ಮೈಸೂರು,ಸೆಪ್ಟಂಬರ್,27,2023(www.justkannada.in): ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೇ ಕಾವೇರಿ ನದಿ ವ್ಯಾಪ್ತಿಯ ಜಲಾಶಯಗಳು ಭರ್ತಿಯಾಗದೇ ಜನರು ರೈತರು ಸಂಕಷ್ಟದಲ್ಲಿದ್ದರೂ ಸಹ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ಹಿನ್ನೆಲೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸುತ್ತೂರು ಶ್ರೀಗಳು ಮೌನ ಮುರಿದಿದ್ದಾರೆ.
ಕಾವೇರಿ ನದಿ ನೀರು ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿರುವ ಸುತ್ತೂರು ಶ್ರೀಗಳು, ಈ ಸಂಬಂಧ ಸುದೀರ್ಘವಾಗಿ ಪತ್ರ ಬರೆದು ತಜ್ಞರ ತಂಡ ಕಳುಹಿಸುವಂತೆ ಮನವಿ ಮಾಡಿದ್ದಾರೆ.
ಸುತ್ತೂರು ಶ್ರೀಗಳು ಬರೆದಿರುವ ಪತ್ರದ ಸಾರಾಂಶ ಹೀಗಿದೆ..
ನ್ಯಾಯಾಧಿಕರಣ ಮಾನವೀಯತೆ ಮೆರೆಯಬೇಕಾಗಿತ್ತು..
ಕಾವೇರಿ ನದಿ ನೀರಿನ ಹಂಚಿಕೆ ವಿಷಯವಾಗಿ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಮೊದಲಿನಿಂದಲೂ ಜಗಳ, ಕದನ ನಡೆಯುತ್ತಲೇ ಇದೆ. ತಮಿಳುನಾಡು ತನ್ನ ರಾಜಕೀಯ ಚದುರಂಗದಾಟದಿಂದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸರ್ವೋಚ್ಚ ನ್ಯಾಯಾಲಯದಿಂದ ತನಗೆ ಬೇಕಾದ ರೀತಿಯಲ್ಲಿ ಆದೇಶಗಳನ್ನು ಪಡೆದುಕೊಳ್ಳುವಲ್ಲಿ ಸದಾ ಯಶಸ್ವಿಯಾಗುತ್ತಲೇ ಇದೆ. ನದಿಯ ಮೇಲಿನ ಪಾತ್ರದಲ್ಲಿದ್ದರೂ ಕರ್ನಾಟಕ ಇದರ ಲಾಭವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ವ್ಯವಸಾಯ ಮತ್ತು ಕುಡಿಯುವ ನೀರಿನ ಪ್ರಶ್ನೆ ಬಂದಾಗ ಜೀವನಾಧಾರವಾದ ಕುಡಿಯುವ ನೀರಿಗೆ ಮೊದಲ ಪ್ರಾಶಸ್ತ್ಯ ನೀಡಬೇಕಾದುದು ನ್ಯಾಯ. ಕರ್ನಾಟಕದ ಜನರು ಕುಡಿಯುವ ನೀರಿಗಾಗಿ ಹಾಹಾಕಾರ ಪಡುತ್ತಿರುವಾಗ ತಮಿಳುನಾಡಿಗೆ ಕುರುವೈ ಮೂರನೆಯ ಬೆಳೆಯನ್ನು ಉಳಿಸಿಕೊಳ್ಳುವ ಚಿಂತೆ. ಅದಕ್ಕಾಗಿ ಭೂಮಿ ಆಕಾಶಗಳನ್ನು ಒಂದು ಮಾಡುವಂಥ ತಮಿಳರ ಗಲಾಟೆಯ ಮುಂದೆ ಕನ್ನಡಿಗರ ಅಳಲು ಕೇವಲ ಅರಣ್ಯರೋದನವಾಗಿದೆ!
