ಬೆಂಗಳೂರು,ಸೆಪ್ಟಂಬರ್,29,2023(www.justkannada.in): ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನ ಖಂಡಿಸಿ ಕರ್ನಾಟಕ ಬಂದ್ ಮಾಡಲಾಗಿದ್ದು, ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಬುರ್ಖಾ ಧರಿಸಿ ಬಂದು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ.
ವಾಟಾಳ್ ನಾಗರಾಜ್ ಬುರ್ಖಾ ಧರಿಸಿ ಖಾಲಿ ಬಿಂದಿಗೆ ಹಿಡಿದು ವಿನೂತನ ಪ್ರತಿಭಟನೆ ನಡೆಸಿದರು. ಡಾಲರ್ಸ್ ಕಾಲೋನಿಯ ತಮ್ಮ ನಿವಾಸದ ಬಳಿ ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಪೊಲೀಸ್ ಭದ್ರತೆ ನಿಯೋಜಿಸಿ ಕರ್ನಾಟಕ ಬಂದ್ ಅನ್ನು ಹತ್ತಿಕ್ಕುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ಕಾವೇರಿ ನೀರಿಗಾಗಿ ನಾವು ಕರೆ ನೀಡಿರುವ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡಿಗರ ಶಕ್ತಿ ಗೊತ್ತಾಗಿದೆ. ಬಂದ್ಗೆ ಸಹಕಾರ ನೀಡಿದ ರಾಜ್ಯದ ಜನತೆ ಧನ್ಯವಾದ ತಿಳಿಸುತ್ತೇನೆ ಎಂದರು.
ಪೊಲೀಸರು ನಮ್ಮ ಕಾರ್ಯಕರ್ತರನ್ನು ಬಂಧಿಸುತ್ತಿದ್ದಾರೆ. ಪೊಲೀಸ್ ಗೂಂಡಾಗಿರಿ, ದೌರ್ಜನ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ಶಾಂತಿಯುತವಾಗಿ ಪ್ರತಿಭಟನೆ, ಮೆರವಣಿಗೆ ಮಾಡಿದರೇ ತಪ್ಪಾ? ಟೌನ್ಹಾಲ್ ಮುಂದೆ ಪ್ರತಿಭಟನೆಗೆ ಅವಕಾಶ ನೀಡದೆ ದೌರ್ಜನ್ಯವೆಸಗಿದ್ದಾರೆ. ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ನಾನು ಕಪ್ಪು ಬಟ್ಟೆ ಧರಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇನೆ. ನ್ಯಾಯದೇವತೆ ಧರಿಸುವ ಬಟ್ಟೆ ಅಥವಾ ಬುರ್ಖಾ ಎಂದಾದರೂ ಕರೆಯಲಿ. ನ್ಯಾಯದೇವತೆಯ ಸಂದೇಶ ಸಾರುವ ಬುರ್ಖಾ ಧರಿಸಿದ್ದೇನೆ. ಮಹಿಳೆಯರ ಗೌರವದ ಸಂಕೇತ ಸಾರುವ ಬುರ್ಖಾ ಧರಿಸಿದ್ದೇನೆ. ಕಾವೇರಿ ನದಿ ನೀರು ವಿಚಾರವಾಗಿ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇನೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಇನ್ನು ಟೌನ್ ಹಾಲ್ ಬಳಿ ಆಗಮಿಸಿ ಪ್ರತಿಭಟನೆಗೆ ಮುಂದಾದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಫ್ರೀಡಂಪಾರ್ಕ್ ಗೆ ಕರೆದೊಯ್ದರು.
Key words: caveri fight- Vatal Nagaraj -protests -bangalore