡರ ಕೊಡುಗೆ ಮೇಲೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
Key words: Cauvery water – Tamil Nadu-JDS- BJP -leaders – Minister -Chaluvarayaswamy