ಕರ್ನಾಟಕ ತಮಿಳುನಾಡುಗಳ ಈ ನೀರಿನ ಗಲಾಟೆ ಬಹುತೇಕ ಸಂದರ್ಭಗಳಲ್ಲಿ ಅಮಾನವೀಯತೆಯ ಅಂಚನ್ನು ತಲುಪಿರುವುದು ಉಂಟು. ತಮಿಳುನಾಡಿನಲ್ಲಿ ಮುಂಗಾರು ಮಳೆ ಇನ್ನೂ ಬರುವ ಸಂಭವವಿದೆ. ಅಲ್ಲಿಯ ಆಣೆಕಟ್ಟುಗಳೂ ಭರ್ತಿಯಾಗಿವೆ. ಬೆಂಗಳೂರಿನ ಜನರಿಗೆ ಕುಡಿಯುವ ನೀರು ದೊರಕಿಸುವ ಯೋಜನೆಗೆ ತಮಿಳುನಾಡಿನವರು ಸರ್ವ ರೀತಿಯಲ್ಲೂ ಅಡ್ಡಿಪಡಿಸುತ್ತಿರುವುದು ಅವರ ಅಮಾನವೀಯ ಧೋರಣೆಗೆ ಹಿಡಿದ ಕೈಗನ್ನಡಿ. ಕೇಂದ್ರ ಸರ್ಕಾರವೂ ಈ ನಿಟ್ಟಿನಲ್ಲಿ ಅಸಹಾಯಕತೆಯನ್ನೋ, ಉದ್ದೇಶಪೂರ್ವಕ ಮೌನವನ್ನೋ ಆಶ್ರಯಸಿರುವುದು ಕನ್ನಡಿಗರ ದುರದೃಷ್ಟವೇ ಸರಿ.
ಕರ್ನಾಟಕ ಸರ್ಕಾರವು ಇದುವರೆಗೂ ನದಿ ನೀರಿನ ಹಂಚಿಕೆ ವಿಷಯದಲ್ಲಿ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಲೇ ಇದೆ. ಸಭ್ಯ ರೀತಿಯಲ್ಲಿ ಕಾನೂನಿಗೆ ಗೌರವ ಸಲ್ಲಿಸುತ್ತ ಸರ್ವೋಚ್ಚ ನ್ಯಾಯಾಲಯ ಮತ್ತು ಕಾವೇರಿ ನ್ಯಾಯಾಧೀಕರಣದ ಎಲ್ಲ ಆದೇಶಗಳನ್ನೂ ಪಾಲಿಸುತ್ತಲೇ ಇದೆ. ಜನಾಭಿಪ್ರಾಯದ ಕಡು ವಿರೋಧವಿದ್ದರೂ ಕಾನೂನಾತ್ಮಕ ಆದೇಶಗಳಿಗೆ ಗೌರವ ನೀಡುತ್ತಲೇ ಬಂದಿದೆ. ಆದರೆ ಈ ವರ್ಷ ಒದಗಿರುವ ಘನಘೋರ ಪರಿಸ್ಥಿತಿ ಹಿಂದೆಂದೂ ಬಂದಿರಲಿಲ್ಲ. ಮಡಿಕೇರಿಯಲ್ಲಿ ಸಾಕಷ್ಟು ಮಳೆಯಾಗದೆ ಕೆಆರ್ಎಸ್ ನಲ್ಲಿ ನೀರಿನ ಮಟ್ಟ ಸಾರ್ವಕಾಲಿಕ ಕೆಳಮಟ್ಟಕ್ಕೆ ಇಳಿದಿದೆ. ಕೆಲವು ದಿನ ಕಳೆದರೆ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ತತ್ಸಾರವಾಗುತ್ತದೆ. ಇಂಥ ಸಂಕಷ್ಟ ಪರಿಸ್ಥಿತಿಯನ್ನು ಕರ್ನಾಟಕ ಹಿಂದೆಂದೂ ಎದುರಿಸಿರಲಿಲ್ಲ.
ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸರ್ವೋಚ್ಚ ನ್ಯಾಯಾಲಯಗಳು ವಾಸ್ತವ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಎರಡೂ ಪ್ರಾಂತ್ಯಗಳ ಹೊರಗಿನ ತಜ್ಞರ ಮೂಲಕ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿ, ಜನರ ಬದುಕಿಗೆ ರಕ್ಷಣೆ ಕೊಡಬೇಕು. ತನ್ಮೂಲಕ ಒಕ್ಕೂಟ ವ್ಯವಸ್ಥೆಯಲ್ಲಿ ವಿಶ್ವಾಸ ಉಳಿಯುವಂತೆ ಮಾಡಬೇಕು. ಖಾಯಂ ಆಗಿ ಸಂಕಷ್ಟ ಸೂತ್ರವನ್ನು ರೂಪಿಸಬೇಕೆಂದು ಏಳುಕೋಟಿ ಕನ್ನಡಿಗರ ಪರವಾಗಿ ಮನವಿ ಮಾಡುತ್ತೇವೆ ಎಂದು ಸುತ್ತೂರು ಶ್ರೀಗಳು ಪತ್ರದಲ್ಲಿ ತಿಳಿಸಿದ್ದಾರೆ.
Key words: caveri river –water- issue-suttur shri