ಬೆಂಗಳೂರು,ಅಕ್ಟೋಬರ್,11,2023(www.justkannada.in): ತಮಿಳುನಾಡಿಗೆ ಮತ್ತೆ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶಕ್ಕೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದು ಸಮಿತಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಟ್ವಿಟ್ಟರ್ ನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಹೆಚ್.ಡಿ ಕುಮಾರಸ್ವಾಮಿ, ಮಳೆಯ ಕೊರತೆಯಿಂದ ಜಲಾಶಯಗಳೆಲ್ಲ ಖಾಲಿ ಆಗಿದ್ದರೂ ಕರ್ನಾಟಕಕ್ಕೆ ಬರೆಯ ಮೇಲೆ ಬರೆ ಎಳೆಯಲಾಗುತ್ತದೆ. ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಮುಂದಿನ 15 ದಿನಗಳ ಕಾಲ ನಿತ್ಯ 3,000 ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸುವಂತೆ ಮತ್ತೆ ಆದೇಶ ನೀಡಿರುವುದು ರಾಜ್ಯಕ್ಕೆ ಇನ್ನೊಂದು ದೊಡ್ಡ ಆಘಾತ. ಇಂಥ ಜಲಾಘಾತಗಳನ್ನು ಕೊಡುವುದಕ್ಕೇ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿಗಳನ್ನು ರಚನೆ ಮಾಡಿಕೊಂಡಿದ್ದಾರೆಯೇ ಎನ್ನುವ ಅನುಮಾನ ನಮ್ಮದು ಎಂದು ಕಿಡಿಕಾರಿದ್ದಾರೆ.
ಈ ಆದೇಶಗಳು ಸಂವಿಧಾನ ಹಾಗೂ ಒಕ್ಕೂಟದ ಆಶಯಗಳಿಗೆ ವಿರುದ್ಧವಾಗಿವೆ. ಮಾತ್ರವಲ್ಲ, ಕನ್ನಡಿಗರ ತಾಳ್ಮೆ, ಸಹನೆ ಪರೀಕ್ಷೆ ಮಾಡುವಂತಿವೆ. ಈ ಆದೇಶ ಕರ್ನಾಟಕದ ಹಿತಾಸಕ್ತಿಗೆ ಮರಣಶಾಸನ. ಬೆಂಗಳೂರು ಜನ ಕುಡಿಯುವ ನೀರಿನ ಬಿಕ್ಕಟ್ಟು ಎದುರಿಸುತ್ತಿದ್ದಾರೆ. ಕಾವೇರಿ ಕೊಳ್ಳದ ರೈತರ ಒಂದು ಬೆಳೆಗೂ ಸಮರ್ಪಕವಾಗಿ ನೀರು ಹರಿದಿಲ್ಲ. ಹೀಗಿದ್ದರೂ ರಾಜ್ಯಕ್ಕೆ ಆದೇಶದ ಮೇಲೆ ಆದೇಶ ನೀಡಿ ಸಮಾನ ನ್ಯಾಯ ತತ್ವವನ್ನು ನಾಮಾವಶೇಷ ಮಾಡಲಾಗಿದೆ ಎಂದು ಹರಿಹಾಯ್ದಿದ್ದಾರೆ.
ಕನ್ನಡಿಗರೂ ಮನುಷ್ಯರು, ಅವರಿಗೂ ಅನ್ನ ನೀರು ಬೇಕು. ಅವರೂ ಈ ಒಕ್ಕೂಟ ವ್ಯವಸ್ಥೆಯ ಭಾಗ ಎನ್ನುವುದನ್ನು ಸಮಿತಿ ಮರೆತಿರುವಂತಿದೆ. ಸರಕಾರದಿಂದ ಕಾವೇರಿ ಹಿತರಕ್ಷಣೆ ಸಾಧ್ಯವಿಲ್ಲ. ಈ ಆದೇಶವನ್ನು ದಿಕ್ಕರಿಸುವ ಎದೆಗಾರಿಕೆ ಸರಕಾರಕ್ಕೆ ಇಲ್ಲ. ಜನರು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು, ಜನರ ಜತೆ ನಾವಿದ್ದೇವೆ, ನಮ್ಮ ಪಕ್ಷವೂ ಇದೆ.
ಒಂದು ಕಡೆ ವಿದ್ಯುತ್ ಆಘಾತದಿಂದ ರೈತರು ಕಂಗೆಟ್ಟಿದ್ದಾರೆ. ಮತ್ತೊಂದೆಡೆ ಕಾವೇರಿ ಬವಣೆ ರಾಜ್ಯವನ್ನು ಹಿಂಡಿಹಿಪ್ಪೆ ಮಾಡುತ್ತಿದೆ. ಕನ್ನಡಿಗರ ಕಣ್ಣೀರು ಹರಿದರೂ ಚಿಂತೆ ಇಲ್ಲ, ತಮಿಳುನಾಡಿಗೆ ಕಾವೇರಿ ಹರಿಯಲಿ ಎನ್ನುವ ಮನಸ್ಥಿತಿಯಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಇದೆ ಎಂದು ಸರ್ಕಾರದ ವಿರುದ್ಧ ಹೆಚ್.ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Key words: caveri dispute-Former CM-HD kumaraswamy